ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಹೈಕೋರ್ಟ್| ನ್ಯಾಯಾಂಗ ನಿಂದನೆ ದಾಖಲಿಸಿ ಕ್ರಮ ಜರುಗಿಸಬೇಕಾಗುತ್ತೆ| ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಕಾಯ್ದೆ-2013 ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು 2020ರ ಡಿ.9ರಂದು ಸರ್ಕಾರಕ್ಕೆ ಆದೇಶಿಸಿದ್ದ ಹೈಕೋರ್ಟ್|
ಬೆಂಗಳೂರು(ಫೆ.03): ಕಲಬುರಗಿಯಲ್ಲಿ ಶೌಚಗುಂಡಿ (ಮ್ಯಾನ್‌ಹೋಲ್) ಸ್ವಚ್ಛಗೊಳಿಸುವಾಗ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ ಘಟನೆ ಸಂಬಂಧ ರಾಜ್ಯ ಸರ್ಕಾರವನ್ನು ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ರಾಜ್ಯದಲ್ಲಿ ಮನುಷ್ಯರಿಂದ ಶೌಚಗುಂಡಿ ಸ್ವಚ್ಛಗೊಳಿಸುವ ಪದ್ಧತಿಯನ್ನು ತಡೆಯಲು ಸರ್ಕಾರಕ್ಕೆ ಅಗತ್ಯ ನಿರ್ದೇಶನ ನೀಡಲು ಕೋರಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ನ (ಎಐಸಿಸಿಟಿಯು) ಕರ್ನಾಟಕ ಘಟಕ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಹೈಕೋರ್ಟ್‌ಗೆ 2020ರ ಜುಲೈನಲ್ಲಿ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದವು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ರಾಜ್ಯದಲ್ಲಿ ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಕಾಯ್ದೆ-2013 ಪರಿಣಾಮಕಾರಿಯಾಗಿ ಜಾರಿ ಮಾಡಬೇಕು ಎಂದು ಹೈಕೋರ್ಟ್ 2020ರ ಡಿ.9ರಂದು ಸರ್ಕಾರಕ್ಕೆ ಆದೇಶಿಸಿದೆ. ಈ ಆದೇಶದ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿತ್ತು. ಅರ್ಜಿ ಮಂಗಳವಾರ ಮತ್ತೆ ವಿಚಾರಣೆಗೆ ಬಂದಾಗ ಹೈಕೋರ್ಟ್ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು.
ಕಲಬುರಗಿಯಲ್ಲಿ ಮ್ಯಾನ್‌ಹೋಲ್ ದುರಂತ: ಉಸಿರುಗಟ್ಟಿ ಇಬ್ಬರು ಕಾರ್ಮಿಕರ ಸಾವು
ವರದಿಯನ್ನು ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಸರ್ಕಾರವು ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಿಲ್ಲ ಎಂಬುದು ವರದಿಯಿಂದ ತಿಳಿಯುತ್ತದೆ. ಅಲ್ಲದೆ, ಕಲಬುರಗಿ ಜಿಲ್ಲೆಯ ಕೈಲಾಶ್ ನಗರದಲ್ಲಿ ಜ.28 ರಂದು ಮ್ಯಾನ್‌ಹೋಲ್ ಸ್ವಚ್ಛ ಮಾಡಲು ಹದಿನೆಂಟು ಅಡಿ ಆಳದ ಗುಂಡಿಗೆ ಇಳಿದಿದ್ದ ವೇಳೆ ಉಸಿರುಗಟ್ಟಿಇಬ್ಬರು ಮೃತಪಟ್ಟಿದ್ದರು ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ಅವರು, ಮನುಷ್ಯರಿಂದ ಮಲಗುಂಡಿ ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮಾಡುವ ಕುರಿತು ಹೈಕೋರ್ಟ್‌ನ ಆದೇಶವನ್ನು ಸರ್ಕಾರ ಪಾಲಿಸುತ್ತಿಲ್ಲ. ಪದೇ ಪದೇ ಸೂಚಿಸಿದರೂ ರಾಜ್ಯದಲ್ಲಿ ಕಾಯ್ದೆ ಪಾಲನೆಯಾಗುತ್ತಿಲ್ಲ. ಈ ವಿಚಾರವನ್ನು ಸರ್ಕಾರ ಆದೇಶ ಪಾಲಿಸದಿದ್ದರೆ ಗಂಭೀರ ಪರಿಗಣಿಸದೆ ಹೋದರೆ ನ್ಯಾಯಾಂಗ ನಿಂದನೆ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೆ, ಕಲಬುರಗಿಯಲ್ಲಿ ಇಬ್ಬರು ನೌಕರರ ಮಲಗುಂಡಿ ಸ್ವಚ್ಚಗೊಳಿಸುವಾಗ ಸಾವನ್ನಪ್ಪಿದ ಘಟನೆ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮಾ.1 ರೊಳಗೆ ವರದಿ ನೀಡಬೇಕು ಎಂದು ಸರ್ಕಾರಕ್ಕೆ ಸೂಚಿಸಿದ ಮುಖ್ಯ ನ್ಯಾಯಮೂರ್ತಿಯವರು ವಿಚಾರಣೆ ಮುಂದೂಡಿದರು.