Raghava Sarovara Project: ಮಂತ್ರಾಲಯದಲ್ಲಿ ಐತಿಹಾಸಿಕ ಯೋಜನೆ, ಬೃಹತ್ ಮಾನವ ನಿರ್ಮಿತ ‘ರಾಘವ ಸರೋವರ’ಕ್ಕೆ ಶಂಕುಸ್ಥಾಪನೆ

Published : Nov 05, 2026, 11:19 AM IST
Mantralaya Raghava Sarovara Project

ಸಾರಾಂಶ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ 25 ಎಕರೆ ವಿಸ್ತೀರ್ಣದ 'ರಾಘವ ಸರೋವರ' ಯೋಜನೆಗೆ ಡಾ. ಸುಬುಧೇಂದ್ರ ತೀರ್ಥರು ಶಂಕುಸ್ಥಾಪನೆ ನೆರವೇರಿಸಿದರು. ಜಲ ಸಂರಕ್ಷಣೆ ಮತ್ತು ವನ ಸಂವರ್ಧನೆಯ ಉದ್ದೇಶ ಹೊಂದಿರುವ ಈ ಬೃಹತ್ ಮಾನವ ನಿರ್ಮಿತ ಸರೋವರವು ಭಕ್ತರಿಗೆ ಪ್ರಶಾಂತ ವಾತಾವರಣ ಕಲ್ಪಿಸಲಿದೆ.

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ 25 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗಲಿರುವ ‘ರಾಘವ ಸರೋವರ’ಕ್ಕೆ ಮಠದ ಪೀಠಾಧಿಪತಿಗಳಾದ ಡಾ. ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಸಾನಿಧ್ಯ ವಹಿಸಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಯೋಜನೆಗೆ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥ ಶ್ರೀಗಳಿಂದ ಭೂಮಿ ಪೂಜೆ

ಬೆಂಗಳೂರಿನ ರಾಘವ ಸರೋವರ ಪ್ರತಿಷ್ಠಾನದಿಂದ ಈ ಯೋಜನೆ ರೂಪಿಸಲಾಗಿದ್ದು, ಬುಧವಾರ ಚಾಲನೆ ನೀಡಲಾಯಿತು. ಶ್ರೀಗಳು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

25 ಎಕರೆ ಪ್ರದೇಶದಲ್ಲಿ ವನ ಸಂವರ್ಧನೆ

ಮಂತ್ರಾಲಯದಲ್ಲಿ 25 ಎಕರೆ ಪ್ರದೇಶದಲ್ಲಿ ಈ ಯೋಜನೆ ರೂಪಿಸಲಾಗಿದ್ದು, ಸುಂದರ ಕೃತಕ ಸರೋವರ ನಿರ್ಮಿಸುವುದರ ಜತೆಗೆ ಸುತ್ತಮುತ್ತ ಹಸಿರು ಪರಿಸರ ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ. ಪ್ರಕೃತಿ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಸಾರ್ವಜನಿಕರ ನೆಮ್ಮದಿಗೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸುವುದು ಯೋಜನೆಯ ಪ್ರಮುಖ ಆಶಯವಾಗಿದೆ. ರಾಘವ ಸರೋವರ ಯೋಜನೆಯು ಮಂತ್ರಾಲಯದ ಸೌಂದರ್ಯ ಹೆಚ್ಚಿಸುವುದರ ಜತೆಗೆ ಭಕ್ತರು ಹಾಗೂ ಪ್ರವಾಸಿಗರಿಗೆ ಪ್ರಶಾಂತವಾದ ನೈಸರ್ಗಿಕ ವಾತಾವರಣ ಕಲ್ಪಿಸುವ ಮಹತ್ವದ ಯೋಜನೆಯಾಗಿ ರೂಪುಗೊಳ್ಳಲಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ರಾಷ್ಟ್ರೀಯ ಲೋಕಕಲಾ ಪರಿಷತ್‌ ಅಧ್ಯಕ್ಷರು, ಚಿತ್ರನಟ, ನಿರ್ದೇಶಕ, ನಿರ್ಮಾಪಕ ಡಾ. ಮದನ ಪಟೇಲ್ ಅವರು ರಾಘವ ಸರೋವರ ಯೋಜನೆಗೆ 25 ಲಕ್ಷ ರು. ದೇಣಿಗೆ ನೀಡಿ ತಮ್ಮ ಸಹಕಾರವನ್ನು ವ್ಯಕ್ತಪಡಿಸಿದರು.

ಸಂಸದ ಡಾ.ಸಿ.ಎನ್‌. ಮಂಜುನಾಥ್‌. ಪೋರ್ಟಿಸ್‌ ಆಸ್ಪತ್ರೆಯ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ ವಿಭಾಗದ ಪ್ರಧಾನ ನಿರ್ದೇಶಕ ಪ್ರೊ.ಡಾ.ಸಿ. ರಾಮಚಂದ್ರ, ಪಿಆರ್‌ಒ ಸುಧೀಂದ್ರ ವೆಂಕಟೇಶ್‌, ಪ್ರತಿಷ್ಠಾನದ ಸ್ಥಾಪಕ ಟ್ರಸ್ಟಿ ಡಿ.ಎಸ್‌. ಧನಂಜಯ ಗೌಡ, ಸ್ನೇಹಲ್ ರೇವಣ್ಕರ್‌, ಶ್ರೀಮಠದ ವ್ಯವಸ್ಥಾಪಕ ಎಸ್‌.ಕೆ. ಶ್ರೀನಿವಾಸರ್‌ ರಾವ್‌, ಪಂಡಿತರಾದ ರಾ. ವಾದಿರಾಜಾಚಾರ್ಯ, ರಾಯಚೂರಿನ ಹೃದಯ ರೋಗ ತಜ್ಞ ಡಾ. ಅಜಿತ್‌ ಕುಲಕರ್ಣಿ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು, ಪರಿಸರಾಸಕ್ತರು ಹಾಗೂ ಸಾರ್ವಜನಿಕರು, ರಾಯರ ಭಕ್ತರು ಭಾಗವಹಿಸಿದ್ದರು.

ಬೃಹತ್ ಮಾನವ ನಿರ್ಮಿತ ಸರೋವರ

ರಾಯರ ಸನ್ನಿಧಾನದಲ್ಲಿ ಬೃಹತ್ ಮಾನವ ನಿರ್ಮಿತ ಸರೋವರ ನಿರ್ಮಿಸುವುದರ ಮುಖಾಂತರ ಜಲ ಸಂರಕ್ಷಣೆ, ವನ ಸಂವರ್ಧನೆ ಹಾಗೂ ಜೀವವೈವಿಧ್ಯ ರಕ್ಷಣೆಯ ಆಶಯದೊಂದಿಗೆ ರೂಪಿಸಲಾಗಿರುವುದೇ ರಾಘವ ಸರೋವರ ಯೋಜನೆಯಾಗಿದೆ.

ಬೆಂಗಳೂರಿನ ರಾಘವ ಸರೋವರ ಪ್ರತಿಷ್ಠಾನದಿಂದ ಯೋಜನೆ ರೂಪಿಸಲಾಗಿದ್ದು, ಬೃಹತ್ ಮಾನವ ನಿರ್ಮಿತ ಸರೋವರ, ದಟ್ಟ ಅರಣ್ಯ, ವೈವಿಧ್ಯಮಯ ಸಸ್ಯ ಸಂಪತ್ತು, ಜೀವಸಂಕುಲಕ್ಕೆ ಆಶ್ರಯ, ಜೀವವೈವಿಧ್ಯ ಸಂರಕ್ಷಣೆ, ಪ್ರಕೃತಿ ಸಂರಕ್ಷಣೆಯ ಜೊತೆಗೆ ಜಲಸಂಪನ್ಮೂಲಗಳ ಅಭಿವೃದ್ಧಿಪಡಿಸುವ ಅಂಶಗಳು ಯೋಜನೆಯಲ್ಲಿ ಆದ್ಯತೆ ನೀಡಲಾಗಿದ್ದು, ಅಷ್ಟೇ ಅಲ್ಲದೇ, ಪರಿಸರದ ಸಮತೋಲನ ಕಾಪಾಡುವ ಜತೆಗೆ ಮುಂದಿನ ಪೀಳಿಗೆಗೆ ಉತ್ತಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಡುವ ಉದ್ದೇಶವನ್ನು ಯೋಜನೆ ಹೊಂದಿದೆ.

PREV
Read more Articles on
click me!

Recommended Stories

ಬೆಂಗಳೂರಿನ ಹೊಟೆಲ್, ರೆಸ್ಟೋರೆಂಟ್‌ನಲ್ಲಿ ಇಡ್ಲಿ, ದೋಸೆ ಸೇರಿ ತಿನಿಸು ಬೆಲೆ ಏರಿಕೆ, ಹೊಸ ದರ ಪಟ್ಟಿ
Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ₹2,660 ಕೋಟಿ ಹಣ ಮಹಿಳಾ ನಿಗಮಕ್ಕೆ ವರ್ಗ; ತನಿಖೆಗೆ ನಿಖಿಲ್ ಕುಮಾರಸ್ವಾಮಿ ಆಗ್ರಹ