ರಾಜ್ಯದ ಮೂರು ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.
ಕೊಪ್ಪಳ (ಅ.02): ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಗಳ ಹಲವು ಪ್ರದೇಶದಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆ ಭಾರೀ ಮಳೆ ಸುರಿದಿದ್ದು ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೊಪ್ಪಳ ತಾಲೂಕಿನ ಅಳವಂಡಿ ಬಳಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟುತ್ತಿದ್ದ ವೇಳೆ ಪತ್ನಿ ಮತ್ತು ಮಗು ಆಯ ತಪ್ಪಿ ಬಿದ್ದು ಕೊಚ್ಚಿ ಹೋಗುತ್ತಿದ್ದು, ಪತಿಯೇ ಧೈರ್ಯ, ಸಾಹಸ ಮಾಡಿ ಅವರನ್ನು ರಕ್ಷಿಸಿದ್ದಾನೆ. ರಾಯಚೂರಲ್ಲಿ ಎತ್ತಿನ ಬಂಡಿ ಹಳ್ಳದಲ್ಲಿ ಪಲ್ಟಿಹೊಡೆದಿದು, ಅಪಾಯದಲ್ಲಿದ್ದ ನಾಲ್ವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿಯಿಂದ ರಭಸವಾಗಿ ಮಳೆಯಾಗಿದ್ದು, ಬಹುತೇಕ ಹಳ್ಳಕೊಳ್ಳ ನದಿ ತುಂಬಿ ಹರಿಯುತ್ತದೆ. ಅಳವಂಡಿ- ಕಂಪ್ಲಿ ಮಧ್ಯೆ ಇರುವ ಹಳ್ಳವನ್ನು ದಂಪತಿಗಳು ತಮ್ಮ ಮಗುವಿನ ಜೊತೆ ದಾಟುತ್ತಿದ್ದಾಗ ಕಾಲು ಜಾರಿ ಪತ್ನಿ, ಮಗು ನೀರಿಗೆ ಬಿದ್ದು ಕೆಲ ದೂರ ಕೊಚ್ಚಿ ಹೋಗಿದ್ದಾರೆ. ಪತಿಯೇ ಜೀವದ ಹಂಗು ತೊರೆದು, ನೀರಿಗೆ ಜಿಗಿದು ಅವರನ್ನು ರಕ್ಷಿಸಿದ್ದಾನೆ. ಸುಮಾರು 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ.
ಬಳ್ಳಾರಿ: ಪ್ರವಾಹಕ್ಕೆ ಕಿತ್ತು ಹೋದ ಸೇತುವೆ, ಜೆಸಿಬಿ ಮೂಲಕ ಹಳ್ಳ ದಾಟಿದ ಕೂಲಿ ಕಾರ್ಮಿಕರು
ಗದಗ ಜಿಲ್ಲೆಯ ನರಗುಂದ ತಾಲೂಕಿನ ಸ್ಥಳಾಂತರ ಗ್ರಾಮವಾಗಿರುವ ಬೂದಿಹಾಳದ ಬಳಿ ಕಾಲುವೆಯೊಂದು ಒಡೆದ ಪರಿಣಾಮ ಗ್ರಾಮಕ್ಕೆ ನೀರು ನುಗ್ಗಿದೆ. ಮನೆಯಲ್ಲಿದ್ದ ಧವಸಧಾನ್ಯವೆಲ್ಲಾ ನೀರು ಪಾಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಗ್ರಾಮಸ್ಥರು ಗುರುವಾರ ಬೆಳಗ್ಗೆ ಪರಿಸ್ಥಿತಿ ಅವಲೋಕಿಸಲು ಬಂದಿದ್ದ ನರಗುಂದ ತಹಸೀಲ್ದಾರ ಮಹೇಂದ್ರ ಮತ್ತು ಜಿಪಂ ಅಧ್ಯಕ್ಷ ರಾಜುಗೌಡ ಕೆಂಚನ್ನಗೌಡ್ರ ಅವರಿಗೆ ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡರು. ಗದಗ ತಾಲೂಕಿನ ತಿಮ್ಮಾಪೂರದಲ್ಲಿ 11 ಮನೆಗಳ ಗೋಡೆ ಕುಸಿದಿದೆ. ಬಾಗಲಕೋಟೆ ಜಿಲ್ಲೆಯ ಅಲ್ಲಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮನೆಗಳು ಕುಸಿದಿವೆ. ಜತೆಗೆ ಹಳ್ಳಗಳು ಕೂಡ ತುಂಬಿ ಹರಿಯುತ್ತಿವೆ. ಕೆಲವೆಡೆ ವಾಹನಗಳ ಸಂಚಾರ ಕೂಡ ಬಂದ್ ಆಗಿದೆ.
ಎತ್ತಿನ ಬಂಡಿ ಪಲ್ಟಿ: ರಾಯಚೂರು ತಾಲೂಕಿನ ಯರಗೇರಾ ಗ್ರಾಮದ ಸಮೀಪದ ಹಳ್ಳದಲ್ಲಿ ಎತ್ತಿನ ಬಂಡಿ ಪಲ್ಟಿಹೊಡೆದು ನಾಲ್ವರು ಅಪಾಯಕ್ಕೆ ಸಿಲುಕಿದ್ದರು. ತಕ್ಷಣವೇ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಸತತ ಮಳೆಯಿಂದ ಹಳ್ಳ ತುಂಬಿಹರಿಯುತ್ತಿತ್ತು. ನೀರಿನ ರಭಸಕ್ಕೆ ಎತ್ತುಗಳು ಎಳೆದಾಡಿವೆ. ಈ ವೇಳೆ ನಿಯಂತ್ರಣ ತಪ್ಪಿದ ಬಂಡಿ ಪಲ್ಟಿಹೊಡೆದಿತ್ತು.