* ವಿಜಯಪುರದಲ್ಲಿ ಸೌಹಾರ್ದತೆ ಮೆರೆದ ಹಿಂದೂ-ಮುಸ್ಲಿಮರು
* ಮುಳಸಾವಳಗಿಯಲ್ಲಿ ಮುಸ್ಲಿಂರಿಗೆ ಹಿಂದೂಗಳಿಂದ ಉಪಹಾರ ಸೇವೆ
* ನಾಲ್ವತವಾಡದಲ್ಲೂ ಹಾರಿದ ಭಾವೈಕ್ಯತೆಯ ಬಾವುಟ
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ
ವಿಜಯಪುರ(ಮೇ.04): ಹಿಜಾಬ್, ಆಜಾನ್ ಮೈಕ್, ವ್ಯಾಪಾರಕ್ಕೆ ನಿರ್ಬಂಧ ಸೇರಿದಂತೆ ಅನೇಕ ವಿವಾದಗಳು ರಾಜ್ಯದಲ್ಲಿ ಹಿಂದೂ-ಮುಸ್ಲಿಂ(Hindu-Muslim) ಕೋಮು ಸಾಮರಸ್ಯಕ್ಕೆ ಧಕ್ಕೆ ತಂದಿದ್ದವು. ಹುಬ್ಬಳ್ಳಿ ಗಲಭೆ(Hubballi Riots) ಬಳಿಕ ಮುಂದೆ ರಂಜಾನ್-ಬಸವ ಜಯಂತಿಗೆ(Ramadan-Basava Jayanti) ಹೇಗೆ ನಡೆಯುತ್ವೆ ಎನ್ನುವ ಅನುಮಾನ ಮೂಡುವಂತೆ ಮಾಡಿತ್ತು. ಆದ್ರೆ ವಿಜಯಪುರ ಜಿಲ್ಲೆಯಲ್ಲಿ ಒಟ್ಟೊಟ್ಟಿಗೆ ಬಂದ ಬಸವ ಜಯಂತಿ ಹಾಗೂ ರಂಜಾನ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗಿವೆ.
undefined
ಭಾವೈಕ್ಯತೆಗೆ ಸಾಕ್ಷಿಯಾದ ಬಸವ ಜಯಂತಿ-ರಂಜಾನ್
ವಿಜಯಪುರ(Vijayapura) ಜಿಲ್ಲೆಯ ಹಲವೆಡೆ ರಂಜಾನ್ ಹಬ್ಬ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ಹಿಂದೂ-ಮುಸ್ಲಿಂರು ಸಾಮರಸ್ಯದಿಂದ ಬಸವ ಜಯಂತಿ ಹಾಗೂ ರಂಜಾನ್ ಹಬ್ಬವನ್ನ ಆಚರಿಸಿದ್ದಾರೆ. ವಿಜಯಪುರ ಜಿಲ್ಲೆಯ ತಾಲೂಕಾ ಕೇಂದ್ರಗಳಲ್ಲಿ ಮುಸ್ಲಿಂರು(Muslims) ನಮಾಜ್ ಬಳಿಕ ಬಸವ ಜಯಂತಿ ನಡೆದ ಸ್ಥಳಕ್ಕೆ ಬಂದು ಬಸವೇಶ್ವರರ(BAsaveshwara) ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರೆ. ಇನ್ನೊಂದೆಡೆ ರಂಜಾನ್ ನಮಾಜ್ ಮುಗಿಸಿಕೊಂಡು ಬಂದ ಮುಸ್ಲಿಂರಿಗೆ ಹಿಂದೂಗಳು ಉಪಹಾರ, ಮಜ್ಜಿಗೆ-ನೀರು ನೀಡುವ ಮೂಲಕ ಭಾವೈಕ್ಯತೆ ಸಾಕ್ಷಿಯಾಗಿದ್ದಾರೆ.
ಮುಳಸಾವಳಗಿಯಲ್ಲಿ ಮುಸ್ಲಿಂರಿಗೆ ಹಿಂದೂಗಳಿಂದ ಉಪಹಾರ ಸೇವೆ
ದೇವರಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ರಂಜಾನ್ ಹಬ್ಬದ ಪ್ರಯುಕ್ತವಾಗಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಕಮೀಟಿಯ ವತಿಯಿಂದ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರಿಗೆ ಉಪಹಾರ, ನೀರು, ಮಜ್ಜಿಗೆ, ಬಾಳೆಹಣ್ಣಿನ ವ್ಯವಸ್ಥೆಯನ್ನು ಮಾಡುವ ಮೂಲಕ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ. ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮುಗಿಸಿ ಪರಸ್ಪರ ಹಬ್ಬ ವಿನಿಮಯ ಮಾಡಿಕೊಳ್ಳುವ ಮೂಲಕ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಸಂಭ್ರಮಿಸಿದರು.
ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿ ಪ್ರಜ್ಞೆ ಮುಳಸಾವಳಗಿ..!
ಕೆಲದಿನಗಳ ಹಿಂದೆ ಇದೆ ಮುಳಸಾವಳಗಿ ಗ್ರಾಮದಲ್ಲಿ ನಡೆದ ಮಲ್ಲಿಕಾರ್ಜುನ ಜಾತ್ರೆಯಲ್ಲಿ ಮುಸ್ಲಿಂ ಸಮುದಾಯದವರು ಭಾಗವಹಿಸಿ ಅದ್ದೂರಿ ಜಾತ್ರಾ(Fair) ಮಹೋತ್ಸವಕ್ಕೆ ಸಾಕ್ಷಿಯಾಗಿದ್ದರು. ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವರ ಮೆರವಣಿಗೆ ನಡೆದರೆ ಮೆರವಣಿಗೆಯಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಂಡು ಕುಣಿದು ಕುಪ್ಪಳಿಸಿದ್ದರು. ಮಲ್ಲಿಕಾರ್ಜುನ(Mallikarjun Swamy) ಮಹಾರಾಜ್ ಕೀ ಜೈ ಎಂದು ಘೋಷಣೆಗಳನ್ನ ಹಾಕಿ ಎಲ್ಲೆ ಏನೇ ನಡೆಯಲಿ ಆದ್ರೆ ಮುಳಸಾವಳಗಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಏಕ್ ಹೇ ಎನ್ನೋದನ್ನ ಸಾಬೀತು ಮಾಡಿದರು.. ಈಗ ಮುಸ್ಲಿಂ ಸಮುದಾಯದವರು ನಮಾಜ್ ಮುಗಿಸಿ ಬಂದ ಬಳಿಕ ಉಪಹಾರ ವ್ಯವಸ್ಥೆ ಮಾಡುವ ಮೂಲಕ ಸೌಹಾರ್ದತೆಗೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ..
ಹಿಂದೂಗಳಿಗೆ ಆಯೇರಿ ಮಾಡಿ ಕೇಸರಿ ನಾಮ ಹಚ್ಚಿದ ಮುಸ್ಲಿಂರು..!
ಇತ್ತ ರಂಜಾನ್ ನಮಾಜ್ ಬಳಿಕ ಮುಸ್ಲಿಂ ಸಮುದಾಯದವರಿಗೆ ಉಪಹಾರ, ಹಣ್ಣುಹಂಪಲು, ನೀರಿನ ವ್ಯವಸ್ಥೆ ಮಾಡಿದ ಹಿಂದೂ ಬಾಂಧವರಿಗು ಮುಸ್ಲಿಂ ಮುಖಂಡರು ವಿಶಿಷ್ಟವಾದ ಗಿಫ್ಟ ನೀಡಿದ್ದಾರೆ. ಉತ್ತರ ಕರ್ನಾಟಕದ ಸಂಪ್ರದಾಯದಂತೆ ಹಿಂದೂ ಸಮಾಜದವರಿಗೆ ಟವೇಲ್ ಟೊಪ್ಪಿಗೆ ಆಯೇರಿ ಮಾಡಿ, ಕೇಸರಿ ನಾಮ ಹಚ್ಚಿ ಅಭಿನಂದಿಸಿದ್ದಾರೆ. ಇದು ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನ ಸಾಕ್ಷಿಕರಿಸಿದೆ..
ನಾಲ್ವತವಾಡದಲ್ಲೂ ಹಾರಿದ ಭಾವೈಕ್ಯತೆಯ ಬಾವುಟ
ಮುದ್ದೇಬಿಹಾಳ ತಾಲೂಕಿನ ನಾಲ್ವತವಾಡ ಪಟ್ಟಣದಲ್ಲೂ ಹಿಂದೂ-ಮುಸ್ಲಿಂ ಭಾವೈಕ್ಯತೆ ಕಂಡು ಬಂತು. ಬಸವ ಜಯಂತಿ ಹಿನ್ನೆಲೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಫೋಟೋಗೆ ಪೂಜೆ ಸಲ್ಲಿಸಲಾಗಿತ್ತು.ರಂಜಾನ್ ಪ್ರಾರ್ಥನೆ ಬಳಿಕ ಮುಸ್ಲಿಂ ಸಮುದಾಯದವರು ಬಸವೇಶ್ವರ ಸರ್ಕಲ್‌ನಲ್ಲಿ ಪೂಜೆ ಸಲ್ಲಿಸಲಾದ ಬಸವೇಶ್ವರರ ಫೋಟೋಗೆ ಗೌರವ ಸೂಚಿಸಿದರು. ಪುಷ್ಪಗಳನ್ನ ಹಾಕುವ ಮೂಲಕ ಹಿಂದೂಗಳಿಗೆ ಬಸವ ಜಯಂತಿಯ ಶುಭಾಶಯ ತಿಳಿಸಿದ್ದು ವಿಶೇಷವಾಗಿತ್ತು.