
ಹಾಸನ (ಮಾ.09): ಐತಿಹಾಸಿಕ ಬೇಲೂರು ಪಟ್ಟಣದ ಬಸ್ ನಿಲ್ದಾಣದ ಎದುರಿನಲ್ಲಿದ್ದ ವ್ಯಾಪಾರಿ ಮಳಿಗೆ ಕಟ್ಟಡ ಕುಸಿತವಾಗಿದ್ದು, ಮೂವರು ವ್ಯಾಪಾರಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆ ಬೇಲೂರು ಪಟ್ಟಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಭಾಗದಲ್ಲಿದ್ದ ಹಳೆಯ ಕಟ್ಟಡವೊಂದರ ಬಳಿ ಬೀದಿ ಬದಿ ವ್ಯಾಪಾರಿಗಳು ಹಣ್ಣು, ತರಕಾರಿ ಹಾಗೂ ಹೂವುಗಳನ್ನು ಮಾರಾಟ ಮಾಡುತ್ತಿದ್ದರು. ಪಾಳು ಬಿದ್ದಿದ್ದ ಕಟ್ಟಡದಲ್ಲಿ ವ್ಯಾಪಾರ ಮಾಡುತ್ತಿದ್ದವರು ಇಂದು ಭಾನುವಾರದ ಹಿನ್ನೆಲೆಯಲ್ಲಿ ಗ್ರಾಹಕರ ಸಂಖ್ಯೆ ಕಡಿಮೆಯಿತ್ತು. ಹೀಗಾಗಿ, ಗ್ರಾಹಕರಿಗಾಗಿ ಎದುರು ನೋಡುತ್ತಾ ಕುಳಿತಿದ್ದ ವ್ಯಾಪಾರಿಗಳು ಕುಳಿತಿದ್ದ ಕಟ್ಟಡವೇ ಕುಸಿದು ಬಿದ್ದಿದೆ. ಈ ಕಟ್ಟಡದ ಅಡಿ ಸಿಲುಕಿದ ಐವರ ಪೈಕಿ ಮೂವರು ಸಾವಿಗೀಡಾಗಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ವ್ಯಾಪಾರಕ್ಕಾಗಿ ಕುಳಿತ ವ್ಯಾಪಾರಿಗಳ ಬಳಿಗೆ ಜವರಾಯನೇ ಬಂದು ಜೀವ ಕಸಿದುಕೊಂಡು ಹೋಗಿದ್ದಾನೆ.
ಬಸ ನಿಲ್ದಾಣದ ಮುಂಬದಿಯ ಈ ಕಟ್ಟಡ ಪಾಳು ಬಿದ್ದಿದ್ದು ಮಳೆಗಾಲದಲ್ಲಿ ಬೀಳುತ್ತದೆ ಎಂಬ ಆತಂಕದಲ್ಲಿಯೇ ಜನರು ಇಲ್ಲಿ ವ್ಯಾಪಾರ ವಹಿವಾಟು ಮಾಡುತ್ತಿದ್ದರು. ಇನ್ನು ಕಟ್ಟಡ ಪೂರ್ಣವಾಗಿ ಶಿಥಿಲಗೊಂಡಿದ್ದರಿಂದ ಮಳೆಗಾಲದ ವೇಳೆ ಇಲ್ಲಿ ವ್ಯಾಪಾರ ಮಾಡುವುದು ಕಡಿಮೆ. ಆದರೆ, ಬೇಸಿಗೆಯಲ್ಲಿ ಸಿಮೆಂಟ್ ಕಟ್ಟಡದಿಂದ ಹಾನಿಯಾಗುವುದಿಲ್ಲ ಎಂಬ ಧೈರ್ಯದಿಂದ ಹಣ್ಣು, ಹೂವು ಮಾರುವವರು ಕಟ್ಟಡದ ಮುಂಭಾಗದ ನೆರಳಿನಲ್ಲಿ ತಾತ್ಕಾಲಿಕ ಟೇಬಲ್ ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದರು.
ಇದನ್ನೂ ಓದಿ: ಸವದತ್ತಿ ಯಲ್ಲಮ್ಮ ದೇವರಿಗೆ ಹೋದವರ ಕಾರು ಲಾರಿಗೆ ಡಿಕ್ಕಿ; ಬೆಂಗಳೂರಿನ ಐವರು ಸ್ಥಳದಲ್ಲೇ ಸಾವು!
ಆದರೆ, ಕಟ್ಟಡ ಶಿಥಿಲಗೊಂಡು ಹಲವು ವರ್ಷಗಳಿಂದ ಬೀಳದೇ ಗಟ್ಟಿಯಾಗಿದ್ದ ಕಟ್ಟಡ ಇಂದು ಮಧ್ಯಾಹ್ನ ಕುಸಿತವಾಗಿದೆ. ಸ್ಥಳಕ್ಕೆ ಬೇಲೂರು ಠಾಣೆ ಪೊಲೀಸರು ದೌಡಾಯಿಸಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿದವರ ರಕ್ಷಣೆಗೆ ಜೆಸಿಬಿ ಹಾಗೂ ಕ್ರೇನ್ ಸಹಾಯ ಪಡೆದಿದ್ದಾರೆ. ಆಗ ಕಟ್ಟಡದ ಅಡಿಗೆ ಸಿಲುಕಿದ್ದ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದು, ಮೂವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಹಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಈರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಮೃತರನ್ನು ಅಮರ್ ನಾಥ್ , ನಜೀರ್, ಜ್ಯೋತಿ ಎಂದು ಗುರುತಿಸಲಾಗಿ. ಶಿಲ್ಪ ಹಾಗೂ ನೀಲಮ್ಮ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಸ್ಥಳಕ್ಕೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.