ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು [ಅ.07]: ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿ, ಮಲೆನಾಡು, ದಕ್ಷಿಣ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿದ್ದು, ಭಾರತೀಯ ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್’ ಘೋಷಿಸಿದೆ.
ರಾಜ್ಯದ ದಕ್ಷಿಣ ಒಳನಾಡಿಗೆ ಹೊಂದಿಕೊಂಡಂತೆ ಕೇರಳದ ಉತ್ತರ ಭಾಗದಲ್ಲಿ ಉಂಟಾಗಿರುವ ಮೇಲ್ಮೈಸುಳಿಗಾಳಿಯ ಪ್ರಭಾವದಿಂದ ರಾಜ್ಯಾದ್ಯಂತ ಮಳೆಯಾಗುತ್ತಿದ್ದು, ಶನಿವಾರ ರಾಜ್ಯಾದ್ಯಂತ ಭಾರೀ ಮಳೆಯಾದ ವರದಿಯಾಗಿದೆ. ಇನ್ನು ನಾಲ್ಕು ದಿನಗಳ ಕಾಲ ಕರಾವಳಿ, ಮಲೆನಾಡು ಸೇರಿದಂತೆ ಒಳನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ 25ಕ್ಕೂ ಹೆಚ್ಚು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್’ ನೀಡಿದ್ದು, 65 ರಿಂದ 115 ಮಿ.ಮೀ. ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ.
ಯಾವ ಜಿಲ್ಲೆಗಳಲ್ಲಿ ಅಲರ್ಟ್?:
ಕರಾವಳಿಯ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ, ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ವಿಜಯಪುರ, ದಕ್ಷಿಣ ಒಳನಾಡಿನ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಬೆಳಗಾವಿಯ ಹಿಡ್ಕಲ್ ಜಲಾಶಯ ವ್ಯಾಪ್ತಿಯಲ್ಲಿ ಅತಿ ಹೆಚ್ಚು 13 ಸೆಂ.ಮೀ. ಮಳೆಯಾದ ವರದಿಯಾಗಿದೆ. ಉಳಿದಂತೆ ಹಾವೇರಿಯಲ್ಲಿ 11, ಬೆಳಗಾವಿಯ ಅಥಣಿಯಲ್ಲಿ 10, ಲೋಂಡ 9, ಉಡುಪಿಯ ಕಾರ್ಕಳ, ದಕ್ಷಿಣ ಕನ್ನಡದ ಧರ್ಮಸ್ಥಳ, ಹಾವೇರಿ ಎಪಿಎಂಸಿ ಮಾರುಕಟ್ಟೆ, ತುಮಕೂರಿನ ತಿಪಟೂರು, ಬಳ್ಳಾರಿಯ ಹರಪನಹಳ್ಳಿಯಲ್ಲಿ ತಲಾ 8, ಚಿಕ್ಕಮಗಳೂರಿನ ಲಕ್ಕವಳ್ಳಿಯಲ್ಲಿ 7, ಉತ್ತರ ಕನ್ನಡದ ಕುಮಟಾ, ಶಿವಮೊಗ್ಗದ ತೀರ್ಥಹಳ್ಳಿ, ಹಾಸನದ ಸಕಲೇಶಪುರದಲ್ಲಿ ತಲಾ 6 ಸೆಂ.ಮೀ. ಮಳೆಯಾದ ವರದಿಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.