ದಾವಣಗೆರೆ (ಅ.3) : ದಾವಣಗೆರೆ ತಾಲೂಕಿನಲ್ಲಿ ಸುರಿದ ರಣ ಮಳೆಯ ಆರ್ಭಟ ಎರಡನೇ ದಿನವಾದ ಶನಿವಾರ ತಡರಾತ್ರಿಯೂ ಮುಂದುವರಿದಿದ್ದು, ಭಾರೀ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಅವಾಂತರ ಸೃಷ್ಟಿಯಾಗುತ್ತಿದೆ.
ದಾವಣಗೆರೆ: ಅ.5ರಂದು ಸಾರ್ವಜನಿಕ ವಿಜಯದಶಮಿ ಮಹೋತ್ಸವದಿಂದ ಬೃಹತ್ ಶೋಭಾಯಾತ್ರೆ
ಆವರಗೆರೆ ಸಮೀಪದ ಪೊಲೀಸ್ ಲೇಔಟ್‌ನ ಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆಯಾಗಿದೆ. ಬಾಡಾ ಕ್ರಾಸ್ ಸಮೀಪದ ಮನೆಯೊಂದು ಕುಸಿದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿ ಮನೆ ಮಂದಿಯೆಲ್ಲಾ ಜಾಗರಣೆ ಮಾಡಬೇಕಾಯಿತು. ಸ್ಥಳೀಯರು ಪ್ರತಿಭಟಿಸುತ್ತಾರೆಂಬ ವಿಷಯ ತಿಳಿಯುತ್ತಿದ್ದಂತೆ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಅಧಿಕಾರಿಗಳ ಸಹಿತ ಜಿಎಂ ಕ್ಯಾಂಪ್‌ಗೆ ಭೇಟಿ ನೀಡಿದರಲ್ಲದೇ, ಕುಸಿದ ಮನೆಗಳಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಪರಿಹಾರ ಕಲ್ಪಿಸಿ; ಅಸಡ್ಡೆ ಬೇಡ:
ಇದೇ ವೇಳೆ ಮಾತನಾಡಿದ ಸ್ಥಳೀಯರು ಜಿಎಂ ಕ್ಯಾಂಪ್‌ನಲ್ಲಿ ಮೂಲ ಸೌಕರ್ಯಗಳೇ ಇಲ್ಲ. ಪ್ರತಿ ಸಲ ಮಳೆಯಾದಾಗಲೂ ನಾವೆಲ್ಲರೂ ತೀವ್ರ ತೊಂದರೆ ಅನುಭವಿಸುತ್ತೇವೆ. ಈ ಭಾಗದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಯಾವುದೇ ಕಾರಣಕ್ಕೂ ಈ ವಿಚಾರದಲ್ಲೇ ಅಸಡ್ಡೆ ಬೇಡ ಎಂಬುದಾಗಿ ಪ್ರಾಂತ್ಯ ರೈತ ಸಂಘದ ಮುಖಂಡ ಇ.ಶ್ರೀನಿವಾಸ, ಸಿಪಿಐ ಯುವ ಮುಖಂಡ ಆವರಗೆರೆ ವಾಸು, ಸಿಐಟಿಯು ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ ಹಾಗೂ ಸ್ಥಳೀಯರು ಪಾಲಿಕೆ ಆಯುಕ್ತ ಮುದ್ದಜ್ಜಿಗೆ ಒತ್ತಾಯಿಸಿದರು.
ಮೂಲ ಸೌಕರ್ಯ ವಂಚಿತ ಪೊಲೀಸ್ ಲೇಔಟ್‌ಗೆ ನೀರು ನುಗ್ಗಿದ್ದರಿಂದ ಜನರಿಗೆ ತೊಂದರೆಯಾಗಿದೆ. ಪೊಲೀಸರು ಲಕ್ಷಾಂತರ ರು. ಸಾಲ ಮಾಡಿ, ಮನೆಗ ಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ಸೂಕ್ತ ರಸ್ತೆ, ಮೂಲ ಸೌಕರ್ಯವೇ ಇಲ್ಲ. ಆವರಗೆರೆ ಕೆರೆಯ ಸ್ಪಲ್ಪ ಭಾಗವಷ್ಟೇ ಕೋಡಿ ಬಿದ್ದು, ಇಷ್ಟೆಲ್ಲಾ ಅವಾಂತರವಾಗಿದೆ. ಲೇಔಟ್ ಅವೈಜ್ಞಾನಿಕವಾಗಿದ್ದು, ಈ ಭಾಗಕ್ಕೆ ಮೂಲ ಸೌಕರ್ಯ ಕಲ್ಪಿಸಿ ಎಂಬುದಾಗಿ ಆವರಗೆರೆ ವಾಸು ಆಯುಕ್ತರಿಗೆ ಮನವಿ ಮಾಡಿದರು.
ಕಾರಿನ ಮೇಲೆ ಬಿದ್ದ ಮರ:
ದಾವಣಗೆರೆ ತಾಲೂಕು ನೇರ್ಲಿಗೆ ಗ್ರಾಮದ ಬಳಿ ಕೆಎಸ್ಸಾರ್ಟಿಸಿಯ ನಿವೃತ್ತ ನಿರ್ವಾಹಕ ಬಸವರಾಜಪ್ಪ ಎಂಬುವರು ಕಾರಿನಲ್ಲಿ ಸಾಗುತ್ತಿದ್ದ ವೇಳೆ ಭಾರೀ ಮಳೆಗೆ ಮರವೊಂದು ಕಾರಿನ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಕಾರಿನಲ್ಲಿ ಇದ್ದವರು ಸಣ್ಣಪುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಸ್ತೆಯಲ್ಲೇ ಮರ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತು. ಗಾಯಾಳುಗಳಿಗೆ ಸಮೀಪದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ದಾವಣಗೆರೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಭದ್ರಾ ಉಪ ನಾಲೆ ತೊಟ್ಟಿಲು ಕಾಲುವೆ ಕುಸಿತ
ದಾವಣಗೆರೆ: ಭರ್ಜರಿ ಮಳೆಗೆ ತಾಲೂಕಿನ ನಲ್ಕುಂದ ಗ್ರಾಮದ ಬಳಿ ಭದ್ರಾ ಎಡದಂಡೆಯ ತೂಗು ಉಪ ಕಾಲುವೆ ಕುಸಿದ ಪರಿಣಾಮ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹಳ್ಳದ ಪಾಲಾದ ಘಟನೆ ವರದಿಯಾಗಿದೆ. ತಾಲೂಕಿನ ನಲ್ಕುಂದ ಗ್ರಾಮದ ಬಳಿ ಹಳ್ಳದ ಮೇಲೆ ಸಾಗುವ ಭದ್ರಾ ಕಾಲುವೆಯ ಎಡದಂಡೆಯ ಉಪ ಕಾಲುವೆಯನ್ನು ತೊಟ್ಟಿಲು ಅಥವಾ ತೂಗು ಕಾಲುವೆಯಾಗಿ ನಿರ್ಮಿಸಲಾಗಿತ್ತು. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹಳ್ಳಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ತೂಗು ಕಾಲುವೆ ಬುಡಕ್ಕೆ ಧಕ್ಕೆಯಾಗಿ, ತೊಟ್ಟಿಲು ಕಾಲುವೆ ಕುಸಿದಿದೆ ಎನ್ನಲಾಗಿದೆ. ಕಾಲುವೆ ಕುಸಿತದಿಂದ ಶ್ಯಾಗಲೆ ಹಳ್ಳವು ಮೈದುಂಬಿ ಹರಿಯುತ್ತಿದೆ. ಹಳ್ಳಕ್ಕೆ ಹೊಂದಿರುವ ಅನೇಕ ಗ್ರಾಮಗಳಿಗೆ ಮಳೆ ನೀರು ನುಗ್ಗಿದ್ದು, ತೋಟ, ಹೊಲ, ಗದ್ದೆಗಳೂ ಜಲಾವೃತವಾಗಿವೆ. ಮೆಕ್ಕೆಜೋಳ, ಅಡಿಕೆ ಸೇರಿದಂತೆ ಅನೇಕ ಬೆಳೆಗಳು ಹಾನಿಯಾಗುವ ಅಪಾಯಕ್ಕೆ ಸಿಲುಕಿದೆ.
ಜಿಎಂ ತಂಪು ಪಾನೀಯ ಘಟಕ ಜಲಾವೃತ
ದಾವಣಗೆರೆ: ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಹೆಬ್ಬಾಳ್, ಹೊನ್ನೂರು, ವಡ್ಡಿನಹಳ್ಳಿ, ಹುಣಸೇಕಟ್ಟೆ, ಆನಗೋಡು ಇತರೆಡೆ ಜನವಸತಿ ಪ್ರದೇಶ, ಜಮೀನು, ತೋಟಗಳು ಜಲಾವೃತವಾಗಿದ್ದು, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಕುಟುಂಬದ ಒಡೆತನದ ತಂಪು ಪಾನೀಯಗಳ ತಯಾರಿಕಾ ಘಟಕವೂ ಜಲಾವೃತವಾಗಿದೆ.
ತಾಲೂಕಿನ ಹೆಬ್ಬಾಳ್ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಹೊಂದಿರುವ ಜಿಎಂ ಆಗ್ರೋ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ತಂಪು ಪಾನೀಯ ತಯಾರಿಕಾ ಘಟಕಕ್ಕೆ ಹೊನ್ನೂರು-ವಡ್ಡಿನಹಳ್ಳಿ ಕೆರೆ ಕೋಡಿ ಬಿದ್ದ ಪರಿಣಾಮ ತಂಪು ಪಾನೀಯ ತಯಾರಿಕಾ ಘಟಕ ಜಲಾವೃತವಾಗಿದೆ. ಕಾರ್ಖಾನೆ ಒಳಗೆ ಯಾರೂ ಹೋಗಲಾಗದ ಸ್ಥಿತಿ ಇದೆ. ಕೆರೆ ಅಂಗಳ, ಪ್ರದೇಶ ಜಲಾವೃತ ಹಿನ್ನೆಲೆಯಲ್ಲಿ ತಂಪು ಪಾನೀಯ ತಯಾರಿಕಾ ಘಟಕದ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ಕೊಠಡಿ, ನೀರು ಶುದ್ಧೀಕರಣ ಘಟಕ, ಅನೇಕ ಯಂತ್ರೋಪಕರಣಗಳು ಜಲ ದಿಗ್ಭಂಧನಕ್ಕೆ ತುತ್ತಾಗಿದ್ದು, ಕಾರ್ಖಾನೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಇದೇ ಫ್ಯಾಕ್ಟರಿ ಸುತ್ತಮುತ್ತಲಿನ ಜಮೀನುಗಳು, ತೋಟಗಳೂ ಜಲಾವೃತವಾಗಿದೆ. ಭತ್ತ, ಮೆಕ್ಕೆಜೋಳ, ಅಡಿಕೆ ಇತರೆ ಬೆಳೆಗಳು ಜಲಾವೃತವಾಗಿದೆ.
ರಣ ಮಳೆಗೆ ದಾವಣಗರೆ ತಾಲೂಕು ತತ್ತರ
ದಾವಣಗೆರೆ: ತಾಲೂಕಿನಲ್ಲಿ ಭರ್ಜರಿ ಮಳೆಯಾಗಿ ನಗರ, ಗ್ರಾಮೀಣ ಜನರು ತತ್ತರಿಸಿದ್ದು, ಮಳೆಯಿಂದಾಗಿ ಜನಜೀವನವೇ ಅಸ್ತವ್ಯಸ್ತವಾದರೆ, ಅನೇಕ ಕಡೆ ಹಳ್ಳಗಳು ತುಂಬಿ ಹರಿದರೆ, ಮತ್ತೆ ಕೆಲವು ಗ್ರಾಮಗಳಿಗೆ ರಸ್ತೆ ಸಂಪರ್ಕವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಸರಾಸರಿ 22.44 ಮಿಮೀ ಮಳೆಯಾಗಿದೆ. ದಾವಣಗೆರೆ ತಾಲೂಕಿನಲ್ಲೇ 73.93 ಮಿಮೀ ಮಳೆಯು ಸುರಿದಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಶ್ಯಾಗಲೆ-ದಾವಣಗೆರೆ-ಜಗಳೂರು ಮಾರ್ಗ ಜಲಾವೃತ
ಸತತ ಮಳೆಯಿಂದ ಮೂರು ಸಲ ಕೋಡಿ ಬಿದ್ದಿದ್ದ ತಾಲೂಕಿನ ಹೆಬ್ಬಾಳು ಗ್ರಾಮದ ಕೆರೆ ಮತ್ತೆ ಶನಿವಾರ ಕೋಡಿ ಬಿದ್ದಿದ್ದು, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಗ್ರಾಮಸ್ಥರು ರೈತರು ಕೊಡೆಗಳನ್ನು ಹಿಡಿದು ಹಳ್ಳ ಮೈದುಂಬಿದ್ದನ್ನು ಕಣ್ತುಂಬಿಕೊಳ್ಳುತ್ತಿದ್ದುದು ಭಾನುವಾರವೂ ಸಾಮಾನ್ಯವಾಗಿತ್ತು.
ದಾವಣಗೆರೆ: ಪಾಲಿಕೆಯಲ್ಲಿ ವಾಮಮಾರ್ಗದಿಂದ ಅಧಿಕಾರ ಹಿಡಿದಿದ್ದ ಬಿಜೆಪಿಗೆ ಮುಖಭಂಗ, ಕಾಂಗ್ರೆಸ್ ವಾಗ್ದಾಳಿ
ಇನ್ನು ಶ್ಯಾಗಲೆ ಹಳ್ಳಕ್ಕೆ ಮೇಲ್ಭಾಗದ ಕೆರೆಗಳು, ಮಳೆಯಾದ್ದರಿಂದ ಅಪಾರ ಪ್ರಮಾಣದಲ್ಲಿ ನೀರು ಹರಿದು ದಾವಣಗೆರೆ-ಶ್ಯಾಗಲೆ ಮಧ್ಯೆ ಸಂಪರ್ಕ ಕಲ್ಪಿಸುವ ರಸ್ತೆಯೇ ಬಂದ್ ಆಗಿದೆ. ಸೇತುವೆ ಮೇಲೆ ಸಾಕಷ್ಟುಅಡಿಗಳಷ್ಟುಎತ್ತರಕ್ಕೆ ನೀರು ಹರಿಯುತ್ತಿದ್ದು ವಾಹನಗಳಷ್ಟೇ ಅಲ್ಲ, ಜನರು ಸಂಚರಿಸಲು ಆಗದಷ್ಟುನೀರಿನ ಸೆಳವು ಇದ್ದು, ಪೊಲೀಸರು ವಾಹನ, ಸಂಚಾರ ಮಾಡದಂತೆ ಕ್ರಮ ಕೈಗೊಂಡಿದ್ದಾರೆ. ಅದೇ ರೀತಿ ತಾಲೂಕಿನ ವಿಶಾಲ ಕೆರೆಗಳಲ್ಲಿ ಒಂದಾಗಿರುವ ಅಣಜಿ ಗ್ರಾಮದ ಕೆರೆ ಮತ್ತೆ ಕೋಡಿ ಬಿದ್ದಿದ್ದರಿಂದ ಜಗಳೂರು-ದಾವಣಗೆರೆ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತು.
ವಾಹನ ಸಂಚಾರಕ್ಕೆ ಅಡ್ಡಿ:
ಜಗಳೂರು-ದಾವಣಗೆರೆ ಮಾರ್ಗದಲ್ಲಿ ಬರುವ ಅಣಜಿ ಕೆರೆಯೂ ಕೋಡಿ ಬಿದ್ದಿದ್ದು, ಸುಮಾರು 3 ಅಡಿಗೂ ಹೆಚ್ಚು ನೀರು ಹರಿಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ನೀರಿನ ರಭಸ ಕಂಡು ದ್ವಿಚಕ್ರ ವಾಹನಗಳು, ಲಘು ವಾಹನಗಳು ರಸ್ತೆ ಬದಿ ಸುಮಾರು ಗಂಟೆಗಳ ಕಾಲ ಕಾಯಬೇಕಾಯಿತು. ಇದರ ಮಧ್ಯೆಯೂ ಭಾರೀ ವಾಹನಗಳಾದ ಲಾರಿ, ಬಸ್ಸುಗಳು, ಟ್ರ್ಯಾಕ್ಟರ್‌ಗಳು ಸಾಗಿದವು. ಅಣಜಿ ಸಮೀಪವೇ ಕಿತ್ತೂರು, ಕುರುಡಿ ಸಮೀಪದ ಕೆರೆಯೂ ಕೋಡಿ ಬಿದ್ದಿದ್ದು, ಅಲ್ಲಿಯೂ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು.