ಉದ್ಯಾನ ನಗರಿ ಬೆಂಗಳೂರಲ್ಲಿ ಶೇ.17 ಅಧಿಕ ಮಳೆ ದಾಖಲೆ..!

By Kannadaprabha NewsFirst Published Nov 4, 2020, 8:25 AM IST
Highlights

ಮುಂಗಾರು ಅವಧಿಯಲ್ಲಿ 777 ಮಿ.ಮೀ. ಮಳೆ| ಅಕ್ಟೋಬರ್‌ ತಿಂಗಳಲ್ಲಿ ದಾಖಲೆಯ 194 ಮಿ.ಮೀ. ಮಳೆಯೂ ದಾಖಲೆ| ಈ ವರ್ಷ ಎಲ್ಲಾ ತಿಂಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.40ರಷ್ಟು ಕೊರತೆ| 2019ರ ಮುಂಗಾರು ಅವಧಿಯಲ್ಲಿ 460 ಮಿ.ಮೀ. ವಾಡಿಕೆ ಮಳೆಗೆ ಹೋಲಿಸಿದರೆ ಶೇ.17 ರಷ್ಟು ಮಳೆ ಅಭಾವ| 

ಶಂಕರ್‌ ಎನ್‌. ಪರಂಗಿ

ಬೆಂಗಳೂರು(ನ.04): ರಾಜಧಾನಿ ಬೆಂಗಳೂರಿನಾದ್ಯಂತ ಅಬ್ಬರಿಸಿರುವ ಮುಂಗಾರು ಮಳೆಯು ಅಕ್ಟೋಬರ್‌ ತಿಂಗಳಲ್ಲಿ ಬರೋಬ್ಬರಿ 194 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಗಿಂತ ಶೇ.26ರಷ್ಟು ಅಧಿಕ ಮಳೆಯಾಗಿದೆ. ಈ ಮೂಲಕ ಜೂನ್‌ನಿಂದ ಅಕ್ಟೋಬರ್‌ವರೆಗಿನ ಒಟ್ಟಾರೆ ಮುಂಗಾರು ಅವಧಿಯಲ್ಲೂ ಉದ್ಯಾನ ನಗರಿಯಲ್ಲಿ ಶೇ.17.11ರಷ್ಟು ಅಧಿಕ ಮಳೆಯಾಗಿದೆ.

ಸಾಮಾನ್ಯವಾಗಿ ಅಕ್ಟೋಬರ್‌ ಎರಡನೇ ವಾರಕ್ಕೆ ಮುಗಿಯುವ ಮುಂಗಾರು ಮಳೆ ಈ ಬಾರಿ ಬಂಗಾಳಕೊಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್‌ ಅಂತಿಮ ವಾರದವರೆಗೂ ಅಬ್ಬರಿಸಿತ್ತು. ಪರಿಣಾಮ ಅ.20ರಂದು ಒಂದೇ ದಿನ 124.5ಮಿ.ಮೀ ಮಳೆ ಸುರಿದಿತ್ತು. ಇದು ಅಕ್ಟೋಬರ್‌ ತಿಂಗಳಲ್ಲಿ ಸುರಿದ ಮೂರನೇ ಅತಿ ಹೆಚ್ಚು ಮಳೆಯಾಗಿಯೂ ದಾಖಲೆ ಮಾಡಿತ್ತು. ಈ ಹಿಂದೆ 1997ರಲ್ಲಿ ಅ.1ರಂದು 178.9 ಮಿ.ಮೀ. ಹಾಗೂ 2019ರಲ್ಲಿ ಅ.9ರಂದು 140.5 ಮಿ.ಮೀ. ಮಳೆ ಮೊದಲ ಹಾಗೂ ದ್ವಿತೀಯ ದಾಖಲೆ ಮಳೆ.

ಪ್ರಸ್ತುತ ಮುಂಗಾರಿನಲ್ಲಿ ಅಕ್ಟೋಬರ್‌ ಅಂತಿಮ ವಾರದಲ್ಲಿ ರಾಜರಾಜೇಶ್ವರಿನಗರ ಹಾಗೂ ಕೆಂಗೇರಿಯಲ್ಲಿ 120 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದ್ದು, 28 ವಾರ್ಡ್‌ಗಳಲ್ಲಿ 75 ಮಿ.ಮೀ.ಗಿಂತ ಅಧಿಕ ಮಳೆ ಸುರಿದಿದೆ. ಇದರಿಂದ ನಗರದಲ್ಲಿ ಪ್ರವಾಹ ಸ್ಥಿತಿ ಉಂಟಾಗಿ ತೀವ್ರ ಹಾನಿಯೂ ಉಂಟಾಗಿತ್ತು.

ರಾಜ್ಯಕ್ಕೆ ಹಿಂಗಾರು ಮಳೆ ಪ್ರವೇಶ : ಯಾವಾಗ, ಎಷ್ಟು ಮಳೆಯಾಗಲಿದೆ..?

ಪ್ರಸ್ತುತ ಮುಂಗಾರಿನಲ್ಲಿ ನಗರದಲ್ಲಿ ಒಟ್ಟು 777 ಮಿ.ಮೀ. ಮಳೆ ಸುರಿದಿದ್ದು ಇದನ್ನು ವಾಡಿಕೆ ಮಳೆ 644 ಮಿ.ಮೀ.ಗೆ ಹೋಲಿಸಿದರೆ ಬರೋಬ್ಬರಿ ಶೇ.17.11ರಷ್ಟುಅಧಿಕ ಮಳೆ ದಾಖಲಾಗಿದೆ. ರಾಜ್ಯದಲ್ಲಿ ಮುಂಗಾರು ಆರಂಭದ ತಿಂಗಳ ಮೊದಲ ಎರಡು ವಾರದಲ್ಲಿ ವಾಡಿಕೆಯಷ್ಟೂ ಮಳೆಯಾಗದೆ ನಿರಾಸೆ ಮೂಡಿಸಿತ್ತು. ಬಳಿಕ ಜೂನ್‌ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, 117 ಮಿ.ಮೀ. ಮಳೆ ಸುರಿಯುವ ಮೂಲಕ ವಾಡಿಕೆಗಿಂತ ಶೇ.64ರಷ್ಟು ಹೆಚ್ಚು ಮಳೆ ವರದಿಯಾಗಿತ್ತು.
ಜುಲೈನಲ್ಲಿ 171 ಮಿ.ಮೀ. ಮಳೆ ಸುರಿದಿದ್ದು ವಾಡಿಕೆಗಿಂತ ಶೇ.82ರಷ್ಟು, ಸೆಪ್ಟೆಂಬರ್‌ನಲ್ಲಿ ವಾಡಿಕೆಗಿಂತ ಶೇ.11ರಷ್ಟು(203 ಮಿ.ಮೀ.) ಹಾಗೂ ಅಕ್ಟೋಬರ್‌ನಲ್ಲಿ ಶೇ.29ರಷ್ಟು(194 ಮಿ.ಮೀ.) ಹೆಚ್ಚು ಮಳೆ ಸುರಿದಿದೆ. ಆದರೆ ಆಗಸ್ಟ್‌ನಲ್ಲಿ ಮಾತ್ರ ಕೇವಲ 74 ಮಿ.ಮೀ. ಮಳೆ ಬೀಳುವ ಮೂಲಕ ಶೇ.40ರಷ್ಟುಕೊರತೆ ಉಂಟಾಗಿತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಮಾಹಿತಿ ನೀಡಿದೆ.

ಆಗಸ್ಟ್‌ ತಿಂಗಳಲ್ಲಿ ಮಾತ್ರ ಕೊರತೆ

ವಿಚಿತ್ರವೆಂದರೆ, 2019ರಲ್ಲಿ ಮುಂಗಾರಿನಲ್ಲಿ ಆಗಸ್ಟ್‌ನಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಉಳಿದ ತಿಂಗಳುಗಳಲ್ಲಿ ನಿರಾಸೆ ಮೂಡಿಸಿತ್ತು. ಈ ವರ್ಷ ಎಲ್ಲಾ ತಿಂಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದ್ದು ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ.40ರಷ್ಟು ಕೊರತೆ ಉಂಟಾಗಿದೆ. 2019ರ ಮುಂಗಾರು ಅವಧಿಯಲ್ಲಿ 460 ಮಿ.ಮೀ. ವಾಡಿಕೆ ಮಳೆಗೆ ಹೋಲಿಸಿದರೆ ಶೇ.17 ರಷ್ಟು ಮಳೆ ಅಭಾವ ಉಂಟಾಗಿತ್ತು.
 

click me!