Bengaluru: ಉದ್ಯೋಗನಿರತ ಪತ್ನಿ ಜೀವನಾಂಶ ಪಡೆಯಲು ಅರ್ಹಳಲ್ಲ; ಹೈಕೋರ್ಟ್ ಮಹತ್ವದ ಆದೇಶ

Published : Nov 05, 2026, 10:50 AM IST
Karnataka High court

ಸಾರಾಂಶ

ಉತ್ತಮ ಉದ್ಯೋಗ ಮತ್ತು ಆದಾಯ ಹೊಂದಿರುವ ಪತ್ನಿಗೆ ಪತಿಯಿಂದ ಜೀವನಾಂಶ ಪಡೆಯಲು ಅರ್ಹತೆಯಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಮತ್ತೊಂದೆಡೆ, ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಪತ್ನಿ ಸುಶಿಕ್ಷಿತಳಾಗಿದ್ದು, ಉತ್ತಮ ಉದ್ಯೋಗ ನಿರ್ವಹಿಸುತ್ತಾ ತನ್ನನ್ನು ತಾನು ನಿರ್ವಹಿಸಿಕೊಳ್ಳಲು ಅಗತ್ಯವಾದಷ್ಟು ಆದಾಯ ಸಂಪಾದಿಸುತ್ತಿರುವ ಸಂದರ್ಭದಲ್ಲಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಹೈಕೋರ್ಟ್‌ ಆದೇಶಿಸಿದೆ. ಪತ್ನಿಗೆ ಮಾಸಿಕ 20 ಸಾವಿರ ರೂ. ಜೀವನಾಂಶ ಪಾವತಿಸುವಂತೆ ಸೂಚಿಸಿ ಚಿಕ್ಕಮಗಳೂರು ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದು ಕೋರಿ ಬೆಂಗಳೂರಿನ ಎ.ಆರ್.ಸುಭ್ರತ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲ್ಕೂರ್ ಸುಮಲತಾ ಪೀಠವು ಈ ಆದೇಶ ಮಾಡಿದೆ.

₹54,700 ಸಂಪಾದಿಸುವ ಪತ್ನಿ ಸಲ್ಲಿಸಿದ್ದ ಅರ್ಜಿ ವಜಾ

ಆರ್ಥಿಕ ಸ್ವಾವಲಂಬನೆ ಮತ್ತು ಗಳಿಸುವ ಸಾಮರ್ಥ್ಯವು ಪತ್ನಿಯ ಜೀವನಾಂಶದ ಬೇಡಿಕೆ ತಿರಸ್ಕರಿಸಲು ಸೂಕ್ತ ಆಧಾರವಾಗಿರಲಿದೆ ಎಂದು ಆದೇಶಿಸಿದ ಪೀಠ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಪತ್ನಿಯು ಬಿ.ಇ.ಕಂಪ್ಯೂಟರ್‌ಸೈನ್ಸ್‌ ಪದವೀಧರೆಯಾಗಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಟೆಕ್ನಿಕಲ್ ರೈಟರ್ ಹುದ್ದೆ ನಿರ್ವಹಿಸುತ್ತಾ ಮಾಸಿಕ 54,700 ರೂ. ಸಂಪಾದನೆ ಮಾಡುತ್ತಿದ್ದಾರೆ. ಈ ಆದಾಯದಿಂದ ತನ್ನ ಹೆತ್ತವರನ್ನೂ ಪೋಷಿಸುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಪತಿಯ ಮೇಲೆ ಆಕೆ ಅವಲಂಬಿತಳಾಗಿದ್ದಾರೆ ಎಂದು ಹೇಳಲಾಗದು. ಪತಿಯ ಆದಾಯವು ಮಾಸಿಕ ಎರಡು ಲಕ್ಷ ಇದೆ. ಅದು ಪತ್ನಿಯ ಆದಾಯ ಪ್ರಮಾಣಕ್ಕಿಂತ ಹೆಚ್ಚಿರುವುದು ನಿಜ. ಆದರೆ, ವಿವಾಹಿತ ಮಹಿಳೆಯನ್ನು ಎಲ್ಲಾ ಸಂದರ್ಭಗಳಲ್ಲೂ ಪತಿಯೇ ನಿರ್ವಹಿಸಬೇಕು ಎಂದು ಕಾನೂನು ಎಲ್ಲಿಯೂ ಹೇಳುವುದಿಲ್ಲ. ಪತ್ನಿಯ ಆದಾಯವು ಜೀವನ ನಿರ್ವಹಣೆಗೆ ತೀರಾ ಸಾಕಾಗುವುದಿಲ್ಲ ಎಂದಾಗ ಮಾತ್ರ ಪತಿಯಿಂದ ಜೀವನಾಂಶ ಕೊಡಿಸಬಹುದು ಎಂದು ಪೀಠ ತಿಳಿಸಿದೆ.

ಕಡಿಮೆ ಬೆಲೆಗೆ ಫ್ಲೈಟ್‌ ಟೆಕೆಟ್‌ ಕೊಡಿಸೋ ನೆಪದಲ್ಲಿ ಮಹಿಳೆ ವಂಚನೆ: ಆರೋಪಿ ಸೆರೆ

ಕಡಿಮೆ ಬೆಲೆಗೆ ವಿಮಾನದ ಟೆಕೆಟ್‌ ಕೊಡಿಸುತ್ತೇನೆಂದು ಮಹಿಳೆಯಿಂದ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ನಗದು ಪಡೆದು ಪರಾರಿ ಆಗಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಮೂಲದ ಚನುವರ್ ಅಲಿ (36) ಬಂಧಿತ. ಆರೋಪಿಯಿಂದ 17 ಲಕ್ಷ ರು. ಮೌಲ್ಯದ 117 ಗ್ರಾಂ ತೂಕದ ಚಿನ್ನಾಭರಣ, 71.83 ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ ಅ.14ರಂದು ರಾಜಸ್ಥಾನ ಮೂಲದ ಪುಷ್ಪ ಎಂಬುವರನ್ನು ಬಾಗಲೂರು ಬಳಿಯ ಮಯೂರಾ ಬೇಕರಿ ಬಳಿ ವಂಚಿಸಿ ಪರಾರಿ ಆಗಿದ್ದ.

ನಾಲ್ಕೈದು ವರ್ಷಗಳ ಹಿಂದೆಯೇ ನಗರಕ್ಕೆ ಬಂದಿದ್ದ ಆರೋಪಿ, ಮೊದಲು ವಿಮಾನ ನಿಲ್ದಾಣದ ಕ್ಯಾಂಟೀನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. 1 ವರ್ಷದ ಹಿಂದೆ ಕೆಲಸ ಬಿಟ್ಟು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. 3 ತಿಂಗಳ ಹಿಂದೆ ಆ ಕೆಲಸವನ್ನು ಕೂಡ ಬಿಟ್ಟು, ಸಣ್ಣ-ಪುಟ್ಟ ಕೆಲಸ ಮಾಡಿ ಜೀವನ ನಡೆಸುತ್ತಿದ್ದ. ದೇವನಹಳ್ಳಿಯ ಭಟ್ಟರಮಾರೇನಹಳ್ಳಿ ಗ್ರಾಮದಲ್ಲಿ ಸ್ನೇಹಿತರ ಜತೆ ವಾಸವಾಗಿದ್ದ.

ವಿದ್ಯಾರಣ್ಯಪುರದಲ್ಲಿರುವ ಸಂಬಂಧಿಯೊಬ್ಬರಿಗೆ ಅನಾರೋಗ್ಯದ ಕಾರಣ ಅವರನ್ನು ನೋಡಲು ರಾಜಸ್ಥಾನದಿಂದ ಬಂದಿದ್ದ ಪುಷ್ಪ ಮತ್ತು ಈಕೆಯ ಸಹೋದರ ರಮೇಶ್‌ ಅ.14ರಂದು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಂದು ಟೆಕೆಟ್ ಪಡೆಯಲು ಹೋಗಿದ್ದಾರೆ. ಆಗ ಮಹಿಳೆಗೆ ಟಿಕೆಟ್ ಸಿಕ್ಕಿಲ್ಲ. ಇದೇ ವೇಳೆ ರೈಲ್ವೆ ನಿಲ್ದಾಣದಲ್ಲಿ ಅಲೆದಾಡುತ್ತಿದ್ದ ಆರೋಪಿ, ಮಹಿಳೆಯನ್ನು ಪರಿಚಯಿಸಿಕೊಂಡು, ನನಗೂ ಟಿಕೆಟ್ ಸಿಕ್ಕಿಲ್ಲ. ನಾನು ಏರ್‌ಪೋರ್ಟ್‌ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ನಿಮಗೆ ಕಡಿಮೆ ಬೆಲೆಗೆ ವಿಮಾನ ಟಿಕೆಟ್ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ.

ಆತನ ಮಾತು ನಂಬಿದ ಮಹಿಳೆ, ಕ್ಯಾಬ್ ಬುಕ್ ಮಾಡಿಕೊಂಡು ಆರೋಪಿಯನ್ನು ಏರ್‌ಪೋರ್ಟ್‌ಗೆ ಕರೆದೊಯ್ಯುತ್ತಿದ್ದರು. ಮಾರ್ಗ ಮಧ್ಯೆ ಬಾಗಲೂರು ಬಳಿಯ ಮಯೂರಾ ಬೇಕರಿ ಬಳಿ ಏರ್‌ಪೋರ್ಟ್‌ನಲ್ಲಿ ಚಿನ್ನಾಭರಣ ತೆಗೆದುಕೊಂಡು ಹೋಗುವುದಕ್ಕೆ ಅನುಮತಿ ಇಲ್ಲ. ಹೀಗಾಗಿ ಮೈಮೇಲಿದ್ದ ಚಿನ್ನಾಭರಣ ಹಾಗೂ ನಗದು ಇದ್ದ ಪರ್ಸ್‌ನ್ನು ತೆಗೆಯಿಸಿ ತನ್ನ ಬ್ಯಾಗನಲ್ಲಿ ಇರಿಸಿಕೊಂಡಿದ್ದ. ನಂತರ ಏರ್‌ಪೋರ್ಟ್ ಹೊರಗಡೆ ಮಹಿಳೆ ಮತ್ತು ಅವರ ಸಹೋದರನನ್ನು ಕ್ಯಾಬ್‌ನಿಂದ ಇಳಿಸಿ, ಇಲ್ಲಿಯೇ ಇರುವಂತೆ ಸೂಚಿಸಿ ಪರಾರಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

Bengaluru: ಮನೇಲಿ ಕೆಲಸಗಾರನ ಜೊತೆ ಏಕಾಂತದಲ್ಲಿ ಮಗಳು; ಒಡೆಯಿತು ಅಪ್ಪನ ಹೃದಯ, ಘನಘೋರ ಕೃತ್ಯ!
ಅಪಾರ್ಟ್‌ಮೆಂಟ್ ಹೆಸರಿನಲ್ಲಿ ಬಹುಕೋಟಿ ಅಕ್ರಮ ಹಣ ವರ್ಗಾವಣೆ ಭರತ್‌ ರೆಡ್ಡಿಗೆ ಸೇರಿದ ಬೆಂಗಳೂರಿನ 3 ಕಡೆ ಇಡಿ ದಾಳಿ