ಮಾಜಿ ಸಚಿವ ಡಿಕೆ ಶಿವಕುಮಾರ್ ಕಾಲೇಜು ದಿನದಿಂದ ರಾಜಕೀಯ ಜೀವನದ ವರೆಗೂ ಹೇಗಿದ್ದರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಬಿ ಸಿ ಪಾಟೀಲ್ ಹೇಳಿದ್ದಾರೆ.
ಹಿರೇಕೆರೂರು [ಡಿ.03]: ಡಿ.ಕೆ. ಶಿವಕುಮಾರ ಅವರಿಂದ ನೈತಿಕತೆ, ಪ್ರಾಮಾಣಿಕತೆಯ ಪಾಠ ಕಲಿಯಬೇಕಾಗಿಲ್ಲ. ಅವರು ಇಷ್ಟುದಿನ ಎಲ್ಲಿದ್ದರು ಎಂಬುದನ್ನು ಅರಿಯಲಿ. ರಾಜ್ಯದ ಮರ್ಯಾದೆಯನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿದವರಿಂದ ನಾವು ಬುದ್ಧಿ ಕಲಿಯಬೇಕಿಲ್ಲ. ರಾಜ್ಯದ ಬಾವುಟವನ್ನು ತಿಹಾರ್ ಜೈಲಿನಲ್ಲಿ ಹಾರಿಸಿದ ಅವರಂದ ಕಲಿಯುವುದು ಏನೂ ಇಲ್ಲ ಎಂದು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ. ಪಾಟೀಲ ತೀವ್ರ ಟೀಕೆ ಮಾಡಿದ್ದಾರೆ.
ಹಿರೇಕೆರೂರು ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅಕ್ರಮ ಹಣ ಗಳಿಕೆ ಆರೋಪದಲ್ಲಿ ತಿಹಾರ್ ಜೈಲಿನಲ್ಲಿ ವಾಸ ಮುಗಿಸಿ ಈಗ ಜಾಮೀನಿನ ಮೇಲೆ ಹೊರಬಂದು ನೈತಿಕತೆ ಮತ್ತು ಪ್ರಾಮಾಣಿಕತೆ ಬಗ್ಗೆ ಭಾಷಣ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಒಬ್ಬ ದುರಹಂಕಾರಿ, ಯಾರನ್ನೂ ಪಕ್ಕ ಕೂರಿಸಿಕೊಂಡು ಮಾತನಾಡಿದವರಲ್ಲ. ಎಂದೂ ನಮ್ಮ ಕಷ್ಟಗಳನ್ನು ಅವರ ಹತ್ತಿರ ಹೇಳಿಕೊಂಡಿಲ್ಲ, ಅವರೂ ಕೇಳಿಲ್ಲ. ಡಿ.ಕೆ. ಶಿವಕುಮಾರ್ ಕಾಲೇಜು ಓದಿನಿಂದ ಹಿಡಿದು ರಾಜಕಾರಣದ ವರೆಗೂ ಯಾವ್ಯಾವ ರೀತಿ ಜೀವನ ನಡೆಸಿದ್ದಾರೆ ಎಂಬುದು ಜಗತ್ತಿಗೆ ಗೊತ್ತಿರುವ ವಿಷಯ ಎಂದು ಟಾಂಗ್ ನೀಡಿದರು.
ಬಿ.ಸಿ. ಪಾಟೀಲ್ ಗೆ ಎದುರಾಗಿದೆಯಾ ಸೋಲಿನ ಭೀತಿ?...
ಡಿ.ಕೆ. ಶಿವಕುಮಾರ್ ಭಾನುವಾರ ಮತಯಾಚನೆ ಸಂದರ್ಭದಲ್ಲಿ ಬಿ.ಎಚ್. ಬನ್ನಿಕೋಡ್ ಅವರ ಪ್ರಾಮಾಣಿಕತೆ, ನೈತಿಕತೆ ಹಾಗೂ ಬಿ.ಸಿ. ಪಾಟೀಲರ ನೈತಿಕತೆ, ಪ್ರಾಮಾಣಿಕತೆ ಬಗ್ಗೆ ಭಾಷಣ ಮಾಡಿದ್ದರ ಕುರಿತು ಸೋಮವಾರ ಪಾಟೀಲ ತಿರುಗೇಟು ನೀಡಿದರುಯ
ಜೆಡಿಎಸ್-ಕಾಂಗ್ರೆಸ್ ಮತ್ತೆ ಒಗ್ಗಟ್ಟಿನ ಮಂತ್ರದ ಚರ್ಚೆಗೆ ಪ್ರತಿಕ್ರಿಯಿಸಿದ ಅವರು ರಾಜ್ಯದಲ್ಲಿ ಸಿದ್ದರಾಮಯ್ಯ, ಖರ್ಗೆ, ದೇವೇಗೌಡರು, ಕುಮಾರಸ್ವಾಮಿ ಇವರೆಲ್ಲರದು ದಿನಕ್ಕೊಂದು ನಾಟಕ. ಜೆಡಿಎಸ್ ಮತ್ತು ಕಾಂಗ್ರೆಸ್ ಮತ್ತೆ ಒಂದಾಗುತ್ತೇನೆ ಎಂದು ಹೇಳುವುದು ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವ ಹೇಳಿಕೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರಲ್ಲಿ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಇನ್ನು ಒಗ್ಗಟ್ಟಿನ ಮಂತ್ರ ಎಲ್ಲಿ ಬರುತ್ತದೆ. ಎರಡು ಪಕ್ಷದಲ್ಲಿನ ಗೊಂದಲಗಳಿಂದಲೇ ನಾವು ಹೊರಬಂದಿರುವುದು. ಎರಡು ಪಕ್ಷಗಳಲ್ಲಿ ಒಗ್ಗಟ್ಟು ಎಂಬುದು ಕನಸಿನ ಮಾತು ಎಂದರು.
ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು 9 ರಂದು ಫಲಿತಾಂಶ ಪ್ರಕಟವಾಗಲಿದೆ.