Bellary Utsav: ಮರಳಿನಲ್ಲಿ ಅರಳಿದ ಐತಿಹಾಸಿಕ ಸ್ಮಾರಕಗಳು!

By Kannadaprabha News  |  First Published Jan 22, 2023, 9:51 AM IST

ಗಣಿನಗರಿ ಬಳ್ಳಾರಿಯ ಐತಿಹಾಸಿಕ ಸ್ಮಾರಕಗಳು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮರಳು ಶಿಲ್ಪಿಗಳ ಕೈಚಳಕದಲ್ಲಿ ಅರಳಿ ನಿಂತಿವೆ. ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ನಗರ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಮೂಡಿ ಬಂದಿರುವ ಮರಳು ಶಿಲ್ಪಕಲೆಗಳು ಹೊಸ ಮೆರುಗು ನೀಡಿದವು.


ಸಿದ್ಧಲಿಂಗಸ್ವಾಮಿ ವೈ.ಎಂ.

 ಬಳ್ಳಾರಿ (ಜ.22) : ಗಣಿನಗರಿ ಬಳ್ಳಾರಿಯ ಐತಿಹಾಸಿಕ ಸ್ಮಾರಕಗಳು ಕಣ್ಣಿಗೆ ಕಟ್ಟುವ ರೀತಿಯಲ್ಲಿ ಮರಳು ಶಿಲ್ಪಿಗಳ ಕೈಚಳಕದಲ್ಲಿ ಅರಳಿ ನಿಂತಿವೆ. ಹೌದು. ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಬಳ್ಳಾರಿ ಉತ್ಸವದಲ್ಲಿ ನಗರ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಮೂಡಿ ಬಂದಿರುವ ಮರಳು ಶಿಲ್ಪಕಲೆಗಳು ಹೊಸ ಮೆರುಗು ನೀಡಿದವು. ಮುಂಬೈನಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿ ಕಲಾವಿದರಾದ ನಾರಾಯಣ್‌ ಸಾಹು, ಓಂ ಪ್ರಕಾಶ್‌ ಬಾರಿಕ್‌, ಮುರುಳೀಧರ್‌ ದಾಸ್‌, ಶ್ವೇತ ಜಾಜು ಎಂಬುವರು ಮರಳು ಶಿಲ್ಪಗಳನ್ನು ರಚಿಸಿದರು.

Tap to resize

Latest Videos

undefined

ಮರಳು ಶಿಲ್ಪಕಲೆಗಳನ್ನು 10 ರಿಂದ 12 ಅಡಿ ಎತ್ತರ ಹಾಗೂ 5 ರಿಂದ 6 ಅಡಿ ಅಗಲದಲ್ಲಿ ನಿರ್ಮಿಸಲಾಗಿದ್ದು, ಸುಮಾರು 55 ಟನ್‌ ಮರಳು ಬಳಕೆ ಮಾಡಲಾಗಿದೆ. ಕಳೆದ 5 ದಿನಗಳ ಹಿಂದೆಯೇ ಆಗಮಿಸಿದ್ದ ಕಲಾವಿದರ ತಂಡವು ತಮ್ಮ ಕಲಾಕೃತಿಗಳ ರಚನೆಗೂ ಮುನ್ನ ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳಿಗೆ ಭೇಟಿ ನೀಡಿ ಸ್ಮಾರಕಗಳ ಮಹತ್ವ ಸಾರುವ ನಿಟ್ಟಿನಲ್ಲಿ ಮರಳು ಕಲಾಕೃತಿಗಳ ರಚನೆ ಮಾಡಲಾಗಿದೆ.

Karnataka Tourism: ಪ್ರವಾಸಿ ಗೈಡ್‌ಗಳಿಗೆ ಸರ್ಕಾರದ ಭಾರಿ ಬಂಪರ್‌!

ಕೈ ಬೀಸಿ ಕರೆಯುತ್ತಿದೆ ಬಳ್ಳಾರಿ ಕೋಟೆ:

ಏಕಶಿಲಾ ಬೆಟ್ಟವೆಂದೇ ಪ್ರಸಿದ್ಧಿ ಪಡೆದಿರುವ ಜಿಲ್ಲೆಯ ಐತಿಹಾಸಿಕ ಬಳ್ಳಾರಿ ಕೋಟೆಯನ್ನು ಅತ್ಯಂತ ನಾಜೂಕಾಗಿ ಮತ್ತು ಸುಂದರವಾಗಿ ಮರಳಿನಲ್ಲಿ ರಚಿಸಲಾಗಿದೆ, ಬೆಟ್ಟಕ್ಕೆ ಹತ್ತುವ ಮೆಟ್ಟಿಲು, ಮುಖ್ಯದ್ವಾರ, ವಾಚಿಂಗ್‌ ಟವರ್‌, ಸೈನಿಕರ ಬುರ್ಜುಗಳು, ಸುಂದರವಾದ ವೀಕ್ಷಣಾ ಕಮಾನುಗಳು, ಮೇಲುಕೋಟೆ, ಕೆಳಕೋಟೆ ಸುತ್ತಲೂ ರಕ್ಷಣಾ ಗೋಡೆಗಳನ್ನು ಸೂಕ್ಷ್ಮವಾಗಿ ನಿರ್ಮಿಸಲಾಗಿದೆ.

ನವಿಲಿನಲ್ಲಿ ಅರಳಿದ ಕುಮಾರಸ್ವಾಮಿ ದೇವಸ್ಥಾನ

ಜಿಲ್ಲೆಯ ಸಂಡೂರು ತಾಲೂಕಿನ ಸುಪ್ರಸಿದ್ಧ ಐತಿಹಾಸಿಕ ಶ್ರೀಕುಮಾರಸ್ವಾಮಿ ದೇವರ ವಾಹನವಾದ ನವಿಲಿನಲ್ಲಿ ದೇವಸ್ಥಾನದ ಶಿಲ್ಪಕಲೆ ರಚಿಸಿರುವುದು ಕಣ್ಮನ ಸೆಳೆಯುವಂತೆ ಮಾಡಿದೆ. ಜತೆಗೆ ಎಡಭಾಗದಿಂದ ದೇವಸ್ಥಾನ ತೋರಿಸಲಾಗಿದ್ದು, ಇದರಲ್ಲಿ ಪ್ರವೇಶದ್ವಾರವು ಕಾಣಿಸುತ್ತದೆ. ಗೋಪುರದ ವಾಸ್ತುಶಿಲ್ಪ ಕಲೆ ಯಥಾ ರೀತಿ ಮರಳಿನಲ್ಲಿ ರಚಿಸಿರುವುದು ನೋಡುಗರ ಆಕರ್ಷಣೀಯ ಕೇಂದ್ರ ಬಿಂದುವಾಗಿದೆ.

ನೈಜತೆಗೆ ಸಾಕ್ಷಿಯಾದ ಕುರುಗೋಡು ದೊಡ್ಡಬಸವೇಶ್ವರ

ಜಿಲ್ಲೆಯ ಕುರುಗೋಡು ತಾಲೂಕಿನ ಇತಿಹಾಸ ಪ್ರಸಿದ್ಧವಾದ ದೊಡ್ಡಬಸವೇಶ್ವರ ವಿಗ್ರಹವನ್ನು ಅತ್ಯಂತ ಸುಂದರ ಹಾಗೂ ಶ್ರದ್ಧೆಯಿಂದ ನಿರ್ಮಿಸಲಾಗಿದೆ, ಬಸವಣ್ಣನ ಕೊರಳಲ್ಲಿರುವ ದೊಡ್ಡ ದೊಡ್ಡ ಗಂಟೆಗಳು, ಗೆಜ್ಜೆಗಳು ಮತ್ತು ಬಸವಣ್ಣ ಕುಳಿತಿರುವ ರೀತಿ, ವಿಗ್ರಹದ ಸುತ್ತಲೂ ಮನಮೋಹಕವಾಗಿ ಕಲಾಕೃತಿ ರಚಿಸಲಾಗಿದೆ.

ಕಣ್ಮನ ಸೆಳೆದ ಎ.ಪಿ.ಜೆ.ಅಬ್ದುಲ್‌ ಕಲಾಂ ಮರಳು ಕಲಾಕೃತಿ

ಭಾರತದ ರಾಷ್ಟ್ರಪತಿಯಾಗಿ ಜನಮನಗೆದ್ದಿದ್ದ ಮಿಸೈಲ್‌ ಮ್ಯಾನ್‌ ಎಂದು ಪ್ರಖ್ಯಾತರಾಗಿದ್ದ ಎ.ಪಿ.ಜೆ.ಅಬ್ದುಲ್‌ ಕಲಾಂ ಅವರ ಮರಳು ಕಲಾಕೃತಿಯು ಎಲ್ಲರ ಕಣ್ಮನ ಸೆಳೆಯಿತು.

ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದ ಜನರು

ಜಿಲ್ಲಾ ಉತ್ಸವ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಅದರಲ್ಲೂ ಇದೇ ಮೊದಲ ಬಾರಿಗೆ ಬಳ್ಳಾರಿಯ ಉತ್ಸವದಲ್ಲಿ ಏರ್ಪಡಿಸಿರುವ ಮರಳು ಶಿಲ್ಪ ಕಲಾಕೃತಿಗಳನ್ನು ವೀಕ್ಷಿಸಲು ತಂಡೋಪತಂಡವಾಗಿ ಆಗಮಿಸಿದ ಜನರು, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಮರಳು ಶಿಲ್ಪಕಲೆ ಪ್ರದರ್ಶನಕ್ಕೆ ಶಾಸಕ ಸೋಮಲಿಂಗಪ್ಪ ಚಾಲನೆ

ನಗರದ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ಜಿಲ್ಲಾ ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಮರಳು ಶಿಲ್ಪಕಲೆ ಪ್ರದರ್ಶನಕ್ಕೆ ಸಿರುಗುಪ್ಪ ಶಾಸಕ ಎಂ.ಎಸ್‌.ಸೋಮಲಿಂಗಪ್ಪ ಶನಿವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಚಂದ್ರಶೇಖರ್‌ ಹಿರೇಮನಿ, ಭೂ ವಿಜ್ಞಾನಿಗಳಾದ ವಿಜಯಲಕ್ಷ್ಮೀ, ನವೀನ್‌, ಸಿಬ್ಬಂದಿಗಳಾದ ಧಮೇಂರ್‍ದ್ರ, ಸಿ.ಬಿ.ಭರಮೋಜಿರಾವ್‌ ಸೇರಿದಂತೆ ಮರಳು ಶಿಲ್ಪ ಕಲಾವಿದರು ಇದ್ದರು.

Bellary Utsav: ವರ್ಣಮಯ ಲೋಕ ತೆರೆದಿಟ್ಟಫಲಪುಷ್ಪ ಪ್ರದರ್ಶನ

ಈ ಮೊದಲೇ ಜಿಲ್ಲೆಯ ಐತಿಹಾಸಿಕ, ಪಾರಂಪರಿಕ ಸ್ಮಾರಕಗಳಿಗೆ ಭೇಟಿ, ಸೂಕ್ಷ್ಮವಾಗಿ ಗಮನಿಸಿ,ಶಿಲ್ಪಕಲೆಗಳನ್ನು ರಚಿಸಲಾಗಿದೆ. 2000ನೇ ಸಾಲಿನಿಂದ ಮರಳು ಶಿಲ್ಪ ಕಲಾಕೃತಿ ರಚನೆಯಲ್ಲಿ ತೊಡಗಿಕೊಂಡಿದ್ದು, 22 ವರ್ಷಗಳ ವೃತ್ತಿ ಅನುಭವ ಇದೆ. ಭಾರತ ದೇಶ ಸೇರಿದಂತೆ ವಿದೇಶಗಳಾದ ದುಬೈ, ಸೌದಿ ಅರೇಬಿಯಾ, ಮಾಲ್ಡೀವ್‌್ಸಗಳಲ್ಲಿಯೂ ಮರಳು ಶಿಲ್ಪಕಲಾಕೃತಿ ಪ್ರದರ್ಶನ ಏರ್ಪಡಿಸಲಾಗಿದೆ .

ನಾರಾಯಣ್‌ ಸಾಹು, ಅಂತಾರಾಷ್ಟ್ರೀಯ ಮರಳು ಶಿಲ್ಪಿ ಕಲಾವಿದ

ಮರಳು ಶಿಲ್ಪ ಕಲಾಕೃತಿಗಳನ್ನು ನೋಡಬೇಕೆಂದರೆ ದೂರದೂರುಗಳಿಗೆ ಹೋಗಬೇಕಾಗಿತ್ತು, ಆದರೆ ಈಗ ನಮ್ಮ ಬಳ್ಳಾರಿ ಉತ್ಸವದಲ್ಲಿ ಮರಳು ಶಿಲ್ಪಕಲೆ ಆಯೋಜಿಸಿರುವುದು ಖುಷಿ ತಂದಿದೆ.

ಕೃಷ್ಣಮೂರ್ತಿ, ನಿವೃತ್ತ ಬ್ಯಾಂಕ್‌ ಅಧಿಕಾರಿ. ಬಳ್ಳಾರಿ

click me!