ಕೋಲಾರದ ಹೊಂಡಾ ಕಂಪೆನಿಯ ಆಢಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಸಂಬಳಕ್ಕಾಗಿ ಜಟಾಪಟಿ ಮುಂದುವರೆದಿದೆ. 10 ವರ್ಷಗಳಿಂದ ಸಂಬಳ ಹೆಚ್ಚಳವಾಗಿಲ್ಲ. ಸೇವಾ ಭದ್ರತೆಯಿಲ್ಲ ಅಂತಾ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ (ಜೂ.07): ಕೋಲಾರದ ಹೊಂಡಾ ಕಂಪೆನಿಯ ಆಢಳಿತ ಮಂಡಳಿ ಹಾಗೂ ಕಾರ್ಮಿಕರ ನಡುವೆ ಸಂಬಳಕ್ಕಾಗಿ ಜಟಾಪಟಿ ಮುಂದುವರೆದಿದೆ. 10 ವರ್ಷಗಳಿಂದ ಸಂಬಳ ಹೆಚ್ಚಳವಾಗಿಲ್ಲ. ಸೇವಾ ಭದ್ರತೆಯಿಲ್ಲ ಅಂತಾ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಕಂಪೆನಿಯ ಸುತ್ತ 500 ಮೀಟರ್ ಪ್ರತಿಭಟನೆ ಮಾಡದಂತೆ ಕಂಪೆನಿಯವರು ಕೋರ್ಟ್ ಆರ್ಡರ್ ತಂದಿದ್ದಾರೆ. ಸಂಬಳ ಹೆಚ್ಚಳ, ಸೇವಾ ಭದ್ರತೆ ಒದಗಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕಾರ್ಮಿಕರು ಬೆದರಿಸುತ್ತಿದ್ದಾರೆ. ಪ್ರತಿಷ್ಠಿತ ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಸ್ಟ್ರೀಸ್ ಫ್ರೈ. ಲಿ ಮುಂದೆ ಪೊಲೀಸರ ಸರ್ಪಗಾವಲು.
undefined
ಮತ್ತೊಂದೆಡೆ ಕಂಪೆನಿಯ 500 ಮೀಟರ್ ದೂರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾರ್ಮಿಕರು. ಸೇವಾ ಭದ್ರತೆ, ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಘೋಷಣೆಗಳನ್ನ ಕೂಗಿತ್ತಿರುವ ನೌಕರರು. ಇವೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರೋ ಹೋಂಡಾ ಕಂಪೆನಿಯ ಮುಂಭಾಗದಲ್ಲಿ. ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೊಂಡಾ ಕಂಪೆನಿಯಲ್ಲಿ ಆರು ಸಾವಿರಕ್ಕೂ ಅಧಿಕ ಮಂದಿ ಕಾರ್ಮಿಕರು ದುಡಿಯುತ್ತಿದ್ದಾರೆ. ಆರು ಸಾವಿರ ಕಾರ್ಮಿಕರಲ್ಲಿ ಎರಡು ಸಾವಿರ ಮಂದಿ ಕಾರ್ಮಿಕರು ಕಂಪೆನಿಯ ನೌಕರರು ಆಗಿದ್ದಾರೆ.
Kolar: ಮಾನವೀಯತೆ ಮರೆತ ಅಧಿಕಾರಿಗಳು: ರೈತ ಮಹಿಳೆಯ ಗೋಳು ಆ ದೇವರಿಗೆ ಪ್ರೀತಿ!
ಉಳಿದ ನಾಲ್ಕು ಸಾವಿರ ಮಂದಿ ಗುತ್ತಿಗೆ ಕಾರ್ಮಿಕರನ್ನ ಒದಗಿಸೋ ಏಜೆನ್ಸಿಗಳ ಮುಖಾಂತರ ಕಂಪೆನಿಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದು, ಹತ್ತು ವರ್ಷಗಳಾದ್ರೂ ಸಂಬಳ ಹೆಚ್ಚಳ ಮಾಡಿಲ್ಲ, ಜೊತೆಗೆ ಸೇವಾ ಭದ್ರತೆಯನ್ನ ಒದಗಿಸಿಲ್ಲ ಅಂತ ಆರೋಪಿಸಿ ಗುತ್ತಿಗೆ ಆಧಾರದ ಕಾರ್ಮಿಕರು ಪ್ರತಿಭಟನೆಗೆ ಇಳಿದಿದ್ದಾರೆ. ಹೊಂಡಾ ಕಂಪೆನಿಯ ಗುತ್ತಿಗೆ ಕಾರ್ಮಿಕರು ಸಂಬಳ ಹೆಚ್ಚಳಕ್ಕಾಗಿ ಜನಪ್ರತಿನಿಧಿಗಳು ಸೇರಿದಂತೆ ಹಲವರ ಬಳಿ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಕಾರ್ಮಿಕ ಇಲಾಖೆಯವ್ರು ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತಕ್ಕೂ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ.
ಈ ಹಿನ್ನಲೆಯಲ್ಲಿ ಕಾರ್ಮಿಕರು ಪ್ರತಿಭಟನೆಯನ್ನ ಮುಂದುವರೆಸಿದ್ದಾರೆ. ಇವತ್ತು ಕಂಪೆನಿಯ 1800ಕ್ಕೂ ಹೆಚ್ಚು ಗುತ್ತಿಗೆ ಕಾರ್ಮಿಕರು ರಜೆ ಹಾಕಿ ಕಂಪೆನಿಯ ಎದುರೇ ಪ್ರತಿಭಟನೆ ಮಾಡುತ್ತಿದ್ದಾರೆ. ಸೇವಾ ಭದ್ರತೆ, ಸಂಬಳ ಹೆಚ್ಚಳವಾಗದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಎಚ್ಚರಿಸಿರುವ ಕಾರ್ಮಿಕರು, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿಯೂ ಧರಣಿ ಮುಂದುವರೆಸುವುದಾಗಿ ಹೇಳಿದರು. 1800 ಮಂದಿ ವೈಯಕ್ತಿಕವಾಗಿ ರಾಜ್ಯಪಾಲರಿಗೆ ದಯಾಮರಣಕ್ಕೆ ಪತ್ರ ಬರೆಯಲಾಗುವುದು. ಅಲ್ಲಿಂದ ಸಮರ್ಪಕ ಉತ್ತರ ಸಿಗದಿದ್ದರೆ ಕೋಲಾರದ ನರಸಾಪುರ ಕೆರೆಯಲ್ಲಿ ಮುಳಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಸಂಬಳ ಹೆಚ್ಚಳ ಹಾಗೂ ಸೇವಾ ಭದ್ರತೆ ಸೇರಿದಂತೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಕಾರ್ಮಿಕರು ಕೊಟ್ಟ ಮನವಿಗೆ ಕಂಪೆನಿಯವ್ರು ಸ್ಪಂದಿಸಿಲ್ಲ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿಯೇ ನಡೆದ ಸಭೆಯಲ್ಲಿ ಸಂಬಳ ಹೆಚ್ಚಳ, ಸೇವಾ ಭದ್ರತೆಯ ಭರವಸೆ ನೀಡಿದ್ದರೂ ಈಡೇರಿಲ್ಲ. ಇದ್ರಿಂದ ರೊಚ್ಚಿಗೆದ್ದಿರುವ ಕಾರ್ಮಿಕರು ಇದೀಗ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಮೂರು ದಿನಗಳ ಹಿಂದೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಮೊರೆ ಹೋಗಿದ್ದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆಯಲ್ಲಿ ಕಂಪೆನಿಯ ಎದುರು ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆ ಪ್ರಾರಂಭ ಮಾಡಿದ್ದಾರೆ.
ಯಾವಾಗ ಬೇಕಾದ್ರೂ ಬೀಳುತ್ತೆ ನೀರಿನ ಟ್ಯಾಂಕ್: ಶಿಥಿಲಗೊಂಡ ಟ್ಯಾಂಕ್‌ನಿಂದ ನಿರಂತರ ನೀರು ಸೋರಿಕೆ!
ಆದರೆ ಕಾರ್ಮಿಕರು ಕಂಪೆನಿಯ ಸುತ್ತ 500 ಮೀಟರ್ ಪ್ರತಿಭಟನೆ ಹಾಗೂ ಘೋಷಣೆಗಳನ್ನ ಕೂಗದಂತೆ ಕೋರ್ಟ್ನಿಂದ ಇಂಜೆಕ್ಷನ್ ಆರ್ಡರ್ ತಂದಿದ್ದು, 500 ಮೀಟರ್ ದೂರದಲ್ಲಿ ಪ್ರತಿಭಟನೆ ನಡೆಸಿದರು. ಅಹಿತಕರ ಘಟನೆ ಜರುಗದಂತೆ ಪೊಲೀಸರು ಹೊಂಡಾ ಕಂಪೆನಿಗೆ ಬಂದೋಬಸ್ತ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಂಬಳ ಹೆಚ್ಚಳ, ಸೇವಾ ಭದ್ರತೆ ಕೊಡುವಂತೆ ಕಾರ್ಮಿಕರು ಪ್ರತಿಭಟನೆ ನಡೆಸಿ ಬೇಡಿಕೆಗಳನ್ನ ಈಡೇರಿಸಿಕೊಳ್ಳಲಿ. ಆದ್ರೆ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುವ ಮಾರ್ಗ ಸರಿಯಲ್ಲ. ಕಾರ್ಮಿಕರ ಬೇಡಿಕೆಗಳ ಬಗ್ಗೆಯೂ ಕಂಪೆನಿಯವರು ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ.