ಜೈಲಿನಲ್ಲಿ ಅಕ್ರಮ ಚಟುವಟಿಕೆ ಸಹಿಸಲ್ಲ: ಗೃಹಸಚಿವ ಆರಗ ಜ್ಞಾನೇಂದ್ರ

By Govindaraj S  |  First Published Dec 30, 2022, 8:22 PM IST

ಗೃಹಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ಹಿಂಡಲಗಾ ಕಾರಾಗೃಹಕ್ಕೆ ಗುರುವಾರ ದಿಢೀರ ಭೇಟಿ ನೀಡಿ, ಅಲ್ಲಿನ ರಕ್ಷಣಾ ವ್ಯವಸ್ಥೆ ಪರಿಶೀಲಿಸಿ, ಕೈದಿಗಳ ಜೊತೆ ಸಂವಾದ ನಡೆಸಿದರು. 


ಬೆಳಗಾವಿ (ಡಿ.30): ಗೃಹಸಚಿವ ಆರಗ ಜ್ಞಾನೇಂದ್ರ ಅವರು ಕೇಂದ್ರ ಹಿಂಡಲಗಾ ಕಾರಾಗೃಹಕ್ಕೆ ಗುರುವಾರ ದಿಢೀರ ಭೇಟಿ ನೀಡಿ, ಅಲ್ಲಿನ ರಕ್ಷಣಾ ವ್ಯವಸ್ಥೆ ಪರಿಶೀಲಿಸಿ, ಕೈದಿಗಳ ಜೊತೆ ಸಂವಾದ ನಡೆಸಿದರು. ಜೈಲಿನೊಳಗೆ, ಮೊಬೈಲ್, ಗಾಂಜಾ ಹಾಗೂ ಮಾದಕ ವಸ್ತುಗಳ ಅಕ್ರಮ ಸರಬರಾಜು ತಡೆಯಲು ಜೈಲು ಸಿಬ್ಬಂದಿ, ಕೈಗೊಂಡ ಕ್ರಮಗಳ ಖುದ್ದು ಪರಿಶೀಲನೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಜೈಲಿನ ಒಳಗೆ ಆಹಾರ, ಭದ್ರತೆ, ಆಸ್ಪತ್ರೆ ವ್ಯವಸ್ಥೆ ಹೇಗಿದೆ ಎಂಬುದರ ಕುರಿತು ಕೈದಿಗಳಿಂದ ಮಾಹಿತಿ ಪಡೆದಿದ್ದೇನೆ. ಕೆಲ ಲೋಪದೋಷಗಳ ಬಗ್ಗೆ ಇಲ್ಲಿಯ ಸಿಬ್ಬಂದಿ ಜೊತೆ ಮಾತನಾಡಿ, ಎಚ್ಚರಿಕೆ ನೀಡಿದ್ದೇನೆ. 

ಈ ಜೈಲಿನಲ್ಲಿ ಬಹಳ ನಟೋರಿಯಸ್‌ ಕೈದಿಗಳು ಇದ್ದು, ಬೇರೆ ಬೇರೆ ಜೈಲುಗಳಲ್ಲಿ ಕೈದಿಗಳಿಗೆ ಗಾಂಜಾ, ಅಫೀಮು ಸೇರಿ ಮಾದಕವಸ್ತುಗಳು ಸಿಗುತ್ತಿದ್ದವು. ಕೊಲೆ ಕೈದಿಗಳಿಗೆ ರಾಯಲ್‌ ಟ್ರೀಟ್‌ಮೆಂಟ್‌ ಸಿಗುತ್ತಿತ್ತು. ಪರಪ್ಪನ ಅಗ್ರಹಾರದಲ್ಲಿ ಇದಕ್ಕೆ ಸಂಬಂಧಿಸಿ 35 ಜನರ ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ. ಅವರಿಗೆ ಭವಿಷ್ಯದಲ್ಲಿ ಯಾವುದೇ ಬಡ್ತಿ ಕೂಡ ಸಿಗುವುದಿಲ್ಲ ಎಂದು ಹೇಳಿದರು. ಅಮಲು ಪದಾರ್ಥ, ಮೊಬೈಲ್‌ಗಳನ್ನು ಕಾನೂನು ಬಾಹಿರವಾಗಿ ಒಳಗೆ ಬಿಟ್ಟರೆ ಅಂಥವರಿಗೆ ಐದು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಳಗೆ ಇದ್ದವರು ಅವುಗಳನ್ನು ಪಡೆದರೆ ಅವರಿಗೆ ಐದು ವರ್ಷ ಹೆಚ್ಚುವರಿ ಶಿಕ್ಷೆ ಆಗುತ್ತದೆ. 

Tap to resize

Latest Videos

ಹಿಂಡಲಗಾ ಜೈಲಲ್ಲಿ ಸಾವರ್ಕರ್‌ ಫೋಟೋ ಅನಾವರಣಗೊಳಿಸಿದ ಸಚಿವ ನಾಗೇಶ್

ಹಿಂಡಲಗಾ ಜೈಲಿನಲ್ಲಿ 816 ಪುರುಷರು, 27 ಮಹಿಳಾ ಕೈದಿಗಳು ಇದ್ದಾರೆ. ಕೈದಿಗಳಿಗೆ ಸ್ಕಿಲ್ ಡೆವಲಪ್‌ಮೆಂಟ್‌ ಕಾರ್ಯಕ್ರಮ ನಡೆಯುತ್ತಿದೆ. ಕನಿಷ್ಠ ವೇತನ ಕಾಯ್ದೆ ಪ್ರಕಾರ ಕೈದಿಗಳ ಸಂಬಳವನ್ನು ಹೆಚ್ಚಳ ಮಾಡಲಾಗಿದೆ. ಮೊದಲು 280 ಸಂಬಳ ಸಿಗುತ್ತಿತ್ತು. ಈಗ 600, 650 ಸಂಬಳ ಸಿಗುವಂತಾಗಿದೆ. ಶಿಕ್ಷೆಗೊಳಗಾದ ಹಾಗೂ ಸ್ಕಿಲ್‌ ಲೇಬರ್‌ಗಳಿಗೆ 600ರಿಂದ .650 ಸಂಬಳ ನೀಡಲಾಗುತ್ತಿದೆ. ಕೈದಿಗಳಾದವರು ತಮ್ಮ ಶಿಕ್ಷೆ ಪೂರೈಸಿ ಹೊರಗೆ ಹೋಗುವಾಗ ಒಬ್ಬ ಮನುಷ್ಯನಾಗಿ, ಗೌರವದಿಂದ ಬದುಕಬೇಕು. ಅದಕ್ಕಾಗಿ ಅವರ ಉಳಿತಾಯದ ಹಣ ಬೇಕು ಎಂದರು.

ರಾಜ್ಯದಲ್ಲಿ 3000 ಕೈದಿಗಳಿಗೆ ಅಕ್ಷರಜ್ಞಾನ ಹೇಳಿಕೊಡುವ ಕೆಲಸ ಆಗುತ್ತಿದೆ. ಜೈಲು ಸುಧಾರಣೆಗೆ ಇನ್ನೂ ಅನೇಕ ಕ್ರಮಗಳನ್ನು ವಹಿಸಲಾಗುತ್ತಿದೆ. ದೊಡ್ಡ ಕೈಗಾರಿಕೆಗಳು ಜೈಲಿನಲ್ಲಿರುವ ಕೈದಿಗಳಿಗೆ ಯಾಂತ್ರಿಕ ಮಾಹಿತಿ, ತರಬೇತಿ ನೀಡಲು ಮುಂದೆ ಬಂದರೆ ಅವಕಾಶ ಕಲ್ಪಿಸಲಾಗುತ್ತದೆ. ಜೈಲಿನಲ್ಲಿರುವ ಮಾನವ ಸಂಪನ್ಮೂಲ ರಾಷ್ಟ್ರೀಯ ಸಂಪನ್ಮೂಲ ಆಗಿ ಪರಿವರ್ತನೆ ಆಗಬೇಕು ಎಂಬುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.

ಹಿಂಡಲಗಾ ಜೈಲಿನಲ್ಲಿ ಸಾವರ್ಕರ ಫೋಟೋ: ಸಚಿವ ಬಿ.ಸಿ.ನಾಗೇಶ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ, ಶಾಸಕ ಮಸಾಲೆ ಜಯರಾಂ, ವಿಧಾನ ಪರಿಷತ್‌ ಮಾಜಿ ಸದಸ್ಯ ಅರುಣ ಶಹಾಪುರ ಹಿಂಡಲಗಾ ಜೈಲಿಗೆ ಭೇಟಿ ನೀಡಿದ್ದರು. ಈ ವೇಳೆ ವೀರ ಸಾವರ್ಕರ ಫೋಟೊವನ್ನು ಸಚಿವ ಬಿ.ಸಿ.ನಾಗೇಶ ಅವರು ಕೈದಿಗಳಿಗೆ ನೀಡಿದರು. ಈ ಹಿಂದೆ ಸಾವರ್ಕರ ಅವರು ಹಿಂಡಲಗಾ ಜೈಲಿನಲ್ಲೇ ಇದ್ದರು. ಹಾಗಾಗಿ, ಅವರಿದ್ದ ಜಾಗದಲ್ಲಿ ಅವರ ಫೋಟೋ ಹಾಕಲಾಗಿದೆ. ಸಾವರ್ಕರ ಇದ್ದ ಸೆಲ್‌ಗೆ ಸಚಿವರು ಸೇರಿದಂತೆ ಎಲ್ಲರೂ ಹೋಗಿದ್ದರು. ಈ ವೇಳೆ ಮಾತನಾಡಿದ ಸಚಿವ ನಾಗೇಶ, ಅದನ್ನು ಚೆನ್ನಾಗಿ ಇಡಬೇಕು. ಅಂಡಮಾನ್‌ ನಿಕೋಬಾರ್‌ ಜೈಲಿನಲ್ಲಿ ಅವರ ಫೋಟೋ ಇದೆ. ಅದನ್ನು ನೋಡಿದರೆ ಕರುಳು ಕಿವುಚಿದ ಹಾಗೇ ಆಗುತ್ತದೆ. ಇಂದು ತ್ಯಾಗ ಮಾಡಿದವರ ಬಗ್ಗೆ ಕೆಲ ರಾಜಕಾರಣಿಗಳು ಕೀಳಾಗಿ ಮಾತನಾಡುತ್ತಾರೆ ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದರು.

ಮೀಸಲಾತಿ ಪ್ರಮಾಣ ತಿಳಿದ ಬಳಿಕ ಮುಂದಿನ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ

ಸಾವರ್ಕರ ಫೋಟೋಗೆ ಪುಷ್ಪ ನಮನ: ಹಿಂಡಲಗಾ ಜೈಲಿನಲ್ಲಿ ಸಾವರ್ಕರ ಸೆರೆವಾಸ ಅನುಭವಿಸಿದ್ದ ಸೆಲ್‌ನಲ್ಲೇ ಅವರ ಫೋಟೋವನ್ನು ಅನಾವರಣ ಮಾಡಲಾಗಿದ್ದು, ಸಚಿವ ಬಿ.ಸಿ.ನಾಗೇಶ, ಎಂಎಲ್‌ಸಿ ರವಿಕುಮಾರ, ಶಾಸಕ ಮಸಾಲೆ ಜಯರಾಂ ಸೇರಿದಂತೆ ಬಿಜೆಪಿ ನಾಯಕರು ಅದಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಿದರು. ಈ ವೇಳೆ ಭಾರತ ಮಾತಾ ಕೀ ಜೈ, ಸ್ವಾತಂತ್ರ್ಯ ವೀರ ಸಾವರ್ಕರಗೆ ಜಯವಾಗಲಿ ಎಂದು ಘೋಷಣೆ ಕೂಗಿದರು.

click me!