ಈ ಹಳ್ಳಿಯಲ್ಲೊಬ್ಬ ಅಪರೂಪದ ಕ್ರಿಯೇಟಿವ್ ಶಿಕ್ಷಕ

By Web DeskFirst Published Sep 5, 2018, 11:51 AM IST
Highlights

ಬಳ್ಳಾರಿ ತಾಲೂಕಿನ ಹಿರೇಹಡಗಲಿ ವಿಕೆಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕ ಯಲ್ಲಪ್ಪ ಹಂದ್ರಾಳ್ ಶಾಲಾ ಅವಧಿಯ ಬಳಿಕ ವಿವಿಧ ವಿಷಯಗಳ ಬಗ್ಗೆ ಅರಿವು ನೀಡುವ ಮೂಲಕ ಹತ್ತಾರು ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿದ್ದಾರೆ.  ಅವರ ಸರ್ವಾಂಗೀಣ ಪ್ರಗತಿಗೆ ಪೂರಕ ವಾತವರಣ ಸೃಷ್ಟಿಸಿದ್ದಾರೆ. 

ಬಳ್ಳಾರಿ (ಸೆ. 05):  ಸರ್ಕಾರಿ ಶಾಲೆಯ ಕೆಲ ಶಿಕ್ಷಕರು ಸಂಬಳಕ್ಕಾಗಿ ನೌಕರಿ ಮಾಡಿ ಯಾವಾಗ ಗಂಟೆ ಹೊಡಿದೀತು ಎಂದು ಹೇಳುತ್ತಾ. ವೇಳೆಯಾಗುತ್ತಿದ್ದಂತೆ ಮನೆ ಕಡೆಗೆ ಕಾಲಿಗೆ ಬುದ್ದಿ ಹೇಳುತ್ತಾರೆ.

ಇಂತಹ ಸಂದರ್ಭದಲ್ಲಿ ಶಾಲಾ ಅವಧಿಯ ಬಳಿಕ ವಿವಿಧ ವಿಷಯಗಳ ಬಗ್ಗೆ ಅರಿವು ನೀಡುವ ಮೂಲಕ ಹತ್ತಾರು ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿ ಅವರ ಸರ್ವಾಂಗೀಣ ಪ್ರಗತಿಗೆ ಪೂರಕ ವಾತವರಣ ಸೃಷ್ಠಿಸಿರುವ ಶಿಕ್ಷಕ ಯಲ್ಲಪ್ಪ ಹಂದ್ರಾಳ್ ಅಪರೂಪ ವ್ಯಕ್ತಿಯಾಗಿ ಕಾಣುತ್ತಾರೆ.

ಹೌದು, ತಾಲೂಕಿನ ಹಿರೇಹಡಗಲಿ ವಿಕೆಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಯಲ್ಲಪ್ಪ ಹಂದ್ರಾಳ ಗದಗ ಜಿಲ್ಲೆ, ಮುಂಡರಗಿ ತಾಲೂಕಿನ ಮೇವುಂಡಿ ಗ್ರಾಮದವರು. ಎಂಎ ಬಿಇಡಿ ಶಿಕ್ಷಣ ಪಡೆದಿರುವ ಇವರು ಸೇವೆಗೆ ಸೇರಿದ್ದು 29-01-2004 ರಲ್ಲಿ ಗುಲ್ಬರ್ಗ ಜಿಲ್ಲೆಯ ಜೇವರಗಿ ತಾಲೂಕಿನ ಆಲೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಕನ್ನಡ ಕಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ್ದಾರೆ.

ಪರಿಸರ ಪ್ರಜ್ಞೆ:

ಶಾಲಾ ವಿದ್ಯಾರ್ಥಿಗಳಿಗೆ ಕೇವಲ ಪಠ್ಯದಲ್ಲಿನ ಪರಿಸರ ತಿಳಿಸಿದರೆ ಸಾಲದು, ಅವರನ್ನು ಪಕ್ಕದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರಿಗೆ ಸ್ಥಳೀಯ ಮರ- ಗಿಡಗಳ ಪರಿಚಯ, ಅರಣ್ಯದ ಅಳಿವು- ಉಳುವಿನ ಬಗ್ಗೆ ಅರಿವು ಮೂಡಿಸುತ್ತಿರುವ ಹಂದ್ರಾಳ್ ಶಿಕ್ಷಕರು, ಹಿರೇಹಡಗಲಿ ಪಕ್ಕದ ತುಂಬಿನಕೆರೆ ಕಾಯ್ದಿಟ್ಟ ಅರಣ್ಯ ಪ್ರದೇಶಕ್ಕೆ ಶಾಲಾ ಆವಧಿ ಮುಗಿದ ಬಳಿಕ ಹೊರ ಸಂಚಾರ ಮಾಡಿಸಿ ಅವರಿಗೆ ಪರಿಸರ ಪ್ರಜ್ಞೆ ಮೂಡಿಸುತ್ತಿದ್ದಾರೆ. ಹಿರೇಹಡಗಲಿ ವಿಕೆಕೆ ಸರ್ಕಾರಿ ಪ್ರೌಢ ಶಾಲೆಯ ಜಾಗದಲ್ಲಿ ವನಮಹೋತ್ಸವ ಹಮ್ಮಿಕೊಂಡು 600 ಕ್ಕೂ ಅಧಿಕ ಸಸಿ ಬೆಳೆಸಿದ್ದಾರೆ.

ಮಕ್ಕಳಲ್ಲಿ ಸಾಹಿತ್ಯ ಪ್ರಜ್ಞೆ:

ಶಾಲೆಯಲ್ಲಿ ಮೂರು ಬಾರಿ ಕವಿಗೋಷ್ಠಿ ಆಯೋಜಿಸುವ ಜತೆಗೆ, ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ನಿಂದ ಮಕ್ಕಳ ಕಥಾಮಾಲಿಕೆ ತರಿಸಿ ಓದಿಸಿದ್ದಾರೆ. ನಾಡಿನ ಹೆಸರಾಂತ ಮಕ್ಕಳ ಸಾಹಿತಿಗಳನ್ನು ಕರೆಸಿ ಮಲ್ಲಿಗೆ ಮಕ್ಕಳ ಕಾವ್ಯೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ.

ಧಾರವಾಡದ ಆನಂದ ಪಾಟೀಲ್, ಸಿರಸಿಯ ತಮ್ಮಣ್ಣ ಭೀಗಾರ್, ಬೆಂಗಳೂರಿನ ಮತ್ತೂರು ಸುಬ್ಬಣ್ಣ, ಹಡಗಲಿಯ ಶೇಷಗಿರಿರಾವ್, ತೋ.ಮ. ಶಂಕ್ರಯ್ಯ, ಅಂಜನಾ ಕೃಷ್ಣಪ್ಪ ಸೇರಿ ವಿವಿಧ ಹಿರಿಯ ಸಾಹಿತಿಗಳು ಮಕ್ಕಳಿಗೆ ಕಾವ್ಯದ ಪರಿಕಲ್ಪನೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯಾರ್ಥಿಗಳ ನಡಿಗೆ ರಂಗಭೂಮಿ ಕಡೆಗೆ:

ವಿದ್ಯಾರ್ಥಿಗಳಲ್ಲಿ ರಂಗಭೂಮಿ ಕಲೆ ಆಸಕ್ತಿ ಬೆಳೆಸಲು ಹಂದ್ರಾಳ್ ಶಿಕ್ಷಕರು ತಾವೇ ಪಾತ್ರದಾರಿ ಮಕ್ಕಳಿಗೆ ಬಣ್ಣ ಹಚ್ಚುವ ಮೂಲಕ ಮಕ್ಕಳನ್ನು ಪಾತ್ರಕ್ಕೆ ಸಿದ್ದಗೊಳಿಸಿ ವಿವಿಧ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಇದರಿಂದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ತಮ್ಮದೇ ರಚನೆಯ ಕತೆಗಳನ್ನು ನಿರ್ದೇಶಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಕಾಲ ಎಂಬ ನಾಟಕ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೂ ಪರಿಚಿತವಾಗಿತ್ತು.

ಯಮಲೋಕದಲ್ಲಿ ನಡುಕ, ಮೇಷ್ಟ್ರು ವರ್ಸಸ್ ಮಸ್ಕೀಟೋ, ಕೋಣೆ ಕೂಸು ಕೊಳಿತು, ಓಣಿ ಕೂಸು ಬೆಳೀತು, ಶಬರಿ ಹೀಗೆ ಹತ್ತಾರು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶನ ನೀಡಿ ಜನಮನ ಗೆದ್ದಿವೆ.

ವಿವಿಧ ಶಾಲೆಗಳ ಕೂಟ:

2012 ರಿಂದ ಮಾಗಳ, ಚಿಕ್ಕ ಕೊಳಚಿ, ಬೂದನೂರು, ಹಿರೇಕುರವತ್ತಿ ಶಾಲಾಮಕ್ಕಳ ತಂಡಗಳನ್ನು ಕರೆಸಿ ೩ ದಿನಗಳ ಕಾಲ ಕ್ರಿಕೆಟ್, ಯೋಗ, ಬ್ಲಡ್ ಗ್ರೂಪಿಂಗ್, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದರು. ಯಲ್ಲಪ್ಪ ಹಂದ್ರಾಳ್ ಸ್ವತಃ ಸಾಹಿತ್ಯದ ಅಭಿರುಚಿ ಹೊಂದಿದ್ದು, ಹೊಯ್ದಾಟ ಎಂಬ ಕವನ ಸಂಕಲನ ಹೊರ ತಂದಿದ್ದಾರೆ.

ವನಪ್ರಿಯ ಎಂಬ ಹೆಸರಿನಿಂದ ನೂರು ವಚನಗಳನ್ನು ಬರೆದಿದ್ದಾರೆ. ಟ್ರೆಕ್ಕಿಂಗ್, ಪೋಟೋಗ್ರಾಫಿ, ಹಾಡುಗಾರಿಕೆ, ಪ್ರವಾಸ, ಬರವಣಿಗೆ ಹವ್ಯಾಸಗಳು ಜತೆಗೆ ಧರ್ಮಸ್ಥಳ ಸ್ವ ಸಹಾಯ ಮಹಿಳಾ ಸಂಘಗಳ ಜ್ಞಾನವಿಕಾಸ ಸಭೆಯಲ್ಲಿ ಭಾಷಣಕಾರರಾಗಿ ಜಾಗೃತಿ ಮೂಡಿಸಿದ್ದಾರೆ.

ಇಷ್ಟೇಲ್ಲದರ ನಡುವೆ ಮಲ್ಲಿಗೆ ಕಲಾಸಂಸ್ಥೆಯ ಅಧ್ಯಕ್ಷರಾಗುವ ಜತೆಗೆ ವಿವಿಧ ಸಾಹಿತ್ಯ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.  

-ಚಂದ್ರು ಕೊಂಚಿಗೇರಿ 

click me!