ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ವರುಣನ ಅಬ್ಬರ. ಆದರೆ, ಈವರೆಗೆ ಮಳೆಯಿಂದಾಗಿ ಕೃಷಿ ಕ್ಷೇತ್ರಕ್ಕೆ ಉಂಟಾದ ಸಮಸ್ಯೆಯೂ ಅಷ್ಟಿಷ್ಟೇನಲ್ಲ. ಇದರಿಂದಾಗಿ ಕೃಷಿಕರು ಮತ್ತೆ ಸಾಲದ ಕೂಪಕ್ಕೆ ಬೀಳುವ ಭೀತಿ ಎದುರಾಗಿದೆ.
ಕಾರವಾರ (ಸೆ.4): ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ವರುಣನ ಅಬ್ಬರ ಅಷ್ಟೇನಿಲ್ಲ. ಆದರೆ, ಈವರೆಗೆ ಮಳೆಯಿಂದಾಗಿ ಕೃಷಿ ಕ್ಷೇತ್ರಕ್ಕೆ ಉಂಟಾದ ಸಮಸ್ಯೆಯೂ ಅಷ್ಟಿಷ್ಟೇನಲ್ಲ. ಆದರೆ, ಇದೀಗ ಹವಾಮಾನ ಬದಲಾವಣೆಯಿಂದ ಅಡಿಕೆ ಬೆಳೆಗಾರರಿಗೆ ಕೊಳೆರೋಗದ ಸಮಸ್ಯೆ ಎದುರಾಗಿದ್ದು, ಬೆಳೆ ಕಾಣೋ ಸಮಯದಲ್ಲೇ ಅಡಿಕೆ ಬೆಳೆ ಬಣ್ಣ ಕಳೆದುಕೊಂಡು ಕಪ್ಪಾಗಲು ಆರಂಭವಾಗಿವೆ. ಇದರಿಂದಾಗಿ ಕೃಷಿಕರು ಮತ್ತೆ ಸಾಲದ ಕೂಪಕ್ಕೆ ಬೀಳುವ ಭೀತಿ ಎದುರಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಮಲೆನಾಡು ಹಾಗೂ ಕರಾವಳಿ ಭಾಗ ಹಲವೆಡೆ ಬೆಳೆನಾಶಗಳಾಗಿವೆ. ಆದರೆ, ಸದ್ಯ ಮಳೆ ಕಾಟವೇನೋ ಕೊಂಚ ಕಡಿಮೆಯಾಗಿದ್ರೂ, ಅಡಿಕೆ ಬೆಳೆಗಾರರಿಗೆ ಕೊಳೆ ರೋಗವೆಂಬ ಕಾಟ ಕಾಡಲಾರಂಭಿಸಿದೆ. ಅಡಿಕೆ ಕಾಯಿಗಳು ಈಗಷ್ಟೇ ಬೆಳೆಯಲಾರಂಭಿಸಿದ್ದು, ಅದಾಗಲೇ ಒಮ್ಮೆ ಜೋರು ಮಳೆ, ಒಮ್ಮೆ ಜೋರು ಬಿಸಿಲಿನಿಂದ ಕೂಡಿದ ವಾತಾವರಣ ಕಾಣಿಸಿಕೊಳ್ಳುವುದರಿಂದ ಬೆಳೆಗಳಿಗೆ ಕೊಳೆ ರೋಗ ಆವರಿಸಲಾರಂಭಿಸಿದೆ. ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ಧಾಪುರ, ಮುಂಡಗೋಡ, ಯಲ್ಲಾಪುರ ಮಾತ್ರವಲ್ಲದೇ ಕರಾವಳಿ ತೀರವಾದ ಅಂಕೋಲಾ, ಹೊನ್ನಾವರ, ಕುಮಟಾ ಪ್ರದೇಶಗಳಲ್ಲೂ ಕೊಳೆರೋಗ ಕಾಣಿಸಿಕೊಂಡಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕಳೆದೆರಡು ವರ್ಷಗಳಲ್ಲೂ ಭಾರೀ ಮಳೆಯಿಂದಾಗಿ ಕೊಳೆ ರೋಗ ಸಮಸ್ಯೆ ಎದುರಾಗಿತ್ತು. ಅಲ್ಲದೇ, ಕೊರೊನಾ ಕಾಟವಿದ್ದ ಕಾರಣ ಕೃಷಿಕರಿಗೆ ಕೆಲಸ ಮಾಡಲು ಕಾರ್ಮಿಕರ ಕೊರತೆಯೂ ಕಾಣಿಸಿದ್ದರಿಂದ ಸಂಕಷ್ಟದ ಪರಿಸ್ಥಿತಿಯಿತ್ತು. ಆದರೆ, ಈ ಬಾರಿ ಕೊರೊನಾ ಕಾಟವಿಲ್ಲ, ಅಲ್ಲದೇ, ಒಂದೆರಡು ತಿಂಗಳ ಕಾಲ ಅಬ್ಬರಿಸಿದ್ದ ಮಳೆ, ಇತ್ತೀಚಿನ ದಿನಗಳಲ್ಲಿ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಕಾಣುತ್ತಿಲ್ಲ. ಆದರೂ, ಪದೇ ಪದೇ ಬದಲಾಗುತ್ತಿರುವ ಹವಾಮಾನದಿಂದ ಕೃಷಿಕರಿಗೆ ಈ ಬಾರಿಯೂ ಕೊಳೆರೋಗ ಸಮಸ್ಯೆ ಎದುರಾಗಿದೆ.
ಅಂದಹಾಗೆ, ಅಡಿಕೆ ಬೆಳೆ ಉತ್ತಮವಾಗಿ ಬರಲೆಂಬ ಉದ್ದೇಶದಿಂದ ಕೃಷಿಕರು ಎಲ್ಲೆಲ್ಲಿಯೋ ಸಾಲ ಮಾಡಿಕೊಂಡು ಗೊಬ್ಬರ, ಕೀಟ ನಾಶಕ, ಮಣ್ಣು, ಔಷಧಿಗಳನ್ನು ಅಡಿಕೆ ಮರಗಳಿಗೆ ಉಪಯೋಗಿಸುತ್ತಾರೆ. ಆದರೆ, ಕೊಳೆರೋಗದ ಸಮಸ್ಯೆಯಿಂದಾಗಿ ಮಾಡಿದ್ದೆಲ್ಲವೂ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ. ಕಳೆದ ಬಾರಿ ಕೊಳೆರೋಗ ಸಮಸ್ಯೆಯುಂಟಾಗಿದ್ದಾಗ ಕೃಷಿ ಇಲಾಖೆಯಿಂದ ಸಂತ್ರಸ್ತ ರೈತರಿಗೆ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿತ್ತು.
ಅಡಕೆ ಕೊಳೆರೋಗ ನಿಯಂತ್ರಣಕ್ಕೆ ಸಿಗದ ಸಹಾಯಧನ
ಆದರೆ, ಈ ಪರಿಹಾರ ದೊಡ್ಡ ದೊಡ್ಡ ಕೃಷಿಕರಿಗೆ ಮಾತ್ರ ದೊರಕಿದೆ ಹೊರತು ಸಣ್ಣ ಸಣ್ಣ ರೈತರಿಗೆ ಇದರಿಂದ ಯಾವುದೇ ಲಾಭವಾಗಿಲ್ಲ, ಸರಿಯಾದ ಮಾಹಿತಿಯನ್ನೂ ಒದಗಿಸಲಾಗಿಲ್ಲ. ಈ ಬಾರಿ ಮತ್ತೆ ಸಾಲವನ್ನು ಪಡೆದು ಸಣ್ಣ ಕೃಷಿಕರು ಉತ್ತಮ ಬೆಳೆಗಾಗಿ ಪೂರಕ ವ್ಯವಸ್ಥೆ ಮಾಡಿಕೊಂಡಿದ್ದು, ಈ ಬಾರಿಯೂ ಕೊಳೆರೋಗದಿಂದ ಸಂಪೂರ್ಣ ಬೆಳೆ ಹಾಳಾದಲ್ಲಿ ಕೆರೆ, ಬಾವಿಯೋ ಗತಿ ಅಂತಾರೆ ಕೃಷಿಕರು.
ಅಡಿಕೆ ಜಿಎಸ್‌ಟಿ ರದ್ದತಿಗೆ ಕೇಂದ್ರಕ್ಕೆ ಒತ್ತಡ ಹೇರಿ: ಸಿದ್ದರಾಮಯ್ಯ
ಒಟ್ಟಿನಲ್ಲಿ ಅಸಮರ್ಪಕ ಹವಾಮಾನದಿಂದಾಗಿ ಈ ಬಾರಿಯೂ ಪ್ರಾರಂಭದ ಹಂತದಲ್ಲೇ ಕೊಳೆರೋಗ ಎದುರಾಗಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಈ ಕಾರಣದಿಂದ ಸರಕಾರ ಈ ಬಗ್ಗೆ ಗಮನ ಹರಿಸಬೇಕಲ್ಲದೇ, ಸಂಬಂಧಿಸಿದ ಇಲಾಖೆಗಳು ಕೊಳೆರೋಗ ತಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.