* 45 ವರ್ಷದ ಮಹಿಳೆಯಲ್ಲಿ ಕಾಣಿಸಿಕೊಂಡ ಬ್ಲ್ಯಾಕ್ ಫಂಗಸ್
* ರೋಗಿಗೆ ಕೊರೋನಾ ಟ್ರೀಟ್‌ಮೆಂಟ್ ಮುಂದುವರಿಕೆ
* ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಔಷಧಿ ಸಿಗುತ್ತಿಲ್ಲ
ಹಾವೇರಿ(ಮೇ.26): ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆಯೊಬ್ಬರಿಗೆ ಬ್ಲ್ಯಾಕ್ ಫಂಗಸ್ ರೋಗ ಕಂಡುಬಂದಿದೆ. ಆದರೆ, ಚಿಕಿತ್ಸೆಗೆ ಔಷಧಿ ಇಲ್ಲದ್ದರಿಂದ ಕೊರೋನಾ ಪಾಸಿಟಿವ್ ಸೋಂಕಿತರಿಗೆ ನೀಡುವ ಚಿಕಿತ್ಸೆಯನ್ನಷ್ಟೇ ನೀಡಲಾಗುತ್ತಿದೆ.
ಹಾನಗಲ್ಲ ತಾಲೂಕಿನ ಮಾಸನಕಟ್ಟಿ ಗ್ರಾಮದ ಲಲಿತಾ ಸಂಕಣ್ಣನವರ ಎಂಬ 45 ವರ್ಷದ ಮಹಿಳೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿದೆ. ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಿದ್ದರೂ ಅಲ್ಲಿ ದಾಖಲಿಸಿಕೊಳ್ಳದೇ ವಾಪಸ್ ಕಳುಹಿಸಿದ್ದಾರೆ. ನಮ್ಮಲ್ಲೇ ಬ್ಲ್ಯಾಕ್ ಫಂಗಸ್ ರೋಗಿಗಳ ಸಂಖ್ಯೆ ಹೆಚ್ಚಿರುವುದರಿಂದ ನಿಮ್ಮಲ್ಲೇ ನೋಡಿಕೊಳ್ಳಿ ಎಂದು ಕಿಮ್ಸ್‌ನವರು ಹೇಳಿ ವಾಪಸ್ ಕಳುಹಿಸಿದ್ದಾರೆ.
undefined
ರಾಣಿಬೆನ್ನೂರು: ಬೆಡ್‌ಗಾಗಿ ಆಸ್ಪತ್ರೆ ಎದುರು ಸೋಂಕಿತನ ಪ್ರತಿಭಟನೆ
ಈ ಮಹಿಳೆಗೆ ಕೊರೋನಾ ಪಾಸಿಟಿವ್ ಬಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಬ್ಲ್ಯಾಕ್ ಫಂಗಸ್ ಲಕ್ಷಣಗಳು ಕಂಡುಬಂದಿದೆ. ಇಲ್ಲಿಯ ಜಿಲ್ಲಾಸ್ಪತ್ರೆಗೆ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಯಾವ ಔಷಧಿಯೂ ಪೂರೈಕೆಯಾಗಿಲ್ಲ. ಅತ್ತ ಹುಬ್ಬಳ್ಳಿ ಕಿಮ್ಸ್‌ನಲ್ಲೂ ಜಿಲ್ಲೆಯ ಫಂಗಸ್ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಕಂಡುಬರುತ್ತಿರುವ ಬ್ಲ್ಯಾಕ್ ಫಂಗಸ್ ರೋಗಿಗಳು ಸಾವು ಬದುಕಿನ ನಡುವೆ ಹೋರಾಡುವಂತಾಗಿದೆ.
ಎಲ್ಲೆಡೆ ಬ್ಲ್ಯಾಕ್, ವೈಟ್ ಮತ್ತು ಹೊಸದಾಗಿ ಹಳದಿ ಫಂಗಸ್ ರೋಗ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಆದರೆ, ಜಿಲ್ಲೆಯಲ್ಲಿ ಇನ್ನೂ ಈ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯ ಔಷಧಿಯೇ ಇಲ್ಲ ಎನ್ನುವುದು ಆತಂಕ ಮೂಡಿಸಿದೆ.
ಜಿಲ್ಲಾಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರಲ್ಲಿ ಬ್ಲ್ಯಾಕ್ ಫಂಗಸ್ ರೋಗ ಕಾಣಿಸಿಕೊಂಡಿದೆ. ಅವರನ್ನು ಹುಬ್ಬಳ್ಳಿ ಕಿಮ್ಸ್‌ಗೆ ಕಳುಹಿಸಲಾಗಿತ್ತು. ಆದರೆ, ಅಲ್ಲಿಂದ ವಾಪಸ್ ಕಳುಹಿಸಿದ್ದಾರೆ. ಆದ್ದರಿಂದ ಸದ್ಯ ಅವರಿಗೆ ಕೊರೋನಾ ಟ್ರೀಟ್‌ಮೆಂಟ್ ಮಾತ್ರ ಮುಂದುವರಿಸಲಾಗಿದೆ. ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ನೀಡುವ ಔಷಧಿ ಬಂದಿಲ್ಲ. ಇಂಡೆಂಟ್ ಹಾಕಿದ್ದು, ಬಂದ ಮೇಲೆ ಇಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ಹಾವೇರಿ ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್, ಡಾ. ಪಿ.ಆರ್. ಹಾವನೂರ ತಿಳಿಸಿದ್ದಾರೆ.