Mandya: ಕೊಲ್ಲೂರು ಬಳಿಕ ಮೇಲುಕೋಟೆಗೆ ಎಂಟ್ರಿಯಾದ ಸಲಾಂ ಆರತಿ ವಿವಾದ!

Published : Mar 30, 2022, 05:02 PM IST
Mandya: ಕೊಲ್ಲೂರು ಬಳಿಕ ಮೇಲುಕೋಟೆಗೆ ಎಂಟ್ರಿಯಾದ ಸಲಾಂ ಆರತಿ ವಿವಾದ!

ಸಾರಾಂಶ

ಹಿಜಾಬ್ ವಿಚಾರದಲ್ಲಿ ಶುರುವಾದ ಧರ್ಮ ಸಂಘರ್ಷ ಬೇರೆ ಬೇರೆ ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಮುಸ್ಲಿಂ ವ್ಯಾಪಾರ, ಹಲಾಲ್ ಮಾಂಸ ನಿಷೇಧ ಬಳಿಕ ಕೆಲ ಹಿಂದು ದೇವಾಲಯಗಳಲ್ಲಿ ನಡೆಯುವ ಸಲಾಂ ಆರತಿ ನಿಲ್ಲಿಸುವಂತೆ ಒತ್ತಾಯಗಳು ಕೇಳಿಬಂದಿದೆ.

ವರದಿ: ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಡ್ಯ.

ಮಂಡ್ಯ (ಮಾ.30): ಹಿಜಾಬ್ (Hijab) ವಿಚಾರದಲ್ಲಿ ಶುರುವಾದ ಧರ್ಮ ಸಂಘರ್ಷ ಬೇರೆ ಬೇರೆ ಆಯಾಮಗಳನ್ನ ಪಡೆದುಕೊಳ್ಳುತ್ತಿದೆ. ಮುಸ್ಲಿಂ ವ್ಯಾಪಾರ, ಹಲಾಲ್ ಮಾಂಸ (Halal Meat) ನಿಷೇಧ ಬಳಿಕ ಕೆಲ ಹಿಂದು ದೇವಾಲಯಗಳಲ್ಲಿ (Hindu Temples) ನಡೆಯುವ ಸಲಾಂ ಆರತಿ (Salam Mangalarathi) ನಿಲ್ಲಿಸುವಂತೆ ಒತ್ತಾಯಗಳು ಕೇಳಿಬಂದಿದೆ. ಕೊಲ್ಲೂರು ದೇವಾಲಯದಂತೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲೂ ದೀವಟಿಗೆ ಸಲಾಂ ಆರತಿ ಪ್ರತಿನಿತ್ಯ ನಡೆಯುತ್ತಿದ್ದು, ತಕ್ಷಣವೇ ಸಲಾಂ ಆರತಿ ಹೆಸರು ಬದಲಾಯಿಸಿ ಅಥವಾ ನಿಲ್ಲಸಿ ಎಂದು ಹಿಂದೂ ಮುಖಂಡರು ಆಗ್ರಹಿಸುತ್ತಿದ್ದಾರೆ.

ಟಿಪ್ಪು ನೆರವಿನ ನೆನಪಿನಾರ್ಥ ದೀವಟಿಗೆ ಸಲಾಂ: ಮಂಡ್ಯ ಜಿಲ್ಲೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ದೀವಟಿಗೆ ಸಲಾಂ ನಡೆಯುತ್ತದೆ. ಪ್ರತಿನಿತ್ಯ ಸಂಜೆ 7 ಗಂಟೆಗೆ ದೀವಟಿಗೆ ಸಲಾಂ ಆರತಿ ಮಾಡಲಾಗುತ್ತದೆ. ಗರ್ಭಗುಡಿಯ ಪೂಜೆ ಬಳಿಕ ಆಚೆಗೆ ಪಂಜು ಹಿಡಿದು ಬರುವ ವ್ಯಕ್ತಿ ನಡುವನ್ನ ಅರ್ಧ ಬಗ್ಗಿಸಿ ದೇವರಿಗೆ ಆರತಿ ಮಾಡುತ್ತಾರೆ. ಈ ಆರತಿಯನ್ನ ದೀವಟಿಗೆ ಸಲಾಂ ಎಂದು ಕರೆಯುತ್ತಾರೆ. ಇದು ಟಿಪ್ಪು ಸುಲ್ತಾನ್ ಆಡಳಿತ ಅವಧಿಯಲ್ಲಿ ಆರಂಭವಾದ ಪದ್ದತಿ. ಟಿಪ್ಪು ಸುಲ್ತಾನ್ ಆಡಳಿತದ ವೇಳೆ  ಆಸ್ಥಾನದ ಆನರಗಳನ್ನ ಮೇಲುಕೋಟೆಯಲ್ಲಿ ಸಾಕಲಾಗುತ್ತಿತ್ತು.

ಒಮ್ಮೆ ಆ ಆನೆಗಳು ನಿಗೂಢವಾಗಿ ಸಾವಿಗೀಡಾಗುತ್ತಿದ್ದವು. ಈ ವೇಳೆ ಚೆಲುವನಾರಾಯಣ ದೇವಾಲಯಕ್ಕೆ ದಾನ ನೀಡಿದ್ರೆ ಆನೆಗಳ ಸಾವು ನಿಲ್ಲಬಹುದು ಎಂದು ಗುರುಗಳೊಬ್ಬರು ಟಿಪ್ಪು ಸುಲ್ತಾನನಿಗೆ ಸಲಹೆ ನೀಡಿದ್ದರಂತೆ. ಅವರ ಸಲಹೆಯಂತೆ  ದೇವಾಲಯಕ್ಕೆ ಗಂಟೆ, ಕಳಶ, ಆಭರಣಗಳು, ಪಾತ್ರೆಗಳ ರೂಪದಲ್ಲಿ ನೆರವು ನೀಡಿದ್ದ ಟಿಪ್ಪು ತನ್ನ ನೆರವಿನ ನೆನಪಿನಾರ್ಥ ಸಲಾಂ ಆರತಿ ಆರಂಭಿಸಿದ್ದ ಎನ್ನುತ್ತಾರೆ ಸ್ಥಳೀಯರು. ಆದರೆ ಇದಕ್ಕೂ ಮುನ್ನ ಪಾರಂಪರಿಕವಾಗಿ ಸಂಧ್ಯಾರತಿ ನಡೆಯುತ್ತಿತ್ತು ಅದನ್ನ ಟಿಪ್ಪು ದೀವಟಿಗೆ ಸಲಾಂ ಆಗಿ ಬದಲಾಯಿಸಿದ್ದರು ಅಂತಲೂ ಹೇಳಲಾಗುತ್ತದೆ. 

Udupi: ಕೊಲ್ಲೂರಿನಲ್ಲಿ ಸಲಾಂ ಮಂಗಳಾರತಿ ಪೂಜೆಯೇ ಚಾಲ್ತಿಯಲ್ಲಿಲ್ಲ..!

ದೀವಟಿಗೆ ಸಲಾಂ ಹೆಸರು ಬದಲಿಸುವಂತೆ ಡಿಸಿಗೆ ಮನವಿ: ಕೊಲ್ಲೂರು ಬಳಿಕ ಮಂಡ್ಯದಲ್ಲೂ ಕೂಡ ಸಲಾಂ ಆರತಿ ವಿರುದ್ಧ ಕೂಗೂ ಕೇಳಿಬಂದಿದೆ. ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ಪ್ರತಿನಿತ್ಯ ನಡೆಯುವ ದೀವಟಿಗೆ ಸಲಾಂ ಹೆಸರು ಬದಲಿಸುವಂತೆ ಹಿಂದೂ ಮುಖಂಡರು ಒತ್ತಾಯಿಸಿದ್ದಾರೆ. ಇಂದು ಮಂಡ್ಯ ಅಪರ ಜಿಲ್ಲಾಧಿಕಾರಿ ಭೇಟಿ ಮಾಡಿ ಮನವಿ ಸಲ್ಲಿಸಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ನವೀನ್. ತಕ್ಷಣವೇ ದೀವಟಿಗೆ ಸಲಾಂ ಹೆಸರು ಬದಲಾಯಿಸುವಂತೆ ಆಗ್ರಹಿಸಿದ್ದಾರೆ. ಹಿಂದೂ ಸಂಸ್ಕೃತಿಯಲ್ಲಿ ಸಲಾಂ ಹೆಸರಿನ ಪೂಜೆ ಅವಕಾಶ ಇಲ್ಲ. ಸಲಾಂ ಎನ್ನುವುದು ಗುಲಾಮಗಿಯ ಸಂಕೇತ. ಅನ್ಯಧರ್ಮದ ದೇವರು ಅಥವಾ ರಾಜನ ಹೆಸರಿನಲ್ಲಿ ಹಿಂದು ಧರ್ಮದ ದೇವರಿಗೆ ಪೂಜೆ ಸಲ್ಲದು ಹಾಗಾಗಿ ಈ ಕೂಡಲೇ ಸಲಾಂ ಪೂಜೆ ಹೆಸರು ಬದಲಿಸಿ ಅಥವಾ ನಿಲ್ಲಸಿ ಎಂದು ಡಿಸಿ ಮೂಲಕ ಸರ್ಕಾರವನ್ನ ಒತ್ತಾಯಿಸಿದರು.

ಹೈದರ್ ರಾಜ ಆಗಿರಲಿಲ್ಲ, ಟಿಪ್ಪು ಸರ್ವಾಧಿಕಾರಿ ಆಗಿದ್ದ: ದೀವಟಿಗೆ ಸಲಾಂ ನಡಿತಿರೋದು ಸತ್ಯ. ಹಿಂದಿನಿಂದಲೂ ಈ ಪೂಜೆ ನಡೆಯುತ್ತಿದೆ. ನಾನು ಚಿಕ್ಕವನಿದ್ದಾಗಿಂದ ಈ ಪದ ಬಳಕೆ ಇದೆ. ಸಲಾಂ ಎಂಬ ಪರ್ಶಿಯನ್ ಪದ ಯಾಕೆ ಬಂತು ಗೊತ್ತಿಲ್ಲ. ದೀವಟಿಕೆ ಹಿಡಿದು ಸಂಜೆ ಸಂಧ್ಯಾರತಿ ಮಾಡುವುದು, ದೀವಟಿಗೆ ಆರತಿ ನಡೆಯುತ್ತೆ. ಆಗ ದೇವಸ್ಥನಕ್ಕೆ ಯಾರಿಗೂ ಒಳಗೆ ಪ್ರವೇಶ ಇಲ್ಲ. ಸಲಾಂ ಪೂಜೆ ವೇಳೆ ದೇವಾಲಯದ ಹೊರಗೆ ಸಿಬ್ಬಂದಿ ದೀವಟಿಗೆ ಹಿಡಿದು ಮೂರು ಬಾರಿ ಬಗ್ಗಿ ಎದ್ದೇಳುತ್ತಾರೆ. ಇದೇ ದೀವಟಿಗೆ ಸಲಾಂ. ಇದಾದ ನಂತರ ಮುಮ್ಮಡಿ ಕೃಷ್ಣರಾಜ ಒಡೆಯರ್ ನಂತರ ಅಧಿಕಾರಿಗಳಿಗೆ ಸಲಾಂ ಆಗುತ್ತೆ. ದೀವಟಿಗೆ ಸಲಾಂ ಯಾವಾಗ ಆರಂಭ ಆಯ್ತು ಲಿಖಿತ ಆಧಾರ ಇಲ್ಲ ಎಂದು ಇತಿಹಾಸ ತಜ್ಞ ಡಾ.ಶೆಲ್ವ ಪಿಳೈ ಅಯ್ಯಂಗಾರ್ ಹೇಳಿದ್ದಾರೆ.

ಆದರೆ ದೇವಾಲಯ ಕೈಪಿಡಿಯಲ್ಲಿ ದೀವಟಿಗೆ ಸಲಾಂ ಉಲ್ಲೇಖ ಇದೆ. ದೇವರು ಕಲ್ಯಾಣಿಗೆ ಹೋಗುವಾಗ ಕೂಡ ದೀವಟಿಗೆ ಸಲಾಂ ಪದ್ದತಿ ಇದೆ. ಜನರು ಹೇಳುವ ಪ್ರಕಾರ ಹೈದರ್, ಟಿಪ್ಪು ಕಾಲದಲ್ಲಿ ಈ ಪದ್ದತಿ ಬಂದಿದೆ.  ಹೈದರ್ ರಾಜ ಆಗಿರಲಿಲ್ಲ, ಟಿಪ್ಪು ಸರ್ವಾಧಿಕಾರಿ ಆಗಿದ್ದ. ಆಗ ಪರ್ಶಿಯನ್ ಪದ ಬಳಕೆ ಹೆಚ್ಚು ಆಗಿದೆ‌ ಅನಾದಿ ಕಾಲದಿಂದ ದೀವಟಿಗೆ ಪೂಜೆ ಇದೆ. ಹಿಂದೂ ಧರ್ಮದಲ್ಲಿ ಅಗ್ನಿಗೆ ವಿಶೇಷ ಸ್ಥಾನ ಇದೆ. ಅಲ್ಲಾಕೂ ಪೂರಾ ಸಲಾಂ. ಸುಲ್ತಾನ್‌ಕೋ ಆದಾ ಸಲಾಂ ಅಂತ ಇದೆ‌. ಅಂತಾರೆ. ಅದರ ಪ್ರಭಾವದಿಂದ ಇದು ಬಂದಿದೆ ಎನ್ನಬಹುದು. ಭಾರತ ದೇಶದಲ್ಲಿ ಸಲಾಂ ಪದ ಇರಲಿಲ್ಲ. ದೀವಟಿಗೆ ಪೂಜೆ ಅಂತ ಕರೆದರು ನಮ್ಮದು ಅಂತ ಗೊತ್ತಾಗುತ್ತೆ. 

ರಾಜ್ಯದಲ್ಲಿ ಹಲಾಲ್ ವಿರೋಧಿ ಅಭಿಯಾನ: ಸಿಎಂ ಬೊಮ್ಮಾಯಿ ಕೊಟ್ಟ ಉತ್ತರವೇನು?

ಸಲಾಂ ಪದ ಪರ್ಶಿಯನ್ ಭಾಷೆಯದ್ದು. ಅದು ಯಾವಾಗ ಬಂದಿದ್ದು ಎನ್ನುವಾಗ ಟಿಪ್ಪು ಕಾಲಕ್ಕೆ ಬಂದು ನಿಲ್ಲುತ್ತದೆ. ಸಲಾಂ ಎಂಬುದನ್ನಹ ಕೇವಲ ನಮಸ್ಕಾರ ಎಂಬ ಅರ್ಥದಲ್ಲಿ ಬಳಸಿದ್ರೆ ಒಳಿತು. ಆದಾ ಸಲಾಂ (ಅರ್ಧ ಸಲಾಂ) ಹಿಂದೂ ದೇವರುಗಳು ಸುಲ್ತಾನನಿಗಷ್ಟೇ ಸಮ, ಅಲ್ಲನಿಗೆ ಅಲ್ಲ ಅನ್ನೋದು ಅವರ ಅರ್ಥ. ದೇವಾಲಯಗಳಲ್ಲಿ ದೀವಟಿಗೆ ಸಲಾಂ ಪದ ಬದಲಾವಣೆ ಧಾರ್ಮಿಕ ದತ್ತಿ ಇಲಾಖೆ ಮಾಡಬೇಕು. ಇಲಾಖೆಯ ಆಗಮ ಪಂಡಿತರು ಈ ಸೂಕ್ಷ್ಮವನ್ನು ಬಗೆ ಹರಿಸಬೇಕು. ಇದನ್ನು ಜಿಲ್ಲಾಧಿಕಾರಿಗಳೂ ಕೂಡ ಬಗೆ ಹರಿಸಲು ಬರಲ್ಲ. ಆಯುಕ್ತರ ಮೂಲಕವೇ ಅವರು ಸಮಸ್ಯೆ ಬಗೆ ಹರಿಸಬೇಕು ಎಂದು ಡಾ.ಶೆಲ್ವ ಪಿಳೈ ಅಯ್ಯಂಗಾರ್ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮ*ಹತ್ಯೆ!
ಗಡೀಪಾರು ಸಂಕಷ್ಟದಲ್ಲಿ Mahesh Shetty Timarodi: ಎಸಿ ಕೋರ್ಟ್‌ಗೆ ಹಾಜರಾಗುವ ಮುನ್ನ ಮಹಾಲಿಂಗೇಶ್ವರ ದೇಗುಲದಲ್ಲಿ ಪ್ರಾರ್ಥನೆ