ಕಡಬ ತಾಲೂಕಿನಲ್ಲಿ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಇಲ್ಲಿನ ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕುಮಾರಧಾರ ನದಿಯಲ್ಲಿ ಆನೆಯ ಮೃತದೇಹವೊಂದು ತೇಲಿ ಬಂದ ಘಟನೆ ನಡೆದಿದೆ.
ಕಡಬ (ಜು.16): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ನದಿ, ಹಳ್ಳ-ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ಕಡಬ ತಾಲೂಕಿನಲ್ಲೂ ಎಡೆಬಿಡದೆ ಮಳೆಯಾಗುತ್ತಿರುವ ಹಿನ್ನೆಲೆ ಇಲ್ಲಿನ ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಕುಮಾರಧಾರ ನದಿಯಲ್ಲಿ ಆನೆಯ ಮೃತದೇಹವೊಂದು ತೇಲಿ ಬಂದ ಘಟನೆ ನಡೆದಿದೆ. ಕುಮಾರಧಾರ ನದಿಯ ಪ್ರವಾಹಕ್ಕೆ ಸಿಲುಕಿ ಆನೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಕಮಾರಧಾರ ನದಿ ನೀರಿನ ಮಟ್ಟವನ್ನು ತಡ ರಾತ್ರಿ ಪರೀಕ್ಷಿಸಲು ತೆರಳಿದಾಗ ನೆರೆಯ ನೀರಿನಲ್ಲಿ ಪ್ರಾಣಿಯ ಮೃತದೇಹವೊಂದು ಮನ್ಮಥ ಬಟ್ಟೋಡಿ ಮತ್ತು ತಂಡದ ಗಮನಕ್ಕೆ ಬಂದಿದೆ. ಸೂಕ್ಷ್ಮವಾಗಿ ಗಮನಿಸಿದಾಗ ಆನೆಯ ಮೃತದೇಹ ಎಂಬುದು ಸ್ಪಷ್ಟವಾಗಿದೆ.
ಆನೆ ಮೃತದೇಹ ನೀರಿನಲ್ಲಿ ಕೊಚ್ಚಿ ಮುಂದೆ ಸಾಗಿದೆ. ಆನೆ ಕೆಲ ದಿನಗಳ ಹಿಂದೆ ಸತ್ತು ಪ್ರವಾಹ ಹೆಚ್ಚಾದ ಹಿನ್ನೆಲೆ ತೇಲಿ ಬಂದಿರಬಹುದು ಎಂದು ಕೂಡ ಶಂಕಿಸಲಾಗಿದೆ. ನಿರಂತರ ಮಳೆಯಿಂದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಪ್ರವಾಸಿಗರು ಎಚ್ಚರದಿಂದಿರುವಂತೆ ಸೂಚನೆ ನೀಡಲಾಗಿದೆ.
ಭಾರಿ ಮಳೆ: ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸ್ನಾನಘಟ್ಟ ಮುಳುಗಡೆ
ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಸೋಮವಾರ ಸ್ನಾನಘಟ್ಟ ಮುಳುಗಡೆಯಾಗಿದೆ.
ಭಾನುವಾರ ರಾತ್ರಿಯಿಂದ ನಿರಂತರ ಧಾರಾಕಾರ ಮಳೆ ಆರಂಭಗೊಂಡಿದ್ದು ಸೋಮವಾರ ಬೆಳಗ್ಗೆ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವ ಹಿನ್ನಲೆಯಲ್ಲಿ ನದಿ ನೀರಿಗೆ ಇಳಿಯಲು ನಿರ್ಬಂಧಿಸಲಾಗಿದ್ದು, ನದಿ ದಡದಲ್ಲಿ ಡ್ರಮ್ ಗಳಲ್ಲಿ ನೀರು ಸಂಗ್ರಹಿಸಿ ಭಕ್ತರಿಗೆ ತೀರ್ಥ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಕುಮಾರಧಾರ ಸ್ನಾನಘಟ್ಟ ಪ್ರದೇಶದಲ್ಲಿ ಭಕ್ತರು ನದಿ ನೀರಿನ ಬಳಿ ತೆರಳದಂತೆ ಎಚ್ಚರ ವಹಿಸಲು ಹಾಗೂ ಮುಂಜಾಗ್ರತಾ ದೃಷ್ಟಿಯಿಂದ ಹೋಮ್ ಗಾರ್ಡ್ ಹಾಗೂ ದೇವಸ್ಥಾನದ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ.
ಸೋಮವಾರ ದ ದಿನವಿಡೀ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಧಾರಕಾರ ಮಳೆಯಾಗಿದ್ದು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ, ದರ್ಪಣ ತೀರ್ಥ ನದಿಗಳು ಸೇರಿಸಿ ಪರಿಸರದ ನದಿ, ಹೊಳೆ, ತೋಡುಗಳು ತುಂಬಿ ಹರಿಯುತ್ತಿವೆ. ಸುಬ್ರಹ್ಮಣ್ಯ ಪೇಟೆ, ಬಳ್ಪ, ಯೇನೆಕಲ್ಲು, ಬಿಳಿನೆಲೆ, ಕೈಕಂಬ, ಕುಲ್ಕುಂದ, ಐನೆಕಿದು ಪರಿಸದಲ್ಲೂ ನಿರಂತರ ಮಳೆಯಾಗಿದೆ.