ಜಾತಿ ವೈಷಮ್ಯ ಬಿತ್ತಿದ್ದು ಬಿಜೆಪಿಯಲ್ಲ: ಸಚಿವ ಜ್ಞಾನೇಂದ್ರ

By Kannadaprabha NewsFirst Published Oct 6, 2022, 11:22 AM IST
Highlights

ಜಾತಿ ಜಾತಿಗಳ ನಡುವೆ ಪರಸ್ಪರ ವೈಷಮ್ಯದ ವಿಷ ಬೀಜಬಿತ್ತಲು ಸ್ವಾತಂತ್ರ್ಯಾನಂತರ 65 ವರ್ಷಗಳ ಕಾಲ ಆಡಳಿತ ನಡೆಸಿದ ಪಕ್ಷಗಳೇ ಹೊರತು, ಬಿಜೆಪಿ ಕಾರಣವಲ್ಲ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.

ಕೊಪ್ಪ (ಅ.6) : ಜಾತಿ ಜಾತಿಗಳ ನಡುವೆ ಪರಸ್ಪರ ವೈಷಮ್ಯದ ವಿಷ ಬೀಜಬಿತ್ತಲು ಸ್ವಾತಂತ್ರ್ಯಾನಂತರ 65 ವರ್ಷಗಳ ಕಾಲ ಆಡಳಿತ ನಡೆಸಿದ ಪಕ್ಷಗಳೇ ಹೊರತು, ಬಿಜೆಪಿ ಕಾರಣವಲ್ಲ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ಹೇಳಿದರು.

ಇಳಿ ವಯಸ್ಸಲ್ಲೂ ರಂಭಾಪುರಿ ಶ್ರೀ ಧರ್ಮ ರಕ್ಷಣೆಗೆಗಾಗಿ ಹೋರಾಡುತ್ತಿದ್ದಾರೆ: ಸಚಿವ ಆರಗ ಜ್ಞಾನೇಂದ್ರ

ಮಂಗಳವಾರ ತಾಲೂಕಿನ ಶಾನುವಳ್ಳಿ ಗ್ರಾ.ಪಂ.ಯ ಮಾವಿನಕಟ್ಟೆಯಲ್ಲಿ ಹಿಂದೂ ಜಾಗರಣ ಸಮಿತಿ ವತಿಯಿಂದ ನಡೆದ ಹಿಂದೂ ಮಹಾಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ದೇಶ ಇಭ್ಭಾಗ ಆಗುವುದನ್ನು ಬಲವಾಗಿ ಖಂಡಿಸಿದ ಮಹಾತ್ಮ ಗಾಂಧೀಜಿ ಅವರ ಮಾತು ಧಿಕ್ಕರಿಸಿ ಕೆಲವರು ಅಧಿಕಾರದ ಆಸೆಗಾಗಿ ದೇಶವನ್ನು ತುಂಡರಿಸುವಲ್ಲಿ ಯಶಸ್ವಿಯಾದರು. ಅಂದಿನಿಂದ ಇಂದಿನವರೆಗೂ ಜನರ ಮನಸ್ಸಿನಲ್ಲಿ ವೈಷಮ್ಯ ತುಂಬತೊಡಗಿದ್ದಾರೆ. ಅದರ ಪರಿಣಾಮವೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಬ್ರಿಟಿಷರಿಂದ ಜೈಲುಶಿಕ್ಷೆ ಹಾಗೂ ಕಾಲಾಪಾನಿ ಶಿಕ್ಷೆಗೊಳಗಾಗಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸಾವರ್ಕರ್‌ ಬ್ಯಾನರ್‌ ಭಾವಚಿತ್ರವನ್ನು ಅಳವಡಿಸುವುದು ತಪ್ಪು ಎಂದು ಕೆಲವರು ಬಿಂಬಿಸುವ ಕೆಲವು ವಿಕೃತಿ ಮನಸ್ಸುಗಳು ಹುಟ್ಟಿಕೊಂಡಿವೆ ಎಂದು ಟೀಕಿಸಿದರು.

ಜನಜಾಗೃತಿ ಮತ್ತು ಸಂಘಟನೆಯ ಪ್ರತಿರೂಪವಾದ ಗಣೇಶೋತ್ಸವದಲ್ಲಿ ಕೇಸರಿ ಧ್ವಜವನ್ನು ಹಾರಿಸಬಾರದು ಎಂದು ವಾದಿಸುತ್ತಿವೆ. ನಮ್ಮ ಸರ್ಕಾರ ಬಂದ ಮೇಲೆ ಮತಾಂತರ ಕಾಯಿದೆ ಮಸೂದೆಯನ್ನು ಜಾರಿಗೆ ತಂದಿದೆ. ಇದು ಯಾವುದೇ ಒಂದು ಜಾತಿ ಜನಾಂಗದ ವಿರೋಧವಾಗಿರದೇ ಎಲ್ಲ ಧರ್ಮಗಳಿಗೂ ರಕ್ಷಣೆ ನೀಡುವಂತಹ ಅಂಶಗಳನ್ನು ಒಳಗೊಂಡಿದೆ. ಈ ಕಾಯಿದೆ ಬಗ್ಗೆ ನನ್ನ ಬಳಿ ವಿಚಾರಿಸಿದ ಹಿಂದೂ ಕ್ರೈಸ್ತ ಮುಸ್ಲಿಂ ಮುಖಂಡರಿಗೂ ಧರ್ಮಗುರುಗಳಿಗೂ ಇದರಲ್ಲಿರುವ ಅಂಶಗಳನ್ನು ನಾನೇ ಮನವರಿಕೆ ಮಾಡಿಕೊಟ್ಟಿದ್ದೇನೆ. ಈ ಕಾಯ್ದೆಯ ಅನ್ವಯ ಬಲವಂತವಾಗಿ ಮತಾಂತರಗೊಳಿಸುವುದು ಶಿಕ್ಷಾರ್ಹ ಅಪರಾಧ ಎಂದರು.

ಹಿಂದೂ ಸಂಘಟಕಿ ಚೈತ್ರಾ ಕುಂದಾಪುರ ಮಾತನಾಡಿ, ಪೋಷಕರು ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡಿ. ಈ ಸಮಯದಲ್ಲಿ ಆಕೆ ರಮೇಶನೊಂದಿಗೆ ಸ್ನೇಹದಿಂದಿದ್ದಾಳೋ, ರಹೀಮನೊಂದಿಗೆ ಸ್ನೇಹದಿಂದಿದ್ದಾಳೋ ಎನ್ನುವುದನ್ನು ಗಮನಿಸಿ ಎಚ್ಚರ ವಹಿಸುವುದು ಪೋಷಕರ ಕರ್ತವ್ಯವಾಗಬೇಕು. ಮಾವಿನಕಟ್ಟೆಯಂತಹ ಊರಿನಲ್ಲಿ ಎಲ್ಲವೂ ಸರಿಯಾಗಿದೆ, ಯಾವುದೇ ಸಮಸ್ಯೆಯಿಲ್ಲ ಎಂದು ಸುಮ್ಮನಿದ್ದಲ್ಲಿ ಮುಂದೊಂದು ದಿನ ವಕ್ಫ್ ಬೋರ್ಡ್‌ ಎನ್ನುವ ಸಂಸ್ಥೆ ಇಡೀ ಗ್ರಾಮವನ್ನೇ ತನ್ನದೆಂದು ಹೇಳುವ ದಿನ ಬಂದರೂ ಬರಬಹುದು. ರಾಮನಾಮ ಹಾಗೂ ಕೇಸರಿಧ್ವಜ, ಹಿಂದೂಗಳ ಭಾವನೆಯ ಪ್ರತೀಕ. ಅದನ್ನು ರಾಜಕಾರಣಕ್ಕೆ ಬಳಸಿಕೊಳ್ಳುವವರಿಗೆ ಪಾಠ ಕಲಿಸುವ ದಿನ ಇನ್ನು ಕೆಲವೇ ತಿಂಗಳಲ್ಲಿ ಬರಲಿದೆ ಎಂದರು.

ರಾಜ್ಯಾದ್ಯಂತ 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆ: ಆರಗ ಜ್ಞಾನೇಂದ್ರ

ಕಾರ್ಯಕ್ರಮಕ್ಕೂ ಮುನ್ನ ಹಿಂದೂ ಮಹಾಸಭಾದ ಶೋಭಾಯಾತ್ರೆ ನಡೆಯಿತು. ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್‌.ಜೀವರಾಜ್‌, ಮುಖಂಡರಾದ ಎಸ್‌.ಎನ್‌. ರಾಮಸ್ವಾಮಿ, ಕಿರಣ ಮಡಬಳ್ಳಿ, ಬಜರಂಗದಳದ ರಾಖಿ ಹಿರೇಕೊಡಿಗೆ ಸೇರಿದಂತೆ ಬಜರಂಗ ದಳದ ಕಾರ್ಯಕರ್ತರು, ಹಿಂದೂ ಮುಖಂಡರು ಕಾರ್ಯಕ್ರಮದಲ್ಲಿದ್ದರು.

click me!