Uttara kannada; ಅಪಾಯದಲ್ಲಿದೆ ಹೊನ್ನಾವರದ ತೂಗು ಸೇತುವೆ

By Gowthami KFirst Published Sep 4, 2022, 9:58 PM IST
Highlights

ಅಪಾಯದಲ್ಲಿದೆ ಹೊನ್ನಾವರದ ತೂಗು ಸೇತುವೆ ಅಪಾಯದಲ್ಲಿದೆ ಹೊನ್ನಾವರದ ಬಡಗಣಿ‌ ನದಿಯ ಮೇಲೆ ಹಾಕಿರೋ‌ ತೂಗು ಸೇತುವೆ.  ಮೇಲೆ ಹಾಕಿರುವ ಹಲಗೆ, ತುಂಡಾಗಿ ಬೀಳುವ ಹಂತದಲ್ಲಿದೆ. 

ಉತ್ತರಕನ್ನಡ (ಸೆ.4): ಪ್ರವಾಸೋದ್ಯಮ ಹಾಗೂ ಫೋಟೊ ಶೂಟ್‌ಗೆ ಖ್ಯಾತಿಯ‌ನ್ನು ಪಡೆದ ತಾಲೂಕು‌ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ. ಇಲ್ಲಿ ಹಲವು ನದಿಗಳು, ಹಳ್ಳ, ಹೊಳೆಗಳು ಹರಿಯೋದ್ರಿಂದ ಅಲ್ಲಲ್ಲಿ ತೂಗು ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ.‌ ಆದರೆ, 20 ವರ್ಷಗಳ ಹಿಂದೆ‌ ಹೊನ್ನಾವರ ಕರ್ಕಿಯ ಬಡಗಣಿ ನದಿಯ ಮೇಲೆ ನಿರ್ಮಾಣ ಮಾಡಲಾಗಿರುವ ತೂಗು ಸೇತುವೆ ಕಿತ್ತು ಹೋಗಿದ್ದು, ಇದರ ಮೇಲೆ‌ ನಡೆದಾಡುವ ಜನರು ಯಾವ ಹೊತ್ತಿನಲ್ಲಾದ್ರೂ ಮೇಲಿಂದ ನದಿಗೆ ಉರುಳಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿ ಗ್ರಾಮದ ಬಡಗಣಿ ನದಿಯ ಮೇಲೆ ನಿರ್ಮಿಸಲಾದ ತೂಗು ಸೇತುವೆ ಹಾಳಾಗುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಬೀಳಬಹುದಾದ ಸ್ಥಿತಿಗೆ ಬಂದು ತಲುಪಿದೆ. ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ ಸೌಂದರ್ಯದ ನಡುವೆ ತುಂಬಿ ಹರಿಯುತ್ತಿರುವ ಬಡಗಣಿ ನದಿಯ ಮೇಲೆ ಸುಮಾರು 20 ವರ್ಷಗಳ ಹಿಂದೆ ತೂಗು ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ, ಪ್ರಸ್ತುತ ಈ ತೂಗು ಸೇತುವೆಯ ಸ್ಥಿತಿ ನೋಡಿದರೆ ಬೆಚ್ಚಿ ಬೀಳುವಂತಿದ್ದು, ಜೀವ ಕೈಯಲ್ಲಿ ಹಿಡಿದುಕೊಂಡು ಪ್ರತಿನಿತ್ಯ ಇದೇ ಸೇತುವೆಯನ್ನು ಬಳಸುವ ಅನಿವಾರ್ಯತೆ ಇಲ್ಲಿಯ ಜನರದ್ದಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಅಣತಿ ದೂರ ಸಾಗಿದಲ್ಲಿ ಕಾಣುವ ಈ ತೂಗು ಸೇತುವೆ ಬಡಗಣಿ ನದಿ ಮೇಲೆ ನಿರ್ಮಿಸಿದ್ದು, ಒಂದು ಬದಿಯಲ್ಲಿ ಕರ್ಕಿ, ಇನ್ನೊಂದು ಬದಿಯಲ್ಲಿ ಪಾವಿನಕುರ್ವೆ ಗ್ರಾಮವನ್ನು ಸಂಪರ್ಕಿಸುತ್ತದೆ. ಆದರೆ, ಪ್ರಸ್ತುತ, ಈ ಸೇತುವೆಗೆ ಹಾಕಲಾಗಿರುವ ಹಲಗೆಗಳು ಹಾಳಾಗಿದ್ದು, ಸರಳುಗಳು ತುಕ್ಕು ಹಿಡಿದಿವೆ. ಸೇತುವೆಯ ಕೆಳಭಾಗದ ಆಧಾರದ ಕಬ್ಬಿಣದ ಪಟ್ಟಿಗಳು ಕೂಡಾ ಈಗಲೋ ಆಗಲೋ ತುಂಡಾಗಿ ಬೀಳುವ ಹಂತದಲ್ಲಿದ್ದು, ಪ್ರತಿದಿನ ಇಲ್ಲಿ ಆತಂಕದಲ್ಲಿ ಓಡಾಡುವ ಪರಿಸ್ಥಿತಿಯಿದೆ. ಹಲಗೆಗಳು ಹಾಳಾಗಿರುವುದರಿಂದ ಈ‌ ಸೇತುವೆ ಮೇಲೆ ನಡೆದಾಡುವ ಮಹಿಳೆಯರ ಕಾಲಿನ ಬೆರಳಿಗೆ ತಾಗಿ ರಕ್ತ ಬಂದಂತಹ ಸಾಕಷ್ಟು ಉದಾಹರಣೆಗಳಿವೆ. ದೊಡ್ಡ ಅಪಾಯ ಎದುರಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಂದಹಾಗೆ, ಒಂದು ಕಾಲದಲ್ಲಿ ಪ್ರವಾಸಿಗರ ಫೇವರೇಟ್ ಸ್ಪಾಟ್ ಆಗಿ, ಫೋಟೋಶೂಟ್‌ಗಳಿಗೆ ಪ್ರಸಿದ್ಧಿ ಪಡೆದಿತ್ತು ಹೊನ್ನಾವರದ ಈ ತೂಗು ಸೇತುವೆ. ಆದರೆ, ಇದೀಗ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಇಲ್ಲಿನ ಗ್ರಾಮಸ್ಥರ ಜೀವಕ್ಕೆ ಅಪಾಯ ತಂದಿಡುವ ಆತಂಕಕ್ಕೆ ಕಾರಣವಾಗಿದೆ. ಸುಂದರ ವಿಹಂಗಮ ನೋಟ ಇಲ್ಲಿದ್ದರೂ, ಈ ಸೇತುವೆಯ ದುಃಸ್ಥಿತಿಯ ಕಂಡು ಗ್ರಾಮಸ್ಥರೇ ಸಂಚರಿಸಲು ಭಯಪಡುವಂತಾಗಿದೆ.

ಇನ್ನು ಪಾವಿನಕುರ್ವಾ ಗ್ರಾಮದಲ್ಲಿ ಹೆಚ್ಚಾಗಿ ಮೀನುಗಾರರು, ಕೂಲಿ ಮಾಡಿಕೊಂಡು ಜೀವನ ಸಾಗಿಸುವ ಜನರಿದ್ದು, ದಿನ ಬೆಳಗಾದಂತೆ ಕೆಲಸಕ್ಕೆ ಓಡಾಡುತ್ತಾರೆ. ಹೀಗೆ ಜನರ ಓಡಾಟಕ್ಕೆ ಈ ತೂಗು ಸೇತುವೆಯೊಂದೇ ದಾರಿಯಾಗಿದ್ದು, ಗ್ರಾಮದ ಮಕ್ಕಳು ಶಾಲಾ- ಕಾಲೇಜುಗಳಿಗೆ ತೆರಳಲು ಕೂಡ ಇದೇ ಸೇತುವೆಯನ್ನು ಅವಲಂಭಿಸಬೇಕಿದೆ. ಆದರೆ, ಈ ತೂಗು ಸೇತುವೆಯ ಸ್ಥಿತಿ ಈಗಲೋ ಆಗಲೋ ಅಂತಾ ಇರೋದ್ರಿಂದ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸದ್ಯ ಸ್ಥಳೀಯ ಪಾವಿನಕುರ್ವಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿವಾಸಿಗಳ ದೂರಿನ ಮೇರೆಗೆ ತೂಗು ಸೇತುವೆಯ ಒಂದಷ್ಟು ಹಲಗೆಗಳನ್ನು ಬದಲಿಸುವ ಕಾರ್ಯವನ್ನೇನೋ ಮಾಡಲಾಗಿದೆ. ಆದರೆ, ಸಂಪೂರ್ಣ ಸೇತುವೆಯೇ ದುಃಸ್ಥಿತಿಯ ಹಂತ ತಲುಪಿರುವುದರಿಂದ ಸರ್ಕಾರ ಹೆಚ್ಚಿನ ಮಟ್ಟದ ದುರಸ್ತಿ ಕಾರ್ಯವನ್ನು ನಡೆಸಬೇಕಿದೆ ಅನ್ನೋದು ಸ್ಥಳೀಯರ ಒತ್ತಾಯ.

ಉತ್ತರಕನ್ನಡದಲ್ಲಿ ಕೃಷಿಕರಿಗೆ ಎದುರಾದ ಕೊಳೆರೋಗ ಸಮಸ್ಯೆ

ಒಟ್ಟಿನಲ್ಲಿ ಹೊನ್ನಾವರದ ಬಡಗಣಿ ನದಿಯ ಮೇಲೆ ನಿರ್ಮಾಣ ಮಾಡಲಾಗಿರುವ ತೂಗು ಸೇತುವೆಯ ಸ್ಥಿತಿ ಸಂಪೂರ್ಣ ಬಿಗಡಾಯಿಸಿದ್ದು, ಜನರು ಜೀವ ಭಯದೊಂದಿಗೆ ಇದರ ಮೇಲೆ‌ ನಡೆದಾಡಬೇಕಾದ ಅನಿವಾರ್ಯತೆಯಿದೆ. ಒಂದರ್ಥದಲ್ಲಿ ಸಂಪೂರ್ಣ ತೂಗು ಸೇತುವೆಯನ್ನೇ ಪುನಃ ನಿರ್ಮಿಸುವ ಸ್ಥಿತಿ ಕೂಡಾ ಇಲ್ಲಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವಘಡಗಳು ನಡೆಯುವ ಮುನ್ನವೇ ಎಚ್ಚೆತ್ತುಕೊಳ್ಳಬೇಕಿದೆ ಅನ್ನೋದು ಗ್ರಾಮಸ್ಥರ ಬೇಡಿಕೆ.

click me!