ದಾವಣಗೆರೆ (ಜು.28): ದಾವಣಗೆರೆ ಹಳೆ ಭಾಗದ ವಾಣಿಜ್ಯ ಸಂಕೀರ್ಣ ಹೊಂದಿರುವ 6 ಪ್ರಮುಖ ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶ ತಡೆ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಬೆಳಿಗ್ಗೆ 8 ರಿಂದ ರಾತ್ರಿ 8ರವರೆಗೆ ಭಾರೀ ಸರಕು ವಾಹನಗಳ ಪ್ರವೇಶ ನಿಷೇಧಿಸಲು ಚಿಂತನೆ ನಡೆಸಲಾಗಿದೆ. ವಿವಿದ ವಲಯಗಳ ಅಭಿಪ್ರಾಯ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಿಷ್ಯಂತ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧ್ಯಕ್ಷತೆಯಲ್ಲಿ ಪ್ರಮುಖ ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶ ನಿಷೇಧಿತ ರಸ್ತೆಯಾಗಿ ಮಾಡುವ ಕುರಿತು ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲಾ ಕೇಂದ್ರದ ಹಳೆ ಭಾಗದ ಮಂಡಿಪೇಟೆ ರಸ್ತೆ ಮಹಾವೀರ ರಸ್ತೆ ಎಕ್ಸ್ ಮುನ್ಸಿಪಲ್ ರಸ್ತೆ, ಎನ್ ಆರ್ ರಸ್ತೆ, ಹಳೆ ಬೇತೂರು ರಸ್ತೆ, ಬೂದಾಳ್ ರಸ್ತೆಗಳು ಬಹುತೇಕ ಕಿರಿದಾಗಿದ್ದು 30 ಅಡಿಯ ಈ ಆರೂ ರಸ್ತೆಗಳನ್ನು 120 ಅಡಿ ವಿಸ್ತರಿಸಲು ಸಾಧ್ಯವಿಲ್ಲ ಎಂದರು.
ರಾಷ್ಟ್ರೀಯ ಹೆದ್ದಾರಿಯಲ್ಲೇ ಬೃಹತ್ ಹೊಂಡಗಳು : ಪದೇ ಪದೇ ಅವಘಡ
ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಕಡಿಮೆ ಮಾಡಬಹುದು. ಈ ರಸ್ತೆಗಳು ರಾಜ್ಯ ಹೆದ್ದಾರಿ 65 ಪ್ರಾರಂಭದಿಂದ ಅರಳಿ ಮರ ವೃತ್ತದವರೆಗೆ ಹೊಂದಿಕೊಂಡಿರುವ ಕಾರಣ ಭಾರೀ ಸರಕು ವಾಹನಗಳ ನಿಷೇಧಿಸಲು ಕ್ರಮ ಅನಿವಾರ್ಯವಾಗಿದೆ ಎಂದರು.
ಈಗಿನ ಜನಸಂಖ್ಯೆ ವಾಹನ ದಟ್ಟಣೆಗೆ ಅನುಗುಣವಾಗಿ ಈ ರಸ್ತೆಗಳು ಕಿರಿದಾಗಿದೆ. ರಸ್ತೆಗಳಲ್ಲಿ ಪ್ರತಿಷ್ಟಿತ ವಾಣಿಜ್ಯ ಮಳಿಗೆಗಳು ಜನ ವಸತಿ ಪ್ರದೇಶಗಳು, ಶಾಲಾ-ಕಾಲೇಜುಗಳಿರುವುದರಿಂದ ಕೆಲ ರಸ್ತೆಗಳಲ್ಲಿ ಎರಡೂ ಕಡೆ ಮತ್ತು ರಸ್ತೆ ಒಂದು ಭಾಗದಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಭಾರಿ ವಾಹನ ಸಂಚಾರ ಮಾಡುವುದರಿಂದ ಲಘು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ ಎಂದರು.