* ಕಾವೇರಿ ಸೇರಿ ವಿವಿಧ ನದಿಗಳಿಗೆ ನೀರು
* ವಿಮಾನ ಪ್ರಯಾಣ ಮುಂದೂಡಲು ಮನವಿ
* ಕೊಚ್ಚಿ ಹೋದ ದೋಣಿ
ಮಡಿಕೇರಿ/ಮಂಗಳೂರು(ಜು.03): ಕರಾವಳಿಯಲ್ಲಿ ಮಳೆಯಬ್ಬರ ಕಡಿಮೆಯಾಗಿದ್ದರೂ ಪಶ್ಚಿಮಘಟ್ಟಪ್ರದೇಶ ಹಾಗೂ ಕೊಡಗಿನಲ್ಲಿ ಮಾತ್ರ ಭರ್ಜರಿ ಮಳೆ ಸುರಿದಿದ್ದು, ಕಾವೇರಿ, ಲಕ್ಷ್ಮಣ ತೀರ್ಥ, ಕುಮಾರಧಾರ ಸೇರಿ ಹಲವು ನದಿಗಳ ನೀರಿನಮಟ್ಟ ಏರಿಕೆಯಾಗಿದೆ.
ಕೊಡಗಿನಲ್ಲಿ ಬ್ರಹ್ಮಗಿರಿ ಬೆಟ್ಟಭಾಗದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ನೀರಿನ ಮಟ್ಟಗಣನೀಯ ಏರಿಕೆ ಕಂಡಿದೆ. ಲಕ್ಷ್ಮಣತೀರ್ಥ ನದಿನೀರಿನ ಮಟ್ಟವೂ ನಿಧಾನವಾಗಿ ಹೆಚ್ಚಾಗುತ್ತಿದೆæ. ಇನ್ನು ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಮಾರಧಾರಾ ನದಿ ನೀರಿನಮಟ್ಟ ಏರಿದೆ. ಇದರಿಂದ ಕುಕ್ಕೆಸುಬ್ರಹ್ಮಣ್ಯದಲ್ಲಿ ಕುಮಾರಧಾರಾ ಸ್ನಾನಘಟ್ಟಸಂಪೂರ್ಣ ಮುಳುಗಡೆಯಾಗುವ ಹಂತ ತಲುಪಿದೆ. ಇನ್ನು ಕುದುರೆಮುಖ ಭಾಗದಲ್ಲಿ ಗುರುವಾರ ರಾತ್ರಿ ಭಾರೀ ಮಳೆಯಾದ ಕಾರಣ ತುಂಗಾ ನದಿ ನೀರಿನಮಟ್ಟ ಏರಿಕೆಯಾಗಿದೆ.
ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ
ಅಲ್ಲಲ್ಲಿ ಗುಡ್ಡಕುಸಿತ
ಮಡಿಕೇರಿ: ಮಡಿಕೇರಿಯಲ್ಲಿ ಮಳೆ ಚುರುಕಾಗುತ್ತಿರುವ ನಡುವೆಯೇ ಮತ್ತೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಭೂಮಿ ಹಾಗೂ ಬರೆ ಕುಸಿತ ಆರಂಭವಾಗಿದೆ. ಮಡಿಕೇರಿ ತಾಲೂಕಿನ ಬೆಟ್ಟತ್ತೂರು, ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಮದೆನಾಡು-ಜೋಡುಪಾಲ ಮಧ್ಯೆ ರಸ್ತೆಗೆ ಗುಡ್ಡಕುಸಿದಿದೆ.
ಕಡಲ್ಕೊರೆತ ತೀವ್ರ
ಮಂಗಳೂರು/ಉಡುಪಿ: ಕಳೆದೆರಡು ದಿನಗಳಿಗೆ ಹೋಲಿಸಿದರೆ ಮಳೆಯ ತೀವ್ರತೆ ಕಡಿಮೆಯಾಗಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಉಚ್ಚಿಲ ಸಮುದ್ರ ತೀರದಲ್ಲಿ ಶನಿವಾರವೂ ಕಡಲ ಅಬ್ಬರ ಹೆಚ್ಚಾಗಿದ್ದು, ಉಚ್ಚಿಲ-ಬಟ್ಟಪ್ಪಾಡಿ ಸಂಪರ್ಕ ರಸ್ತೆ ಮತ್ತಷ್ಟುಕಡಿತವಾಗಿದೆ. ಇನ್ನು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ತೊಟ್ಟಂನಲ್ಲಿ ಮಿತಿಮೀರಿದ ಕಡಲ್ಕೊರೆತ ಕಾಣಿಸಿಕೊಂಡಿದೆ. ಈ ಭಾಗದಲ್ಲಿ ಈಗಾಗಲೇ ನಾಲ್ಕೈದು ತೆಂಗಿನ ಮರ ಸಮುದ್ರಪಾಲಾಗಿದೆ.
ಸರಣಿ ಭೂಕಂಪನವಾದ ಕೊಡಗಿನ ಚೆಂಬು ಗ್ರಾಮದಲ್ಲಿ ಭೂಕುಸಿತ, ಗ್ರಾಮಸ್ಥರಲ್ಲಿ ಹೆಚ್ಚಾಯ್ತು ಆತಂಕ
ಕೊಚ್ಚಿ ಹೋದ ದೋಣಿ:
ಉಡುಪಿಯ ಮಲ್ಪೆ ಬಂದರಿನಲ್ಲಿ ಲಂಗರು ಹಾಕಿದ್ದ ನಾಡದೋಣಿ ಕೊಚ್ಚಿಹೋದ ಘಟನೆ ಕೊಚ್ಚಿಹೋಗಿ ಎರಡು ಭಾಗವಾದ ಘಟನೆ ಶನಿವಾರ ಸಂಭವಿಸಿದೆ. ಮಲ್ಪೆ ಹಾಗೂ ಕೇರಳ ಮೂಲದವರಿಗೆ ಸೇರಿದ ನಾಡದೋಣಿ ಇದಾಗಿದೆ. ಇದರಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಹಾನಿ ಸಂಭವಿಸಿದೆ.
ವಿಮಾನ ಪ್ರಯಾಣ ಮುಂದೂಡಲು ಮನವಿ
ಮಂಗಳೂರಿನಲ್ಲಿ ಜು.4ರಿಂದ 7ರವರೆಗೆ ಭಾರೀ ಮಳೆ ಸಾಧ್ಯತೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ಸಂಚರಿಸುವವರು ಪ್ರಯಾಣ ಮುಂದೂಡುವಂತೆ ವಿಮಾನ ನಿಲ್ದಾಣ ಆಡಳಿತ ಮಂಡಳಿ ಮನವಿ ಮಾಡಿದೆ.