ಬೆಂಗಳೂರು (ಅ.11): ಕಲಬುರಗಿ (Kalaburagi), ಮಂಡ್ಯ (mandya), ಬಾಗಲಕೋಟೆ, ಚಿಕ್ಕಬಳ್ಳಾಪುರ (Chikkaballapur) ಸೇರಿದಂತೆ ರಾಜ್ಯದ 7 ಜಿಲ್ಲೆಗಳಲ್ಲಿ ಶನಿವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗಿದೆ (Heavy rain). ಕಲಬುರಗಿಯಲ್ಲಿ ಮಳೆಯಬ್ಬರಕ್ಕೆ ನಗರದ ಪ್ರದೇಶದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆ ಸಂಬಂಧಿ ಕಾರಣಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ರಾಜಧಾನಿ ಬೆಂಗಳೂರಿನಿಂದ (Bengaluru) ವರದಿಯಾಗಿದೆ. ಈ ಮಧ್ಯೆ ತುಂಗಭದ್ರಾ ಡ್ಯಾಂನಿಂದ 45 ಸಾವಿರ ಕ್ಯುಸೆಕ್ ನೀರು ಹೊರಬಿಟ್ಟಿರುವ ಕಾರಣ ಹಂಪಿಯ ಕೆಲವು ಸ್ಮಾರಕಗಳು ಜಲಾವೃತವಾಗಿವೆ.
ರಾಜ್ಯ ರಾಜಧಾನಿಯಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು ಕೆಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಅವಾಂತರವಾಗಿದೆ. ಭಾನುವಾರ ನಗರದ ನೈಸ್ ರೋಡ್ Nice Road) ಸಮೀಪದ ಮಾಗಡಿ ರಸ್ತೆಯ ಬದಿಯಲ್ಲಿ ಬೈಕ್ (Bike) ನಿಲ್ಲಿಸಿ ಮರದಡಿ ನಿಂತಿದ್ದ ತಿಪ್ಪೇಸ್ವಾಮಿ ಎಂಬವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಅವರ ಪುತ್ರ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ.
ರಾಯಚೂರಲ್ಲಿ ಭಾರೀ ಮಳೆ: ಬಾಯಲ್ಲಿ ಮರಿ ಹಿಡಿದು ನಾಯಿ ಪರದಾಟ
ಕಳೆದ ಕೆಲ ದಿನಗಳಿಂದ ಉತ್ತಮ ಮಳೆ ಕಾಣುತ್ತಿರುವ ಕಲಬುರಗಿಯಲ್ಲಿ ಭಾನುವಾರ ಮಧ್ಯಾಹ್ನವೂ 2 ಗಂಟೆಗಳ ಕಾಲ ಸಿಡಿಲಬ್ಬರದೊಂದಿಗೆ ಬಿರುಸಿನ ಮಳೆಯಾಗಿದ್ದು, ಇದರಿಂದ ನಗರದ ಮುಖ್ಯ ರಸ್ತೆಗಳಲ್ಲಿ 2 ಅಡಿಗೂ ಅಧಿಕ ನೀರು ನಿಂತು ವಾಹನ (Vehicle) ಸವಾರರು ಪರದಾಡಬೇಕಾಯಿತು. ಲಾಲ್‌ಗೇರ್ ಕ್ರಾಸ್ ಸೇರಿ ಹಲವು ಕಡೆ ತಗ್ಗುಪ್ರದೇಶಗಳಲ್ಲಿರುವ ಅಂಗಡಿ, ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಚಿಂಚೋಳಿಯಲ್ಲಿ ಮುಲ್ಲಾಮಾರಿ ನದಿ ಉಕ್ಕಿ ಹರಿಯುತ್ತಿದೆ.
ಹಳ್ಳದಲ್ಲಿ ಸಿಲುಕಿದ ಬಸ್:
ಬಾಗಲಕೋಟೆಯಲ್ಲಿ (Bagalkote )ಶನಿವಾರ ತಡರಾತ್ರಿ ಸುರಿದ ಮಳೆಯ ಪರಿಣಾಮ ಹುನಗುಂದ ತಾಲೂಕಿನ ಬೇಕಮಲದಿನ್ನಿ ಹಳ್ಳದಲ್ಲಿ ಬಸ್‌ವೊಂದು ಸಿಲುಕಿದ ಘಟನೆ ನಡೆದಿದೆ. ಭಾರೀ ಮಳೆಯಿಂದಾಗಿ ಹಲವೆಡೆ ರಸ್ತೆ ಸಂಪರ್ಕ ಕಡಿತವಾಗಿದ್ದರೆ, ಹುನಗುಂದ ಕರಡಿ ರಸ್ತೆ ಮಾರ್ಗದಲ್ಲಂತೂ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಜೊತೆಗೆ ಇದೇ ಮಾರ್ಗದ ಬೇಕಮಲದಿನ್ನಿ ಹಳ್ಳದಲ್ಲಿ ಸಿಕ್ಕಿಹಾಕಿಕೊಂಡ ಬಸ್ ಅನ್ನು ಟ್ರ್ಯಾಕ್ಟರ್ ಸಹಾಯ ಪಡೆದು ಹೊರಗೆಳೆಯಲಾಯಿತು.
ಮಂಡ್ಯ ಜಿಲ್ಲೆಯಲ್ಲೂ ಉತ್ತಮ ಮಳೆಯಾಗಿದ್ದು, ಹಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಮಂಡ್ಯ, ಭಾರತೀನಗರ, ಮದ್ದೂರು, ನಾಗಮಂಗಲ ತಾಲೂಕಿನಲ್ಲಿ ಕೆಲಗಂಟೆಗಳ ಕಾಲ ಭರ್ಜರಿ ಮಳೆಯಾಗಿದ್ದರೆ, ಶ್ರೀರಂಗಪಟ್ಟಣದಲ್ಲಿ (Shrirangapattana) ಸಾಧಾರಣ ಮಳೆಯಾಗಿದೆ. ಭಾರತೀನಗರದಲ್ಲಿ ಹನುಮಂತನಗರ ಸಮೀಪವಿರುವ ಹೆಬ್ಬಾಳ ಚನ್ನಯ್ಯನಾಲೆ ಸೇತುವೆ (Bridge) ಸಂಪೂರ್ಣ ಮುಳುಗಡೆಯಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹಲವು ಗ್ರಾಮಗಳು ಜಲದಿಗ್ಬಂಧನದಲ್ಲಿ ಸಿಲುಕಿ ಜನರಿಗೆ ಸಮಸ್ಯೆಯಾಗಿದೆ. ನಗರ ಪ್ರದೇಶಗಳಲ್ಲಿ ಒಳಚರಂಡಿ ಅವ್ಯವಸ್ಥೆಗೆ ಮಳೆ ನೀರು ರಸ್ತೆಗಳಿಗೆ, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿ ಜನ ಹೈರಾಣ ಆಗಿದ್ದಾರೆ. ಇನ್ನು ಕೆರೆಕೊಳ್ಳಗಳೆಲ್ಲ ತುಂಬಿದ್ದು ಹೊಲ ಗದ್ದೆಗಳಿಗೆ ನೀರು ನುಗ್ಗಿ ಟೊಮೆಟೋ (Tomato) ಮೊದಲಾದ ಬೆಳೆಗಳು ತೀವ್ರ ನಷ್ಟವಾಗಿವೆ. ಮೈಸೂರು, ಚಾಮರಾಜನಗರ (chamarajanagar) ಜಿಲ್ಲೆಗಳ ಕೆಲವೆಡೆಯೂ ಉತ್ತಮ ಮಳೆ ಸುರಿದಿದೆ.
ಪುರಂದರ ಮಂಟಪ ಮುಳುಗಡೆ:
ಕಳೆದ ಕೆಲ ದಿನಗಳಿಂದ ಮಲೆನಾಡಲ್ಲಿ ಉತ್ತಮ ಮಳೆಯಾದ ಪರಿಣಾಮ ತುಂಗಭದ್ರಾ (Tungabadra) ಜಲಾಶಯದಿಂದ 45 ಸಾವಿರ ಕ್ಯುಸೆಕ್ ನೀರು ಹೊರಗೆ ಬಿಡಲಾಗುತ್ತಿದೆ. ಇದರಿಂದ ಐತಿಹಾಸಿಕ ಹಂಪಿಯ (Hampi) ನದಿಪಾತ್ರದ ಪುರಂದರ ಮಂಟಪ ಸಂಪೂರ್ಣ ಮುಳಗಡೆಯಾಗಿದೆ. ಮಂಟಪದ ಗೋಪುರದ ತುದಿಯಲ್ಲಿರುವ ಕೇಸರಿ ಧ್ವಜ ಮಾತ್ರ ಗೋಚರಿಸುತ್ತಿದೆ. ಚಕ್ರತೀರ್ಥ ಕೋದಂಡರಾಮಸ್ವಾಮಿ ದೇವಾಲಯದ ಬಳಿಯೂ ನೀರು ಹರಿದು ಬಂದಿದ್ದು, ವಿರೂಪಾಕ್ಷೇಶ್ವರ ದೇವಾಲಯದ ಬಳಿಯ ಸ್ನಾನಘಟ್ಟ, ವೈದಿಕ ಮಂಟಪವೂ ಜಲಾವೃತವಾಗಿವೆ. ಕೋಟಿಲಿಂಗ, ಲಕ್ಷ್ಮೇನರಸಿಂಹ, ಕೋಟಿಲಿಂಗಗಳೂ ಮುಳುಗಡೆಯಾಗಿವೆ. ನದಿ ತುಂಬಿ ಹರಿಯುತ್ತಿರುವುದರಿಂದ ಬೋಟ್ ಸಂಚಾರವೂ ಸ್ಥಗಿತಗೊಂಡಿದೆ.