ಭಾರೀ ಮಳೆಗೆ ಉಕ್ಕೇರುತ್ತಿದ್ದಾಳೆ ನೇತ್ರಾವತಿ

By Kannadaprabha NewsFirst Published Oct 15, 2020, 4:29 PM IST
Highlights

ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಅಪಾರ ಪ್ರಮಾಣದಲ್ಲಿ ಹೆಚ್ಚಳವಾಗಿದೆ. 

ಉಪ್ಪಿನಂಗಡಿ (ಅ.15) : ಕಳೆದೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳ ನೀರಿನ ಮಟ್ಟದಲ್ಲಿ ಗಮನಾರ್ಹ ಹೆಚ್ಚಳವುಂಟಾಗಿ 28.3 ಮೀಟರ್‌ ಸನಿಹಕ್ಕೇರಿದೆ. ಸತತ ಮಳೆಯಿಂದಾಗಿ ನದಿಗಳೆರಡರಲ್ಲೂ ನೀರಿನ ಹರಿವು ಏರಿಕೆಯಾಗಿದ್ದು, ಅಪಾಯದ ಮಟ್ಟಕ್ಕಿಂತ ಕೆಳಗೆ ಹರಿಯುತ್ತಿದೆ. ಇಲ್ಲಿನ ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಅಳವಡಿಸಲಾದ ಮಾಪನದ ಪ್ರಕಾರ ಅಪಾಯದ ಮಟ್ಟ31.5 ಮೀಟರ್‌ ಆಗಿದೆ.

ಚಿಂಚೋಳಿ: ಪ್ರವಾಹದಲ್ಲಿ ಸಿಲುಕಿ ವಿದ್ಯುತ್‌ ಕಂಬವೇರಿ ಕುಳಿದ್ದವರ ರಕ್ಷಣೆ ...

ಇಲ್ಲಿಗೆ ಸಮೀಪದ ಪೆರಿಯಶಾಂತಿ ಕೊಕ್ಕಡ ರಸ್ತೆಯಲ್ಲಿನ ಚರಂಡಿಗೆ ಮಣ್ಣು ಜರಿದು ಬಿದ್ದ ಪರಿಣಾಮ ಚರಂಡಿ ನೀರು ಸರಾಗವಾಗಿ ಹರಿಯಲಾಗದೆ ರಸ್ತೆಯೆಲ್ಲಾ ಜಲಾವೃತಗೊಂಡು ವಾಹನ ಸಂಚಾರ ಕೆಲ ಸಮಯ ತಡೆ ಹಿಡಿಯಲ್ಪಟ್ಟಘಟನೆ ಬುಧವಾರ ನಡೆಯಿತು. ಸುಬ್ರಹ್ಮಣ್ಯ - ಧರ್ಮಸ್ಥಳ ಕ್ಷೇತ್ರದ ಯಾತ್ರಾರ್ಥಿಗಳು ಪ್ರಯಾಣಿಸುವ ಈ ರಸ್ತೆಯಲ್ಲಿ ರಸ್ತೆ ಬದಿಯ ಚರಂಡಿಯ ನೀರು ರಸ್ತೆಯನ್ನಾವರಿಸಿದ ಕಾರಣ, ಯಾತ್ರಾರ್ಥಿಗಳು ಸೇತುವೆ ಮುಳುಗಡೆಯಾಗಿರಬಹುದು ಎಂದು ಅಂದಾಜಿಸಿ ವಾಹನ ಚಲಾಯಿಸಲು ಮುಂದಾಗದೆ ರಸ್ತೆಯಲ್ಲಿಯೇ ನಿಂತ ಕಾರಣ ಸುಮಾರು 20 ನಿಮಿಷಗಳ ಕಾಲ ರಸ್ತೆ ಸಂಚಾರ ತಡೆಹಿಡಿಯಲಾಯಿತು. 

ಮಾಹಿತಿ ತಿಳಿದ ಪೊಲೀಸರು ಹಾಗೂ ಸ್ಥಳೀಯರು ಸ್ಥಳಕ್ಕಾಗಮಿಸಿ ಚರಂಡಿಯಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಿದ ಬಳಿಕ ರಸ್ತೆ ತೆರವುಗೊಂಡು ವಾಹನ ಸಂಚಾರ ಯಥಾಸ್ಥಿತಿಗೆ ಮರಳಿತ್ತು.

click me!