ಕೊಡಗಿನ ಜೇನು ಅಂದ್ರೇನೆ ದೇಶದಲ್ಲಿಯೇ ಖ್ಯಾತೆ ಹೊಂದಿದೆ. ಇಲ್ಲಿನ ಪಶ್ಚಿಮಘಟ್ಟದಲ್ಲಿರುವ ಅರಣ್ಯಗಳಲ್ಲಿನ ವಿವಿಧ ಮರ, ಗಿಡಗಳ ಹೂವುಗಳಿಂದ ಸಂಗ್ರಹಿಸಿದ ಜೇನು ಅಂದ್ರೆ ಅದರ ರುಚಿ, ಅದರಲ್ಲಿರುವ ಔಷಧೀಯ ಗುಣ ಇವುಗಳೇ ಕೊಡಗಿನ ಜೇನಿನ ಮಹತ್ವ ಹೆಚ್ಚಿಸಿವೆ.
ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಡಿ24): ಪ್ರವಾಸಿಗರ ಹಾಟ್‍ಸ್ಪಾಟ್ ಆಗಿರುವ ಮಂಜಿನಗರಿಯ ರಾಜಾಸೀಟ್ ನಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೆಂದರೆ ಎಂತಹ ಆನಂದ ಗೊತ್ತಾ.? ಅಂತಹ ಪ್ರಕೃತಿ ತಾಣದಲ್ಲಿ ಜೇನು ಸವಿಯುತ್ತಾ ಸೂರ್ಯಾಸ್ತ ಕಣ್ತುಂಬಿಕೊಳ್ಳುತ್ತಿದ್ದರೆ ಅದು ಇನ್ನೆಷ್ಟು ಮಹಾದಾನಂದ ಇರಬಹುದು. ಆ ಸವಿಯನ್ನು ನೀವು ಒಮ್ಮೆ ಸವಿಯಬೇಕು ಅಂದರೆ ಈ ಸ್ಟೋರಿ ಓದಬೇಕು. ಒಂದೆಡೆ ಸೂರ್ಯಾಸ್ತವಾಗುತ್ತಿದ್ದ ಮಡಿಕೇರಿಯ ರಾಜಾಸೀಟ್ ನಲ್ಲಿ ತಣ್ಣನೆ ಬೀಸುತ್ತಿದ್ದ ಗಾಳಿಗೆ ಮೈಯೊಡ್ಡಿ ವಿಹರಿಸುತ್ತಿದ್ದ ಪ್ರವಾಸಿಗರು, ದೇಶದಲ್ಲಿಯೇ ಖ್ಯಾತಿ ಹೊಂದಿರುವ ಕೊಡಗಿನ ವಿವಿಧ ಜೇನನ್ನು 20 ಕ್ಕೂ ಹೆಚ್ಚು ಅಂಗಡಿಗಳಲ್ಲಿ ನೋಡುವುದರ ಜೊತೆಗೆ ಅವುಗಳ ರುಚಿಯನ್ನು ಸವಿಯುತ್ತಾ ಎಂಜಾಯ್ ಮಾಡಿದ್ರು. ಇದು ಕೊಡಗು ಜಿಲ್ಲಾಡಳಿತ, ತೋಟಗಾರಿಕೆ ಇಲಾಖೆ, ಜೇನುಗಾರಿಕೆ ಇಲಾಖೆ ಸಹಯೋಗದಲ್ಲಿ ನಡೆದ ಜೇನು ಹಬ್ಬದ ದೃಶ್ಯಗಳು.
undefined
ಹೌದು, ಕೊಡಗಿನ ಜೇನು ಅಂದ್ರೇನೆ ದೇಶದಲ್ಲಿಯೇ ಖ್ಯಾತೆ ಹೊಂದಿದೆ. ಇಲ್ಲಿನ ಪಶ್ಚಿಮಘಟ್ಟದಲ್ಲಿರುವ ಅರಣ್ಯಗಳಲ್ಲಿನ ವಿವಿಧ ಮರ, ಗಿಡಗಳ ಹೂವುಗಳಿಂದ ಸಂಗ್ರಹಿಸಿದ ಜೇನು ಅಂದ್ರೆ ಅದರ ರುಚಿ, ಅದರಲ್ಲಿರುವ ಔಷಧೀಯ ಗುಣ ಇವುಗಳೇ ಕೊಡಗಿನ ಜೇನಿನ ಮಹತ್ವ ಹೆಚ್ಚಿಸಿವೆ. ಹೀಗಾಗಿ ಪ್ರವಾಸಿ ತಾಣದಲ್ಲಿ ಏರ್ಪಡಿಸಿದ್ದ ಜೇನು ಹಬ್ಬದಲ್ಲಿ ಪ್ರವಾಸಿಗರು ಕಡಿಮೆ ಬೆಲೆಯಲ್ಲಿ ದೊರೆಯುತ್ತಿದ್ದ ಜೇನನ್ನು ಕೊಂಡು ಸಂತ್ರಸಪಟ್ಟರು. ಜೊತೆಗೆ ಬೇರೆ ಕಾಲಮಾನಗಳಲ್ಲಿ ಸಂಗ್ರಹವಾದ ಜೇನುಗಳ ಮಾರಾಟ ಮತ್ತು ಸವಿಯೋದಕ್ಕೆ ಅವಕಾಶ ಇತ್ತು. ಅಲ್ಲದೆ ಮಾರುಕಟ್ಟೆಯಲ್ಲಿ ದೊರಕುವ ಜೇನು ಶುದ್ಧವೋ, ಅಶುದ್ಧವೋ ಎನ್ನುವುದನ್ನು ತಿಳಿದುಕೊಳ್ಳಲು ಸರಳ ಉಪಾಯವನ್ನು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು "ಜೇನು ಹಬ್ಬ"ದಲ್ಲಿ ತಮ್ಮ ಮಳಿಗೆಗಳಲ್ಲಿ ಪ್ರಾಯೋಗಕವಾಗಿ ಬರುವ ಆಸಕ್ತರಿಗೆ ತೋರಿಸಿದರು.
ಕೊಡಗಿನ ದುಬಾರೆ ಸಾಕಾನೆ ಶಿಬಿರದಿಂದ ಮಧ್ಯಪ್ರದೇಶಕ್ಕೆ ಐದು ಆನೆಗಳ ಸ್ಥಳಾಂತರ, ಗೋಳಾಡುತ್ತಲೇ ಲಾರಿ ಏರಿದ ಸಾಕಾನೆಗಳು
ಒಂದು ಟೆಸ್ಟ್ ಟ್ಯೂಬ್ ನಲ್ಲಿ ವಿನಿಗರ್ ಹಾಕಿ, ಅದಕ್ಕೆ ಪರೀಕ್ಷೆ ಒಳಪಡಿಸಬೇಕಾದ ಜೇನನ್ನು ಒಂದಿಷ್ಟು ಹಾಕಿ ಚೆನ್ನಾಗಿ ಕಲಕಿದಲು. ಜೇನು ಶುದ್ಧವಾಗಿದ್ದರೆ ವಿನಿಗರ್ ನೊಂದಿಗೆ ಅದು ಬರೆಯದೆ ಟೆಸ್ಟ್ ಟ್ಯೂಬ್ ನ ಕೆಳಭಾಗ ನಿಲ್ಲುತ್ತದೆ ಅಶುದ್ಧವಾಗಿದ್ದರೆ ವಿನಿಗರ್ ನೊಂದಿಗೆ ಬೆರೆತು ನೀರಿನಂತಿರುವ ವಿನಿಗರ್ ಬಣ್ಣ ಬದಲಾಗುತ್ತದೆ. ಇದನ್ನು ಯಾರು ಬೇಕಾದರೂ ಪರೀಕ್ಷಿಸಿಕೊಂಡು ಮುಂದೆ ಜೇನನ್ನು ಖರೀದಿಸುವಾಗ ಈ ಮಾರ್ಗೋಪಾಯವನ್ನು ಅನುಸರಿಸಿದರೆ ಅಸಲಿ ಜೇನನ್ನು ನಾಲಿಗೆಯಲ್ಲಿ ಚಪ್ಪರಿಸಬಹುದು ಎನ್ನುವ ಮಾಹಿತಿಯನ್ನು ನೀಡುತ್ತಿದ್ದರು. ಇನ್ನು ಕೃಷಿಗೆ ಪೂರಕವಾಗಿ ಜೇನು ಉತ್ಪಾದನೆ ಮಾಡುವ ರೈತರು ಕೂಡ ಜೇನು ಮಾರಾಟ ಮಾಡುವ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಈ ಜೇನು ಹಬ್ಬ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ ಸತೀಶ್ ಹೇಳಿದರು.
ಜೇನು ಹಬ್ಬದಲ್ಲಿ ಕೇವಲ ಜೇನುತುಪ್ಪ ಅಷ್ಟೇ ಅಲ್ಲದೆ, ಜೇನು ಸಾಕಾಣಿಕೆಯ ಜೇನುಪೆಟ್ಟಿಗೆ, ಜೇನು ತೆಗೆಯುವ ಸಾಧನಗಳು ಮತ್ತು ಜೇನು ಕುಟುಂಬಗಳನ್ನು ಕೂಡ ಜೇನು ಉತ್ಪಾದಕರು ಮಾರಾಟ ಮಾಡಿದ್ರು. ಸ್ಥಳದಲ್ಲಿಯೇ ಜೇನು ಕುಟುಂಬಗಳು ಇದ್ದಿದ್ದರಿಂದ ಜೇನು ಹಬ್ಬದಲ್ಲಿ ಜೇನು ಹುಳುಗಳು ಹಾರಾಟ ಮಾಡುತ್ತಿದ್ದವು. ಆದರೆ ಜೇನು ಹಬ್ಬಕ್ಕೆ ಬಂದಿದ್ದ ಪ್ರವಾಸಿಗರು ಮತ್ತು ಜೇನು ಕುಟುಂಬ ಕೊಂಡುಕೊಳ್ಳಲು ಬಂದಿದ್ದವರು ಯಾವುದೇ ಭಯ, ಆತಂಕವಿಲ್ಲದೆ ಜೇನು ಕುಟುಂಬಗಳ ಬಳಿ ಓಡಾಡಿ ಮಾಹಿತಿ ಪಡೆದುಕೊಂಡರು. ಇನ್ನು ಕಾಲಘಟ್ಟಗಳಲ್ಲಿ ಸಿಗುವ ಜೇನನ್ನು ಕೂಡ ಪ್ರತ್ಯೇಕ ಪ್ರತ್ಯೇಕವಾಗಿ ಸಂಗ್ರಹಿಸಿ ಇಡಲಾಗಿತ್ತು. ಜೇನು ಹಬ್ಬಕ್ಕೆ ಬಂದಿದ್ದ ಜನರು ವಿವಿಧ ಕಾಲಮಾನಗಳ ಜೇನುಗಳ ವಿಶೇಷ ಏನು, ಅವುಗಳ ಉಪಯೋಗ ಏನು ಎಂಬುದರ ಬಗ್ಗೆಯೂ ಮಾಹಿತಿ ಪಡೆದರು. ಜೊತೆಗೆ ವಿವಿಧ ಜೇನುಗಳ ಸವಿಯನ್ನು ಉಂಡು ಸಖತ್ ಖುಷಿಪಟ್ಟರು. ಅದರಲ್ಲೂ ಕಹಿ ಜೇನನ್ನು ಸವಿದ ಜನರು ಅಚ್ಚರಿಯನ್ನು ಪಟ್ಟರು. ಜೇನು ಮಾರಾಟಕ್ಕೆ ಬಂದಿದ್ದ ಜೇನು ಉತ್ಪಾದಕರು ಜೇನು ಹಬ್ಬದಿಂದ ನಮಗೆ ಸಾಕಷ್ಟು ಅನುಕೂಲವಾಗಿದೆ. ಜೊತೆಗೆ ಇಂದು ಕೊಡಗಿನ ಜೇನು ಎಂದು ಹೊರಗೆ ಎಲ್ಲರೂ ಮಾರಾಟ ಮಾಡುತ್ತಾರೆ. ಆದರೆ ನಿಜವಾಗಿಯೂ ಕೊಡಗಿನ ಜೇನಿನ ರುಚಿ, ಗುಣ ಅವೆಲ್ಲವೂ ಹೇಗಿರುತ್ತವೆ ಎಂಬುದನ್ನು ಇಲ್ಲಿಯೇ ಪಡೆದುಕೊಳ್ಳಬಹುದು ಎಂದು ಜೇನು ಉತ್ಪಾದಕರಾದ ಸಿಂಚನಾ ಹೇಳಿದರು.
ಒಟ್ಟಿನಲ್ಲಿ ಮಡಿಕೇರಿಯ ರಾಜಾಸೀಟ್‍ನಲ್ಲಿ ಶನಿವಾರ ಮತ್ತು ಭಾನುವಾರ ಎರಡು ದಿನಗಳು ನಡೆಯುತ್ತಿರುವ ಜೇನು ಹಬ್ಬದಲ್ಲಿ ಪ್ರವಾಸಿಗರು ಕೊಡಗಿನ ಪ್ರಕೃತಿಯಲ್ಲಿ ಓಡಾಡುತ್ತಾ ಕೊಡಗಿನ ಜೇನನ್ನು ಸವಿಯುವ ವಿಶೇಷ ಕ್ಷಣಕ್ಕೆ ಸಾಕ್ಷಿಯಾಗಿದೆ.