ಉಡುಪಿ (ಸೆ.10): ಅಕ್ರಮ ಮತಾಂತರ ಕೇಂದ್ರಕ್ಕೆ ಜಾಗರಣ ವೇದಿಕೆ ಕಾರ್ಯಕರ್ತರು ನುಗ್ಗಿದ ಕಾರ್ಕಳದ ಕುಕ್ಕುಂದೂರು ಗ್ರಾಮದ ನಕ್ರೆ ಆನಂದಿ ಮೈದಾನದಲ್ಲಿ ನಡೆದಿದೆ.
ಮತಾಂತರ ಕೇಂದ್ರದ ಮೇಲೆ ಹಿಂದೂ ಕಾರ್ಯಕರ್ತರಿಂದ ದಾಳಿ ನಡೆದಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಮತಾಂತರ ಕೆಲಸದಲ್ಲಿ ನಿರತವಾಗಿದ್ದ ಪ್ರಗತಿ ಸೆಂಟರ್ ಮೇಲೆ ಹಿಂದೂ ಸಂಘಟನೆಯ ದಿಢೀರ್ ದಾಳಿಯಿಂದ ಪ್ರಾರ್ಥನಾ ನಿರತರು ಕಕ್ಕಾಬಿಕ್ಕಿಯಾಗಿದ್ದಾರೆ. ಮಕ್ಕಳು, ಮಹಿಳೆಯರನ್ನು ಕೂಡಿಹಾಕಿಕೊಂಡು ಪ್ರಾರ್ಥನೆ ಮಾಡುತ್ತಿದ್ದು, ಅಕ್ರಮವಾಗಿ ಇಲ್ಲಿ ಮತಾಂತರ ಮಾಡಲಾಗುತ್ತಿತ್ತೆಂದು ಆರೋಪಿಸಲಾಗಿದೆ.
ಮತಾಂತರಗೊಂಡು ಉಗ್ರ ಕೃತ್ಯಕ್ಕಿಗಿಳಿದ ತಮಿಳಿಗ..!
ಯಾವುದೇ ಅನುಮತಿ ಪಡೆಯದೇ ಅಕ್ರಮವಾಗಿ ಪ್ರಾರ್ಥನಾಲಯ ನಡೆಸುತ್ತಿದ್ದ ಆರೋಪ ಎದುರಾಗಿದ್ದು ಬೆನಡಿಕ್ಟ್ ಎಂಬುವರ ನೇತೃತ್ವದಲ್ಲಿ ಮತಾಂತರ ಕಾರ್ಯ ನಡೆಯುತ್ತಿತ್ತೆನ್ನಲಾಗಿದೆ. ಹಿಂದೂ ಕಾರ್ಯಕರ್ತರು ಮತ್ತು ಪ್ರಾರ್ಥನಾ ನಿರತರ ನಡುವೆ ಘರ್ಷಣೆ ನಡೆದಿದೆ.
ಬಳಿಕ ಪೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಗಿದೆ.
ಹಲವಾರು ವರ್ಷಗಳಿಂದ ಮತಾಂತರ : ಉಡುಪಿಯಲ್ಲಿ ಹಲವಾರು ವರ್ಷಗಳಿಂದ ಮತಾಂತರ ಪ್ರಕ್ರಿಯೆ ನಡೆಯುತ್ತಿತ್ತು. ನೂರಾರು ಹಿಂದೂಗಳನ್ನು ಕ್ರೈಸ್ತ ಮಿಷನರಿಗಳು ಮತಾಂತರ ಮಾಡಿವೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಹೇಳಿದರು.
ಆರಂಭದಿಂದಲೂ ಹಿಂದು ಜಾಗರಣ ವೇದಿಕೆ ಈ ಬಗ್ಗೆ ಹೋರಾಟ ನಡೆಸುತ್ತಲೇ ಇದೆ. ಸೂಕ್ತ ಮಾಹಿತಿಗಳು ಇದ್ದ ಹಿನ್ನೆಲೆಯಲ್ಲಿ ನಾವು ದಾಳಿ ಮಾಡಿದ್ದೇವೆ. ಪೊಲೀಸರ ಮತಾಂತರ ಕೇಂದ್ರಕ್ಕೆ ಹೋಗಿ ವಿಚಾರಿಸಿದ್ದಾರೆ. ಅದ್ದೂರಿ ಗಣೇಶೋತ್ಸವಕ್ಕೆ ಸರ್ಕಾರ ಅನುಮತಿ ಕೊಟ್ಟಿಲ್ಲ ಪ್ರಾರ್ಥನೆಯ ಹೆಸರಿನಲ್ಲಿ ಮತಾಂತರಕ್ಕೆ ಅವಕಾಶ ಇದೆ. ಮತಾಂತರಿಗಳಿಗೆ ಕೋವಿಡ್ ನಿಯಮ ಪಾಲನೆ ಇಲ್ಲವೇ? ಎಂದು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಹಲವಾರು ಮತಾಂತರ ಕೇಂದ್ರಗಳಿವೆ. ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾವು ದಾಳಿ ಮುಂದುವರಿಸುತ್ತೇವೆ ಪರಿಸ್ಥಿತಿ ಹದಗೆಡಲು ಅವಕಾಶ ಕೊಡಬೇಡಿ ಎಂದು ಹೇಳಿದರು.