ಗಾಂಧೀಜಿಗೆ ಇರುವ ‘ರಾಷ್ಟ್ರಪಿತ’ ಬಿರುದು ಹಿಂಪಡೆಯಲು ಒತ್ತಾಯ

By Kannadaprabha NewsFirst Published Nov 20, 2020, 10:58 AM IST
Highlights

ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಮಹಾತ್ಮ ಗಾಂಧೀಜಿ ರಾಷ್ಟ್ರಪಿತನಲ್ಲ. ಈ ಬಗ್ಗೆ ಸಂವಿಧಾನದಲ್ಲೂ ಯಾವುದೇ ಉಲ್ಲೇಖವಿಲ್ಲ. ಆತ ರಾಷ್ಟ್ರಪಿತನಾಗಿದ್ದರೆ ದಾಖಲೆ ನೀಡಲಿ ಎಂದು ಅಖಿಲ ಭಾರತ ಹಿಂದು ಮಹಾಸಭಾ  ಮುಖಂಡರೋರ್ವರು ಹೇಳಿದ್ದಾರೆ.

ದಾವಣಗೆರೆ (ನ.20): ಗಾಂಧೀಜಿಗೆ ರಾಷ್ಟ್ರಪಿತ ಎಂಬ ಬಿರುದನ್ನು ಯಾವುದೇ ಸರ್ಕಾರ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಗೌರವವನ್ನು ತೆಗೆದು ಹಾಕಿ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ, ತ್ಯಾಗ, ಬಲಿದಾನ ಮಾಡಿದ ಎಲ್ಲಾ ಹೋರಾಟಗಾರರಿಗೂ ರಾಷ್ಟ್ರಪಿತ ಗೌರವ ನೀಡಬೇಕು ಎಂದು ಅಖಿಲ ಭಾರತ ಹಿಂದು ಮಹಾಸಭಾ ಸಂಸದೀಯ ಕಾರ್ಯದರ್ಶಿ ಧರ್ಮೇಂದರ್‌ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಮಹಾತ್ಮ ಗಾಂಧೀಜಿ ರಾಷ್ಟ್ರಪಿತನಲ್ಲ. ಈ ಬಗ್ಗೆ ಸಂವಿಧಾನದಲ್ಲೂ ಯಾವುದೇ ಉಲ್ಲೇಖವಿಲ್ಲ. ಆತ ರಾಷ್ಟ್ರಪಿತನಾಗಿದ್ದರೆ ದಾಖಲೆ ನೀಡಲಿ. ಗಾಂಧೀಜಿ ರಾಷ್ಟ್ರಪಿತ ಹೌದೋ, ಅಲ್ಲವೋ ಎಂಬ ಬಗ್ಗೆ ನಾವು ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದಿದ್ದೇವೆ. ಅದರಲ್ಲಿ ರಾಷ್ಟ್ರಪಿತನ ಬಗ್ಗೆ ಯಾವುದೇ ಉಲ್ಲೇಖವೂ ಇಲ್ಲ ಎಂದರು.

ಕೇಂದ್ರ-ರಾಜ್ಯ ಸರ್ಕಾರಗಳೂ ಪಠ್ಯದಲ್ಲಿ ವಿದ್ಯಾರ್ಥಿಗಳು, ಭವಿಷ್ಯದ ಪೀಳಿಗೆಗೆ ರಾಷ್ಟ್ರಪಿತನೆಂದೇ ಗಾಂಧೀಜಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿವೆ. ಶೀಘ್ರವೇ ಸರ್ಕಾರ, ಪಠ್ಯ ಪುಸ್ತಕ ರಚನಾ ಸಮಿತಿ, ಶಿಕ್ಷಣ ಇಲಾಖೆಗಳ ವಿರುದ್ಧ ದೂರು ದಾಖಲಿಸುತ್ತೇವೆ. ಇಲ್ಲದಿದ್ದರೆ ರಾಷ್ಟ್ರಪಿತ ಎಂಬ ಶಬ್ಧವನ್ನೇ ಪಠ್ಯ ಪುಸ್ತಕಗಳಿಂದ ತೆಗೆಯಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ 1857ರಲ್ಲಿ ಮಂಗಲ ಪಾಂಡೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯಂತಹ ಅಪ್ರತಿಮ ಹೋರಾಟಗಾರರೂ ಬಲಿದಾನಗೈದಿದ್ದಾರೆ. ಆ ನಂತರವಷ್ಟೇ ಗಾಂಧೀಜಿ ಬಂದಿದ್ದು ಎಂದು ತಿಳಿಸಿದರು.

ಸೋನಂ ಕಪೂರ್‌ಗೆ ಗಾಂಧಿಜೀ ಬಗ್ಗೆ ಗೊತ್ತೇ ಇಲ್ವಂತೆ! ನೆಟ್ಟಿಗರಿಂದ ಕಾಲೆಳೆಸಿಕೊಂಡ್ರು

ಗಾಂಧಿಜೀಯನ್ನು ಯಾಕೆ ಅಷ್ಟೊಂದು ವೈಭವೀಕರಣ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರು, ಪ್ರಾಣಾರ್ಪಣೆ ಮಾಡಿದ ಎಲ್ಲರಿಗೂ ಗಾಂಧೀಜಿಯಷ್ಟೇ ಗೌರವ, ಮಹತ್ವ ಸಿಗಬೇಕು. ಗಾಂಧೀಜಿಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆಯೆಂಬುದು ಮೂರ್ಖತನ ಎಂದರು.

ರಾಜ್ಯ, ರಾಷ್ಟ್ರದ ಪ್ರಮುಖ ನಗರ, ಜಿಲ್ಲೆಗಳಲ್ಲಿ ನಾಥೂರಾಂ ಗೋಡ್ಸೆ ಪುತ್ಥಳಿ ಅನಾವರಣ ಮಾಡಬೇಕು. ಗೋಡ್ಸೆ ಚರಿತ್ರೆ ಪಠ್ಯವಾಗಬೇಕು. ಆತನನ್ನು ಖಳನಾಯಕನನ್ನಾಗಿ ಚಿತ್ರಿಸಲಾಗಿದೆ. ಅದನ್ನು ಬದಲು ಮಾಡಬೇಕು. ಗಾಂಧೀಜಿಯನ್ನು ಗೋಡ್ಸೆಹತ್ಯೆ ಮಾಡಿದ ಹಿಂದಿನ ಮರ್ಮವೇನೆಂಬ ಸತ್ಯ ಜನರ ಮುಂದಿಡಲಿ. ಗೋಡ್ಸೆ ಪುತ್ಥಳಿ ಸ್ಥಾಪಿಸದಿದ್ದರೆ ಬೀದಿಗಿಳಿದು ಹೋರಾಡುವುದಾಗಿ ಎಚ್ಚರಿಸಿದರು.

ಮಹಾಸಭಾ ರಾಜ್ಯ ಕಾರ್ಯಾಧ್ಯಕ್ಷ ರಾಜೇಶ್‌ ಪವಿತ್ರನ್‌, ಸಂಸದೀಯ ಕಾರ್ಯದರ್ಶಿ ಧರ್ಮೇಂದರ್‌, ಜಿಲ್ಲಾಧ್ಯಕ್ಷ ಜಿ.ಅರುಣಕುಮಾರ, ಕಾರ್ಯದರ್ಶಿ ಎಸ್‌.ಅರುಣಕುಮಾರ, ಮುಖಂಡರಾದ ಬಾಲರಾಜ, ನವೀನಕುಮಾರ, ಶ್ರೀನಿವಾಸ ಇತರರು ಇದ್ದರು.

click me!