ಮಂಗಳೂರು ವಿವಿಯ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ಆಹ್ವಾನ ನೀಡಿದ್ದಕ್ಕೆ ಸಿಎಫ್ಐ ಪ್ರತಿಭಟನೆ ನಡೆಸಿದರೂ ಕಲ್ಕಡ್ಕ ಪ್ರಭಾಕರ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು (ಮಾ.30): ಮಂಗಳೂರು ವಿವಿಯ (Mangalore University) ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಆರ್‌ಎಸ್‌ಎಸ್ (RSS) ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ (Kalladka Prabhakar Bhat) ಆಹ್ವಾನ ನೀಡಿದ್ದಕ್ಕೆ ಸಿಎಫ್ಐ ಪ್ರತಿಭಟನೆ (CFI Protest) ನಡೆಸಿದರೂ ಕಲ್ಕಡ್ಕ ಪ್ರಭಾಕರ ಭಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅಲ್ಲದೇ ವಿವಿಯ ವಿದ್ಯಾರ್ಥಿ ನಾಯಕರು ಹಾಗೂ ಬಹುತೇಕ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರು ವಿವಿ ಕಾರ್ಯಕ್ರಮಕ್ಕೆ ಆರ್ ಎಸ್ ಎಸ್ ಮುಖಂಡ ಕಲ್ಕಡ್ಕ ಭಟ್ ಅತಿಥಿ ವಿಚಾರಕ್ಕೆ ಸಂಬಂಧಿಸಿ ಸಿಎಫ್ಐ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿತ್ತು. ಈ ನಡುವೆ ಕಲ್ಕಡ್ಕ ಭಟ್ ಜೊತೆ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ವೇದಿಕೆಯಲ್ಲೂ ಕೇಸರಿ ಶಾಲು ಧರಿಸಿ ವಿದ್ಯಾರ್ಥಿ ಸಂಘದ ನಾಯಕರು ಭಾಗಿಯಾಗಿದ್ದು, ಕೇಸರಿ ಶಾಲು ಧರಿಸಿಯೇ ಪ್ರಭಾಕರ ಭಟ್ ಜೊತೆ ವಿದ್ಯಾರ್ಥಿ ನಾಯಕರು ವೇದಿಕೆಯಲ್ಲಿದ್ದರು. ವಿದ್ಯಾರ್ಥಿ ಪರಿಷತ್ ಕಾರ್ಯಕ್ರಮದಲ್ಲಿ ಬಹುತೇಕ ವಿದ್ಯಾರ್ಥಿಗಳು ಕೇಸರಿ ಶಾಲಿನ ಜೊತೆ ಭಾಗಿಯಾಗಿದ್ದರು. ಮಂಗಳೂರು ವಿವಿ ಆವರಣದ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ ಸೇರಿ ವಿವಿ ಉಪನ್ಯಾಸಕರು ಭಾಗಿಯಾಗಿದ್ದರು. ಒಟ್ಟಾರೆ ಮಂಗಳೂರು ವಿವಿ ಕಾರ್ಯಕ್ರಮ ಸಂಪೂರ್ಣ ಕೇಸರಿ ಮಯವಾಗಿತ್ತು. ವಿದ್ಯಾರ್ಥಿ ಪರಿಷತ್ ನಾಯಕರಾಗಿ ಎಬಿವಿಪಿ ವಿದ್ಯಾರ್ಥಿಗಳ ಗೆಲುವು ಸಾಧಿಸಿದ್ದಾರೆ.
ಮಂಗಳೂರು ವಿವಿಗೆ ಕಲ್ಕಡ್ಕ ಭಟ್ ಅತಿಥಿ: ಸಿಎಫ್‌ಐ ವಿರೋಧ..!
ನನಗೆ ಯಾವುದೇ ಕ್ರಿಮಿನಲ್ ಬ್ಯಾಗ್ ಗ್ರೌಂಡ್ ಇಲ್ಲ: ಇನ್ನು ಸಿಎಫ್‌ಐ ಪ್ರತಿಭಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಕಲ್ಕಡ್ಕ ಭಟ್, ನನ್ನ ವಿರುದ್ದ ಪ್ರತಿಭಟನೆ ಮಾಡಿದ ಸಿಎಫ್‌ಐ ಕಾರ್ಯಕರ್ತರಿಗೆ ಧನ್ಯವಾದ. ಯಾರು ಬೇಕಾದರೂ ಪ್ರತಿಭಟನೆ ಮಾಡಬಹುದು. ಆದರೆ ಈ ದೇಶದಲ್ಲಿ ಬದುಕಿದ್ರೆ, ಬದುಕಬೇಕಂತ ಇದ್ರೆ, ಸಾಮರಸ್ಯ ಬೇಕಾದ್ರೆ,ದೇಶಕ್ಕೋಸ್ಕರ ಬದುಕಿ, ಇಲ್ಲಾಂದ್ರೆ ಎಲ್ಲಿ ಬೇಕಾದರೂ ಹೋಗಿ ಸಮಸ್ಯೆ ಇಲ್ಲ. ನನ್ನ ಭಾಷಣದಲ್ಲಿ ನಾನು ಕೋಮು ದ್ವೇಷ ಹರಡಿಸಿಲ್ಲ. ಹಿಂದೂ ಅನ್ನೋದು ಕೋಮುವಾ? ಅದು ಈ ದೇಶದ ಹೆಸರು.
ಭಾರತದ ಭಾರತೀಯರು ಹಿಂದೂಗಳು, ಕೋಮು ಎನ್ನುವ ಪ್ರಶ್ನೆ ಇಲ್ಲ. ಇಲ್ಲಿ ಹಿಂದೂಗಳ ಜೊತೆಗೆ ಎಲ್ಲರೂ ಬದುಕುವ ಪ್ರಯತ್ನ ಮಾಡಿ. ಜಗತ್ತಿನಲ್ಲಿ ದೊಡ್ಡ ಸೆಕ್ಯೂಲರ್‌ಗಳು ಹಿಂದೂಗಳೇ. ನಾವು ಸತ್ಯ ಮಾತನಾಡ್ತೇವೆ, ಅದನ್ನ ತಪ್ಪು ಅನ್ನೋದಲ್ಲ . ಕೇಸು ಯಾರ ಮೇಲೆ ಯಾರು ಬೇಕಾದ್ರೂ ಹಾಕಬಹುದು. ಇದರಲ್ಲಿ ಕೇಸು ಬಿದ್ರೆ ಆರೋಪಿ ಮಾತ್ರ, ಅಪರಾಧಿ ಅಲ್ಲ. ನನ್ನ ಮೇಲೆ ನೂರಕ್ಕೂ ಮಿಕ್ಕಿ ಕೇಸ್ ಇದೆ. ಮೋದಿ, ಅಮಿತ್ ಶಾ ಎಲ್ಲರ ಮೇಲೂ ಕೇಸ್ ಇದೆ, ಅವರು ಅಪರಾಧಿನಾ? ನನಗೆ ಯಾವುದೇ ಕ್ರಿಮಿನಲ್ ಬ್ಯಾಗ್ ಗ್ರೌಂಡ್ ಇಲ್ಲ ಎಂದರು.
ಕಲ್ಕಡ್ಕ ವಿರುದ್ದ ಸಿಎಫ್ಐ ಪ್ರೊಟೆಸ್ಟ್: ಇನ್ನು ಕಾರ್ಯಕ್ರಮದ ಆರಂಭಕ್ಕೂ ಮುನ್ನ ಪ್ರಭಾಕರ ಭಟ್ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರು ವಿವಿ ಆವರಣಕ್ಕೆ ಸಿಎಫ್ ಐ ಕಾರ್ಯಕರ್ತರು ನುಗ್ಗಲು ಯತ್ನಿಸಿದರು. ವಿವಿಯ ಮುಖ್ಯ ಗೇಟ್ ಮುಂಭಾಗದಿಂದ ವಿವಿ ಆವರಣಕ್ಕೆ ನುಗ್ಗಲು ಯತ್ನಿದರು. ಆದರೆ ವಿವಿ ಗೇಟ್ ಬಳಿಯೇ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರನ್ನ ಪೊಲೀಸರು ತಡೆದರು. ಪೊಲೀಸರು ಮತ್ತು ಸಿಎಫ್ ಐ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಒಂದು ದಿನ ಕೇಸರಿ ಧ್ವಜವೇ ನಮ್ಮ ರಾಷ್ಟಧ್ವಜ ಆಗಬಹುದು: ಕಲ್ಲಡ್ಕ ಪ್ರಭಾಕರ ಭಟ್
ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಪರಸ್ಪರ ತಳ್ಳಾಟ, ನೂಕಾಟ ನಡೆದವು. ಕೊನೆಗೆ ಪೊಲೀಸರ ಮನವೊಲಿಕೆ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ ವಾಪಾಸ್ ತೆರಳಿದರು. ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಪ್ರಭಾಕರ ಭಟ್ ಅತಿಥಿಯಾಗಿ ಆಗಮಿಸಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರ ನೆಲೆಯಲ್ಲಿ ಕಲ್ಕಡ್ಕ ಭಟ್ ಗೆ ಆಹ್ವಾನ ನೀಡಲಾಗಿತ್ತು.