ಕಬ್ಬನ್‌ ಪಾರ್ಕ್ ಒಳಗೆ ವಾಹನ ಸಂಚಾರ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

By Kannadaprabha NewsFirst Published Oct 14, 2020, 9:24 AM IST
Highlights

ವಾಹನ ಸಂಚಾರ, ನಿಲುಗಡೆ ನಿಷೇಧಿಸಲು ಕೋರಿ ಪಿಐಎಲ್‌ ಸಲ್ಲಿಕೆ| ಕಬ್ಬನ್‌ ಪಾರ್ಕ್‌ ಒಳಗೆ ವಾಹನ ಸಂಚಾರಕ್ಕೆ ಸರ್ಕಾರ ಮತ್ತೆ ಅನುಮತಿ ನೀಡಿದ ಸರ್ಕಾರ| ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಲಿದ್ದು, ಕಬ್ಬನ್‌ ಪಾರ್ಕ್‌ ಸ್ವಚ್ಛತೆ ಹಾಗೂ ಹಸಿರಿಗೆ ಧಕ್ಕೆ| 

ಬೆಂಗಳೂರು(ಅ.14): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಬ್ಬನ್‌ ಪಾರ್ಕ್ ಒಳಗೆ ವಾಹನಗಳ ಸಂಚಾರ ಹಾಗೂ ನಿಲುಗಡೆಗೆ ವಿಧಿಸಿದ್ದ ನಿಷೇಧವನ್ನು ಮುಂದುವರಿಸಲು ನಿರ್ದೇಶಿಸುವಂತೆ ಕೋರಿದ್ದ ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ಕಬ್ಬನ್‌ ಪಾರ್ಕ್ ನಡಿಗೆದಾರರ ಸಂಘದ ಅಧ್ಯಕ್ಷರೂ ಆಗಿರುವ ವಕೀಲ ಎಸ್‌.ಉಮೇಶ್‌ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಉಪ ನಿರ್ದೇಶಕರು ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯಕ್ಕೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿತು.

ಕಬ್ಬನ್‌ ಪಾರ್ಕ್ ಅಭಿವೃದ್ಧಿಗೆ ಯೋಜನೆಗೆ ಸರ್ವೇ ಕಾರ್ಯ ಆರಂಭ

ಕಬ್ಬನ್‌ ಪಾರ್ಕ್‌ ಒಳಗೆ ವಾಹನ ಸಂಚಾರಕ್ಕೆ ಸರ್ಕಾರ ಮತ್ತೆ ಅನುಮತಿ ನೀಡಿದೆ. ಇದರಿಂದ ಉದ್ಯಾನದಲ್ಲಿ ಪುನಃ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗಲಿದ್ದು, ಅಲ್ಲಿನ ಸ್ವಚ್ಛತೆ ಹಾಗೂ ಹಸಿರಿಗೆ ಧಕ್ಕೆಯಾಗಲಿದೆ. ಸಾರ್ವಜನಿಕರ ಸ್ವಚ್ಛ ಗಾಳಿ ಸೇವನೆ ಹಕ್ಕು ಸಹ ಉಲ್ಲಂಘನೆ ಆಗಲಿದೆ. ಆದ್ದರಿಂದ ನಗರ ಭೂ ಸಾರಿಗೆ ನಿರ್ದೇಶನಾಲಯದ ಆಯುಕ್ತರ ಶಿಫಾರಸ್ಸು ಅನುಷ್ಠಾನ ಮಾಡುವ ಮೂಲಕ ಕಬ್ಬನ್‌ ಪಾರ್ಕ್ನಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆ ಸ್ಥಗಿತಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು. ಈ ಅರ್ಜಿ ಇತ್ಯರ್ಥವಾಗುವವರೆಗೂ ವಾಹನ ಸಂಚಾರ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.
 

click me!