
ಹಾಸನ (ಜು.03): ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೆರೆಹಳ್ಳಿ ಗ್ರಾಮದ ನಿವಾಸದಲ್ಲಿ ಹಿಂದೂಪರ ಹೋರಾಟಗಾರ ಪುನೀತ್ ಕೆರೆಹಳ್ಳಿಯನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಜಾಕ್ ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಬಂಧನ ನಡೆದಿದೆ ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಮುಸ್ಲಿಂ ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಅಬ್ದುಲ್ ರಜಾಕ್ ಎಂಬುವವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಕಾರ್ಯಪ್ರವೃತ್ತರಾದ ಪೊಲೀಸರು, ಇಂದು ಬೆಳ್ಳಂಬೆಳಿಗ್ಗೆ ಹಾಸನ ಜಿಲ್ಲೆಯ ಕೆರೆಹಳ್ಳಿಯಲ್ಲಿರುವ ಪುನೀತ್ ಅವರ ಮನೆಗೆ ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧನದ ವೇಳೆ ಪುನೀತ್ ಕೆರೆಹಳ್ಳಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 'ಇದು ರಾಜಕೀಯ ಪ್ರೇರಿತ ಬಂಧನ. ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅಬ್ದುಲ್ ರಜಾಕ್ ವಿರುದ್ಧ ನಾನು ಈಗಾಗಲೇ ದೂರು ನೀಡಿದ್ದರೂ, ಪೊಲೀಸರು ಅವನನ್ನು ಬಂಧಿಸದೆ ನನ್ನನ್ನು ಬಂಧಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಮತ್ತು ನನಗೆ ಜೀವ ಬೆದರಿಕೆ ಇದೆ' ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ ಮನೆಯಲ್ಲಿದ್ದ ಅವರ ತಾಯಿ ಕಣ್ಣೀರಿಟ್ಟರು. ಮಗನ ಬಂಧನದಿಂದ ಆಘಾತಕ್ಕೊಳಗಾದ ಅವರು ಮಗನನ್ನು ಬಿಡುವಂತೆ ಪೊಲೀಸರ ಬಳಿ ಮನವಿ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಪುನೀತ್ ಬಂಧನವು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ವಿಚಾರಣೆಗಾಗಿ ಅವರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ.
Hindu activist Puneeth Kerehalli has been arrested based on false accusations.
After recently filing a complaint at Basavanagudi Police Station over threats to his life, he now questions why the complainant has become the accused.
He said that action is politically motivated. pic.twitter.com/hnvx9x3w54— 🚩Mohan Gowda🇮🇳 (@Mohan_HJS) July 3, 2026