Omicron ಆತಂಕ: ಗದಗ ಜಿಲ್ಲಾದ್ಯಂತ ಹೈ ಅಲರ್ಟ್‌

By Kannadaprabha NewsFirst Published Dec 1, 2021, 12:32 PM IST
Highlights

*  ರೈಲಿನಲ್ಲಿ ಮಹಾರಾಷ್ಟ್ರದಿಂದ ಬಂದಿಳಿದ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್‌ ಟೆಸ್ಟ್‌
*  ಭಯ ಬೇಡ, ಎಚ್ಚರಿಕೆ ಇರಲಿ
*  ನಿಲ್ದಾಣದಲ್ಲಿಯೇ ಪರೀಕ್ಷೆ-ಲಸಿಕೆ
 

ಗದಗ(ಡಿ.01):  ಜಗತ್ತಿನ 13ಕ್ಕೂ ಹೆಚ್ಚಿನ ದೇಶಗಳಲ್ಲಿ ವ್ಯಾಪಿಸಿದ ‘ಒಮಿಕ್ರೋನ್‌’(Omicron) ರೂಪಾಂತರಿ ಕೊರೋನಾ ವೈರಸ್‌(Coronavirus) ಆತಂಕದ ಹಿನ್ನೆಲೆಯಲ್ಲಿ ಗದಗ(Gadag) ಜಿಲ್ಲಾಡಳಿತ ಹೈಅಲರ್ಟ್‌ ಆಗಿದ್ದು ಮಂಗಳವಾರ ಮಹಾರಾಷ್ಟ್ರದಿಂದ(Maharashtra) ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಪ್ರಯಾಣಿಕರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಿದೆ. ಜತೆಗೆ ಎರಡನೇ ಡೋಸ್‌ ಲಸಿಕೆ ಪಡೆಯದವರಿಗೆ ಸ್ಥಳದಲ್ಲಿಯೇ ಲಸಿಕೆ ನೀಡದೆ.

ಎರಡನೇ ಡೋಸ್‌ ಲಸಿಕೆ ಪಡೆಯದವರನ್ನು ಗುರುತಿಸಿ ಲಸಿಕೆ ಪಡೆಯುವುದು ಹಾಗೂ ಹೊರ ರಾಜ್ಯದಿಂದ ಆಗಮಿಸಿದ ಪ್ರಯಾಣಿಕರನ್ನು(Passengers) ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಗದಗ ಜಿಲ್ಲಾಡಳಿತ ಮಂಗಳವಾರ ರೈಲ್ವೆ ನಿಲ್ದಾಣದಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ ಪರೀಕ್ಷೆ ಆರಂಭಿಸಿದೆ. ಜಿಲ್ಲೆಯ ಬಹಳಷ್ಟು ಜನರು ಗೋವಾಕ್ಕೆ(Goa) ಕೆಲಸ ಅರಸಿ ಹೋಗಿ ಬರುತ್ತಾರೆ. ಕೆಲ ದಿನಗಳ ಹಿಂದಷ್ಟೇ ನಿತ್ಯವೂ ಗದಗ ಜಂಕ್ಷನ್‌ಗೆ ಸಂಪರ್ಕ ಕಲ್ಪಿಸುವ ಪ್ರಯಾಣಿಕರಿಗೆ ಪೂರ್ಣ ಪ್ರಮಾಣದ ರೈಲು ಸೌಲಭ್ಯ ದೊರಕಿತ್ತು.

Omicron Variant: ಕೊರೋನಾ ಹೊಸ ತಳಿ ತಡೆಗಟ್ಟಲು ತಜ್ಞರ ಸಮಿತಿ ಶಿಫಾರಸು: ಇಲ್ಲಿದೆ ಡಿಟೇಲ್ಸ್!

ನಿಲ್ದಾಣದಲ್ಲಿಯೇ ಪರೀಕ್ಷೆ-ಲಸಿಕೆ:

ಮೊದಲ ಹಾಗೂ ಎರಡನೇ ಅಲೆಯಲ್ಲಿ ನೂರಾರು ಜನರ ಸಾವಿಗೆ ಕಾರಣವಾಗಿದ್ದ ಕೊರೋನಾ ತಡೆಗೆ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತೆ ತೆಗೆದುಕೊಂಡಿದೆ. ಮಂಗಳವಾರ ಬೆಳಗ್ಗೆ ಮುಂಬೈನಿಂದ(Mumbai) ಗದಗ ನಗರಕ್ಕೆ ರೈಲು ಆಗಮಿಸುತ್ತಿದ್ದಂತೆಯೇ ಕೆಳಗಿಳಿದ ಪ್ರಯಾಣಿಕರನ್ನು ಆರ್‌ಟಿಪಿಸಿಆರ್‌(RTPCR) ಪರೀಕ್ಷೆಗೊಳಪಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. 2ನೇ ಡೋಸ್‌ ಲಸಿಕೆ(Vaccine) ಪಡೆಯದವರನ್ನು ಗುರುತಿಸಿ ರೈಲ್ವೆ ನಿಲ್ದಾಣದಲ್ಲಿ ಲಸಿಕೆ ನೀಡಲಾಯಿತು. ಕೆಲವರು ಪರೀಕ್ಷೆಗೆ ಸಹಕರಿಸದೆ ಇರುವ ದೃಶ್ಯಗಳು ಕಂಡು ಬಂದವು.

ಪೊಲೀಸ್‌ ಸಿಬ್ಬಂದಿ ಕೊರತೆ:

ಸ್ಥಳದಲ್ಲಿ ಪೊಲೀಸ್‌(Police) ಸಿಬ್ಬಂದಿ ಕೊರತೆ ಇರುವುದರಿಂದ ಆರೋಗ್ಯ ಇಲಾಖೆ(Department of Health) ಸಿಬ್ಬಂದಿ ಪ್ರಯಾಣಿಕರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಲು ಪರದಾಡಿದರು. ಪರೀಕ್ಷೆಗೆ ಹೆದರಿ ಕೆಲವರು ತಪ್ಪಿಸಿಕೊಂಡು ಹೋದರೆ, ಹಲವರು ಪರೀಕ್ಷೆಗೆ(Covid Test) ಹಿಂದೇಟು ಹಾಕಿ ಮಾತಿಗೆ ಮಾತು ಬೆಳೆಸಿದರು. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿಯೊಂದಿಗೆ ಅಗತ್ಯ ಪೊಲೀಸ್‌ ಸಿಬ್ಬಂದಿ ನೇಮಿಸಿದರೆ ಜಿಲ್ಲಾಡಳಿತ ಕೈಗೊಂಡ ಕಾರ್ಯ ಫಲ ನೀಡಲಿದೆ. ಇಲ್ಲದಿದ್ದರೆ ಕೊರೋನಾಕ್ಕೆ ಮತ್ತೆ ಜನರು ಬಲಿಯಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Covid-19 Variant: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಹೊಸ ಮಾರ್ಗಸೂಚಿ!

ದೂರವಾಗಿಲ್ಲ ಆತಂಕ

ಕಳೆದ 60 ದಿನಗಳಿಂದ ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಪತ್ತೆಯಾಗದೆ ಕೊರೋನಾ ಮುಕ್ತವಾಗಿತ್ತು. ಆದರೆ, ಧಾರವಾಡದ(Dharwad0 ಎಸ್‌ಡಿಎಂ ಆಸ್ಪತ್ರೆಯಲ್ಲಿ ಸೋಂಕು ಸ್ಫೋಟಗೊಂಡಿದ್ದು ಅದರಲ್ಲಿ ಜಿಲ್ಲೆಯ ಮೂವರು ಇದ್ದಾರೆ. ಅವರೆಲ್ಲರ ಸಂಪರ್ಕಕ್ಕೆ ಬಂದವರ ಪರೀಕ್ಷೆಯ ವರದಿಗಳು ಬರಬೇಕಿದೆ. ಜಿಲ್ಲೆಯ ಬಹುತೇಕ ಜನರು ಚಿಕಿತ್ಸೆಗಾಗಿ ಎಸ್‌ಡಿಎಂ ಆಸ್ಪತ್ರೆಯನ್ನು(SDM Hospital0 ಅವಲಂಬಿಸಿದ್ದಾರೆ. ನ. 17ರಂದು ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರು ಹಾಗೂ ಅವರ ಸಂಪರ್ಕಕ್ಕೆ ಬಂದವರ ತಪಾಸಣೆಗೆ ಜಿಲ್ಲಾಡಳಿತ ಆರೋಗ್ಯ ಇಲಾಖೆಗೆ ಸೂಚಿಸಿದ್ದು ಗಂಟಲು ದ್ರವದ ಮಾದರಿ ಸಂಗ್ರಹಣಾ ಕಾರ್ಯ ಪ್ರಗತಿಯಲ್ಲಿದೆ. ಆ ವರದಿಗಳ ಬಗ್ಗೆ ಜನರು ಚಿತ್ತ ನೆಟ್ಟಿದ್ದು ಏನಾಗಲಿದೆ ಎಂಬ ಆತಂಕದಲ್ಲಿ ಇದ್ದಾರೆ.

ಭಯ ಬೇಡ, ಎಚ್ಚರಿಕೆ ಇರಲಿ

ಜನರು ಭಯ, ಆತಂಕಕ್ಕೆ ಒಳಗಾಗದೆ ಕೋವಿಡ್‌ ಮುನ್ನಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಲಸಿಕೆ ಪಡೆಯದವರು ಲಸಿಕೆ ಪಡೆಯಬೇಕು. ಮಾಸ್ಕ್‌(Mask). ಸ್ಯಾನಿಟೈಸರ್‌(Sanitizer) ಬಳಸಬೇಕು. ಜನದಟ್ಟಣೆಯಿಂದ ದೂರವಿರಬೇಕು. ಸೋಂಕಿನ ಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಎನ್ನುತ್ತಾರೆ ಗದಗ ಜಿಮ್ಸ್‌ ಆಸ್ಪತ್ರೆಯ ಕೋವಿಡ್‌ ನಿರ್ವಹಣೆಯ ಹಿರಿಯ ವೈದ್ಯರ ತಂಡ.
 

click me!