ಕಾಫಿನಾಡಲ್ಲಿ 14 ಮಂದಿ ಕೂಲಿ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆಂದು ಹೇಳಲಾಗ್ತಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೆಲ್ಲವೂ ಕಟ್ಟುಕಥೆ ಅಂತ ಬೆಳೆಗಾರನ ಬೆನ್ನಿಗೆ ಬೆಳೆಗಾರರೇ ನಿಂತು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.17): ಕಾಫಿನಾಡಲ್ಲಿ 14 ಮಂದಿ ಕೂಲಿ ಕಾರ್ಮಿಕರನ್ನ ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆಂದು ಹೇಳಲಾಗ್ತಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೆಲ್ಲವೂ ಕಟ್ಟುಕಥೆ ಅಂತ ಬೆಳೆಗಾರನ ಬೆನ್ನಿಗೆ ಬೆಳೆಗಾರರೇ ನಿಂತು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಈ ನಡುವೆ ಆರೋಪಿಗಳನ್ನ ಬಂಧಿಸಿಲ್ಲ ಅಂತ ಆರೋಪಿಸಿ ವಿವಿಧ ಸಂಘಟನೆಗಳು ಬೀದಿಗಿಳಿದು ಬೆಳೆಗಾರರ ವಿರುದ್ಧ ಪ್ರತಿಭಟನೆ ನಡೆಸಿವೆ. ಈ ಎಲ್ಲಾ ಬೆಳವಣಿಗೆಗಳನ್ನ ಗಮನಿಸಿದ್ರೆ ಕಾಫಿನಾಡು ಚಿಕ್ಕಮಗಳೂರಲ್ಲಿ ಇದೀಗ ಕಾಫಿತೋಟದ ಮಾಲೀಕರು-ಕಾರ್ಮಿಕರ ನಡುವೆ ಕೋಲ್ಡ್ ವಾರ್ ನಡೀತಿದ್ಯಾ ಎಂಬ ಅನುಮಾನ ಬಲವಾಗಿದೆ.
ಮಾಲೀಕರು-ಕಾರ್ಮಿಕರ ನಡುವೆ ಕೋಲ್ಡ್ ವಾರ್?: ಕಾಫಿನಾಡಲ್ಲಿ ಕಾಫಿ ತೋಟದ ಮಾಲೀಕ ಕಾರ್ಮಿಕರಿಗೆ ಬೈತಿದ್ದ ಅದೊಂದು ವಿಡಿಯೋ ದೇಶಾದ್ಯಂತ ಸುದ್ದಿಯಾಗಿತ್ತು. ಮಾಲೀಕನ ಹಲ್ಲೆಯಿಂದ ನನಗೆ ಗರ್ಭಪಾತವಾಗಿದೆ ಎಂದು ಮಹಿಳೆಯೊಬ್ಳು ಆಸ್ಪತ್ರೆ ಸೇರಿದ್ಲು. ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಚಿಕ್ಕಮಗಳೂರು ತಾಲೂಕಿನ ಜೇನುಗದ್ದೆ ಸಮೀಪದ ಕಾಫಿತೋಟದ ಮಾಲೀಕ ಜಗದೀಶ್ ಹಾಗೂ ಕಾರ್ಮಿಕರ ನಡುವಿನ ಗಲಾಟೆ ಕೋಲ್ಡ್ ವಾರ್ ಹಂತಕ್ಕೆ ತಲುಪಿದೆ. ಮುಂಗಡವಾಗಿ ನೀಡಿದ್ದ ಹಣದ ವಿಚಾರವಾಗಿ ಈ ರೀತಿ ತೋಟದ ಮಾಲೀಕ ಹಾಗೂ ಕಾರ್ಮಿಕರ ನಡುವೆ ಗಲಾಟೆ ನಡೆದಿತ್ತು. ಹಲ್ಲೆ ಮಾಡಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಅಂತ ಆರೋಪಿಸಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಜಗದೀಶ್ ಹಾಗೂ ಪುತ್ರ ತಿಲಕ್ ವಿರುದ್ಧ ಪ್ರಕರಣ ದಾಖಲಾಗಿತ್ತು.
Chikkamagaluru: ಜಿಲ್ಲೆಗೆ ವಲಸೆ ಬರುವ ಕಾರ್ಮಿಕರ ಮೇಲೆ ಹದ್ದಿನಕಣ್ಣು
ಇದೀಗ ಮಾಧ್ಯಮಗಳ ಮುಂದೆ ಬಂದಿರೋ ಕರ್ನಾಟಕ ರಾಜ್ಯ ಬೆಳೆಗಾರರ ಸಂಘ ಇದೆಲ್ಲಾ ಒಂದು ಕಟ್ಟುಕಥೆ ಎಂದಿದೆ. ಕಳೆದ ಒಂದು ವರ್ಷದಲ್ಲಿ ಈ ಕಾರ್ಮಿಕರು ನಾಲ್ಕು ಕಾಫಿ ತೋಟಗಳನ್ನ ಬದಲಾಯಿಸಿದ್ದಾರೆ. ಹೋದ ಕಡೆಗಳೆಲ್ಲಾ ಇದೇ ರೀತಿ ಗಲಾಟೆ ಮಾಡಿಕೊಂಡು ಮುಂಗಡ ಪಡೆದ ಹಣವನ್ನ ಹಿಂತಿರುಗಿಸದೇ ತೋಟ ಬಿಟ್ಟು ಬರುತ್ತಿದ್ದಾರೆ ಎಂದು ಆರೋಪಿಸಿದೆ. ಅಲ್ಲದೇ ಹಲ್ಲೆಯಿಂದಾಗಿ ಗರ್ಭಪಾತವಾಗಿದೆ ಅಂತಾ ಮಹಿಳೆ ಹೇಳಿದ್ದಾರೆ. ಆದರೆ, ಅದಕ್ಕೂ ಮುಂಚೆ 2 ವಾರದ ಹಿಂದೆಯೇ ಮಿಸ್ ಕ್ಯಾರೇಜ್ ಆಗಿರೋ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವರದಿ ದಾಖಲಾಗಿದೆ ಅಂತಿದೆ ಕಾಫಿ ಬೆಳೆಗಾರರ ಸಂಘದ ಮುಖಂಡ ಚಂದ್ರಶೇಖರ್ ತಿಳಿಸಿದ್ದಾರೆ.
ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನೆ: ನಾಲ್ಕು ತಿಂಗಳ ಹಿಂದೆ 6 ಕುಟುಂಬಗಳ 14 ಜನರು ಜಗದೀಶ್ ಎಂಬುವರ ಕಾಫಿ ತೋಟಕ್ಕೆ ಬಂದಿದ್ದಾರೆ. ಹೀಗೆ ಬರುವಾಗ ಮುಂಗಡವಾಗಿ 9 ಲಕ್ಷ ತೆಗೆದುಕೊಂಡಿದ್ದಾರೆ, ಆದರೆ ಇತ್ತೀಚಿಗೆ ಇವರ ತೋಟದ ಕೆಲಸಕ್ಕೆ ಬಾರದೇ ಬೇರೆಯವರ ತೋಟದ ಕೆಲಸಕ್ಕೆ ಹೋಗುತ್ತಿದ್ದರು. ಇದನ್ನ ಪ್ರಶ್ನೆ ಮಾಡಿದ್ದಕ್ಕೆ ಈ ರೀತಿಯ ಕಥೆ ಕಟ್ಟಿದ್ದಾರೆ. ಅನೇಕ ಬಾರಿ ತುಂಬಾ ಸೌಜನ್ಯದಿಂದ ಕೆಲಸಕ್ಕೆ ಬರುವಂತೆ ಮನವಿ ಮಾಡಿದ್ದಾರೆ. ಕೊನೆಗೆ ಕ್ಯಾರೇ ಎನ್ನದಿದ್ದಾಗ ಜಗದೀಶ್ ಅವರು ಆವೇಶ ಕಳೆದುಕೊಂಡು ಮಾತಾನಾಡಿದ್ದಾರೆ.
ಹೌದು! ಆದ್ರೆ ಹಲ್ಲೆ ಮಾಡಿಲ್ಲ, ಕೂಡಿ ಹಾಕಿಲ್ಲ. ಅವರೇ ಬೀಗ ಹಾಕಿಕೊಂಡು ವಿಡಿಯೋ ಮಾಡಿಕೊಂಡು ಮಾಲೀಕರಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿದ್ದಾರೆ ಅಂತ ಕಾಫಿ ಬೆಳೆಗಾರರ ಸಂಘ ಹೇಳಿದೆ. ಈ ಮಧ್ಯೆ ಕಾಫಿ ತೋಟದ ಮಾಲೀಕರ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇಷ್ಟಾದ್ರು ಆರೋಪಿಗಳನ್ನ ಇಲ್ಲಿಯವರೆಗೂ ಬಂಧಿಸಿಲ್ಲ ಅಂತಾ ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಬಾಳೆಹೊನ್ನೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕೂಡಲೇ ಅವರನ್ನ ಬಂಧಿಸುವಂತೆ ಆಗ್ರಹಿಸಿವೆ.
Chikkamagaluru: ದಂಡ ಹಾಕಿದ್ದಕ್ಕೆ ಜಡ್ಜ್ ಮೇಲೆ ಚಪ್ಪಲಿ ತೂರಿದ ಆರೋಪಿಯ ಬಂಧನ
ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರಕ್ಕೆ: ಈ ಪ್ರಕರಣ ಪೊಲೀಸರಿಗೂ ಇದು ಬಿಸಿ ಕಜ್ಜಾಯವಾಗಿದ್ದು ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಪೀಕಲಾಟ ಶುರುವಾಗಿದೆ. ಚಿಕ್ಕಮಗಳೂರು ಕಾಫಿ ಬೆಳೆಗಾರರ ಸಂಘದ ಜೊತೆ ರಾಜ್ಯ ಬೆಳೆಗಾರರ ಸಂಘ ಕೂಡ ಸಾಥ್ ನೀಡಿದ್ದು, ಈ ಬಗ್ಗೆ ನಾವು ಕೂಡ ಕಾನೂನು ಹೋರಾಟ ಮಾಡುವುದಾಗಿ ಹೇಳಿದೆ. ಶತಮಾನದಿಂದಲೂ ಕಾಫಿನಾಡಲ್ಲಿ ಕಾಫಿ ನೆಚ್ಚಿಕೊಂಡು ಸಾವಿರಾರು ಕುಟುಂಬಗಳು ಬದುಕುತ್ತಿವೆ. ಆದರೆ, ಇತ್ತೀಚೆಗೆ ಮಾಲೀಕರ-ಕಾರ್ಮಿಕರ ಸಂಬಂಧ ಹಾಳಾಗುತ್ತಿರೋದು ಕಾರಣ ಯಾರು-ಏನೆಂಬುದು ಹಲವು ಅನುಮಾನಗಳಿಗೆ ಸಾಕ್ಷಿಯಾಗಿದೆ. ಪೊಲೀಸರ ನಿಷ್ಪಕ್ಷಪಾತವಾದ ತನಿಖೆಯಿಂದ ಸತ್ಯಾಂಶ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.