ಬೆಂಗ್ಳೂರಲ್ಲಿ ಇಡೀ ದಿನ ಬೇಸಿಗೆ ಮಳೆಯ ಅಬ್ಬರ: ಭಾರೀ ಅವಾಂತರ

By Kannadaprabha NewsFirst Published May 31, 2023, 5:56 AM IST
Highlights

ತಗ್ಗು ಪ್ರದೇಶ, ರಾಜಕಾಲುವೆ ಅಕ್ಕ-ಪಕ್ಕದ ಮನೆಗಳಿಗೆ ನುಗ್ಗಿದ ನೀರು, ಬೃಹತ್‌ ಮರ ಉರುಳಿ ಆಟೋ ಜಖಂ, ಫ್ಲೈಓವರ್‌ನಲ್ಲಿ ನೀರು ನಿಂತು ಸಂಚಾರಕ್ಕೆ ತತ್ವಾರ, ಕೆ.ಆರ್‌.ಸರ್ಕಲ್‌ ಸೇರಿ ನೀರು ಹರಿದು ಹೊಗದ ಅಂಡರ್‌ ಪಾಸ್‌ಗಳ ಬಂದ್‌, ಮಳೆ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಡಿಸಿಎಂ ಸೂಚನೆ

ಬೆಂಗಳೂರು(ಮೇ.31): ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಇಡೀ ದಿನ ಮಳೆ ಅಬ್ಬರಿಸಿದ ಪರಿಣಾಮ ರಸ್ತೆಗಳು ತುಂಬಿ ಹರಿದವು. ತಗ್ಗುಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿತು. ಮಂಗಳವಾರ ಮಧ್ಯಾಹ್ನ ಆರಂಭಗೊಂಡ ಮಳೆ ಸ್ವಲ್ಪ ಸಮಯ ಬಿಡುವು ನೀಡಿ ಮತ್ತೆ ಸಂಜೆಯಿಂದ ಅಬ್ಬರಿಸಿತು. ತಡ ರಾತ್ರಿವರೆಗೆ ಒಂದೇ ಸಮನೇ ಮಳೆ ಸುರಿದ ಪರಿಣಾಮ ರಸ್ತೆಯ ತುಂಬಾ ಭಾರೀ ಪ್ರಮಾಣ ನೀರು ಹರಿಯಿತು. ಕೊಳಚೆ ನೀರು ಹರಿಯುವ ಜಲಮಂಡಳಿಯ ಕೊಳವೆಗೆ ಮಳೆ ನೀರು ಸೇರಿದ ಪರಿಣಾಮ ಮ್ಯಾನ್‌ ಹೋಲ್‌ಗಳಲ್ಲಿ ನೀರು ಉಕ್ಕಿ ಹರಿಯುತ್ತಿದ್ದ ದೃಶ್ಯಗಳು ಕಂಡು ಬಂದವು.

ಮನೆಗಳಿಗೆ ನುಗ್ಗಿದ ನೀರು: ನಗರದ ಹಲವಾರು ತಗ್ಗು ಪ್ರದೇಶ ಹಾಗೂ ರಾಜಕಾಲುವೆ ಅಕ್ಕ-ಪಕ್ಕದ ಮನೆಗಳಿಗೆ ಮಳೆ ನೀರು ನುಗ್ಗಿದ ವರದಿಯಾಗಿದೆ. ಮೆಜೆಸ್ಟಿಕ್‌ ಸಮೀಪದ ಶೇಷಾದ್ರಿಪುರದ ಮಾಧವನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡು ಅಕ್ಕ-ಪಕ್ಕದ ಹತ್ತಕ್ಕೂ ಅಧಿಕ ಮನೆಗಳ ಕಾಂಪೌಂಡ್‌ಗೆ ನುಗ್ಗಿತ್ತು. ಪ್ರತಿಬಾರಿ ಮಳೆ ಬಂದಾಗಲೂ ನಮಗೆ ಸಮಸ್ಯೆ ತಪ್ಪಿದಲ್ಲ ಎಂದು ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕುಮಾರ ಕೃಪ ಈಸ್ಟ್‌ನಲ್ಲಿಯೂ ಸಾಕಷ್ಟು ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿತು.

ಚಿಕ್ಕಮಗಳೂರಲ್ಲಿ ರೇನ್ ಅಲರ್ಟ್, ಮಳೆ ಆರಂಭಕ್ಕೂ ಮುನ್ನವೇ ಎಲ್ಲ ಸಿದ್ಧತೆ

ಮರ ಬಿದ್ದು ಆಟೋ ಜಖಂ: ಮಹಾಲಕ್ಷ್ಮೇ ಲೇಔಟ್‌ನ ಕಮಲಾನಗರದ ವಾಟರ್‌ ಟ್ಯಾಂಕ್‌ ಸಮೀಪದಲ್ಲಿ ಬೃಹತ್‌ ಮರವೊಂದು ಏಕಾಏಕಿ ರಸ್ತೆಯಲ್ಲಿ ಸಾಗುತ್ತಿದ್ದ ಆಟೋದ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣವಾಗಿ ಜಖಂ ಆಗಿದ್ದು, ಚಾಲಕ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾನೆ

ಫ್ಲೈಓವರ್‌ ಮೇಲೆ ನಿಂತ ನೀರು: ಮಳೆಯಿಂದ ರಸ್ತೆ, ಅಂಡರ್‌ ಪಾಸ್‌ ಮಾತ್ರವಲ್ಲದೇ ಫ್ಲೈಓವರ್‌ಗಳ ಮೇಲ್ಭಾಗದಲ್ಲಿ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಕೆ.ಆರ್‌.ಮಾರುಕಟ್ಟೆಫ್ಲೈಓವರ್‌ ಮೇಲ್ಭಾಗದಲ್ಲಿ ನೀರು ಹೋಗುವ ಕೊಳವೆಗಳನ್ನು ಸ್ವಚ್ಛಗೊಳಿಸದಿರುವುದರಿಂದ ನೀರು ನಿಂತುಕೊಂಡಿತ್ತು.ರಸ್ತೆ, ಅಂಡರ್‌ ಪಾಸ್‌, ಜಂಕ್ಷನ್‌ಗಳಲ್ಲಿ ಭಾರೀ ಪ್ರಮಾಣ ನೀರು ತುಂಬಿಕೊಂಡ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು.

ಸ್ಪಂದಿಸದ ಬಿಬಿಎಂಪಿ ಸಹಾಯವಾಣಿ

ಮಳೆಯಿಂದಾಗಿ ವಿವಿಧ ಸಮಸ್ಯೆಗೆ ಸಿಲುಕಿಕೊಂಡ ಜನರು ಬಿಬಿಎಂಪಿಯ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿದರೇ ಯಾರೊಬ್ಬರೂ ಕರೆ ಸ್ವೀಕಾರ ಮಾಡುವುದಿಲ್ಲ. ನಮ್ಮ ಕಷ್ಟಯಾರಿಗೆ ಹೇಳಿಕೊಳ್ಳಬೇಕು ಎಂದು ನಾಗಕರಿಕರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಾಸರಿ 30 ಮಿ.ಮೀ ಮಳೆ

ನಗರದಲ್ಲಿ ಮಂಗಳವಾರ ರಾತ್ರಿ 9.30ರ ವೇಳೆಗೆ ಸರಾಸರಿ 3.0 ಸೆಂ.ಮೀ ಮಳೆಯಾಗಿದೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿಯೇ ಹೆಚ್ಚಿನ ಪ್ರಮಾಣ ಮಳೆಯಾಗಿದೆ. ಅತಿ ಹೆಚ್ಚು ಮಳೆ ರಾಜ್‌ಮಹಲ್‌ ಗುಟ್ಟಹಳ್ಳಿಯಲ್ಲಿ 7.8 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಸಂಪಂಗಿರಾಮನಗರದಲ್ಲಿ 7.4, ವಿಶ್ವೇಶ್ವರರಪುರ 6.3, ಗಾಳಿ ಆಂಜನೇಯ ದೇವಸ್ಥಾನ ವಾರ್ಡ್‌ನಲ್ಲಿ 6.0, ಹೆಮ್ಮಿಗೆಪುರ 5.8, ಬೆಳಂದೂರು, ಹಂಪಿನಗರದಲ್ಲಿ ತಲಾ 5.2, ಚಾಮರಾಜಪೇಟೆಯಲ್ಲಿ 5 ಸೆಂ.ಮೀ ಮಳೆಯಾದ ವರದಿಯಾಗಿದೆ.

ಜೂ.7ರವರೆಗೆ ಮಳೆ: ಗೋವಿಂದಗೌಡ

ಅಂಡರ್‌ ಪಾಸ್‌ಗಳಲ್ಲಿ ಮತ್ತೆ ನೀರು

ಕೆ.ಆರ್‌.ಸರ್ಕಲ್‌ ಅಂಡರ್‌ ಪಾಸ್‌ನ ದುರಂತದ ಬಳಿಕ ಮಳೆ ಬರುತ್ತಿದಂತೆ ನಗರದಲ್ಲಿರುವ ಪ್ರಮುಖ ಮತ್ತು ನೀರು ಹರಿದು ಹೋಗದ ಅಂಡರ್‌ ಪಾಸ್‌ಗಳನ್ನು ಬಂದ್‌ ಮಾಡಲಾಯಿತು. ಲಿಂಗರಾಜಪುರದ ಅಂಡರ್‌ ಪಾಸ್‌ನಲ್ಲಿ ಮಳೆಯಿಂದ ಭಾರೀ ಪ್ರಮಾಣ ನೀರು ನಿಂತುಕೊಂಡಿತ್ತು. ಬೇರೆ ದಾರಿ ಇಲ್ಲದೆ ವಾಹನ ಸವಾರರು ನೀರಿನಲ್ಲಿ ವಾಹನ ಚಲಾಯಿಸಿಕೊಂಡು ಹೋದರು. ಉಳಿದಂತೆ ಶಿವಾನಂದ ರೈಲ್ವೆ ಅಂಡರ್‌ ಪಾಸ್‌, ಓಕಳಿಪುರ ಅಂಡರ್‌ ಪಾಸ್‌ಗಳಲ್ಲಿ ಭಾರೀ ಪ್ರಮಾಣ ನೀರು ಹರಿಯುತ್ತಿತ್ತು.

ಮಳೆ ಕಟ್ಟೆಚ್ಚರಕ್ಕೆ ಡಿಸಿಎಂ ಸೂಚನೆ 

ಬೆಂಗಳೂರಲ್ಲಿ ಮಂಗಳವಾರ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಬಿಬಿಎಂಪಿಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಸೂಚನೆ ನೀಡಿದ್ದಾರೆ.ಮಳೆ ಅನಾಹುತ ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅನಾಹುತಗಳ ಬಗ್ಗೆ ವರದಿಯಾದರೆ ತುರ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ವಾರ್‌ ರೂಮ್‌ ಮೂಲಕ ಕಟ್ಟೆಚ್ಚರ ವಹಿಸಬೇಕು. ಸಂಭವನೀಯ ಮಳೆ ಅನಾಹುತಗಳ ಬಗ್ಗೆಯೂ ನಿಗಾ ವಹಿಸಬೇಕು. ಎಲ್ಲೇ ಏನೇ ಅನಾಹುತವಾದರೂ ಸಮಾರೋಪಾದಿಯಲ್ಲಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಅವರು ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಬೆಂಗಳೂರು ನಾಗರಿಕರಿಗೆ ತೊಂದರೆ ಆಗದಂತೆ ಪೊಲೀಸ್‌, ಬೆಸ್ಕಾಂ, ಜಲ ಮಂಡಳಿ ಮತ್ತಿತರ ಇಲಾಖೆಗಳ ಜತೆ ಪರಸ್ಪರ ಸಮನ್ವಯ, ಸಹಕಾರ ಸಾಧಿಸಬೇಕು ಎಂದು ಅವರು ಪಾಲಿಕೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ಆದೇಶ ನೀಡಿದ್ದಾರೆ.

click me!