ಬೆಂಗಳೂರು ನಗರದಲ್ಲಿ ಹೊಸ ಗ್ರಾಮ ಪಂಚಾಯಿತಿ ರಚನೆ: ನಿಮ್ಮ ಆಕ್ಷೇಪಣೆ ಇದೆಯೇ?

By Sathish Kumar KH  |  First Published Nov 4, 2024, 7:01 PM IST

ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ಹೊಮ್ಮದೇವನಹಳ್ಳಿ ಕೇಂದ್ರವಾಗಿ ಹೊಸ ಗ್ರಾಮ ಪಂಚಾಯಿತಿಯನ್ನೂ ಸ್ಥಾಪಿಸಲಾಗುವುದು. ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.


ಬೆಂಗಳೂರು (ಅ.04): ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ದೊಡ್ಡತೋಗೂರು ಗ್ರಾಮ ಪಂಚಾಯಿತಿಗೆ ಬೆಟ್ಟದಾಸನಪುರ ಗ್ರಾಮವನ್ನು ಸೇರ್ಪಡೆ ಮಾಡಿ ಇದನ್ನು ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸಲಾಗಿದೆ. ಹೀಗಾಗಿ, ದೊಡ್ಡತೋಗೂರು ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳನ್ನು ಸೇರಿಸಿ ಹೊಸದಾಗಿ ಹೊಮ್ಮದೇವನಹಳ್ಳಿ ಹೊದ ಗ್ರಾಮ ಪಂಚಾಯಿತಿ ಸ್ಥಾಪಿಸಲು ಸರ್ಕಾರ ಅನುಮತಿ ನೀಡಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆಡಳಿತ ವ್ಯವಸ್ಥೆ ಇನ್ನೂ ವಿಚಿತ್ರ ಮತ್ತು ವಿಭಿನ್ನವಾಗಿದೆ. ಬೆಂಗಳೂರಿನ ವಾಣಿಜ್ಯಾತ್ಮಕ ಪ್ರದೇಶಗಳನ್ನು ಒಳಗೊಂಡಂತೆ 8 ವಲಯಗಳನ್ನು (ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ದಕ್ಷಿಣ, ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಬೊಮ್ಮನಹಳ್ಳಿ ಮತ್ತು ಮಹದೇವಪುರ) ಬಿಬಿಎಂಪಿ ವ್ಯಾಪ್ತಿಗೆ ಒಳಪಡಿಸಲಾಗಿದೆ. ಈ ಬಿಬಿಎಂಪಿ ವ್ಯಾಪ್ತಿಗೆ 2007ರಲ್ಲಿ 110 ಹಳ್ಳಿಗಳನ್ನು ಸೇರ್ಪಡೆ ಮಾಡಲಾಗಿತ್ತು. ಇದರ ಹೊರತಾಗಿ ಬೆಂಗಳೂರು ಜಿಲ್ಲಾಡಳಿತಕ್ಕೆ ಒಳಪಡುವಂತೆ ಬೆಂಗಳೂರು ಉತ್ತರ (ಹೆಬ್ಬಾಳ), ಯಲಹಂಕ, ಬೆಂಗಳೂರು ದಕ್ಷಿಣ (ಕೆಂಗೇರಿ), ಬೆಂಗಳೂರು ಪೂರ್ವ (ಕೃಷ್ಣರಾಜಪುರ) ಹಾಗೂ ಆನೇಕಲ್ ತಾಲೂಕುಗಳಿವೆ.

Tap to resize

Latest Videos

ಇದೀಗ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕಿನ ದೊಡ್ಡತೋಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೆಟ್ಟದಾಸನಪುರ ಗ್ರಾಮವನ್ನು ಸೇರಿಸಿ ದೊಡ್ಡತೋಗೂರು ಗ್ರಾಮ ಪಂಚಾಯಿತಿ ಪ್ರದೇಶವನ್ನು  ಕರ್ನಾಟಕ ಪುರಸಭೆಗಳ ಕಾಯ್ದೆ 1964ರ ಪ್ರಕರಣ (9)ರಂತೆ ಪಟ್ಟಣ ಪಂಚಾಯ್ತಿ ಪ್ರದೇಶವೆಂದು ಭಾಗಶಃ ಮೇಲ್ದರ್ಜೆಗೇರಿಸಿ  ಅಧಿಸೂಚನೆ ಹೊರಡಿಸಲಾಗಿದೆ. ಅದರಂತೆ ದೊಡ್ಡತೋಗೂರು ಗ್ರಾಮ ಪಂಚಾಯಿತಿಯು ಭಾಗಶಃ ಪರಿವರ್ತನೆಯಾಗುವುದರಿಂದ ಉಳಿದ 3 ಕಂದಾಯ ಗ್ರಾಮಗಳಾದ ವಿಟ್ಟಸಂದ್ರ, ಮೈಲಸಂದ್ರ ಮತ್ತು ಹೊಮ್ಮದೇವನಹಳ್ಳಿ ಗ್ರಾಮಗಳನ್ನು ಸೇರಿಸಿ ಹೊಸ ಗ್ರಾಮ ಪಂಚಾಯಿತಿಯನ್ನು ರಚಿಸಲು ಸರ್ಕಾರ  ಅನುಮತಿ ನೀಡಿದೆ.

ಇದನ್ನೂ ಓದಿ: ಬಾರೋ.. ಬಾರೋ.. ಅಂತ ಕರೆದು, ಪಟಾಕಿ ಮೇಲೆ ಕೂರಿಸಿ ಬೆಂಕಿ ಹಚ್ಚಿ ಓಡಿ ಹೋದರು!

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ (4)ರ ಮೇರೆಗೆ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲ್ಲೂಕಿನ ಹೊಮ್ಮದೇವನಹಳ್ಳಿ, ವಿಟ್ಟಸಂದ್ರ, ಮೈಲಸಂದ್ರ ಗ್ರಾಮಗಳನ್ನು ಸೇರಿಸಿ ಹೊಮ್ಮದೇವನಹಳ್ಳಿಯನ್ನು ಕೇಂದ್ರ ಸ್ಥಾನವನ್ನಾಗಿರಿಸಿ ಹೊಸ ಗ್ರಾಮ ಪಂಚಾಯ್ತಿಯನ್ನಾಗಿ ಸೃಜಿಸಲು ಉದ್ದೇಶಿಸಲಾಗಿದೆ. ಗ್ರಾಮ ಪಂಚಾಯಿತಿಯನ್ನು ಹೊಸದಾಗಿ ರಚಿಸುವ ಬಗ್ಗೆ ಸಾರ್ವಜನಿಕರ ಸಲಹೆ ಮತ್ತು ಆಕ್ಷೇಪಣೆಗಳಿದ್ದಲ್ಲಿ  ಸಂಬಂಧಪಟ್ಟ ತಹಶೀಲ್ದಾರರು ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ನವೆಂಬರ್ 30 ರೊಳಗಾಗಿ ಸಲ್ಲಿಸಬಹುದು.

ಸಲಹೆ ಮತ್ತು ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ ಡಿಸೆಂಬರ್ 10 ರಂದು ಅಂತಿಮ ಅಧಿಸೂಚನೆಯನ್ನು ಪ್ರಕಟಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಜಗದೀಶ.ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೆಟ್ರೋ ರೈಲಿಗಾಗಿ 1 ಕಿಮೀ ಕ್ಯೂ ನಿಂತ ಪ್ರಯಾಣಿಕರು; ರಾಜಕಾರಣಿಗಳಿಗೆ ಕ್ಯಾಕರಿಸಿ ಉಗಿದ ಜನರು!

click me!