
ಬೆಂಗಳೂರು(ಮೇ.04): ಉದ್ಯಾನ ನಗರಿಯಲ್ಲಿ(Garden City) ಮಂಗಳವಾರ ಸಂಜೆ ಆರರಿಂದ ಗುಡುಗು ಸಹಿತ ಸುರಿದ ಮಳೆಯಿಂದ(Rain) ಕನ್ನಿಂಗ್‌ಹ್ಯಾಮ್ ರಸ್ತೆ, ಕೋರಮಂಗಲ 5ನೇ ಬ್ಲಾಕ್ 17ನೇ ಮುಖ್ಯರಸ್ತೆಯಲ್ಲಿ ಮರ ಬಿದ್ದಿದೆ. ಇನ್ನು ಹಲವೆಡೆ ಮರದ ಟೊಂಗೆಗಳು ಮುರಿದಿರುವುದು ವರದಿಯಾಗಿದೆ.
ಸಂಜೆ 6ರ ಸುಮಾರಿಗೆ ಮಳೆ ಪ್ರಾರಂಭಗೊಂಡರೂ ರಾತ್ರಿ ಹತ್ತು ಗಂಟೆಯವರೆಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿತ್ತು. ಹಬ್ಬಗಳ ಪ್ರಯುಕ್ತ ಸರ್ಕಾರಿ ರಜೆ(Government Holiday) ಇದ್ದ ಕಾರಣ ಸಂಜೆ ಜನರಿಗೆ ಹೆಚ್ಚು ತೊಂದರೆ ಆಗಲಿಲ್ಲ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಬೆಂಗಳೂರಿನ(Bengaluru) ಭೇಟಿ ಇದ್ದ ಹಿನ್ನೆಲೆಯಲ್ಲಿ ಕೆಲವು ರಸ್ತೆಗಳನ್ನು ಬಂದ್ ಮಾಡಿದ್ದರಿಂದ ಟ್ರಾಫಿಕ್‌ನಲ್ಲಿ ಸಿಲುಕಿದ ದ್ವಿಚಕ್ರ ವಾಹನ ಸವಾರರು ಪರದಾಡುವಂತೆ ಆಯಿತು.
ಬೆಂಗಳೂರಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ, 25 ಕ್ಕೂ ಹೆಚ್ಚು ಮರ ಧರೆಗೆ
ಹೆಬ್ಬಾಳ, ಯಶವಂತಪುರ, ಗೊರಗುಂಟೆಪಾಳ್ಯ, ರಾಜಾಜಿ ನಗರ, ಮೆಜೆಸ್ಟಿಕ್, ಶಿವಾಜಿ ನಗರ, ಮಲ್ಲೇಶ್ವರ, ಕೋರಮಂಗಲ, ಲಕ್ಕಸಂದ್ರ, ಸಾರಕ್ಕಿ, ಹಗದೂರು, ವರ್ತೂರು, ಅಂಜನಾಪುರ, ಚಾಮರಾಜಪೇಟೆ, ದಯಾನಂದ ನಗರ, ಶಾಂತಿ ನಗರ, ದೊಡ್ಡಬೊಮ್ಮಸಂದ್ರ, ಶೇಷಾದ್ರಿಪುರ, ಕಾಟನ್‌ಪೇಟೆ, ಶ್ರೀರಾಮಪುರ, ನಾಗಪುರ, ಪುಲಕೇಶಿ ನಗರ, ಚೌಡೇಶ್ವರಿ ವಾರ್ಡ್, ನಾಗರಬಾವಿ, ಹಂಪಿ ನಗರದಲ್ಲಿ ಸಾಧಾರಣ ಮಳೆಯಾಗಿದೆ. ಕೆಂಗೇರಿಯಲ್ಲಿ 1.3 ಸೆಂ.ಮೀ, ಸಂಪಂಗಿರಾಮನಗರ, ಜ್ಞಾನಭಾರತಿ 1.2 ಸೆಂ.ಮೀ, ರಾಜಮಹಲ್ ಗುಟ್ಟಹಳ್ಳಿ, ವಿದ್ಯಾರಣ್ಯಪುರ, ಯಲಹಂಕ 1.1 ಸೆಂ.ಮೀ, ನಾಗಪುರ 1 ಸೆಂ.ಮೀ ಮಳೆಯಾಗಿದೆ.
ಮನೆಗೆ ನುಗ್ಗುತ್ತಿರುವ ಕೊಳಚೆ ನೀರು: ಸ್ಥಳೀಯರ ಆಕ್ರೋಶ
ರಾಜಕಾಲುವೆ ಒತ್ತುವರಿಯಿಂದ ಪ್ರತಿ ಬಾರಿ ಮಳೆ ಸುರಿದಾಗಲೂ ರಾಜಕಾಲುವೆಯ ಕೊಳಚೆ ನೀರು(Waste Water) ಬಡಾವಣೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಈ ಬಗ್ಗೆ ಸ್ಥಳೀಯ ಶಾಸಕರು, ಅಧಿಕಾರಿಗಳಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ಉತ್ತರಹಳ್ಳಿಯ ವಿವಿಧ ಬಡಾವಣೆಗಳ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಬೇಸಿಗೆ ಮಳೆ ಆರ್ಭಟ: 9 ಮನೆ ಕುಸಿತ, ಕೊಪ್ಪಳ, ವಿಜಯನಗರದಲ್ಲಿ ಬೆಳೆ ನಾಶ
ಪಾಲಿಕೆ(BBMP) ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ ಭಾನುವಾರ ಸಂಜೆ ಸುರಿದ ಮಳೆಯಿಂದಾಗಿ 250ಕ್ಕೂ ಹೆಚ್ಚು ಮನೆಗಳಿಗೆ ರಾಜಕಾಲುವೆಯ ಕೊಳಚೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯುಂಟಾಗಿದ್ದ ಪ್ರದೇಶಗಳಿಗೆ ಸಂಸದ ಡಿ.ಕೆ.ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪ ಬಡಾವಣೆ, ಮುನಿಸ್ವಾಮಿ ಗೌಡ ಬಡಾವಣೆ, ಲಕ್ಷ್ಮಯ್ಯ ಬಡಾವಣೆ, ಗುಂಡು ಮುನೇಶ್ವರ ರಸ್ತೆಯ ಸಂತ್ರಸ್ತ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್, ಉತ್ತರಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಆರ್.ಶ್ರೀನಿವಾಸ್, ಉತ್ತರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಮಾರ್, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಈಶ್ವರ್, ವಾರ್ಡ್ ಕಾಂಗ್ರೆಸ್ ಅಧ್ಯಕ್ಷ ಗುಂಡುಮಣಿ ಶ್ರೀನಿವಾಸ್, ಕಾಂಗ್ರೆಸ್‌ನ ಉಮಾದೇವಿ, ಪಾಲಿಕೆ ಮಾಜಿ ಸದಸ್ಯೆ ಶೋಭಾಗೌಡ, ರಂಜಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.