ಮುಂಡಗೋಡ: ನರಭಕ್ಷಕ ನಾಯಿಗಳ ಕಾಟಕ್ಕೆ ಬೆಚ್ಚಿಬಿದ್ದ ಜನತೆ..!

By Kannadaprabha News  |  First Published Jul 3, 2022, 1:00 AM IST

*  ಕಂಡ ಕಂಡವರಿಗೆಲ್ಲ ಕಚ್ಚುವ ಬೀದಿನಾಯಿಗಳು
*  ಆತಂಕದಲ್ಲೇ ಶಾಲೆಗೆ ತೆರಳುವ ವಿದ್ಯಾರ್ಥಿಗಳು
*  ನಾಯಿಗಳಿಗೆ ಹೆದರಿ ಪ್ರಾಣಿ ಸಾಕಾಣಿಕೆಗೆ ಹಿಂದೇಟು
 


ಸಂತೋಷ ದೈವಜ್ಞ

ಮುಂಡಗೋಡ(ಜು.03):  ಬೀದಿನಾಯಿಗಳ ಹಾವಳಿಯಿಂದ ಪಟ್ಟಣದಲ್ಲಿ ಒಂದಿಲ್ಲೊಂದು ಅನಾಹುತಗಳು ನಿತ್ಯ ಸಂಘಭವಿಸುತ್ತಲೇ ಇದೆ. ಶ್ವಾನಗಳ ಉಪಟಳಕ್ಕೆ ಜನತೆ ರೋಸಿ ಹೋಗಿದ್ದಾರೆ. ಕೆಲ ಬಡಾವಣೆಯಲ್ಲಿ ಜನರಿಗೆ ನಾಯಿ ಕಚ್ಚಿರುವುದು ಪಟ್ಟಣದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ. ಯಾವ ಸಮಯದಲ್ಲಿ ನಾಯಿಗಳು ಮೈಮೇಲೆ ಎರಗುತ್ತವೆಯೋ ಎಂಬ ಭಯದಲ್ಲಿದ್ದಾರೆ.

Tap to resize

Latest Videos

ಕೆಲ ಬಡಾವಣೆಗಳಲ್ಲಿ ಜನ ತಿರುಗಾಡಲು ಹಿಂದೇಟು ಹಾಕುವಂತಾಗಿದೆ. ಪ್ರಾಣ ಭಯದಲ್ಲಿ ಕಾಲ ಕಳೆಯುವಂತಾಗಿದೆ. ಬೇಕರಿ ಮುಂತಾದ ತಿಂಡಿ-ತಿನಿಸುಗಳ ಅಂಗಡಿಗಳ ಎದುರು ನಾಯಿಗಳು ಮುತ್ತಿಕೊಂಡಿರುತ್ತವೆ. ಕೈಯಲ್ಲಿ ತಿಂಡಿಯ ಚೀಲ ಹಿಡಿದುಕೊಂಡರೆ ತಿಂಡಿಗಾಗಿ ಮೈಮೇಲೆರಗಿ ಜನರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ನಾಯಿಗಳ ಹಿಂಡಿನ ಭಯಕ್ಕೆ ಶಾಲಾ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕು. ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಭಯವಿದ್ದರೆ, ಇಲ್ಲಿ ನಾಯಿಗಳ ಭಯ ಜನರಲ್ಲಿ ಮನೆ ಮಾಡಿರುವುದಂತೂ ಸುಳ್ಳಲ್ಲ.

ಗೋಕರ್ಣ: ರಾಘವೇಶ್ವರ ಶ್ರೀ ಭೇಟಿಯಾದ ಡಾ. ವೀರೇಂದ್ರ ಹೆಗ್ಗಡೆ

ನರಭಕ್ಷಕ ನಾಯಿಗಳು:

ಈ ಬೀದಿನಾಯಿಗಳು ಸಾಕು ಪ್ರಾಣಿಗಳನ್ನು ಹಿಡಿದು ರಕ್ತ ಹೀರುತ್ತಿವೆ. ಮೇಕೆ, ಕೋಳಿ, ಮೊಲ, ಸೇರಿದಂತೆ ಪ್ರಾಣಿಗಳನ್ನು ಸಾಕಿಕೊಂಡು ಜೀವನ ಸಾಗಿಸುವವರ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಾಗಿಲ್ಲ. ಪ್ರಾಣಿಗಳು ದೊಡ್ಡವಾಗಿ ಬೆಳೆಯುವಷ್ಟರಲ್ಲಿ ಅರ್ಧದಷ್ಟುಮರಿಗಳು ನಾಯಿಗಳಿಗೆ ಬಲಿಯಾಗುತ್ತವೆ. ಇದರಿಂದ ಗೃಹ ಕೈಗಾರಿಕೆ ಮಾಡುವವರು ಕೂಡ ಪ್ರಾಣಿ ಸಾಕಾಣಿಕೆಗೆ ಹಿಂದೇಟು ಹಾಕುತ್ತಿದ್ದಾರೆ.

ಹುಚ್ಚುನಾಯಿ ಹಾವಳಿ:

1-2 ಹುಚ್ಚು ನಾಯಿಗಳು ವಿವಿಧ ಬಡಾವಣೆಗಳಲ್ಲಿ ಅಲೆದಾಡುತ್ತಿದ್ದು, ಜನ ಹಾಗೂ ಜಾನುವಾರುಗಳಿಗೆ ಕಚ್ಚುತ್ತಿವೆ. ಕೆಲವೇ ದಿನಗಳ ಅವಧಿಯಲ್ಲಿ ಹಲವರಿಗೆ ಕಚ್ಚಿ ಗಾಯಗೊಳಿಸಿವೆ.

ಸಂಬಂಧಿಸಿದವರ ನಿರ್ಲಕ್ಷ:

ನಿರಂತರ ನಾಯಿಗಳು ದಾಳಿ ಮಾಡಿ ಸಾಕಷ್ಟುಅನಾಹುತ ಸೃಷ್ಟಿಸುತ್ತಿದ್ದರೂ ಸಂಬಂಧಿಸಿದ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗದೇ ಇರುವುದರಿಂದ ಮತ್ತಷ್ಟುಅನಾಹುತಗಳು ಹೆಚ್ಚಲು ಕಾರಣವಾಗಿದೆ ಎಂದು ಜನ ಹಿಡಿಶಾಪ ಹಾಕುತ್ತಿದ್ದಾರೆ. ಸಾರ್ವಜನಿಕರ ದೂರುಗಳ ಮೇರೆಗೆ ಕ್ರಮಕ್ಕೆ ಮುಂದಾಗುವ ಪಪಂನವರು, ಪ್ರಾಣಿಹತ್ಯೆ ಅಪರಾಧ ಎಂದು ನಾಯಿಗಳನ್ನು ಹಿಡಿದು ಬೇರೆ ಕಡೆ ಬಿಟ್ಟು ಬಂದು ಕೈತೊಳೆದು ಕೊಳ್ಳುತ್ತಾರೆ. ಆದರೆ ಬಿಟ್ಟು ಬಂದ ನಾಯಿಗಳು ಮತ್ತೆ ಪಟ್ಟಣ ಪ್ರವೇಶಿಸಿ ಉಪಟಳ ಹೆಚ್ಚಿಸುತ್ತವೆ. ಇದರಿಂದ ಸಮಸ್ಯೆ ಹೆಚ್ಚುತ್ತಲೇ ಸಾಗಿದೆಯೇ ವಿನಃ ಪರಿಹಾರವಾಗುವುದಿಲ್ಲ ಎಂಬ ಅಂಬೋಣ ಸಾರ್ವಜನಿಕರದ್ದು. ನಾಯಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ಜನರು ನಿರಾಳವಾಗಿ ತಿರುಗಾಡಲು ಅನುಕೂಲ ಮಾಡಿಕೊಡಬೇಕು ಎಂಬುದು ಪ್ರಜ್ಞಾವಂತ ನಾಗರಿಕರ ಆಗ್ರಹ. 

ಉತ್ತರ ಕನ್ನಡ: ನದಿ ಜೋಡಣೆ ಯೋಜನೆಗೆ ಸ್ವರ್ಣವಲ್ಲೀ ಶ್ರೀ ವಿರೋಧ

ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ನಾಯಿಗಳ ಸಂತಾನಹರಣ ಚಿಕಿತ್ಸೆಗೆ ಟೆಂಡರ್‌ ಪ್ರಕ್ರಿಯೆ ನಡೆದಿದೆ. ನಾಯಿ ಹಾವಳಿ ಬಗ್ಗೆ ದೂರು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಅಂತ ಮುಂಡಗೋಡ ಪಪಂ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಹೇಳಿದ್ದಾರೆ. 

ನಾಯಿಗಳ ಹಾವಳಿಯಿಂದ ಬೀದಿಯಲ್ಲಿ ಧೈರ್ಯದಿಂದ ತಿರುಗಾಡದಂತಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳ ಮೈಮೇಲೆ ದಾಳಿ ಮಾಡಿ ಅನಾಹುತ ಸೃಷ್ಟಿಸುತ್ತಿವೆ. ತಕ್ಷಣ ಸಂಬಂಧಿಸಿದವರು ಈ ಬಗ್ಗೆ ಗಮನಹರಿಸಬೇಕು ಅಂತ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ಗೌಳಿ ತಿಳಿಸಿದ್ದಾರೆ.  
 

click me!