ಬಂಟ್ವಾಳದ ನಂದಾವರದಲ್ಲಿ ಗುಡ್ಡ ಕುಸಿದು ಮನೆಯೊಳಗಿದ್ದ ಮಹಿಳೆ ಮೃತಪಟ್ಟ ಪ್ರಕರಣ ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದರು.
ಬಂಟ್ವಾಳ (ಜು.7) ಬಂಟ್ವಾಳದ ನಂದಾವರದಲ್ಲಿ ಗುಡ್ಡ ಕುಸಿದು ಮನೆಯೊಳಗಿದ್ದ ಮಹಿಳೆ ಮೃತಪಟ್ಟ ಪ್ರಕರಣ ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದರು.
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಳಗ್ಗೆ 6 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ಮನೆಯಲ್ಲಿ ತಾಯಿ, ಮಗಳು ಇಬ್ಬರು ಇದ್ದರು. ಗುಡ್ಡ ಕುಸಿತವಾದಾಗ ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ ತಾಯಿ ಮಗಳನ್ನು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಆದರೆ ಮಗು ಬದುಕುಳಿದು ತಾಯಿ ಮೃತ ಪಟ್ಟಿದ್ದಾರೆ ಎಂದರು.
Dakshina kannada rains: ಮಳೆಗೆ ಗಡಿಯಾರ ಶಾಲೆ ಬಳಿ ಗುಡ್ಡಕುಸಿತ: ಶಾಲೆಗೆ ರಜೆ
ಕೆಲ ದಿನಗಳ ಹಿಂದೆಯೇ ಪಿಡಿಓ ಬಂದು ಇವರಿಗೆ ನೋಟೀಸ್ ಕೊಟ್ಟಿದ್ದರು. ಮನೆ ಖಾಲಿ ಮಾಡಿ ಬೇರೆ ಜಾಗ ಅಥವಾ ಕಾಳಜಿ ಕೇಂದ್ರ ಹೋಗಲು ಸೂಚಿಸಿದ್ದರು. ಆದರೆ ಇವರು ಧೈರ್ಯ ಮಾಡಿ ಅದೇ ಮನೆಯಲ್ಲಿ ಉಳಿದಿದ್ದರು. ನೋಟಿಸ್ ಕೊಟ್ಟ ಬಳಿಕ ಮನೆ ಖಾಲಿ ಮಾಡಿದ್ದರೆ ಇಂಥ ದುರ್ಘಟನೆ ನಡೆಯುತ್ತಿರಲಿಲ್ಲ. ಈ ಘಟನೆ ಬಳಿಕ ನಾನು ತಕ್ಷಣ ಎಲ್ಲಾ ಅಧಿಕಾರಿಗಳಿಗೂ ಒಂದು ಆದೇಶ ನೀಡ್ತಾ ಇದ್ದೇನೆ. ದ.ಕ ಜಿಲ್ಲೆಯಾದ್ಯಂತ ಇರೋ ಇಂಥ ಸೂಕ್ಷ್ಮ ಪ್ರದೇಶಗಳಿಗೆ ತಕ್ಷಣ ತೆರಳಬೇಕು. ಗುಡ್ಡದ ಸುತ್ತಮುತ್ತ ಕೆಳ ಭಾಗದಲ್ಲಿ ಇರೋ ಮನೆಗಳನ್ನ ಖಾಲಿ ಮಾಡಿಸಬೇಕು. ಮನೆಗಳನ್ನ ಖಾಲಿ ಮಾಡಿಸಿ ಜನರನ್ನು ತಕ್ಷಣ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಇಲ್ಲದೇ ಇದ್ದರೆ ಜಿಲ್ಲಾ ದಂಡಾಧಿಕಾರಿಯಾಗಿ ಕಾನೂನು ಬಲ ಪ್ರಯೋಗಿಸಿ ಖಾಲಿ ಮಾಡಿಸುತ್ತೇವೆ ಎಂದರು.
ಪೊಲೀಸರ ನೆರವಿನೊಂದಿಗೆ ಇಂಥ ಅಪಾಯದ ಮನೆಗಳ ಕುಟುಂಬಗಳನ್ನು ತೆರವು ಮಾಡ್ತೇವೆ. ದಯವಿಟ್ಟು ಸಾರ್ವಜನಿಕರು ಸಹಕರಿಸಿ, ನಮಗೆ ಮೊದಲು ಜನರ ಜೀವ ಮುಖ್ಯ. ಸದ್ಯ ಮೃತಪಟ್ಟಿರುವ ಈ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಗುಡ್ಡದ ಕೆಳಭಾಗದಲ್ಲಿವೆ ಇನ್ನೂ ಹತ್ತಾರು ಮನೆಗಳು!
ಮಳೆಗಾಲದಲ್ಲಿ ಅಪಾಯಕಾರಿ ಸ್ಥಳದಿಂದ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದರೂ ಖಾಲಿ ಮಾಡದ ಜನರು. ನಿರ್ಲಕ್ಷ್ಯಕ್ಕೆ ದುರ್ಘಟನೆ ನಡೆದಿದ್ದರೂ ಈಗಲೂ ಜಾಗ ಖಾಲಿ ಮಾಡದೇ ಅಲ್ಲೇ ಉಳಿದುಕೊಂಡಿದ್ದಾರೆ ಇನ್ನೂ ಹತ್ತಾರು ಮನೆಗಳಲ್ಲಿ ವಾಸಿಸುತ್ತಿದ್ದಾರೆ.
ಗುಡ್ಡದ ಮೇಲ್ಬಾಗದಲ್ಲಿಯೂ ಇವೆ ಮನೆಗಳು. ಮಳೆ ಹೆಚ್ಚಾದರೆ ಇನ್ನಷ್ಟು ಮನೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಮಳೆಗೆ ಗುಡ್ಡದ ಜೇಡಿ ಮಣ್ಣು ಕುಸಿಯುವ ಸಾಧ್ಯತೆ ಇದೆ. ಈ ಹಿಂದೆಯೇ ಗುಡ್ಡ ಕುಸಿದು ದುರ್ಘಟನೆ ನಡೆದಿತ್ತು. ಆದರೂ ಎಚ್ಚೆತ್ತುಕೊಳ್ಳದ ಸ್ಥಳೀಯಾಡಳಿತ.
ಕಾರವಾರ: ಸುರಂಗದ ಪ್ರಾರಂಭದಲ್ಲಿ ಗುಡ್ಡ ಕುಸಿತ!
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನಿವಾಸಿಗಳ ಮಾತು:
ಯಾವುದೇ ಕ್ಷಣದಲ್ಲಿ ಮತ್ತೆ ಗುಡ್ಡ ಕುಸಿಯಬಹುದು ಎಂಬ ಆತಂಕ ಇದೆ. ಇದರಿಂದ ಕೆಳಗಿನ ಮನೆಗಳ ಜೊತೆ ಮೇಲಿರೋ ಮನೆಗಳಿಗೂ ಅಪಾಯ ಇದೆ. ಜಿಲ್ಲಾಡಳಿತ ದಯವಿಟ್ಟು ನಮ್ಮತ್ತ ನೋಡಬೇಕು. ಅದಕ್ಕೊಂದು ತಡೆ ಗೋಡೆ ನಿರ್ಮಿಸಿದ್ದರೆ ಅನಾಹುತ ಆಗ್ತಾ ಇರಲಿಲ್ಲ. ಸ್ಥಳೀಯಾಡಳಿತ ಪ್ರತಿಸಲ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.