* ಸೋಂಕಿತರು ಹೊರಗೆ ಹೋಗುವಂತಿಲ್ಲ, ಹೊರಗಿನವರು ಇವರ ಬಳಿ ಬರುತ್ತಿಲ್ಲ
* ಗ್ರಾಪಂ ಸಹಾಯ ಮಾಡುತ್ತಿಲ್ಲ, ಸಿಸಿಸಿಗೆ ಹೋದರೆ ಆಡು, ಕರು ಗತಿ?
* ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿಯಲ್ಲಿ ಗ್ರಾಮದಲ್ಲಿ ನಡೆದ ಘಟನೆ
ನರಗುಂದ(ಮೇ.26): ‘ಏನ್ ಮಾಡೂದ್ರೀ ಕರೋನಾ ಪಾಜಿಟಿವ್ ರಿಪೋರ್ಟ್ ಬಂದಮ್ಯಾಲ ಸರ್ಕಾರಿ ದವಾಖಾನೆಯವರು ಬಂದು ಗುಳಗಿ ಕೊಟ್ಟು ಹೊರಗ ಬರಬ್ಯಾಡ್ರಿ ಅಂದಾರ, ಆದ್ರ ಯಾರು ವಾಪಸ್ ಬಂದು ಹ್ಯಾಂಗದೀರಂತ ಕೇಳಿಲ್ಲ. ತಿನ್ನಾಕ ಕಾಯಿಪಲ್ಲೆ ಇಲ್ಲಾ, ಕಿರಾಣಿ ಸಾಮಾನಿಲ್ಲಾ. ನಾವ್ ಹೊರಗ್ ಹೋಗಾಂಗಿಲ್ಲ, ಬ್ಯಾರೇದಾರು ನಮ್ಮತ್ರ ಬರೂದಿಲ್ಲ. ಬದುಕೂದರ ಹ್ಯಾಂಗ?..
ಇದು ತಾಲೂಕಿನ ಭೈರನಹಟ್ಟಿಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿ ಹೋಮ್ ಐಸೋಲೇಟ್ ಆದವರ ಅಳಲು. ಇದು ಹಲವರ ಸಮಸ್ಯೆಯೂ ಹೌದು! ಪಾಸಿಟಿವ್ ವರದಿ ಬಂದ ನಂತರ ಆರೋಗ್ಯ ಸಿಬ್ಬಂದಿ ಮಾತ್ರೆಗಳನ್ನು ನೀಡಿ ಹೋಗಿದ್ದಾರೆ. ಆದರೆ ಅಂದು ಅವರೊಂದಿಗೆ ಬಂದಿದ್ದ ಸ್ಥಳೀಯ ಆಡಳಿತದ ಯಾರೂ ಈ ಸೋಂಕಿತರತ್ತ ಸುಳಿದಿಲ್ಲ. ಐದು ದಿನಗಳ ನಂತರ ವೈದ್ಯರೊಬ್ಬರು ಬಂದು ಪರೀಕ್ಷೆ ಮಾಡಿ ಒಂದು ವಾರ ಮನೆಯಲ್ಲೆ ಇರುವಂತೆ ತಿಳಿಸಿದ್ದಾರಂತೆ. ಆದರೆ, ಆಹಾರ ಸಾಮಗ್ರಿ, ತರಕಾರಿ ಇತ್ಯಾದಿಗಳಿಲ್ಲದೇ ಬದುಕುವು ಹೇಗೆ? ಎನ್ನುವ ಸೋಂಕಿತರ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಕ್ಕಿಲ್ಲ.
ಕೊರೋನಾ ಕಾರಣದಿಂದ ಬೇಕಾದ ಸಾಮಗ್ರಿಗಳಿಗಾಗಿ ಹೊರ ಹೋಗಲು ಆಗುತ್ತಿಲ್ಲ ಮತ್ತು ಮನೆಯಲ್ಲಿಯೆ ಇರಬೇಕು ಎಂದರೆ ಜೀವನಾವಶ್ಯಕ ಸಾಮಗ್ರಿಗಳು ಇಲ್ಲ. ಸೋಂಕಿತರೆಂದು ಗೊತ್ತಾದ ಬಳಿಕ ಊರಿನ ಯಾರೊಬ್ಬರೂ ಇವರತ್ತ ಸುಳಿಯುತ್ತಿಲ್ಲ. ನಿತ್ಯ ಪಡಿಪಾಟಲಿನೊಂದಿಗೆ ಸೋಂಕಿತರು ಹೋಮ್ ಐಸೋಲೇಶನ್ನಿನಲ್ಲಿ ದಿನ ದೂಡುತ್ತಿದ್ದಾರೆ.
ಕೋಲಾರ, ಗದಗದಲ್ಲಿ ಮತ್ತೆ 5 ದಿನ ಕಠಿಣ ಲಾಕ್
ಉತ್ತರ ಸಿಗದ ಪ್ರಶ್ನೆ:
ಹೋಮ್ ಐಸೋಲೇಶನ್ ಆಗಿರುವ ಸೋಂಕಿತರಿಗೆ ನಮ್ಮ ಕಡೆಯಿಂದ ಯಾವುದೇ ಸೌಕರ್ಯ ಒದಗಿಸಲಾಗಿಲ್ಲ. ಅವರು ಆರೋಗ್ಯ ಇಲಾಖೆಯ ಮೇಲ್ವಿಚಾರಣೆಯಲ್ಲಿ ಇದ್ದಾರೆ ಎಂದು ಗ್ರಾಮ ಪಂಚಾಯತಿ ಹೇಳುತ್ತ ಕೈಚೆಲ್ಲಿದೆ.
ಆರೋಗ್ಯ ಇಲಾಖೆ ‘ಎಲ್ಲಾ ಸೌಲಭ್ಯಗಳು ನಿಮ್ಮ ಹೊಣೆಗಾರಿಕೆ ಎಂದಿದ್ದೇವೆ. ಅದಕ್ಕೆ ಒಪ್ಪಿದ ಮೇಲೆಯೇ ಹೋಮ್ ಐಸೋಲೇಶನ್ನಿಗೆ ಅವಕಾಶ ಕಲ್ಪಿಸಿದ್ದೇವೆ. ಮನೆಯಲ್ಲಿ ತೊಂದರೆಯಾದರೆ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯುತ್ತೇವೆ’ ಎನ್ನುತ್ತಿದೆ. ಆದರೆ, ‘ನಮ್ಮ ಮನೆಯಲ್ಲಿ ಇಬ್ಬರಿದ್ದು, ಇಬ್ಬರಿಗೂ ಸೋಂಕು ತಗುಲಿದೆ. ಕ್ವಾರಂಟೈನ್ ಕೇಂದ್ರಕ್ಕೆ ಹೋದರೆ ಮನೆಯಲ್ಲಿರುವ ಆಡು, ಕರುಗಳನ್ನು ನೋಡಿಕೊಳ್ಳುವವರು ಯಾರು ?’ ಎನ್ನುವುದು ಸೋಂಕಿತರ ಪ್ರಶ್ನೆ.
ಸೋಂಕಿತರ ತಿರುಗಾಟ:
ಕೆಲವರು ಗಟ್ಟಿ ಜೀವ ಮಾಡಿ ಖಾಲಿ ಮನೆಯಲ್ಲೇ ದಿನದೂಡುತ್ತಿದ್ದಾರೆ. ಆದರೆ ಉಪವಾಸವಿದ್ದು ಕಂಗಾಲಾದ ಕೆಲವು ಸೋಂಕಿತರು ದಿನಸಿ ಖರೀದಿ ಇತ್ಯಾದಿಗಾಗಿ ಹೊರಗಡೆ ಓಡಾಡುತ್ತಿದ್ದಾರೆ. ಇದನ್ನು ಆಕ್ಷೇಪಿಸಿದವರಿಗೆ ಅವರ ಸಮಸ್ಯೆ ಪರಿಹರಿಸಲು ಆಗುತ್ತಿಲ್ಲ. ಹಾಗಾಗಿ ಗ್ರಾಮದಲ್ಲಿ ಕೊರೋನಾ ಸೋಂಕಿತರು ಹೆಚ್ಚಳವಾಗಲು ಕಾರಣವಾಗಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona