
ಹೂವಿನಹಡಗಲಿ(ಆ.19): ಹಿಂದೂ-ಮುಸ್ಲಿಂ ಬಾಂಧವರಲ್ಲಿ ಭಾವೈಕ್ಯತೆಯ ಸಂಕೇತ ಸಾರುವ ಮೊಹರಂ ಹಬ್ಬಕ್ಕೆ ಕೊರೋನಾ ಅಡ್ಡಿಯಾಗಿದೆ. ತಾಲೂಕಿನ ಹಲವೆಡೆ ಮುಸ್ಲಿಂರಿಲ್ಲದ ಊರುಗಳಲ್ಲಿ ಇಂದಿಗೂ ಹಿಂದೂಗಳೇ ಮೊಹರಂ ಆಚರಿಸುತ್ತಿದ್ದಾರೆ. ಬ್ಯಾಲಹುಣ್ಸಿ, ಶಿವಪುರ, ಹಾಳ್‌ತಿಮ್ಲಾಪುರ ಸೇರಿದಂತೆ ಇತರೆ ಹಳ್ಳಿಗಳಲ್ಲಿ ಹಿರಿಯರ ಮಾರ್ಗದರ್ಶನ ಪಡೆದು ಹಿಂದೂಗಳೇ ಮೊಹರಂ ಹಬ್ಬವನ್ನು ಹತ್ತು ದಿನಗಳ ಕಾಲ ಆಚರಿಸುತ್ತಾ ಬಂದಿದ್ದಾರೆ.
ಬ್ಯಾಲಹುಣ್ಸಿಯ ಬಸವೇಶ್ವರ ದೇವಸ್ಥಾನದ ಕಟ್ಟೆಯ ಮೇಲೆ ದೇವರನ್ನು ಪ್ರತಿಷ್ಠಾಪಿಸಿ ಹಬ್ಬಕ್ಕೆ ಚಾಲನೆ ನೀಡಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿಯೇ ಅಲಾಯಿ ತೆಗೆಯುತ್ತಾರೆ. ಮೊಹರಂ ಹಬ್ಬದಲ್ಲಿ ಭಕ್ತರು ಅತ್ತ ಬಸವೇಶ್ವರ ಹಾಗೂ ಈಶ್ವರ ಹಾಗೂ ಇತ್ತ ಪೀರಲು ದೇವರುಗಳ ದರ್ಶನ ಪಡೆಯುತ್ತಾರೆ.
3ನೇ ಅಲೆ ಆತಂಕ: ಗಣೇಶ ಚತುರ್ಥಿ, ಮೊಹರಂ ಹಬ್ಬಕ್ಕೆ ಕಠಿಣ ನಿರ್ಬಂಧ!
ಶಿವಪುರ ಹಾಗೂ ಹಾಳ್ ತಿಮ್ಲಾಪುರದಲ್ಲಿಯೂ ಮುಸ್ಲಿಂರಿಲ್ಲ. ಆದರೂ ಈ ಗ್ರಾಮದಲ್ಲಿ ಮಸೀದಿ ನಿರ್ಮಿಸಲಾಗಿದೆ. ಆದರೆ, ಬ್ಯಾಲಹುಣ್ಸಿಯಲ್ಲಿ ಹತ್ತಾರು ವರ್ಷಗಳಿಂದ ಮೊಹರಂ ಹಬ್ಬವನ್ನು ಹಿಂದೂಗಳು ಆಚರಿಸಿದ್ದರೂ ಮಸೀದಿ ಮಾತ್ರ ನಿರ್ಮಿಸಿಲ್ಲ. ಹಬ್ಬದ ದಿನ ಮನೆಯಲ್ಲಿ ಗೋದಿ ಹಿಟ್ಟಿನ ಮಾದಲಿ, ಸಕ್ಕರೆ, ಬೆಲ್ಲವನ್ನು ಮುಲ್ಲಾ ಸಾಹೇಬ್‌ರಿಂದ ಓದಿಸಿಕೊಂಡು ಭಕ್ತಿ ಮೆರೆದ ಹಿಂದೂಗಳು ಮಸೀದಿ ಮುಂದಿನ ಅಲಾಯಿ ಕುಣಿಯಲ್ಲಿ ಕಿಚ್ಚದಲ್ಲಿ ಹಾಯ್ದು ಮಸೀದಿಯಲ್ಲಿರುವ ಪೀರಲು ದೇವರುಗಳನ್ನು ಹಿಡಿದುಕೊಂಡು ಊರು ಸುತ್ತುತ್ತಾರೆ.
ಗ್ರಾಮದ ಗುರು-ಹಿರಿಯರು ಸೇರಿ ಮೊಹರಂ ಆಚರಿಸಿಕೊಂಡು ಬಂದಿದ್ದೇವೆ. ನಮ್ಮೂರಿನಲ್ಲಿ ಮುಸ್ಲಿಂರು ಇಲ್ಲದ ಕಾರಣ ಮಕರಬ್ಬಿಯಿಂದ ಪಿಂಜಾರ ಸಾಬಣ್ಣ ಮುಲ್ಲಾರನ್ನು ಕರೆತಂದು ಹಬ್ಬ ಆಚರಿಸುತ್ತೇವೆ ಎಂದು ಬ್ಯಾಲಹುಣ್ಸಿ ಗ್ರಾಮಸ್ಥರು ತಿಳಿಸಿದ್ದಾರೆ.