ಶಿವಮೊಗ್ಗದಲ್ಲಿ ಜಡಿ ಮಳೆ ಮುಂದುರಿದಿದ್ದು ಜೋಗ ಜಲಪಾತ ಭೋರ್ಗರೆಯುತ್ತಿದೆ. ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಾಣಿಸಿದೆ. ಆದರೆ ಇದುವರೆಗೂ ಯಾವುದೇ ನದಿಯೂ ಅಪಾಯದ ಮಟ್ಟಮೀರಿಲ್ಲ. ಶರಾವತಿ ಜಲಾನಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿಯ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಾಣಿಸಿದೆ.
ಶಿವಮೊಗ್ಗ(ಸೆ.07): ಘಟ್ಟಪ್ರದೇಶದಲ್ಲಿ ಜಡಿ ಮಳೆ ಮುಂದುವರಿದಿದ್ದು, ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಾಣಿಸಿದೆ. ಆದರೆ ಇದುವರೆಗೂ ಯಾವುದೇ ನದಿಯೂ ಅಪಾಯದ ಮಟ್ಟಮೀರಿಲ್ಲ.
ವಾಡಿಕೆಯಂತೆ ಸೆಪ್ಟೆಂಬರ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 164 ಮಿ. ಮೀ. ಮಳೆಯಾಗುತ್ತಿದ್ದು, ಈ ಬಾರಿ ಸೆ. 6 ನೇ ತಾರೀಖಿನ ಒಳಗಾಗಿಯೇ ಈ ಸರಾಸರಿ ದಾಟಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಸರಾಸರಿ ಮಳೆ 12 ಮಿ.ಮೀ. ಆಗಿದ್ದು, ಸಂಜೆಯ ಹೊತ್ತಿಗೆ ಸರಾಸರಿ ಮಳೆ 165 ಮಿ.ಮೀ. ಮಳೆಯಾಗಿದೆ.
ಶಿವಮೊಗ್ಗ: ಆರ್ಥಿಕ ಹಿಂಜರಿತಕ್ಕೆ ಗಾರ್ಮೆಂಟ್ ಉದ್ಯಮ ಕಂಪನ
ಲಿಂಗನಮಕ್ಕಿ ಒಳಹರಿವು ಏರಿಕೆ:
ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಶರಾವತಿ ಜಲಾನಯ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಲಿಂಗನಮಕ್ಕಿಯ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಾಣಿಸಿದೆ. ತುಂಬಿರುವ ಜಲಾಶಯದಿಂದ 65 ಸಾವಿರ ಕ್ಯು. ನೀರನ್ನು ಹೊರ ಬಿಡುತ್ತಿರುವುದರಿಂದ ಜೋಗ ಜಲಪಾತ ಭೋರ್ಗರೆಯುತ್ತಿದೆ.
ಭದ್ರಾ ಜಲಾಶಯ ಒಳಹರಿವು ಹೆಚ್ಚಳ:
ಭದ್ರಾ ಜಲಾಶಯದ ಒಳಹರಿವಿನಲ್ಲಿಯೂ ಏರಿಕೆ ಕಾಣಿಸಿದ್ದು, ಜಲಾಶಯಕ್ಕೆ 23488 ಕ್ಯು. ನೀರು ಹರಿದು ಬರುತ್ತಿದೆ. ಜಲಾಶಯದಿಂದ 26,821 ಕ್ಯು. ನೀರು ಹೊರ ಬಿಡಲಾಗುತ್ತಿದ್ದು, ಭದ್ರಾವತಿ ಪಟ್ಟಣದಲ್ಲಿ ನದಿಯ ಇಕ್ಕೆಲಗಳು ಮುಳುಗುವ ಸಾಧ್ಯತೆ ಇದೆ. ತುಂಗಾ ಜಲಾಶಯದಿಂದ 37339 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ ಈ ರೀತಿಯಿದೆ.
ಶಿವಮೊಗ್ಗ -7.40 ಮಿ.ಮೀ., ಭದ್ರಾವತಿ- 9.20 ಮಿ. ಮೀ., ತೀರ್ಥಹಳ್ಳಿ- 67.40 ಮಿ. ಮೀ., ಸಾಗರ -41.80 ಮಿ. ಮೀ., ಶಿಕಾರಿಪುರ -15.80 ಮಿ.ಮೀ., ಸೊರಬ- 38.10 ಮಿ. ಮೀ. ಹಾಗೂ ಹೊಸನಗರ -42.20 ಮಿ.ಮೀ. ಮಳೆಯಾಗಿದೆ.