ಗಂಗಾವತಿ ನಗರಸಭೆ 14ನೇ ಹಣಕಾಸು ಯೋಜನೆಯ ಅನುದಾನ ನೀಡುವಲ್ಲಿ ತಾರತಮ್ಯ| ಹೈಕೋರ್ಟ್ ತಡೆಯಾಜ್ಞೆ| 6 ಕೋಟಿ 28 ಲಕ್ಷ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆ ರದ್ದು| ನಗರದ 35 ವಾರ್ಡ್‌ಗಳಲ್ಲಿ 17 ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳು ಮತ್ತು ಒಂದು ಜೆಡಿಎಸ್ ವಾರ್ಡ್‌ಗಳಿಗೆ ಅನುದಾನ ನೀಡದೆ ಪೌರಾಯುಕ್ತರು ತಾರತಮ್ಯ ಮಾಡಿದ್ದಾರೆಂದು ಕಾಂಗ್ರೆಸ್ ಸದಸ್ಯರ ದೂರು|
ರಾಮಮೂರ್ತಿ ನವಲಿ
ಗಂಗಾವತಿ(ಸೆ.2): ನಗರಸಭೆಯಲ್ಲಿ 14ನೇ ಹಣಕಾಸು ಯೋಜನೆಯ ಅನುದಾನವನ್ನು ವಿವಿಧ ವಾರ್ಡ್‌ಗಳ ಅಭಿವೃದ್ಧಿಗಾಗಿ ತಯಾರಿಸಿದ್ದ ಕ್ರಿಯಾ ಯೋಜನೆಗೆ ಧಾರವಾಡ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
6.28 ಕೋಟಿ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆ ರದ್ದಾಗುವ ಸಂಭವ ಇದೆ. ನಗರದ 35 ವಾರ್ಡ್‌ಗಳಲ್ಲಿ 17 ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳು ಮತ್ತು ಒಂದು ಜೆಡಿಎಸ್ ವಾರ್ಡ್‌ಗಳಿಗೆ ಅನುದಾನ ನೀಡದೆ ಪೌರಾಯುಕ್ತರು ತಾರತಮ್ಯ ಮಾಡಿದ್ದಾರೆಂದು ಕಾಂಗ್ರೆಸ್ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮತ್ತು ಧಾರವಾಡ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಇದನ್ನು ಪರಿಗಣಿಸಿದ ಹೈಕೋರ್ಟ್ 35 ವಾರ್ಡ್‌ಗಳಲ್ಲಿ ಕೇವಲ 14 ವಾರ್ಡ್‌ಗಳಿಗೆ ಅನುದಾನ ಹಂಚಿಕೆಯ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದರಿಂದ ಈ ಯೋಜನೆಗೆ ತಡೆಯಾಜ್ಞೆಯನ್ನು ಹೈಕೋರ್ಟ್ ನ್ಯಾ. ಸುನೀಲ್ ದತ್ ಯಾದವ ಅವರು ಸೆ. 19, 2019ರಂದು ನೀಡಿ, ಆದೇಶ ಹೊರಡಿಸಿದ್ದಾರೆ.
ಅನುದಾನ ಹಂಚಿಕೆ:
ನಗರಸಭೆಯು 14ನೇ ಹಣಕಾಸು ಯೋಜನೆಯ ಒಟ್ಟು 48 ಕಾಮಗಾರಿಗೆ 6.28 ಕೋಟಿ ಅನುದಾನದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿಗಳು ಆಗಿರುವ ನಗರಸಭೆಯ ಆಡಳಿತಾಧಿಕಾರಿಗಳಿಗೆ ಅನುಮೋದನೆಗಾಗಿ ಕಳಿಸಿಕೊಡಲಾಗಿತ್ತು. ಇದನ್ನು ಪುರಸ್ಕರಿಸಿದ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿ ವಿವಿಧ ಪ್ರಕ್ರಿಯೆಗೆ ಆದೇಶ ನೀಡಿದ್ದರು. ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಟೆಂಡರ್ ಕರೆಯಲು ನಗರಸಭೆ ಸಿದ್ಧತೆ ನಡೆಸಿತ್ತು. ಈಗ ಪ್ರಮುಖವಾಗಿ ಕುಡಿಯುವ ನೀರಿನ ಕಾಮಗಾರಿಗಾಗಿ 34, 30, 33, 22ನೇ ವಾರ್ಡಿನಲ್ಲಿ ಕುಡಿಯುವ ನೀರಿನ ಸೌಲಭ್ಯ ಮತ್ತು ವಿಜಯನಗರ ಕಾಲುವೆಯಿಂದ ಜಾಕ್‌ವೆಲ್, ನೀರಿನ ಪೈಪ್‌ಲೈನ್ ಕಾಮಗಾರಿ, ಮೋಟರ್ ಪಂಪ್ ದುರಸ್ತಿ ಸೇರಿದಂತೆ ಸಣ್ಣ ಪುಟ್ಟಕಾಮಗಾರಿಗಾಗಿ 1.25 ಕೋಟಿ ಅನುದಾನ ನೀಡಲಾಗಿದೆ.
ಅದರಂತೆ ಸಾಮೂಹಿಕ ಮತ್ತು ಸಾರ್ವಜನಿಕ ಶೌಚಾಲಯಗಳ ನಿರ್ವಹಣೆಯನ್ನು 8, 11, 18 ವಾರ್ಡ್‌ಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 31 ಲಕ್ಷ ಅನುದಾನ ನೀಡಲಾಗಿದೆ. ಒಳ ಚರಂಡಿ ಕಾಮಗಾರಿಗೆ 62 ಲಕ್ಷ ಅನುದಾನ ನೀಡಲಾಗಿದ್ದು, ಘನ ತ್ಯಾಜ್ಯ ವ್ಯವಸ್ಥೆ ನಿರ್ವಹಣೆಗೆ 94.20 ಲಕ್ಷ ಅನುದಾನ ಕ್ರಿಯಾ ಯೋಜನೆಯಲ್ಲಿ ಇಡಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಳೆ ಚರಂಡಿ ಕಾಮಗಾರಿಗೆ ವಾರ್ಡ್ 1, 19, 35 ವಿರೂಪಾಪುರ ತಾಂಡದಲ್ಲಿ ದೊಡ್ಡ ಚರಂಡಿ ನಿರ್ಮಾಣ, ಬಸವೇಶ್ವರ ವೃತ್ತ, ನೀರಿನ ಸಮಸ್ಯೆ ಪರಿಹರಿಸಲು ಅನುದಾನ, 30, 31 ಮತ್ತು 5ನೇ ವಾರ್ಡಿನಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳಿಗಾಗಿ 94 ಲಕ್ಷ ನೀಡಿದೆ. ಸಮುದಾಯ ಆಸ್ತಿ ನಿರ್ವಹಣೆಗೆ ವಾರ್ಡ್ 8ರಲ್ಲಿ ಗದ್ವಾಲ್ ಕ್ಯಾಂಪ್‌ನಲ್ಲಿ ಉದ್ಯಾವನಕ್ಕೆ ಗೋಡೆ ನಿರ್ಮಾಣ, ವಾರ್ಡ್ 16ರಲ್ಲಿ ಬನ್ನಿಗಿಡ ಕ್ಯಾಂಪಿನಲ್ಲಿ ಉದ್ಯಾನ ಅಭಿವೃದ್ಧಿಗೆ ಒಟ್ಟು 31 ಲಕ್ಷ ನೀಡಿದೆ.
ರಸ್ತೆ ಪಾದಚಾರಿ ಮಾರ್ಗಗಳ ನಿರ್ವಹಣೆಗೆ 19, 28, 16 ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗೆ . 94 ಲಕ್ಷ 20 ಸಾವಿರ ನೀಡಿದೆ. ವಿದ್ಯುತ್ ದೀಪಗಳ ಅಳವಡಿಕೆ ನಿರ್ವಹಣೆಗಾಗಿ 62 ಲಕ್ಷ, ಸ್ಮಶಾನ, ಚಿತಾಗಾರ ಮತ್ತು ಕಚೇರಿಗಳ ನಿರ್ವಹಣೆಗೆ 31 ಲಕ್ಷ ನೀಡಿದೆ. ಈಗ ಒಟ್ಟು 6 ಕೋಟಿ 28 ಲಕ್ಷ ಕ್ರಿಯಾ ಯೋಜನೆ ಸಿದ್ಧ ಪಡಿಸುವಲ್ಲಿ ಏಕ ಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆಂಬ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸದಸ್ಯರು ಹೈಕೋರ್ಟ್‌ಗೆ ಮೊರೆ ಹೋಗಿದ್ದರಿಂದ ನ್ಯಾಯಾಲಯ ಈ ಕ್ರಿಯಾ ಯೋಜನೆಗೆ ತಡೆಯಾಜ್ಞೆ ನೀಡಿದೆ.
ಈ ಬಗ್ಗೆ ಮಾತನಾಡಿದ ನಗರಸಭೆ ಕಾಂಗ್ರೆಸ್ ಸದಸ್ಯ ಮನೋಹರಸ್ವಾಮಿ ಮುದೇನೂರು ಅವರು, ನಗರಸಭೆಯಲ್ಲಿ ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 14ನೇ ಹಣಕಾಸು ಯೋಜನೆಡಿಯಲ್ಲಿ 6 ಕೋಟಿ 28 ಲಕ್ಷ ಅನುದಾನ ಮಂಜೂರಿಯಾಗಿತ್ತು. ಆ ಸಂದರ್ಭದಲ್ಲಿ ನಗರಸಭೆಯಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿ ನಗರದ 35 ವಾರ್ಡ್‌ಗಳಿಗೆ ಸಮಾನವಾಗಿ ಅನುದಾನ ನಿಗದಿ ಮಾಡಲಾಗಿತ್ತು. ಆದರೆ, ಸ್ಥಳೀಯ ಬಿಜೆಪಿ ಶಾಸಕರ ಒತ್ತಡಕ್ಕೆ ಮಣಿದ ಪೌರಾಯುಕ್ತರು ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳನ್ನು ಕಡೆಗಣಿಸಿ ತಮಗೆ ಬೇಕಾದ ವಾರ್ಡ್‌ಗಳಿಗೆ ಅನುದಾನ ನಿಗದಿಪಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾರೆ. ಈ ಕಾರಣಕ್ಕಾಗಿ ಹೈಕೋರ್ಟ್ ಮೊರೆ ಹೋಗಿದ್ದರಿಂದ ಆದೇಶ ಕ್ರಿಯಾ ಯೋಜನೆಗೆ ತಡೆಯಾಜ್ಞೆ ನೀಡಿದೆ. ಕಾಮಗಾರಿ ಪ್ರಕ್ರಿಯೆ ನಡೆಸಬಾರದೆಂದು ಪೌರಾಯುಕ್ತರಿಗೆ ಕೋರಲಾಗಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ನಗರಸಭೆ ಗಂಗಾವತಿ ಪೌರಾಯುಕ್ತರು ಡಾ. ದೇವಾನಂದ ದೊಡ್ಡಮನಿ ಅವರು, 14ನೇ ಹಣಕಾಸು ಯೋಜನೆಯಡಿ ಕೈಗೊಂಡ 6 ಕೋಟಿ 28 ಲಕ್ಷ ಮೊತ್ತದ ಕಾಮಗಾರಿಯ ಕ್ರಿಯಾ ಯೋಜನೆಯಲ್ಲಿ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ. ಎಲ್ಲ ವಾರ್ಡ್‌ಗಳಿಗೂ ಅನುದಾನ ನೀಡಲಾಗಿದೆ. ಕೆಲವೊಂದು ವಾರ್ಡ್‌ಗಳು ಬಿಟ್ಟಿದ್ದರೆ ಮುಂದಿನ ದಿನಗಳಲ್ಲಿ ಬರುವ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಡೆಯಾಜ್ಞೆ ಬಂದರೂ ಅದನ್ನು ತೆರವುಗೊಳಿಸಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಶಾಸಕರ ಒತ್ತಡಕ್ಕೆ ಮಣಿದಿಲ್ಲ. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.