* ಮಂಗಳೂರಿನ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ
* ಹಿಂದಿನ ಸಂಪ್ರದಾಯವನ್ನೇ ಪಾಲಿಸುವ ಮೂಲಕ ಸೌಹಾರ್ದತೆ ಮೆರೆದ ದೇವಾಲಯ
* ಬಪ್ಪ ಬ್ಯಾರಿಯೇ ಕಟ್ಟಿದ ದೇವಸ್ಥಾನ
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು(ಮಾ.29): ಮುಸ್ಲಿಮರಿಗೆ ದೇವಸ್ಥಾನದಲ್ಲಿ ವ್ಯಾಪಾರ(Business) ನಿರ್ಬಂಧ ವಿಧಿಸಿದ್ದರೂ ಮಂಗಳೂರಿನ(Mangaluru) ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಮಾತ್ರ ತನ್ನ ಹಿಂದಿನ ಸಂಪ್ರದಾಯವನ್ನೇ ಪಾಲಿಸುವ ಮೂಲಕ ಸೌಹಾರ್ದತೆ ಮೆರೆದಿದೆ. ಹಳೆಯ ನಂಬಿಕೆಯಂತೆ ದೇವಸ್ಥಾನ ಕಟ್ಟಿದ ಮುಸ್ಲಿಂ ವ್ಯಾಪಾರಿ ಬಪ್ಪ ಬ್ಯಾರಿಯ ಮನೆಗೆ ಜಾತ್ರೆ ಮುಗಿದ ಬಳಿಕ ದೇವರು ಪಲ್ಲಕ್ಕಿಯಲ್ಲಿ ತೆರಳಿ ಪ್ರಸಾದ ನೀಡುವ ಮೂಲಕ ಈ ಬಾರಿಯೂ ಹಳೆಯ ಸಂಪ್ರದಾಯ ಪಾಲನೆಯಾಗಿದೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಬಪ್ಪ ಬ್ಯಾರಿ ವಂಶಸ್ಥರೊಬ್ಬರು ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಬಪ್ಪ ಬ್ಯಾರಿ ವಂಶದ ಅಬ್ದುಲ್ ರಜಾಕ್(Abdu Rajak) ಮಾತನಾಡಿದ್ದಾರೆ. ನಿರ್ಬಂಧ ಬ್ಯಾನರ್, ದೇವಸ್ಥಾನದ(Temple) ಪರಂಪರೆ, ಬಪ್ಪ ಬ್ಯಾರಿ ನಂಟಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಅಬ್ದುಲ್ ರಜಾಕ್, ಬಪ್ಪನಾಡಿನ(Bappa Nadu) ಜನ ಸೌಹಾರ್ದತೆಯಲ್ಲಿ ಬದುಕ್ತಿದಾರೆ, ಈ ಬಾರಿ ಮಾತ್ರ ಸ್ವಲ್ಪ ಸಮಸ್ಯೆ ಆಗಿದೆ. ನಿರ್ಬಂಧದ ಬ್ಯಾನರ್ ಹಾಕುವುದು ಅವರ ಕ್ರಮ, ನಾವೇನೂ ಹೇಳೋಕೆ ಇಲ್ಲ. ಅವರವರ ಸಂಘಟನೆ, ಅವರವರು ಬ್ಯಾನರ್ ಹಾಕ್ತಾರೆ, ಅದಕ್ಕೂ ನಮಗೂ ಸಂಬಂಧ ಇಲ್ಲ. ಮಲ್ಲಿಗೆ ಮಾರಾಟ ಈ ಬಾರಿ ಯಾರೂ ಮಾರಲು ಬರಲಿಲ್ಲ. ನಾನು ದೇವರ ಶಯನಕ್ಕೆ ಹೂ ಹಾಕಿದ್ದೇನೆ, ಬೇರೆ ಮುಸ್ಲಿಮರು ಬಂದಿದ್ದಾರಾ ಗೊತ್ತಿಲ್ಲ.
ದೇವಸ್ಥಾನದ ಆಡಳಿತ ಮಂಡಳಿ ಈಗಲೂ ಬಪ್ಪ ಬ್ಯಾರಿ ಕುಟುಂಬಕ್ಕೆ(Barry Family) ಗೌರವ ಕೊಡುತ್ತೆ. ಆಡಳಿತ ಮಂಡಳಿ ನಮ್ಮ ಜೊತೆ ಚೆನ್ನಾಗಿದ್ದಾರೆ, ವರ್ಷದಲ್ಲಿ ಎರಡು ಬಾರಿ ಪ್ರಸಾದ ಕೊಡ್ತಾರೆ. ನಮ್ಮ ಮುಸ್ಲಿಮರು ದೇವಸ್ಥಾನಕ್ಕೆ ಹೋಗ್ತಾ ಬರ್ತಾ ಇರ್ತಾರೆ, ಆದ್ರೆ ಈ ಬಾರಿ ಕಡಿಮೆ. ದೇವಸ್ಥಾನದ ಜಾತ್ರೆ ಮತ್ತು ಪೇಟೆ ಸವಾರಿ ವೇಳೆ ಬಪ್ಪ ಬ್ಯಾರಿ ಕುಟುಂಬಕ್ಕೆ ಪ್ರಸಾದ ಕೊಡ್ತಾರೆ. ಹಿಂದಿನ ಕಾಲದಲ್ಲಿ ಪಲ್ಲಕ್ಕಿಯಲ್ಲಿ ಬಂದು ಬಾಳೆ ಗೊನೆ ಕೊಡ್ತಾ ಇದ್ದರು, ಅದೀಗ ರದ್ದಾಗಿದೆ. ಈಗ ದೇವರು ಅವರ ಮನೆ ಇದ್ದ ಜಾಗದ ಬಳಿಗೆ ಜಾತ್ರೆ ವೇಳೆ ಬರ್ತಾರೆ. ಹೂ ಮತ್ತು ಪ್ರಸಾದವನ್ನ ಅವರ ಮನೆ ಇರೋ ಜಾಗದ ಬಳಿ ಈಗಲೂ ಇಡಲಾಗುತ್ತೆ. ವರ್ಷಕ್ಕೆ ಎರಡು ಬಾರಿ ಪ್ರಸಾದ ಕೊಡಲಾಗುತ್ತೆ, ಆದ್ರೆ ಈಗ ಮನೆಯಲ್ಲಿ ಯಾರೂ ಇಲ್ಲ ಎಂದರು.
ಮುಸ್ಲಿಮರಿಗೆ ವ್ಯಾಪಾರ ನಿರ್ಬಂಧ: ಬಪ್ಪ ಬ್ಯಾರಿ ವಂಶಸ್ಥ ಅಬ್ದುಲ್ ರಜಾಕ್ ಹೇಳಿದ್ದಿಷ್ಟು
ಬಪ್ಪ ಬ್ಯಾರಿಯೇ ಕಟ್ಟಿದ ದೇವಸ್ಥಾನ..!
ಇನ್ನು ದೇವಸ್ಥಾನದ ಇತಿಹಾಸದ(History) ಬಗ್ಗೆ ಮಾತನಾಡಿದ ರಜಾಕ್, ಬಪ್ಪ ಬ್ಯಾರಿ ಮತಾಂತರಿ ಅಲ್ಲ, ಅವರು ಕೇರಳದ(Kerala) ಮಲಯಾಳಿ ಮುಸ್ಲಿಂ. ಬಪ್ಪನಾಡು ದೇವಸ್ಥಾನ ಬಪ್ಪ ಬ್ಯಾರಿಯೇ ನಿರ್ಮಿಸಿ ಅರಸು ಮನೆತನಕ್ಕೆ ಕೊಟ್ಟದ್ದು. ಈಗಲೂ ದೇವರ ಶಯನಕ್ಕೆ ಮುಸ್ಲಿಂ ಮಹಿಳೆಯರು(Muslim Women), ಗಂಡಸರು ಮಲ್ಲಿಗೆ ಹರಕೆ ಕೊಡ್ತಾರೆ. ಕೇರಳದ ವ್ಯಾಪಾರಿ ಬಪ್ಪ ಬ್ಯಾರಿ ಹಡಗಿನಲ್ಲಿ ಹೋಗುವಾಗ ಹಡಗಿಗೆ ಮಂಜು ತಾಗಿ ನಿಂತಿತು. ಹಡಗು ನಿಂತಿದ್ದ ನದಿಯ ನೀರಿನಲ್ಲಿ ರಕ್ತ ಹರಿಯಲಾರಂಭಿಸಿತ್ತು. ಅದೇ ರಾತ್ರಿ ದೇವಿಯ ದೇವಸ್ಥಾನ ನಿರ್ಮಿಸಲು ಕನಸು ಬಿದ್ದ ಕಾರಣ ಅವರು ದೇವಸ್ಥಾನ ನಿರ್ಮಾಣ ಮಾಡಿದ್ರು. ಆ ಬಳಿಕ ದೇವಸ್ಥಾನ ನಿರ್ಮಿಸಿ ಅದನ್ನ ತಲಶ್ಶೇರಿಕಾರರು ಅಂದ್ರೆ ಕೊಂಕಣಿ ಸಮುದಾಯಕ್ಕೆ ಬಿಟ್ಟು ಕೊಟ್ಟರು. 800 ವರ್ಷಗಳ ಹಿಂದೆ ಈ ಘಟನೆ ನಡೆದಿದ್ದು, ನಾನು ಅವರ ವಂಶಸ್ಥ. ಅವರ ಕುಟುಂಬ ಮಂಗಳೂರು ಸೇರಿ ಹಲವೆಡೆ ಈಗಲೂ ವಾಸಿಸುತ್ತಿದೆ. ದೇವಸ್ಥಾನದ ಬಳಿ ದೊಡ್ಡ ಮನೆ ಇತ್ತು, ಈಗ ಅದೆಲ್ಲ ಇಲ್ಲ ಎಂದರು.