ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಸಂಪೂರ್ಣ ಅಸ್ತವ್ಯಸ್ತ

By Kannadaprabha NewsFirst Published Aug 17, 2020, 10:01 AM IST
Highlights

ಭಟ್ಕಳದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯ ಆರ್ಭಟ| ಬೆಳಗ್ಗೆ 7 ಗಂಟೆಗೆ ಆರಂಭವಾದ ಭಾರಿ ಮಳೆ ಮಧ್ಯಾಹ್ನ 2 ಗಂಟೆ ತನಕ ಮುಂದುವರಿಯಿತು| ರಂಗಿಕಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 2 ಗಂಟೆಗಳ ಕಾಲ ಜಲಾವೃತ| ವಾಹನ ಸಂಚಾರಕ್ಕೆ ವ್ಯತ್ಯಯ, ಪಾದಚಾರಿಗಳ ಪರದಾಟ| 

ಕಾರವಾರ(ಆ.17): ಉತ್ತರ ಕನ್ನಡದ ಕರಾವಳಿಯಲ್ಲಿ ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನದ ತನಕ ಭಾರಿ ಮಳೆ ಸುರಿದಿದೆ. ಕೆಲವೆಡೆ ರಸ್ತೆಯ ಮೇಲೆ ನೀರು ನುಗ್ಗಿ ಸಂಚಾರಕ್ಕೂ ವ್ಯತ್ಯಯ ಉಂಟಾಗಿತ್ತು. ಭಟ್ಕಳದಲ್ಲಿ ಬೆಳಗ್ಗೆ 7 ಗಂಟೆಗೆ ಆರಂಭವಾದ ಭಾರಿ ಮಳೆ ಮಧ್ಯಾಹ್ನ 2 ಗಂಟೆ ತನಕ ಮುಂದುವರಿಯಿತು. ಇದರಿಂದ ಗಟಾರಗಳಲ್ಲಿ ನೀರು ಉಕ್ಕಿ ರಸ್ತೆಯ ಮೇಲೆ ಪ್ರವಹಿಸಿತು. ಶಂಸುದ್ದೀನ್‌ ಸರ್ಕಲ್‌, ರಂಗಿಕಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 2 ಗಂಟೆಗಳ ಕಾಲ ಜಲಾವೃತವಾಗಿತ್ತು. ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಪಾದಚಾರಿಗಳಂತೂ ಪರದಾಡುವಂತಾಯಿತು.

ಹೊನ್ನಾವರ, ಕುಮಟಾ ಅಂಕೋಲಾ ಹಾಗೂ ಕಾರವಾರಗಳಲ್ಲೂ ಬೆಳಗ್ಗೆ ಭಾರಿ ಮಳೆ ಸುರಿದಿದೆ. ಭಾರಿ ಮಳೆಯಿಂದ ವಾಹನ ಸಂಚಾರದಲ್ಲಿ ಇಳಿಮುಖವಾಯಿತು. ನಗರ ಹಾಗೂ ಪಟ್ಟಣ ಪ್ರದೇಶದಲ್ಲಿ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿತು. ಪೇಟೆ ಪಟ್ಟಣಗಳಿಗೆ ಬಂದಿದ್ದ ಜನರು ಸೂರು ಸಿಕ್ಕಲ್ಲಿ ತೂರಿಕೊಂಡರು.

ಕಾರವಾರ: ಭಾರಿ ಮಳೆಗೆ ಕರಾವಳಿಯಲ್ಲಿ 3202 ಮೀ. ಕಡಲ್ಕೊರೆತ

ಜೋಯಿಡಾ ತಾಲೂಕಿನಲ್ಲಿ ಭಾನುವಾರ ವ್ಯಾಪಕ ಮಳೆಯಾಗಿದೆ. ದಿನವಿಡಿ ಮಳೆ ಸುರಿದಿದೆ. ಹಳ್ಳ ಕೊಳ್ಳಗಳಲ್ಲಿ ನೀರಿನ ಮಟ್ಟ ಹೆಚ್ಚಿದರೂ, ಪ್ರಮುಖ ನದಿಗಳ ನೀರಿನ ಮಟ್ಟದಲ್ಲಿ ಯಾವುದೇ ಹೆಚ್ಚಳ ಉಂಟಾಗಿಲ್ಲ. ಏಕೆಂದರೆ ಘಟ್ಟದ ಮೇಲಿನ ತಾಲೂಕುಗಳಲ್ಲಿ ಜಿಟಿಜಿಟಿ ಮಳೆ ಮಾತ್ರ ಉಂಟಾಗಿದೆ. ಶಿರಸಿ, ಸಿದ್ಧಾಪುರ, ಯಲ್ಲಾಪುರಗಳಲ್ಲಿ ಭಾರಿ ಮಳೆ ಸುರಿದರೆ ಗಂಗಾವಳಿ, ಅಘನಾಶಿನಿ ಮತ್ತಿತರ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿ ಪ್ರವಾಹದ ಆತಂಕ ಮನೆ ಮಾಡುತ್ತದೆ. ಭಾನುವಾರ ಬೆಳಗ್ಗೆಯಿಂದ ದಟ್ಟವಾದ ಮೋಡ ಕವಿದ ವಾತಾವರಣ ಇದೆ. ಆಗಾಗ ಬಿರುಗಾಳಿಯೂ ಬೀಸುತ್ತಿದೆ. ಹವಾಮಾನ ಇಲಾಖೆಯ ಮೂಲಗಳ ಪ್ರಕಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ.

ಮುಂಡಗೋಡದಲ್ಲಿ 3 ಮನೆ ಕುಸಿತ

ಎಡಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಭಾನುವಾರ ತಾಲೂಕಿನ ಇಂದೂರಕೊಪ್ಪ (ಇಂದಿರಾನಗರ) ಗ್ರಾಮದ ಸೋಮಂತೆವ್ವ ಕುಂಕೂರ, ಸುಮಂಗಲಾ ನಿಂಗಪ್ಪ ಕರಡಿಕೊಪ್ಪ ಅವರ ಮನೆ ಹಾಗೂ ಇಂದೂರಕೊಪ್ಪ ಗ್ರಾಮದ ನಾಗರತ್ನ ಕಟ್ಟಿಮನಿ ಎಂಬುವವರ ಮನೆ ಕುಸಿದು ಅಪಾರ ಹಾನಿ ಸಂಭವಿಸಿದೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಪರಿಹಾರ ಕ್ರಮಕೈಗೊಂಡಿದ್ದಾರೆ. ತಾಲೂಕಿನ ಬಹುತೇಕ ಜಲಾಶಯ ಹಾಗೂ ಕೆರೆಗಳು ಭರ್ತಿಯಾಗಿ ಅಪಾಯದ ಮಟ್ಟತಲುಪಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ರಾಜ್ಯದಲ್ಲಿ ಮತ್ತೆ 5 ದಿನ ಭಾರೀಮಳೆ : ಎಲ್ಲೆಲ್ಲಿ ಅಲರ್ಟ್..?

ನೀರು ನಿಂತು ರಸ್ತೆಗಳೆಲ್ಲ ಕೆರೆಯಂತೆ ಬಾಸವಾಗುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೃಷಿ ಬೆಳೆಗಳು ನೀರಿನಲ್ಲಿ ಮುಳುಗಿವೆ. ತಾಲೂಕಿನ ಮಳಗಿ ಧರ್ಮಾಜಲಾಶಯ, ಬಾಚಣಕಿ, ಸನವಳ್ಳಿ ಹೀಗೆ ಬಹುತೇಕ ಪ್ರಮುಖ ಜಲಾಶಯಗಳು ಭರ್ತಿಯಾಗಿವೆ. ತಾಲೂಕಿನ ಪ್ರತಿಷ್ಠಿತ ಕೆರೆಯಲ್ಲೊಂದಾದ ಸಾಲಗಾಂವ್‌ ಬಾಣಂತಿ ಕೆರೆ ಭರ್ತಿಯಾಗಿ ಸುತ್ತಮುತ್ತ ಪ್ರದೇಶದ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಹಾನಿ ಮಾಡಿದೆ. ಇದೇ ರೀತಿ ಬಹುತೇಕ ಕೆರೆಗಳು ತುಂಬಿ ಕೃಷಿ ಭೂಮಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿವೆ. ಈಗಾಗಲೇ ಕೆಲವೆಡೆ ಕೆರೆ ಕಟ್ಟೆಗಳ ಒಡ್ಡುಕೂಡ ಕುಸಿದಿವೆ. ತಾಲೂಕಿನ ವಿವಿಧ ಕಡೆಗಳಲ್ಲಿ ಸಾಕಷ್ಟುಮನೆಗಳು ಕುಸಿದಿದ್ದು, ಜನ ಸೂರು ಕಳೆದುಕೊಂಡು ಪರದಾಡುತ್ತಿದ್ದಾರೆ. ಮಳೆ ಹೀಗೆಯೇ ಮುಂದುವರೆದರೆ ಆಪತ್ತು ಎದುರಾಗುವ ಸಾಧ್ಯತೆ ಇದ್ದು, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕಿದೆ.

ಹೊಳೆಯಾದ ಸಂಶುದ್ದೀನ ವೃತ್ತ, ರಂಗೀಕಟ್ಟೆ ಹೆದ್ದಾರಿ

ತಾಲೂಕಿನಾದ್ಯಂತ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಗುಡುಗು ಮಿಂಚಿನೊಂದಿಗೆ ಭಾರಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿತ್ತು. ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಮಳೆಯ ಪ್ರಮಾಣ ತೀರಾ ಕಡಿಮೆ ಇತ್ತು. ಆದರೆ ಭಾನುವಾರ ಬೆಳಗ್ಗೆಯಿಂದ ಒಮ್ಮೆಲೆ ಸುರಿದ ವ್ಯಾಪಕ ಮಳೆಗೆ ಪಟ್ಟಣದ ಹೃದಯಭಾಗವಾದ ಸಂಶುದ್ದೀನ ವೃತ್ತದಲ್ಲಿ ನೀರು ತುಂಬಿ ಜನ ಹಾಗೂ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು. ವೃತ್ತ ಮತ್ತು ರಂಗೀಕಟ್ಟೆಯ ರಾಷ್ಟ್ರೀಯ ಹೆದ್ದಾರಿ ಭಾರೀ ಮಳೆಗೆ ಹೊಳೆಯಾಗಿತ್ತು. ರಸ್ತೆಯಲ್ಲಿ ಮೊಣಕಾಲಿನವರೆಗೆ ನೀರು ನಿಂತಿದ್ದರಿಂದ ಎಲ್ಲರೂ ತೊಂದರೆ ಅನುಭವಿಸುವಂತಾಯಿತು.

ಚೌತನಿಯ ಶರಾಬಿ ಹೊಳೆಯ ನೀರು ತುಂಬಿ ತುಳುಕಿ ರಸ್ತೆಯವರೆಗೂ ಬಂದಿದೆ. ಗ್ರಾಮೀಣ ಭಾಗದಲ್ಲಿಯೂ ಮಳೆ ಜೋರಾಗಿಯೇ ಸುರಿದ ಪರಿಣಾಮ ಅನೇಕ ಕಡೆಗಳಲ್ಲಿ ನೀರು ನಿಂತು ತೊಂದರೆಯಾಗಿದೆ. ತಾಲೂಕು ಆಡಳಿತ ನೋಡಲ್‌ ಅಧಿಕಾರಿಗಳ ಮೂಲಕ ಎಲ್ಲಾ ಗ್ರಾಪಂ ವ್ಯಾಪ್ತಿಯಲ್ಲಿಯೂ ನಿಗಾವಹಿಸಿದ್ದು ಯಾವುದೇ ತೊಂದರೆಯಾಗದಂತೆ ಸೂಕ್ತ ಕ್ರಮ ಜರುಗಿಸಲು ಮುಂದಾಗಿದೆ.

ತಾಲೂಕಿನಲ್ಲಿ ಭಾನುವಾರ ಬೆಳಗ್ಗೆವರೆಗೆ 25 ಮಿ.ಮೀ. ಮಳೆಯಾಗಿದ್ದು, ಇಲ್ಲಿಯವರೆಗೆ ಒಟ್ಟೂ3308 ಮಿ.ಮೀ. ಮಳೆಯಾಗಿದೆ. ವ್ಯಾಪಕ ಮಳೆಗೆ ಎಲ್ಲೆಲ್ಲಿ ಹಾನಿ ಸಂಭವಿಸಿದೆ ಎನ್ನುವುದರ ಬಗ್ಗೆ ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಮಾವಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆಗೆ ಬತ್ತದ ಗದ್ದೆಗಳು ಜಲಾವ್ರತವಾದ ಬಗ್ಗೆ ವರದಿಯಾಗಿದೆ.
 

click me!