ಮೀಸಲಾತಿ ನಿಗದಿಗೆ ತಬ್ಬಿಬ್ಬಾದ ಸದಸ್ಯರು| ನನಗೆ ನೋವಾಗಿದ್ದು, ನ್ಯಾಯಕ್ಕಾಗಿ ನಾನು ಹೈಕೋರ್ಟ್ ಮೊರೆ ಹೋಗಿದ್ದೇನೆ. ಅಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಇದೆ: ನಗರಸಭೆ ಸದಸ್ಯೆ ದೇವಕ್ಕ ಕಂದಾರಿ|
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮಾ.13): ಒಂದು ವರ್ಷದ ಬಳಿಕ ಕೊಪ್ಪಳ ನಗರಸಭೆಯ ಮೀಸಲಾತಿ ನಿಗದಿಯಾಗಿದ್ದು, ಮೀಸಲಾತಿ ನಿಗದಿಯಿಂದ ಸದಸ್ಯರು ತಬ್ಬಿಬ್ಬಾಗಿದ್ದಾರೆ. ಪಕ್ಷೇತರ ಸದಸ್ಯ ಪರಶುರಾಮ ಮ್ಯಾದರ್ ರಾತ್ರೋರಾತ್ರಿ ಬಿಜೆಪಿ ಸದಸತ್ವ ಪಡೆದಿದ್ದರೆ, ಬಿಜೆಪಿ ಸದಸ್ಯೆ ದೇವಕ್ಕ ಕಂದಾರಿ ಅವರು ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ದೊಡ್ಡ ಹೈಡ್ರಾಮಾವೇ ನಡೆಯುತ್ತಿದೆ.
31 ಸದಸ್ಯ ಬಲದ ಕೊಪ್ಪಳ ನಗರಸಭೆಯಲ್ಲಿ ಯಾರಿಗೂ ನಿಚ್ಚಳ ಬಹುಮತ ಇಲ್ಲ. ಆದರೆ, ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಬಿಜೆಪಿ 10 ಸದಸ್ಯ ಬಲ ಹೊಂದಿದ್ದರೆ, ಇಬ್ಬರು ಜೆಡಿಎಸ್ ಸದಸ್ಯರಿದ್ದಾರೆ ಹಾಗೂ ನಾಲ್ವರು ಪಕ್ಷೇತರರಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಲಾಬಲ ಏನೇ ಇರಲಿ, ಅಧ್ಯಕ್ಷ ಸ್ಥಾನ ಎಸ್ಟಿ ವರ್ಗಕ್ಕೆ ಮೀಸಲಾಗಿದೆ. ಎಸ್ಟಿ ವರ್ಗಕ್ಕೆ ಸೇರಿದ ಓರ್ವ ಸದಸ್ಯ ಮಾತ್ರ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಆಗಲಿ ಅಥವಾ ಬಿಜೆಪಿಯಾಗಲಿ ಪೈಪೋಟಿ ಮಾಡುವುದಕ್ಕೆ ಅವಕಾಶವೇ ಇಲ್ಲ. ಈಗೇನಿದ್ದರೂ ಪಕ್ಷೇತರ ಸದಸ್ಯನಿಗೆ ಮಾತ್ರ ಬಯಸದೆ ಬಂದ ಭಾಗ್ಯ ಎನ್ನುವಂತಾಗಿದೆ. ಬಿಜೆಪಿ ಇಂಥದ್ದೊಂದು ಸ್ಕೆಚ್ ಹಾಕಿ, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಅವಕಾಶ ಇಲ್ಲದಂತೆ ಮಾಡಿದೆ. ಅಲ್ಲದೆ ಪಕ್ಷೇತರ ಸದಸ್ಯ ಪರಶರಾಮ ಮ್ಯಾದರ್ ಅವರನ್ನು ಬೆಂಗಳೂರಿನಲ್ಲಿ ಗುರುವಾರ ಬಿಜೆಪಿ ಅಧಿಕೃತ ಸದಸ್ಯತ್ವ ನೀಡಲಾಗಿದೆ.
ಸದಸ್ಯತ್ವ ನೀಡಿದ ಪ್ರತಿಯನ್ನು ಸೋಷಿಯಲ್ ಮೀಡಿಯಾಗೆ ಬಿಡಲಾಗಿದೆ. ಬೆಂಗಳೂರಿನಲ್ಲಿ ಪಕ್ಷದ ಮತ್ತು ಸರ್ಕಾರದ ಪ್ರತಿನಿಧಿಗಳ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆ ಮಾಡಿಸಲಾಗಿದೆ. ಇದರ ಇಡೀ ಉಸ್ತುವಾರಿಯನ್ನು ಸಂಸದರ ಪುತ್ರ ಅಮರೇಶ ಕರಡಿಯೇ ವಹಿಸಿದ್ದು ವಿಶೇಷ.
ಹೈಕೋರ್ಟ್ ಮೊರೆ:
ಕೊಪ್ಪಳ ನಗರಸಭೆಯ ಅಧಿಕಾರ ಹಿಡಿಯಲು ಬಿಜೆಪಿ ಮಾಡಿರುವ ತಂತ್ರ ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿರುವುದು ಸಹಜ. ಆದರೆ ಬಿಜೆಪಿಯಲ್ಲಿಯೂ ಇದು ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಕೆಲ ಸದಸ್ಯರು ಜಂಟಿಯಾಗಿ ಮೀಸಲಾತಿ ಪ್ರಕಟವಾದ ತಡರಾತ್ರಿಯಿಂದಲೇ ಹೈಡ್ರಾಮಾ ನಡೆಸಿದ್ದಾರೆ. ಇದಕ್ಕೆ ಬ್ರೇಕ್ ಹಾಕಬೇಕು ಎಂದು ತೀರ್ಮಾನಿಸಿ, ಧಾರವಾಡ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ. ಈ ಹಿಂದೆ ಮೀಸಲಾತಿ ಎಸ್ಸಿ ಸಮುದಾಯಕ್ಕೆ ನಿಗದಿಯಾಗಿತ್ತು. ಆಗಲೂ ಅಧಿಕಾರ ಪಡೆಯುವ ಮುನ್ನವೇ ಮುಂದೂಡಲಾಯಿತು. ಈಗ ಕೇವಲ ಓರ್ವ ಸದಸ್ಯನಿರುವ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲು ನಿಗದಿ ಕಾನೂನುಬಾಹಿರವಾಗಿದೆ. ಇದಕ್ಕೆ ತಡೆಯಾಜ್ಞೆ ನೀಡಬೇಕು ಮತ್ತು ಮೀಸಲಾತಿಯನ್ನು ಬದಲಾಯಿಸಬೇಕು ಎಂದು ಬಿಜೆಪಿಯ ಸದಸ್ಯೆ ದೇವಕ್ಕ ಕಂದಾರಿ ಅವರು ಕೋರ್ಟ್ ಮೆಟ್ಟಿಲು ಏರಿದ್ದಾರೆ. ಪ್ರಕರಣವನ್ನು ದಾಖಲಿಸಿದ್ದು, ವಿಚಾರಣೆಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ರಾತ್ರೋರಾತ್ರಿ ಸೇರ್ಪಡೆಗೆ ಸ್ಕೆಚ್:
ಕೊಪ್ಪಳ ನಗರಸಭೆಯ ಅಧ್ಯಕ್ಷ ಸ್ಥಾನ ಎಸ್ಟಿ ವರ್ಗಕ್ಕೆ ಮೀಸಲು ನಿಗದಿ ಮಾಡಬೇಕು ಎನ್ನುವುದು ಇಂದು ನಿನ್ನೆಯ ತಯಾರಿ ಅಲ್ಲ. ಕಳೆದೊಂದು ತಿಂಗಳ ಹಿಂದೆಯೇ ನಡೆದಿರುವ ತಯಾರಿ. ಬಹುಮತವೇ ಇಲ್ಲದಿರುವ ಕೊಪ್ಪಳ ನಗರಸಭೆಯಲ್ಲಿ ಅಧಿಕಾರ ವಹಿಸಿಕೊಳ್ಳಬೇಕು ಎಂದು ತೀರ್ಮಾನಿಸಿದ ಬಿಜೆಪಿ ಆಂತರಿಕ ಸ್ಕೆಚ್ ಇದಾಗಿದೆ. ಎಸ್ಟಿ ವರ್ಗಕ್ಕೆ ಸೇರಿದವರು ಕೇವಲು ಓರ್ವ ಸದಸ್ಯರು ಮಾತ್ರ ಇದ್ದಾರೆ.
ಅವರೂ ಸಹ ಪಕ್ಷೇತರ
ಇದೇ ವರ್ಗಕ್ಕೆ ಮೀಸಲಾತಿ ತಂದು, ಪಕ್ಷೇತರ ಸದಸ್ಯನನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡು, ಕೊಪ್ಪಳ ನಗರಸಭೆಯಲ್ಲಿ ಬಿಜೆಪಿಯ ಧ್ವಜ ಹಾರಿಸಬೇಕು ಎಂದು ತಂತ್ರ ರೂಪಿಸಿ, ಅದರಲ್ಲಿ ಯಶಸ್ವಿಯೂ ಆಗಿದೆ. ಮೀಸಲಾತಿ ನಿಗದಿಯಾಗಿ ಎಸ್ಟಿ ವರ್ಗಕ್ಕೆ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನ ನಿಗದಿಯಾಗುತ್ತಿದ್ದಂತೆ ಪರಶುರಾಮ ಮ್ಯಾದರ್ ಅವರು ರಾತ್ರೋರಾತ್ರಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಅಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಪಕ್ಷೇತರ ಸದಸ್ಯ ಪರಶುರಾಮ ಮ್ಯಾದರ್ ಅವರು ಬಿಜೆಪಿಗೆ ಸೇರ್ಪಡೆ ಯಾಗಿದ್ದು, ಇನ್ನೇನು ಅಧ್ಯಕ್ಷರಾಗಿ ಆಯ್ಕೆಯಾಗು ವುದೊಂದೆ ಬಾಕಿ ಇದೆ.
ನನಗೆ ನೋವಾಗಿದ್ದು, ನ್ಯಾಯಕ್ಕಾಗಿ ನಾನು ಹೈಕೋರ್ಟ್ ಮೊರೆ ಹೋಗಿದ್ದೇನೆ. ಅಲ್ಲಿ ನ್ಯಾಯ ಸಿಕ್ಕೇ ಸಿಗುತ್ತದೆ ಎನ್ನುವ ಭರವಸೆ ಇದೆ. ಸಂವಿಧಾನ ಹಕ್ಕುಗಳ ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುತ್ತೇನೆ ಎಂದು ನಗರಸಭೆ ಸದಸ್ಯೆ ದೇವಕ್ಕ ಕಂದಾರಿ ಹೇಳಿದ್ದಾರೆ.
ಮೀಸಲಾತಿ ನಿಗದಿಯಿಂದ ನಮಗೆ ಅವಕಾಶ ಕೈತಪ್ಪಿದೆ. ಈ ಕುರಿತು ನಾನು ಏನು ಪ್ರತಿಕ್ರಿಯಿಸುವುದಿಲ್ಲ. ಕಾದು ನೋಡುತ್ತೇನೆ ಎಂದು ನಗರಸಭೆ ಸದಸ್ಯ ಅಮ್ಜಾದ್ ಪಟೇಲ್ ಹೇಳಿದ್ದಾರೆ.
ಬಿಜೆಪಿ ತತ್ವ- ಸಿದ್ಧಾಂತ ಮತ್ತು ಪಕ್ಷದ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಾರ್ಯವೈಖರಿಯಿಂದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ. ಸಂಸದ ಸಂಗಣ್ಣ ಕರಡಿ ಹಾಗೂ ಅಮರೇಶ ಕರಡಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತೇನೆ. ಅಧ್ಯಕ್ಷ ಸ್ಥಾನ ಒಲಿದು ಬಂದಿರುವುದು ಅದೃಷ್ಟ ಎಂದು ಭಾವಿಸುತ್ತೇನೆ ಎಂದು ನಗರಸಭೆ ಸದಸ್ಯರು ಪರಶುರಾಮ್ ಮ್ಯಾದರ್ ತಿಳಿಸಿದ್ದಾರೆ.
ಕೊಪ್ಪಳ ನಗರಸಭೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದರೆ ಅಭಿವೃದ್ಧಿಗೆ ಅನುಕೂಲವಾಗಲಿದೆ. ಈಗಾಗಲೇ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿಯೂ ಬಿಜೆಪಿಯದೇ ಆಡಳಿತ ಇರುವುದರಿಂದ ಒಟ್ಟೊಟ್ಟಿಗೆ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎನ್ನುವ ವಿಶ್ವಾಸದಿಂದಲೇ ನಗರಸಭೆಯನ್ನು ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಮುಖಂಡ ಅಮರೇಶ ಕರಡಿ ಹೇಳಿದ್ದಾರೆ.