ಕೇಂದ್ರ ಬಜೆಟ್‌ನಲ್ಲಿ ಸಿಗಲಿಲ್ಲ ಸೌಲಭ್ಯ| ಕಲ್ಯಾಣ ಕರ್ನಾಟಕ ಭಾಗದ ಪಂಚ ಸಂಸದರ ಮೌನ| ಬಜೆಟ್‌ನಲ್ಲಿ ಕಲ್ಯಾಣದ ಮಾತೇ ಕೇಳಿ ಬರಲಿಲ್ಲವೆಂದು ಭ್ರಮನಿರಸನಗೊಂಡ ಇಲ್ಲಿನ ಜನತೆ| ರಾಜ್ಯ-ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಅಭಿವೃದ್ಧಿ ಮರೀಚಿಕೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.03): ರಾಜ್ಯ- ಕೇಂದ್ರದಲ್ಲಿ ಬಿಜೆಪಿ ಸರ್ಕಾರ, ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ಯಾದಗಿರಿ ಸೇರಿದಂತಿರುವ ಕಲ್ಯಾಣ ನಾಡಲ್ಲೂ ಕೇಸರಿ ಪಡೆಯದ್ದೇ ದರ್ಬಾರು, ಇದೇ ಮೊದಲ ಬಾರಿಗೆ ಕೈ ಬಿಟ್ಟು ಕಮಲ ಹಿಡಿದ ಕಲ್ಯಾಣದ ಮಂದಿ, ಇಷ್ಟಿದ್ದರೂ ಕಲ್ಯಾಣ ನಾಡಲ್ಲಿ ಪ್ರಗತಿ ಮರ ಹಸಿರು ಚಿಗುರುತ್ತಿಲ್ಲ. ರಾಜ್ಯ-ಕೇಂದ್ರದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಪ್ರಗತಿ ಮರೀಚಿಕೆ, ಡಬ್ಬಲ್ ಎಂಜಿನ್ ಠುಸ್...
ಕೇಂದ್ರ ಬಜೆಟ್‌ಗೆ ಕಲ್ಯಾಣ ನಾಡಿನ ಜನರ ಮನದಾಳದ ಮಾತುಗಳಿವು. ಬಜೆಟ್‌ನಲ್ಲಿ ಕಲ್ಯಾಣದ ಮಾತೇ ಕೇಳಿ ಬರಲಿಲ್ಲವೆಂದು ಜನ ಭ್ರಮನಿರಸನಗೊಂಡಿದ್ದಾರೆ. ತಮ್ಮ ಪ್ರದೇಶ ಕಡೆಗಣಿಸಿರುವ ಕೋಪ ಇವರನ್ನು ನಿರಾಶೆಯಲ್ಲಿ ನೂಕಿದೆ. ಕಲ್ಯಾಣ ನಾಡಿನ ಪ್ರಮುಖ ಬೇಡಿಕೆಗಳಿಗೆ ಜಾಣ ಕಿವುಡು ಧೋರಣೆ ತಳೆಯುವ ಮೂಲಕ ಕೇಂದ್ರ ಕಲ್ಯಾಣ ಮಂದಿ ಕೈಗೆ ‘ಚೊಂಬು’ ನೀಡಿದೆ ಎಂದು ಬಜೆಟ್ ಬಗ್ಗೆ ಆಡಿಕೊಳ್ಳುತ್ತಿದ್ದಾರೆ.
ಈ ಮೊದಲು ಕೈ ಭದ್ರಕೋಟೆಯಾಗಿದ್ದ ಕಲ್ಯಾಣ ನೆಲದಲ್ಲೂ ಇದೇ ಮೊದಲ ಬಾರಿಗೆ ಎಲ್ಲಾ 5 ಸಂಸತ್ ಸ್ಥಾನಗಳಲ್ಲೂ ಕಮಲ ಅರಳಿ ನಿಂತಿದೆ. ಹೀಗಿದ್ದರೂ ರೇಲ್ವೆ, ಆರೋಗ್ಯ, ವೈದ್ಯ ವಿಜ್ಞಾನ, ರಸ್ತೆ, ಹೆದ್ದಾರಿ, ಉದ್ದಿಮೆ ವಲಯದಲ್ಲಿ ಕಲ್ಯಾಣ ನಾಡಿಗೆ ಹೊಸ ಯೋಜನೆಗಳು ದಕ್ಕುತ್ತಿಲ್ಲವೆಂಬ ಅಸಮಾಧಾನ, ಪಂಚ ಸಂಸದರ ಮೌನ, ಡಬ್ಬಲ್ ಇಂಜಿನ್ ಠುಸ್ ಎಂದು ಜನ ಅಲವತ್ತುಕೊಳ್ಳುತ್ತಿದ್ದಾರೆ.
ಸವಲತ್ತುಗಳು ವಿಲವಿಲ:
ಕಲ್ಯಾಣ ನಾಡಿನ ಹೆಬ್ಬಾಗಿಲು ಕಲಬುರಗಿ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ ಇಲ್ಲೆಲ್ಲಾ ಬಿಜೆಪಿಯವರೇ ಸಂಸದರು. ಡಾ. ಉಮೇಶ ಜಾಧವ್, ಭಗವಂತ ಖೂಬಾ, ದೇವೇಂದ್ರಪ್ಪ, ರಾಜಾ ಅಮರೇಶ್ವರ ನಾಯಕ ಹಾಗೂ ಸಂಗಣ್ಣ ಕರಡಿ ಪಾರ್ಲಿಮೆಂಟ್‌ನಲ್ಲಿ ಕಲ್ಯಾಣ ನಾಡನ್ನು ಪ್ರತಿನಿಧಿಸುತ್ತಿದ್ದರೂ ಇಲ್ಲಿನವರ ನಿರೀಕ್ಷೆಯಂತೆ ಈ ನೆಲದ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬೇಡಿಕೆಗಳ ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ, ಕೇಂದ್ರದ ಗಮನ ಯಾಕೆ ಸೆಳೆಯುತ್ತಿಲ್ಲವೋ? ಎಂದು ಸಂಸದರ ಮೌನಕ್ಕೆ ಜನರೇ ವ್ಯಗ್ರರಾಗಿದ್ದಾರೆ.
ಸೇಡಿನ ರಾಜಕೀಯ:
ಯೂಪಿಎ ಸರ್ಕಾರ 2013-14ರಲ್ಲಿ ಘೋಷಿಸಿದ್ದ ರಾಷ್ಟ್ರೀಯ ಹೂಡಿಕೆ- ಉತ್ಪಾದನಾ ವಲಯ- ನಿಮ್‌್ಜ, ಟೆಕ್ಸಟೈಲ್ ಪಾರ್ಕ್ ಯೋಜನೆ, ರೇಲ್ವೆ ವಿಭಾಗೀಯ ಕಚೇರಿಗಳಿಗೆ ದಶಕ ಕಳೆದರೂ ನಯಾಪೈಸೆ ಮಂಜೂರಿಲ್ಲ, ಇಲ್ಲಿನವರೇ ಆಗಿದ್ದ ಡಾ. ಮಲ್ಲಿಕಾರ್ಜುನ ಖರ್ಗೆ ಮುತುವರ್ಜಿ ತೋರಿ ತಂದಿದ್ದ ಈ ಯೋಜನೆಗಳುು ಸೇಡಿನ ರಾಜಕೀಯಕ್ಕೆ ಬಲಿಯಾಗುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೇಂದ್ರದಲ್ಲಿ ಯಾರೊಬ್ಬರೂ ಕೇಳೋರಿಲ್ಲದಂತಾಗಿದೆ. ಇವೆರಡೂ ಈ ಬಾಗದಲ್ಲಿ ಉದ್ಯೋಗ ಸೃಜನೆ, ಆರ್ಥಿಕತೆಗೆ ಜೀವ ತುಂಬುವ ಯೋಜನೆಗಲಾಗಿದ್ದರೂ ಘೋಷಣೆಗಷ್ಟೇ ಸೀಮಿತವಾಗಿರೋದು ದುರಂತ, ಬಜೆಟ್‌ನಲ್ಲಿ ಈ ನೆಲದ ಯಾವ ಯೋಜನೆಗೂ ಮರು ಜೀವ ತುಂಬುವ ಕೆಲಸವಾಗಿಲ್ಲ.
ಏಮ್ಸ್ ಸಂಸ್ಥೆ ಬರೀ ಕನಸು:
ಪ್ರತಿ ರಾಜ್ಯಕ್ಕೊಂದು ಏಮ್ಸ್ ಸಂಸ್ಥೆ ಮಂಜೂರು ಮಾಡುವ ಪ್ರಧಾನಿ ಮೋದಿ ಮಾತಿನಿಂದಾಗಿ ಕಲಬುರಗಿ ಸೇರಿದಂತೆ ಕಲ್ಯಾಣ ನಾಡಿನ ಮಂದಿ ಸೌಲಭ್ಯ ಪೂರ್ಣ ಕಲಬುರಗಿಗೆ ಯಾಕೆ ಏಮ್ಸ್ ಬರಬಾರದು? ಇಲ್ಲಿ ಇಎಸ್‌ಐಸಿ ಸಂಸ್ಥೆಯ ಬೃಹತ್ ಕಟ್ಟಡವಿರೋದರಿಂದ ಇದನ್ನೇ ಮೈಲ್ದರ್ಜೆಗೇರಿಸಿದರೆ ಆಯ್ತು ಎಂದು ವೈದ್ಯ ಶಿ7ಣದ ಉನ್ನತ ಂಸಸ್ಥೆಯ ನಿರೀಕ್ಷೆಯಲ್ಲಿದ್ದವರಿಗೆ ಭ್ರಮ ನಿರಸನ ಉಂಟಾಗಿದೆ. ಏಮ್ಸ್ ಬಗ್ಗೆ ಬಜೆಟ್‌ನಲ್ಲಿ ಮಾತೇ ಕೇಳಿಬರಿಲ್ಲ!
ಕಲಬುರಗಿ ಪ್ರತ್ಯೇಕ ರೇಲ್ವೆ ವಿಭಾಗ ಯೋಜನೆ, ಟೆಕ್ಸ್‌ಟೈಲ್ ಪಾರ್ಕ್, ನಿಮ್ಜ್ ಯೋಜನೆಗಳ ಹೆಸರನ್ನೆತ್ತದೆ ಬೇಕೆಂದೇ ಬಜೆಟ್‌ನಿಂದ ದೂರ ಇಡಲಾಗಿದೆ. ನಯಾಪೈಸೆ ಹಣ ನೀಡದೆ ಉದ್ಯೋಗ ಖಾತ್ರಿ ಯೋಜನೆಗೆ ಕತ್ತರಿ ಹಾಕಲಾಗಿದೆ. ಗರೀಬ್ ಕಲ್ಯಾಣಕ್ಕೂ ಹಣವಿಲ್ಲ. ಕಡೇಚೂರ್ ಕೈಗಾರಿಕಾ ವಲಯ ಉದ್ಯಮ ಸ್ಥಾಪನೆ ಬಗ್ಗೆ ಚಕಾರ ಇಲ್ಲ. ಕಲಬುರಗಿ ವಿಮಾನ ನಿಲ್ದಾಣ ಕಾಂಗ್ರೆಸ್ ಕೊಡುಗೆಯಾದರೂ ಬಿಜೆಪಿ ಸಂಸದರು ತಮ್ಮದೆಂದೇ ಹೇಳಿಕೊಳಲ್ಳುತ್ತಿದ್ದಾರೆ. ಇಷ್ಟೆಲ್ಲ ಅನ್ಯಾಯ ಕೇಂದ್ರದಿಂದ ನಡೆಯುತ್ತಿದ್ದರೂ ಬಿಜೆಪಿ ಸಂಸದರು, ಶಾಸಕರು ಕೈಕಟ್ಟಿಕೊಂಡು ಕುಳಿತಿದ್ದಾರೆ. ರಾಜ್ಯದಲ್ಲಿ ಇವರೆಲ್ಲರೂ ಸೇರಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ತಮಗೆ ಮತ ಹಾಕಿದ ಜನರಿಗೆ ನ್ಯಾಯ ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕಲಬುರಗಿಗೆ ಏಮ್ಸ್ ತರುವ ಯತ್ನ ಮಾಡುತ್ತಿರುವೆ. 7 ಕಡೆ ಜವಳಿ ಪಾರ್ಕ್ ನೀಡೋದಾಗಿ ಹೇಳಿದ್ದಾರೆ. ಅದರಲ್ಲೊಂದು ಕಲಬುರಗಿಗೆ ತರುವ ಯತ್ನ ನನ್ನ ಶಕ್ತಿಮೀರಿ ಮಾಡುವೆ ಎಂದು ಹೇಳಬಯಸುತ್ತೇನೆ. ರೇಲ್ವೆ ವಿಭಾಗೀಯ ಕಚೇರಿಗೂ ಸರ್ಕಾರದ ಹಂತದಲ್ಲಿ ಪ್ರಯತ್ನ ಮುಂದುವರಿಸಿರುವೆ. ವಲಸೆ ಕಾರ್ಮಿಕರಿಗೆ ಪೋರ್ಟಲ್ ಮಾಡಿರೋದು ಬಡವರಿಗೆ ಅನುಕೂಲ, ಒನ್ ನೇಷನ್- ಒನ್ ರೇಷನ್ ಯೋಜನೆಯೂ ಕಾರ್ಮಿಕರಿಗೆ ತುಂಬ ಪ್ರಯೋಜನಕಾರಿ. ಇದು ಇಡೀ ಬಾರತ ದೇಶದ ಬಜೆಟ್ ಆಗಿರೋದರಿಂದ ಎಲ್ಲರ ಅನುಕೂಲ ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಲಾ ಸೀತಾರಾಮನ್ ಉತ್ತಮವಾಗಿ ಮಂಡಿಸಿದ್ದಾರೆ ಎಂದು ಕಲಬುರಗಿ ಸಂಸದ ಡಾ.ಉಮೇಶ ಜಾಧವ್ ಹೇಳಿದ್ದಾರೆ.