ಮೈಸೂರು (ಆ.19): ಮೈಸೂರು ನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜೆಡಿಎಸ್ ಸಖ್ಯ ಬೆಳೆಸಲು ಉತ್ಸಾಹ ತೋರಿದೆ.
ಕಳೆದ ಬಾರಿ ನಗರ ಪಾಲಿಕೆಯಲ್ಲಿ ಉಂಟಾದ ಬೆಳವಣಿಗೆಯಿಂದ ಕೊನೆ ಕ್ಷಣದಲ್ಲಿ ಬಿಜೆಪಿಗೆ ಅಧಿಕಾರ ಕೈತಪ್ಪಿ ಹೋಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಜೆಡಿಎಸ್ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ಫಲಪ್ರದವಾದರೆ ಸ್ಥಳೀಯ ನಾಯಕರೊಡನೆ ಚರ್ಚಿಸಿ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಸಿದ್ಧವಾಗಿದೆ.
undefined
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್. ಶ್ರೀವತ್ಸ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅವರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಸ್ಥಳೀಯ ನಾಯಕರೊಂದಿಗೆ ಮಾತುಕತೆ ನಡೆಯಲಿದೆ. ಬಿಜೆಪಿಗೆ ಮೇಯರ್ ಸ್ಥಾನ ನೀಡಿದರೆ ಮಾತ್ರ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ.
ಮೈಸೂರು : ರದ್ದಾಗಿದ್ದ ಸದಸ್ಯತ್ವ - ಆ.25 ರಂದು ಮೇಯರ್ ಚುನಾವಣೆ
23 ಸ್ಥಾನಗಳೊಂದಿಗೆ ಅತಿ ಹೆಚ್ಚು ಸದಸ್ಯರು ನಮ್ಮ ಪಕ್ಷದಲ್ಲಿ ಇರುವ ಕಾರಣ ನಾವು ಮೇಯರ್ ಹುದ್ದೆ ಕೇಳುತ್ತಿದ್ದೇವೆ. ಈ ಬಾರಿ ನಮಗೆ ಪೂರಕ ವಾತಾವರಣವಿದೆ. ಕಳೆದ ಬಾರಿ ಮೇಯರ್ ಆಕಾಂಕ್ಷಿಯಾಗಿದ್ದ ಸುನಂದಾ ಪಾಲನೇತ್ರ ಅವರನ್ನೇ ಕಣಕ್ಕಿಳಿಸುತ್ತೇವೆ. ಸುನಂದಾ ಪಾಲನೇತ್ರ ಜೊತೆಗೆ ಪ್ರಮೀಳಾ ಭರತ್ ಹೆಸರು ಸಹ ಚಾಲ್ತಿಯಲ್ಲಿದೆ ಎಂದರು.
ನಗರ ಪಾಲಿಕೆಯ ವಾರ್ಡ್ ನಂಬರ್ 36ರ ಉಪಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಯಲಿದೆ. ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ನಾಳೆ ಸಂಜೆಯೊಳಗೆ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ವಾರ್ಡ್ ನಂಬರ್ 36ರ ಉಪ ಚುನಾವಣೆಯ ಉಸ್ತುವಾರಿಯನ್ನಾಗಿ ಶಾಸಕ ಎಲ್. ನಾಗೇಂದ್ರ ಅವರನ್ನು ನೇಮಿಸಲಾಗಿದೆ. ಕಳೆದ ಬಾರಿ ಕೇವಲ 400 ಮತಗಳನ್ನು ನಮ್ಮ ಪಕ್ಷದ ಅಭ್ಯರ್ಥಿ ಪಡೆದುಕೊಂಡಿದ್ದರು. ಕೊರೋನಾ ಸಂದರ್ಭದಲ್ಲಿ ಉತ್ತಮ ಕೆಲಸ ಮಾಡಿರುವುದರಿಂದ ಈ ಬಾರಿ ಬಿಜೆಪಿಗೆ ಒಳ್ಳೆಯ ವಾತಾವರಣವಿದೆ ಎಂದು ಅವರು ಹೇಳಿದರು.
ನಾಳೆ ಸಂಜೆಯೊಳಗೆ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲಾಗುವುದು. ನಾಲ್ಕು ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ನಾಳೆ ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದರು.