Omicron Variant: ಕೊರೋನಾ ಹೊಸ ತಳಿ ತಡೆಗಟ್ಟಲು ತಜ್ಞರ ಸಮಿತಿ ಶಿಫಾರಸು: ಇಲ್ಲಿದೆ ಡಿಟೇಲ್ಸ್!

*ಒಮಿಕ್ರೋನ್‌ ಭೀತಿ ಹಿನ್ನೆಲೆ: ತಜ್ಞರ ಸಮಿತಿ ಶಿಫಾರಸು
*ಸರ್ಕಾರಿ ಸೇವೆ, ಸಾರ್ವಜನಿಕ ಸ್ಥಳ ಪ್ರವೇಶಕ್ಕೆ ಲಸಿಕೆ ಕಡ್ಡಾಯ 
*ಲಸಿಕೆ ಪಡೆಯದವರಿಗೆ ಪಡಿತರ, ವೇತನ, ಪಿಂಚಣಿ ಸೇರಿ ಯಾವುದೇ ಸೇವೆ ಬೇಡ
 

New Corona Variant Omicron spread Preventive measures Recommended by a panel of experts in Karnataka mnj

ಬೆಂಗಳೂರು(ಡಿ.1): ಕೊರೋನಾ ಲಸಿಕೆಯ (Corona Vaccine) ಎರಡು ಡೋಸ್‌ ಪಡೆದವರಿಗೆ ಮಾತ್ರ ಪಡಿತರ, ವೇತನ, ಪಿಂಚಣಿ ಸೇರಿದಂತೆ ಸರ್ಕಾರದ ಎಲ್ಲ ನಾಗರಿಕ ಸೇವೆಗಳಿಗೆ (Public services) ಹಾಗೂ ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂಬುದೂ ಸೇರಿದಂತೆ ಒಮಿಕ್ರೋನ್‌ ರೂಪಾಂತರಿ (Omicron Variant) ಹಾವಳಿ ತಡೆಗೆ ರಾಜ್ಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು (Panel of experts) ರಾಜ್ಯ ಸರ್ಕಾರಕ್ಕೆ 13 ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಮಂಗಳವಾರ ವಿಧಾನಸೌಧದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ (Dr. K Sudhakar) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಶಿಫಾರಸುಗಳನ್ನು ತಾಂತ್ರಿಕ ಸಮಿತಿಯು ಸರ್ಕಾರಕ್ಕೆ ನೀಡಿದೆ.

ಪ್ರಮುಖವಾಗಿ ಪಡಿತರ, ಪೆಟ್ರೋಲ್‌, ಡೀಸೆಲ್‌, ವೇತನ, ಪಿಂಚಣಿ, ನೀರು ಸಂಪರ್ಕ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಪಡೆಯಲು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಸಲು ಎರಡು ಡೋಸ್‌ ಕೋವಿಡ್‌ ಲಸಿಕೆ ಪಡೆದಿರುವುದನ್ನು ಕಡ್ಡಾಯಗೊಳಿಸಬೇಕು. ಅಲ್ಲದೆ, ಚಿತ್ರಮಂದಿರ, ಮಾಲ್‌, ದೇವಾಲಯ, ಪ್ರವಾಸಿ ತಾಣಗಳು ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳ ಪ್ರವೇಶ ಹಾಗೂ ಸಂಚಾರಕ್ಕೂ ಎರಡೂ ಡೋಸ್‌ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು ಎಂಬ ನಿಯಮ ರೂಪಿಸಿ ಎಂದು ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಶೀಘ್ರವೇ ಈ ಬಗ್ಗೆ ಅಂತಿಮ ತೀರ್ಮಾನ!

ಸಮಿತಿಯು ನೀಡಿರುವ ಈ ಕಠಿಣ ಶಿಫಾರಸುಗಳ ವಿಚಾರವನ್ನು ಆರೋಗ್ಯ ಸಚಿವ ಸುಧಾಕರ್‌ ಅವರು ಸಭೆ ಮುಗಿದ ಕೂಡಲೇ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದು, ಸರ್ಕಾರ ಈ ಶಿಪಾರಸುಗಳ ಪರಾಮರ್ಶೆ ಆರಂಭಿಸಿದೆ. ಶೀಘ್ರವೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿಯು ನೀಡಿರುವ ಶಿಫಾರಸುಗಳಲ್ಲಿ ರಾಜ್ಯದ ಪ್ರತಿಯೊಬ್ಬರೂ ಎರಡನೇ ಡೋಸ್‌ ಕೋವಿಡ್‌ ಲಸಿಕೆ ಪಡೆಯುವಂತೆ ಒತ್ತಡ ನಿರ್ಮಾಣ ಮಾಡುವ ತಂತ್ರವಾಗಿ ಪಡಿತರ (Ration), ಪೆಟ್ರೋಲ್‌(Petrol), ಡೀಸೆಲ್‌ (Diesel), ವೇತನ, ಪಿಂಚಣಿ, ನೀರು ಸಂಪರ್ಕ ಸೇರಿದಂತೆ ಎಲ್ಲ ನಾಗರಿಕ ಸೇವೆಗಳನ್ನು ಪಡೆಯಲು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ಸೌಲಭ್ಯ ಬಳಕೆಗೆ ಅವಕಾಶ ನೀಡಬೇಕು ಎಂದು ಶಿಫಾರಸು ಮಾಡಿದೆ.

ವಾರದಲ್ಲಿ ಶೇ.5ರಷ್ಟುಮಕ್ಕಳಿಗೆ ಕೋವಿಡ್‌ ಪರೀಕ್ಷೆ

ಇನ್ನು, ಶಾಲಾ-ಕಾಲೇಜುಗಳಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸೋಂಕು ಪ್ರಮಾಣ ನಿಯಂತ್ರಣಕ್ಕೆ ಪ್ರತಿ ಶಾಲಾ-ಕಾಲೇಜುಗಳಲ್ಲಿ ವಾರದಲ್ಲಿ ಶೇ.5ರಷ್ಟುಮಕ್ಕಳಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯ ಮಾಡಬೇಕು. ಹೊರಾಂಗಣದಲ್ಲಿ ನಡೆಸುವ ಸಭೆ, ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಭಾಗಿಯಾಗಲು ಅವಕಾಶ ನೀಡಬಾರದು. ಒಳಾಂಗಣ ಸಭಾಂಗಣದಲ್ಲಿ ನಡೆಸುವ ಸಮಾರಂಭಗಳಲ್ಲಿ 200 ಮಂದಿಗೆ ಮಾತ್ರ ಅವಕಾಶ ನೀಡಬೇಕು. ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಾರುಕಟ್ಟೆಸೇರಿದಂತೆ ಜನದಟ್ಟಣೆಯ ಪ್ರದೇಶಗಳಲ್ಲಿ ನಿತ್ಯ ಕಡ್ಡಾಯ ಕೋವಿಡ್‌ ತಪಾಸಣೆ ಮಾಡಬೇಕು. ಜತೆಗೆ ಈ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ರೋಗ ಲಕ್ಷಣಗಳು ಇರುವವರಿಗೆ ಪ್ರತ್ಯೇಕ ಚಿಕಿತ್ಸೆ

ಒಮಿಕ್ರೋನ್‌ ವೈರಾಣು ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಕ್ರಮ ವಹಿಸಬೇಕು. ಕಳೆದ 14 ದಿನಗಳ ಹಿಂದೆ ಬಂದಿರುವ ಹಾಗೂ ಮುಂದೆ ಬರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ (International Travelers) ಕಡ್ಡಾಯವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆ (RTPCR Test) ನಡೆಸಬೇಕು. ಅವರಲ್ಲಿ ನೆಗೆಟಿವ್‌ ವರದಿ ಇದ್ದರೂ 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯಗೊಳಿಸಬೇಕು. ರೋಗ ಲಕ್ಷಣಗಳು ಇರುವವರಿಗೆ ಪ್ರತ್ಯೇಕ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು. ಮನೆಯಲ್ಲಿ ಕ್ವಾರಂಟೈನ್‌ ಇರುವವರ ಮೇಲೆ ನಿಗಾ ಇಡಬೇಕು. ಪಾಸಿಟಿವ್‌ ಬಂದವರಿಗೆ ತಕ್ಷಣ ಜಿನೋಮಿಕ್‌ ಸ್ವೀಕ್ವೆಸ್ಸ್‌ ಟೆಸ್ಟ್‌ಗೆ ಒಳಪಡಿಸಬೇಕು ಎಂದು ಸಮಿತಿಯು ಸಲಹೆ ನೀಡಿದೆ.

ಕಾನೂನು ತಂದು ಲಸಿಕೆ ಹಾಕೋದು ಸರಿಯಲ್ಲ

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌, ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯು ಸಭೆಯಲ್ಲಿ ಕೆಲವೊಂದು ಸಲಹೆಗಳನ್ನು ನೀಡಿದೆ. ಲಸಿಕೆಯ ಎರಡು ಡೋಸ್‌ ಆಗದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಬಾರದು ಎಂಬ ಮಾತನ್ನೂ ಹೇಳಿದೆ. ಆದರೆ ನಾನೇ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಯಾವ ಶಿಫಾರಸು ಅನುಷ್ಠಾನ ಸಾಧ್ಯ, ಯಾವುದು ಸಾಧ್ಯವಿಲ್ಲ ಎಂದು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸರ್ಕಾರ ಕಾನೂನು ತಂದು, ದಂಡ ವಿಧಿಸಿ ಲಸಿಕೆ ಹಾಕುವುದು ಸರಿಯಲ್ಲ. ಒಮಿಕ್ರೋನ್‌ ಹರಡುವ ಪ್ರಮಾಣ ಜಾಸ್ತಿ ಇದೆ, ಆದರೆ ತೀವ್ರತೆ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಜನರೇ ಸ್ವಯಂ ಪ್ರೇರಿತವಾಗಿ ಲಸಿಕೆ ಪಡೆಯಬೇಕು ಎಂದು ಮನವಿ ಮಾಡಿದರು.

Omicron Alert: ಟೆಸ್ಟಿಂಗ್ ಹೆಚ್ಚಳಕ್ಕೆ ಸೂಚನೆ, ಕೇಂದ್ರದ ಮಾರ್ಗಸೂಚಿ ಹೀಗಿದೆ

ಏನೇನು ಶಿಫಾರಸು?

- ಲಸಿಕೆ ಪಡೆಯುವಂತೆ ಜನರ ಮೇಲೆ ಒತ್ತಡ ನಿರ್ಮಾಣ ಮಾಡಬೇಕು

- ಹೀಗಾಗಿ ಪೆಟ್ರೋಲ್‌, ನೀರು ಸಂಪರ್ಕಕ್ಕೂ ಲಸಿಕೆ ಕಡ್ಡಾಯ ಇರಲಿ

- ಹೊರಾಂಗಣದಲ್ಲಿ ನಡೆಸುವ ಸಮಾರಂಭಕ್ಕೆ 500 ಜನರ ಮಿತಿ ಇರಲಿ

- ಒಳಾಂಗಣ ಕಾರ್ಯಕ್ರಮಗಳಿಗೆ 200 ಸಭಿಕರ ಮಿತಿ ನಿಗದಿ ಮಾಡಿ

- ಬಸ್‌, ರೈಲು ನಿಲ್ದಾಣ, ಮಾರುಕಟ್ಟೆಗಳಲ್ಲಿ ಪ್ರತಿನಿತ್ಯ ಟೆಸ್ಟ್‌ ಮಾಡಿ

- ಸಾರ್ವಜನಿಕ ಸ್ಥಳಗಳಲ್ಲಿ ವಿಶೇಷ ಲಸಿಕಾ ಅಭಿಯಾನ ಆಯೋಜಿಸಿ

- ಶಾಲಾ- ಕಾಲೇಜುಗಳಲ್ಲಿ ಪ್ರತಿ ವಾರ ಕೋವಿಡ್‌ ಪರೀಕ್ಷೆ ನಡೆಸಿ

- ಒಮಿಕ್ರೋನ್‌ ಬಗ್ಗೆ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ನಿರ್ಬಂಧಿಸಿ

Latest Videos
Follow Us:
Download App:
  • android
  • ios