ರೈತರ ಕುಮ್ಕಿ ಜಮೀನು ಮೇಲೆ ಕಣ್ಣಿಟ್ಟ ರಾಜ್ಯ ಸರ್ಕಾರ, 30 ವರ್ಷ ಲೀಸ್ ಗೆ ಆದೇಶ!
ಕರ್ನಾಟಕ ರಾಜ್ಯ ಸರ್ಕಾರ ಈಗ ಕುಮ್ಕಿ ಭೂಮಿ ಮೇಲೆ ಕಣ್ಣಿಟ್ಟಿದ್ದು, ಲೀಸ್ ಗೆ ನೀಡಲು ಮುಂದಾಗಿರುವುದು ರೈತರಿಗೆ ಸಂಕಷ್ಟ ಎದುರಾಗಿದೆ.
ಮಂಗಳೂರು (ಜು.16): ತನ್ನ ಗ್ಯಾರಂಟಿಗಳಿಂದ ಖಾಲಿಯಾಗಿರುವ ಖಜಾನೆ ತುಂಬಿಸಲು ಹಾಲು, ಪೆಟ್ರೋಲ್ , ಡೀಸೆಲ್ , ಬಸ್ ಟೆಕೆಟ್ ದರ, ಆಸ್ತಿ ನೋಂದಣಿ ದರ ಸೇರಿ ಅನೇಕ ವಸ್ತುಗಳಿಗೆ ಬೆಲೆ ಏರಿಸಿರುವ ಕರ್ನಾಟಕ ರಾಜ್ಯ ಸರ್ಕಾರ ಈಗ ಕುಮ್ಕಿ ಭೂಮಿ ಮೇಲೆ ಕಣ್ಣಿಟ್ಟಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಅವಿಭಜಿತ ದ.ಕ.ಜಿಲ್ಲೆಯಲ್ಲಿ ರೈತರ ಕುಮ್ಕಿ ಜಮೀನನ್ನು 30 ವರ್ಷಗಳ ಕಾಲ ಲೀಸಿಗೆ ನೀಡುವ ಬಗ್ಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಒಂದು ಎಕರೆಗೆ 1 ಸಾವಿರ ರುಪಾಯಿಯಿಂದ ಹಿಡಿದು, 25 ಎಕರೆಗೆ 3,500 ರೂ ರೀತಿ ರಾಜ್ಯ ಸರ್ಕಾರ ಕುಮ್ಕಿ ಭೂಮಿಯನ್ನೂ ರೈತರಿಗೆ ಲೀಸ್‌ಗೆ ನೀಡಲು ಮುಂದಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಹೆಚ್ಚಳ, ಸರ್ಕಾರದ ಆಸ್ತಿ ಮಾರಾಟ ಸೇರಿದಂತೆ ಪರ್ಯಾಯ ಮಾರ್ಗ ಹುಡುಕುತ್ತಿರುವ ಸರ್ಕಾರ ಈಗ ಕುಮ್ಕಿ ಭೂಮಿಯನ್ನು ಭೋಗ್ಯಕ್ಕೆ ನೀಡಲು ಹೊರಟಿದೆ. ಎಕರೆಗೆ 1 ಸಾವಿರದಂತೆ ಬೆಲೆ ನಿಗದಿ ಮಾಡಿರುವ ಕಾಂಗ್ರೆಸ್ ಸಣ್ಣ ಹಿಡುವಳಿದಾರರಿಗೆ ದೊಡ್ಡ ಹೊಡೆತ ನೀಡಲು ಮುಂದಾಗಿದೆ ಎಂದು ಕಿಡಿಕಾರಿದೆ.
ಅನಾರೋಗ್ಯದ ಕಾರಣ ಆಸ್ಪತ್ರೆಗೆ ತೆರಳಿ ಬರೋಬ್ಬರಿ 2 ದಿನ ಲಿಫ್ಟ್ ನಲ್ಲಿ ಸಿಲುಕಿಕೊಂಡ ವ್ಯಕ್ತಿ!
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ (ಉಡುಪಿ-ದಕ್ಷಿಣ ಕನ್ನಡ) ಮದರಾಸು ಪ್ರಾಂತ್ಯದ ಕಂದಾಯ ಆಡಳಿತ 1896ರ ಬಿಎಸ್‌ಒ 15(40)ರ ನಿಯಮಗಳ ಆಧಾರದಲ್ಲಿ ಕದೀಂ ವರ್ಗ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೆ 100 ಮೀ.ವರೆಗಿನ ಭೂಮಿ(ಕದೀಂ ವರ್ಗದಿಂದ 450 ಲಿಂಕ್ಸ್)ಯನ್ನು ಕುಮ್ಕಿ ಸವಲತ್ತಿನ ಭೂಮಿ ಎಂದು ಕೊಡಲಾಗಿದೆ. ಈ ಕುಮ್ಕಿ ಜಾಗವನ್ನು ಕೃಷಿಗೆ ಪೂರಕವಾದ ಮೇವು, ಸೊಪ್ಪುಗಳ ಬಳಕೆಗೆ ಕೊಡಲಾಗಿತ್ತು. 1964ರಲ್ಲಿ ರಾಜ್ಯದ ಒಂದೇ ಕಾಯಿದೆ ಜಾರಿಯಾದರೂ ಕಾಯಿದೆ ಕಲಂ 202(2)ರಲ್ಲಿ ನೀಡಿರುವಂತೆಯೇ ಯಾವುದೇ ಹಕ್ಕು, ಸೌಲಭ್ಯ, ಬಾಧ್ಯತೆಗಳಿಲ್ಲ ಎದಂ ಉಲ್ಲೇಖಿತವಿದೆ ಜೊತೆಗೆ ಕಾನೂನಿನಲ್ಲಿಯೂ ಎಲ್ಲ ಸೌಲಭ್ಯಗಳು ಮತ್ತು ಹಕ್ಕು ಊರ್ಜಿತದಲ್ಲಿದೆ.
ಕುಮ್ಕಿ ಭೂಮಿ ಹಕ್ಕುಗಳ ಹೋರಾಟಗಾರ ಎಂ.ಜಿ.ಸತ್ಯನಾರಾಯಣ ಅವರ ಪ್ರಕಾರ ಸರಕಾರ ಲೀಸ್ ನೀಡುವ ನಿರ್ಧಾರ ಅವೈಜ್ಞಾನಿಕವಾಗಿದ್ದು, ಕರ್ನಾಟಕ ಭೂಸುಧಾರಣಾ ನೀತಿ ನಿಯಮ 74ರ ಪ್ರಕಾರ(5) ಗೇಣಿ, ಲೀಸ್‌ಗೆ ನೀಡುವಂತಿಲ್ಲ. ಈ ಕಾನೂನು ಜಾರಿಯಲ್ಲಿರುವಾಗ ಕುಮ್ಕಿ ಭೂಮಿನ್ನು ಲೀಸ್ ನೀಡುವುದು ಕೂನೂನು ಪ್ರಕಾರ ಸರ್ಕಾರದ ಅಪರಾಧವಾಗುತ್ತದೆ ಎಂದಿದ್ದಾರೆ.
ಕನ್ನಡ ನಟಿಯ ತಮ್ಮ ಡ್ರಗ್ ಕೇಸ್ ನಲ್ಲಿ ಅರೆಸ್ಟ್, 5 ಜನರ ಬಂಧನಕ್ಕೆ ಶಾಕ್ ಆದ ಸೌತ್ ಸಿನಿ ಇಂಡಸ್ಟ್ರಿ!
2013ರಲ್ಲಿ ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವಂತೆ ಕುಮ್ಕಿ ಹಕ್ಕು 'ದಿ ಶ್ಯಾಡೋ ಆಫ್ ದಿ ಮ್ಯಾನ್'. ಈ ವಿಚಾರದಲ್ಲಿ ಸರಕಾರ ಹಸ್ತಕ್ಷೇಪ ಮಾಡುವಂತಿಲ್ಲ. ಕರ್ನಾಟಕ ಭೂಕಂದಾಯ 79/2ಬಿ ಪ್ರಕಾರ ವರ್ಗ ಭೂಮಿ ಇರುವವರಿಗೆ ಕುಮ್ಕಿ ಹಕ್ಕು ಮುಂದುವರೆಯಲಿದೆ ಎಂದಿದೆ. ಹೈಕೋರ್ಟ್ ನ ಈ ಆದೇಶ ಇದ್ದರೂ ಸರ್ಕಾರ ಹೊಸ ನಿಯಮ ಜಾರಿಗೊಳಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಇದು ರೈತರ ಪಾಲಿಗೆ ಸಂಕಷ್ಟ ತರಲಿದ್ದು, ಈ ಆದೇಶವನ್ನು ಕೂಡಲೇ ರದ್ದುಪಡಿಸಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಆಗ್ರಹಿಸಿದ್ದಾರೆ. ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಪಟ್ಟಾ ಜಮೀನಿನ ವರ್ಗ ಸ್ಥಳದಿಂದ ನಾಲ್ಕೂವರೆ ಸಂಕಲೆ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನನ್ನು ಕುಮ್ಕಿ ಎಂದು ಕರೆಯುತ್ತೇವೆ. ಈ ಜಮೀನನ್ನು ರೈತರು ಕೃಷಿಗೆ ಬೇಕಾದ ಸೊಪ್ಪು ಬಳಕೆಗೆ ಮೀಸಲಿರಿಸಲಾಗಿದೆ. ಹಲವು ವರ್ಷಗಳಿಂದ ಈ ಜಮೀನನ್ನು ಕೃಷಿಕರೇ ನೋಡಿಕೊಂಡು ಬರುತ್ತಿದ್ದು, ಈಗ ಸರ್ಕಾರ ಈ ಜಮೀನನ್ನು ಲೀಸ್‌ಗೆ ನೀಡುವ ಬಗ್ಗೆ ಆದೇಶ ಹೊರಡಿಸಿದೆ ಎಂದರು. 2005ಕ್ಕಿಂತ ಮೊದಲು ಈ ಜಮೀನಿನಲ್ಲಿ ಬೆಳೆ ಬೆಳೆಯುತ್ತಿದ್ದವರು ಹಾಗೂ ಒಂದು ಕುಟುಂಬಕ್ಕೆ 25 ಎಕರೆ ಜಮೀನನ್ನು ಗುತ್ತಿಗೆಗೆ ನೀಡಲು ಅವಕಾಶ ಇದೆ. ಸುಮಾರು 30 ವರ್ಷಕ್ಕೆ ಗುತ್ತಿಗೆ ಅವಧಿ ಇದ್ದು, ಏಕಗಂಟಿನಲ್ಲಿ ಮೊತ್ತವನ್ನು ನೀಡಬೇಕು. ಉಪ ಗುತ್ತಿಗೆಗೆ ನೀಡಲು ಅವಕಾಶ ಇಲ್ಲ. ಈ ಬಗ್ಗೆ ಮಾರ್ಚ್‌ನಲ್ಲಿ ಸರ್ಕಾರ ಆದೇಶ ಹೊರಡಿಸಿದ್ದು, ಮೂರು ತಿಂಗಳ ಒಳಗೆ ಗುತ್ತಿಗೆಗೆ ನೀಡಬೇಕು ಎಂದು ಆದೇಶದಲ್ಲಿ ಸೂಚಿಸಿದೆ. ಈಗ ಅವಧಿ ಮುಗಿದರೂ ಇದು ರೈತರ ಪಾಲಿಗೆ ಜಮೀನು ಕಳಕೊಳ್ಳುವ ಭೀತಿಯನ್ನು ದೂರ ಮಾಡಿಲ್ಲ ಎಂದು ಅವರು ಹೇಳಿದರು.
ಲೀಸ್‌ನ ಮೊತ್ತ ಎಷ್ಟು: ಲೀಸ್‌ಗೆ ಜಮೀನು ಪಡೆಯಬೇಕಾದರೆ ವಾರ್ಷಿಕವಾಗಿ ನಿರ್ದಿಷ್ಟ ಮೊತ್ತವನ್ನೂ ಸರ್ಕಾರ ನಿಗದಿಪಡಿಸಿದೆ. 1 ಎಕರೆಗೆ 1 ಸಾವಿರ ರು., 1ರಿಂದ 5 ಎಕರೆಗೆ 1,500 ರು., 5 ರಿಂದ 10 ಎಕರೆಗೆ 2 ಸಾವಿರ ರು., 10ರಿಂದ 15 ಎಕರೆಗೆ ಪ್ರತಿ ಎಕರೆಗೆ 2,500 ರು., 15ರಿಂದ 20 ಎಕರೆಗೆ 3 ಸಾವಿರ ರು., 20ರಿಂದ 25 ಎಕರೆಗೆ 3,500 ರು. ಮೊತ್ತವನ್ನು ರೈತರು ಏಕಕಂತಿನಲ್ಲಿ ಪಾವತಿಸಬೇಕಾಗಿದೆ ಎಂದರು.
ಅವಿಭಜಿತ ದ.ಕ.ಜಿಲ್ಲೆಯಲ್ಲಿ ಅಕ್ರಮ ಸಕ್ರಮ ಅರ್ಜಿ ಶೇ.70ರಷ್ಟು ವಿಲೇವಾರಿಗೊಂಡಿದೆ. ಈಗ ಕುಮ್ಕಿ ಹಕ್ಕಿನ ಮೇಲೆ ಸರ್ಕಾರ ಕಣ್ಣಿಟ್ಟಿದ್ದು, ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಮೊತ್ತ ವಸೂಲಿಗೆ ಮುಂದಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕುಮ್ಕಿ ಹಕ್ಕು ಸಕ್ರಮಗೊಳಿಸಲು ಅಂತಿಮ ಸಿದ್ಧತೆ ನಡೆಸಲಾಗಿತ್ತು. ಒಮ್ಮೆ ಲೀಸ್ ನೀಡಿದರೆ ಮತ್ತೆ ಜಮೀನು ಕೃಷಿಕರದ್ದಾಗಿರಲು ಸಾಧ್ಯವಿಲ್ಲ. ಈ ಹಿಂದೆ ಸರ್ಕಾರವೇ ಕುಮ್ಕಿ ಹಕ್ಕು ನೀಡಿದ್ದು, ಈಗ ಕಾಂಗ್ರೆಸ್ ಸರ್ಕಾರ ಕಿತ್ತುಕೊಂಡು ಖಜಾನೆ ತುಂಬಿಸಲು ಹೊರಟಿದೆ. ಆದ್ದರಿಂದ ರೈತರ ಹಿತಾಸಕ್ತಿ ಹಿನ್ನೆಲೆಯಲ್ಲಿ ಈ ಸುತ್ತೋಲೆಯನ್ನು ಕೂಡಲೇ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ರೈತರೊಡಗೂಡಿ ತೀವ್ರ ಹೋರಾಟ ನಡೆಸಲಿದೆ ಎಂದರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಡಾ.ಭರತ್ ಶೆಟ್ಟಿ, ಭಾಗೀರಥಿ, ಪ್ರತಾಪ್‌ಸಿಂಹ ನಾಯಕ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಪ್ರೇಮಾನಂದ ಶೆಟ್ಟಿ, ಸತೀಶ್ ಆರ್ವಾರ್, ರಾಜಗೋಪಾಲ ರೈ, ವಸಂತ ಪೂಜಾರಿ ಇದ್ದರು.