ನಂಬಿದ ಭಕ್ತರ ಇಷ್ಟಾರ್ಥ ಸಿದ್ಧಿಸುವ ಗುರು ರಾಯರು: ಸಚಿವ ಅರಗ

By Kannadaprabha NewsFirst Published Aug 14, 2022, 8:53 AM IST
Highlights

ರಾಯರ ಮಹಿಮೆ ಅನುಭವ ಬಿಚ್ಚಿ​ಟ್ಟ ಸಚಿವ ಅರಗ ಜ್ಞಾನೇಂದ್ರ, ನಟ ಜಗ್ಗೇಶ್‌, ಎಂ.ಎಸ್‌.ರಾಮಯ್ಯ ಆಸ್ಪತ್ರೆ ಮುಖ್ಯಸ್ಥರು

ರಾಮಕೃಷ್ಣ ದಾಸರಿ

ರಾಯಚೂರು(ಆ.14):  ಕಲಿಯುಗದ ಕಲ್ಪತರು ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರು ತಮ್ಮನ್ನು ನಂಬಿದ ಭಕ್ತರು ಬೇಡಿದ ಇಷ್ಟಾರ್ಥಗಳನ್ನು ಸಿದ್ಧಿಸುವಲ್ಲಿ ನಿಸ್ಸಿಮರು ಎನ್ನುವುದಕ್ಕೆ ಸಾಕಷ್ಟುಪವಾಡಗಳನ್ನು ಕಾಣಬಹುದಾಗಿದ್ದು, ಅದೇ ಹಾದಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ, ನಟ ಹಾಗೂ ರಾಜ್ಯಸಭಾ ಜಗ್ಗೇಶ ಮತ್ತು ಎಂ.ಎಸ್‌.ರಾಮಯ್ಯ ಆಸ್ಪತ್ರೆ ಮುಖ್ಯಸ್ಥರಿಗೆ ಗುರುರಾಯರ ಕರುಣೆ, ಅನುಗ್ರಹ, ಶ್ರೀಮಠ ಹಾಗೂ ಸ್ವಾಮಿಗಳ ಮಹಿಮೆಯ ಅನುಭವಕ್ಕೆ ಶನಿವಾರ ನಡೆದ ಮಧ್ಯಾರಾಧನಾ ಮಹೋತ್ಸವ ಸಾಕ್ಷಿಯಾಗಿತ್ತು.

ಶ್ರೀಗುರುರಾಯರ 351 ನೇ ಆರಾಧನಾ ಮಹೋತ್ಸವ ಹಿನ್ನೆಲೆಯಲ್ಲಿ ಮಂತ್ರಾಲಯದ ರಾಯರ ಮಠದಲ್ಲಿ ಹಮ್ಮಿಕೊಂಡಿರುವ ಸಪ್ತರಾತ್ರೋತ್ಸವ ಸಮಾರಂಭದ ನಾಲ್ಕನೇ ದಿನ ಜರುಗಿದ ರಾಯರ ಮಧ್ಯಾರಾಧನೆಯಲ್ಲಿ ಪಾಲ್ಗೊಂಡಿದ್ದ ಸಚಿವ ಅರಗ ಜ್ಞಾನೇಂದ್ರ, ನಟ ಜಗ್ಗೇಶ ಹಾಗೂ ಎಂ.ಎಸ್‌.ರಾಮಯ್ಯ ಆಸ್ಪತ್ರೆ ಮುಖ್ಯಸ್ಥರಾದ ಎಂ.ಎಸ್‌.ಪಟ್ಟಾಬಿ ಹಾಗೂ ಅನಿತಾ ಪಟ್ಟಾಬಿ ದಂಪತಿ ಒಂದಿಲ್ಲಾ ಒಂದು ರೀತಿಯಲ್ಲಿ ರಾಯರ, ಶ್ರೀಮಠ ಹಾಗೂ ಪೀಠಾಧಿಪತಿಗಳಿಂದ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ಭಕ್ತರ ಮುಂದೆ ಬಿಚ್ಚಿಡುವುದರ ಮೂಲಕ ರಾಯರ ಮೇಲೆ ನಂಬಿಕೆ, ಭಕ್ತಿಯ ಫಲವನ್ನು ಪರಿಚಯಿಸಿದರು.

ಮಂತ್ರಾಲಯದಲ್ಲಿ ‌ರಾಯರ ಆರಾಧನಾ ಸಂಭ್ರಮ

ರಾಯರ ಆಶೀರ್ವಾದದಿಂದ ಸಚಿವ ಸ್ಥಾನ :

ಕೆಲ ದಿನಗಳ ಹಿಂದೆ ನಾನು ಶಾಸಕನಾಗಿದ್ದಾಗ ಶ್ರೀಮಠದ ಸ್ವಾಮಿಗಳು ಉಡುಪಿಯ ರಾಯರ ಮಠಕ್ಕೆ ಬಂದಿದ್ದರು. ಅಂದು ನಾವೆಲ್ಲರು ರಾತ್ರಿವರೆಗೆ ನಿಂತು ಶ್ರೀಗಳನ್ನ ಸ್ವಾಗತಿಸಿದ್ದೇವು. ಅಂದು ಸ್ವಾಮಿಗಳು ನನಗೆ ಆಶೀರ್ವಾದ ನೀಡಿದ್ದರ ಫಲವಾಗಿಯೇ ಇಂದು ನಾನು ಕರ್ನಾಟಕ ರಾಜ್ಯದ ಗೃಹಸಚಿವನಾಗಿದ್ದೇನೆ ಎಂದರು. ಇದರ ಜೊತೆಗೆ ಇಂದು ನನ್ನ ಜೀವನದ ಅವಿಸ್ಮರಣೀಯ ದಿನವಾಗಿದ್ದು, ತಿರುಪತಿ ತಿರುಮಲ ದೇವಸ್ಥಾನದಿಂದ ತರಲಾಗಿದ್ದ ವಸ್ತ್ರವನ್ನು ಶ್ರೀಗಳು ನನ್ನ ತಲೆ ಮೇಲೆ ಇರಿಸಿ ಮೆರವಣಿಗೆ ಮಾಡಿಸಿರುವುದನ್ನು ನಾನು ಎಂದೂ ಮರಿಯುವುದಿಲ್ಲವೆಂದು ಸಚಿವರು, ರಾಯರ ಶ್ರೀಗಳ ಮಹಿಮೆಯನ್ನು ಕೊಂಡಾಡಿದರು.

ರಾಯರ ಆಶೀರ್ವಾದಿಂದಲೆಯೇ ರಾಜ್ಯಸಭೆ ಸ್ಥಾನ:

ಹಲವು ದಶಕಗಳಿಂದ ನಾನು ರಾಯರನ್ನು ಆರಾಧಿಸುತ್ತಾ ಬರುತ್ತಿದ್ದೇನೆ. ಅವರ ಆಶೀರ್ವಾದ, ಅನುಗ್ರಹದಿಂದಲೆಯೇ ನಾನು ಇಂದು ದೊಡ್ಡ ನಟನಾಗಿ, ರಾಜ್ಯಸಭಾ ಸದಸ್ಯನಾಗಿ ಈ ಸ್ಥಾನವನ್ನು ಅಲಂಕರಿಸಿದ್ದೇನೆ. ಒಂದು ಕಾಲದಲ್ಲಿ ನನ್ನ ಬಳಿ ಕೇವಲ 39 ರು.ಬಸ್‌ ಚಾರ್ಜಿಗೂ ಹಣವಿರಲಿಲ್ಲ. ಅಧಿಕಾರ ಬಂದಾಗ ಯಾರೂ ತಮ್ಮ ಕೈ ಗಲೀಜು ಮಾಡಿಕೊಳ್ಳುತ್ತಾರೊ ಅವರನ್ನು ರಾಯರು ಕ್ಷಮಿಸುವುದಿಲ್ಲ, ಅಂತಹವರು ಮುಂದೆ ಬೆತ್ತಲಾಗಿ ನಿಲ್ಲಬೇಕಾಗುತ್ತದೆ. ಅದಕ್ಕಾಗಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಗ್ಗೇಶ ಅವರು ರಾಯರ ಮೇಲಿನ ಭಕ್ತಿಯನ್ನು ಹೊರಹಾಕಿದರು.

ರಾಯಚೂರು: ಮಂತ್ರಾಲಯದಲ್ಲಿ ಸಂಭ್ರಮದ ರಾಯರ ಪೂರ್ವಾರಾಧನೆ ಮಹೋತ್ಸವ

ಆಡಿ ಕಾರಿನಲ್ಲಿ ರಾಮದೇವರ ಪೆಟ್ಟಿಗೆ ಇರಿಸಿದ ಫಲ :

ಕೆಲ ದಿನಗಳ ಹಿಂದೆ ರಾಯರ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಬೆಂಗಳೂರಿಗೆ ತೆರಳಿದ್ದಾಗ, ಅಲ್ಲಿ ಭಾರಿ ಮಳೆಯಿಂದಾಗಿ ಶ್ರೀಗಳು ದೂರದಲ್ಲಿದ್ದ ಕಾರಿನ ಬಳಿಗೆ ಹೋಗದೇ ಸಿಕ್ಕಿಹಾಕಿಕೊಂಡಿದ್ದಾಗ ಸಮೀಪದಲ್ಲಿಯೇ ಇದ್ದ ಆಡಿ ಕಾರಿನ ಚಾಲಕನನ್ನು ಬಲವಂತವಾಗಿ ಒಪ್ಪಿಸಿ ಕಾರಿನಲ್ಲಿ ಶ್ರೀಮೂಲರಾಮದೇವರ ಪೆಟ್ಟಿಗೆಯೊಂದಿಗೆ ಶ್ರೀಗಳು ನಿಗದಿತ ಸ್ಥಳಕ್ಕೆ ತಲುಪಿದರು. ಈ ವೇಳೆ ಆಡಿ ಕಾರಿನ ಮಾಲೀಕರು ಚಾಲಕನಿಗೆ ಪೋನ್‌ ಮಾಡಿ ಹೀಗೆ ಬಲವಂತವಾಗಿ ಲಿಫ್ಟ್‌ ಕೊಡುತ್ತಿರುವುದರ ಕುರಿತು ವಿವರಿಸಿದಾಗ ಯಾರು ಎಂದು ತಿಳಿದುಕೊಂಡ ಕಾರಿನ ಮಾಲೀಕರು ಮೂಲರಾಮದೇವರ ಪೆಟ್ಟಿಗೆ ಹಾಗೂ ಶ್ರೀಗಳು ನಮ್ಮ ಕಾರಿನಲ್ಲಿ ಕುಳಿದಿದ್ದಾರೆ ಎಂದರೆ ಅಷ್ಟೇ ಸಾಕು ಎಂದು ಬಹಳಾ ಖುಷಿಯನ್ನು ಪಟ್ಟಿದ್ದರು. ಅದರ ಫಲವಾಗಿಯೇ ಇಂದು ಅವರ ಕುಟುಂಬಸ್ಥರು ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆ ದೂರವಾಗಿದೆ, ಆರ್ಥಿಕವಾಗಿ ಸಬಲರಾಗಿದ್ದಾರೆ ಇದು ಮೂಲರಾಮದೇವರ ಪೆಟ್ಟಿಗೆ ಹಾಗೂ ರಾಯರ ಮಹಿಮೆ. ಇದನ್ನು ಅನುಭವಿಸಿದವರು ಬೇರೆ ಯಾರು ಅಲ್ಲ ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್‌.ರಾಮಯ್ಯ ಆಸ್ಪತ್ರೆ ಟ್ರಸ್ಟ್‌ನ ಮುಖ್ಯಸ್ಥರಾದ ಎಂ.ಎಸ್‌.ಪಟ್ಟಾಬಿ ಹಾಗೂ ಅವರ ಪತ್ನಿ ಅನಿತಾ ಪಟ್ಟಾಬಿಯಾಗಿದ್ದು, ಅದರಿಂದ ತೃಪ್ತರಾದ ಅವರು ಎಂ.ಎಸ್‌.ರಾಮಯ್ಯ ಅವರ ಶತಮಾನೋತ್ಸವ ನಿಮಿತ್ತ ಆರಾಧನಾ ಮಧ್ಯಾರಾಧನೆಯಲ್ಲಿ ಭಾಗಿಯಾಗಿ 1.5 ಕೋಟಿ ಮೌಲ್ಯದ ಸುವರ್ಣ ಕಾಸಿನ ಹಾರವನ್ನು ರಾಯರಿಗೆ ಸಮರ್ಪಿಸಿದ್ದಾರೆ ಎಂದು ಮಠದ ಸ್ವಾಮಿಗಳೇ ಈ ವೃತ್ತಾಂತವನ್ನು ವಿವರಿಸಿದ್ದು ವಿಶೇಷವಾಗಿತ್ತು.

ಭಕ್ತರ ಇಚ್ಛಾರ್ಥಗಳನ್ನು ಸದಾ ಸಿದ್ಧಿಸುವ ಶ್ರೀಗುರುಸಾರ್ವಭೌಮರು ತಮ್ಮ ಭಕ್ತರಿಗೆ ಯಾವ ಯಾವ ರೀತಿಯಲ್ಲಿ ಅನುಗ್ರಹಿಸುತ್ತಾರೆ ಎನ್ನುವುದು ಭಕ್ತರೇ ಹೇಳುತ್ತಾರೆ. ಬೆಂಗಳೂರಿನ ಮಳೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ ನಮ್ಮನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆ ಮುಖ್ಯಸ್ಥರು ತಮ್ಮ ಆಡಿ ಕಾರಿನಲ್ಲಿ ಮೂಲರಾಮದೇವರ ಪಟ್ಟಿಗೆಯೊಂದಿಗೆ ನಮಗೆ ಡ್ರಾಪ್‌ ಮಾಡಿದ ಫಲದಿಂದ ಇಂದು ಅವರು ಎದುರಿಸುತ್ತಿದ್ದ ಉಪದ್ರವದಿಂದ ದೂರವಾಗಿ, ಲಾಭದಾಯಕರಾಗಿದ್ದಾರೆ.ಇದೆಲ್ಲವೂ ಗುರುರಾಯರ ಮಹಿಮೆಯ ಫಲವಾಗಿದೆ ಅಂತ ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ.  
 

click me!