ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ: ಆತ್ಮಹತ್ಯೆಗೆ ನಿರ್ಧರಿಸಿದ ಕಲಾವಿದನ ಕುಟುಂಬ

Kannadaprabha News   | Asianet News
Published : Aug 17, 2020, 09:36 AM ISTUpdated : Aug 17, 2020, 09:46 AM IST
ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ: ಆತ್ಮಹತ್ಯೆಗೆ ನಿರ್ಧರಿಸಿದ ಕಲಾವಿದನ ಕುಟುಂಬ

ಸಾರಾಂಶ

ಗಣಪತಿ ಹೋಗಲಿಲ್ಲಾಂದ್ರ ಇದೇ ಕೊನೆಯ ಗಣೇಶೋತ್ಸವ| ಮನನೊಂದ ಕಲಾವಿದ ಕುಟುಂಬ ಸಮೇತ ಆತ್ಮಹತ್ಯೆಗೆ ನಿರ್ಧಾರ| ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ ಎಂದ ಸರ್ಕಾರ|  ಗಣೇಶ ಮೂರ್ತಿ ಕಲಾವಿದರಿಗೆ ಸಂಕಷ್ಟ: ವಿಡಿಯೋ ವೈರಲ್‌| 

ಧಾರವಾಡ(ಆ.17): ಸಣ್‌ ಗಣಪತಿ ಮಾಡಕೊಂಡು ನಾವು ಸುಮ್ನ ನಮ್ಮ ಪಾಡಿಗೆ ಜೀವನಾ ಮಾಡತಿದ್ವಿ. ದೊಡ್ಡ ಗಣಪತಿ ಮಾಡಿ ಎಂದು ಆರ್ಡರ್‌ ಕೊಟ್ಟು ಈಗ ಸರ್ಕಾರ ಬ್ಯಾಡಾ ಅಂತೈತಿ ಅಂತಾ ಆರ್ಡರ್‌ ಕ್ಯಾನ್ಸಲ್‌ ಮಾಡಿ ಹೊಂಟಾರು. ಇಡೀ ವರ್ಷಪೂರ್ತಿ ಹೆಂಡ್ತಿ, ಮಕ್ಕಳ ಜೊತಿಗೆ ಹಗಲು- ರಾತ್ರಿ ಗಣಪತಿ ಮಾಡಾಕ ಶ್ರಮಾ ಪಟ್ಟೇವಿ. ಲಕ್ಷಾಂತರ ರುಪಾಯಿ ಸಾಲಾ ಮಾಡೇನಿ. ಈಗ ಸಾರ್ವಜನಿಕ ಗಣಪತಿ ಇಡಾಕ ಅವಕಾಶ ಇಲ್ಲಂದ್ರ ನಮ್ಗೆ ಇದೇ ಕೊನೆ ಗಣೇಶೋತ್ಸವ ಆಕೈತಿ..!

ಇದು ಧಾರವಾಡದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಕ ಮಂಜುನಾಥ ಹಿರೇಮಠ ಅವರ ಕಣ್ಣೀರಿನ ಮಾತು. ಪತ್ನಿ, ಮಕ್ಕಳೊಂದಿಗೆ ತಾವು ತಯಾರಿಸಿದ ಗಣೇಶ ಮೂರ್ತಿಗಳ ಬಳಿ ನಿಂತು ಮಂಜುನಾಥ ದುಃಖದಿಂದ ನಾಲ್ಕು ನಿಮಿಷಗಳ ಕಾಲ ಮಾತನಾಡಿದ ವಿಡಿಯೋ ಇದೀಗ ವೈರಲ್‌ ಆಗಿದೆ. ಕೊರೋನಾದಿಂದಾಗಿ ಗಣಪತಿ ಒಯ್ದರೆ ಪೊಲೀಸರು ಕೇಸ್‌ ಹಾಕುತ್ತೇವೆ ಎನ್ನುತ್ತಾರೆ. ಅದಕ್ಕೆ ಗಣಪತಿ ಕ್ಯಾನ್ಸಲ್‌ ಮಾಡಿ, ಮುಂದಿನ ವರ್ಷ ಒಯತೇವಿ. ದುಡ್ಡು ಇಲ್ಲ ಎಂದು ಗಣೇಶ ಮಂಡಳಿಯುವರು ಹೇಳುತ್ತಿದ್ದಾರೆ. ಮೊದಲು ಆರ್ಡರ್‌ ಕೊಟ್ಟು ಈಗ ಬ್ಯಾಡಾ ಅಂದರ ನಮ್ಮ ಸ್ಥಿತಿ ಏನಾಗಬೇಕು? ಸರ್ಕಾರವೂ ಗೊಂದಲ ಮೂಡಿಸೈತಿ. ಗುಡಿಯೊಳಗ, ಮನಿಯೊಳಗ ಸಣ್ಣ ಗಣಪತಿ ಇಡ್ರಿ ಎಂದು ಹೇಳಿದೆ. ಆದರೆ, ವಿಸರ್ಜನೆ ಅಲ್ಲೇ ಮಾಡಿ ಎಂದೂ ಹೇಳಿದೆ. ಹೀಗಾಗಿ ಮಂಡಳಿಯವರು ಗಣಪತಿ ಇಡೋದೇ ಬೇಡ ಎಂದು ನನ್ನ ಬಳಿ ಬಂದು ಗೋಳಾಡುತ್ತಿದ್ದಾರೆ’ ಎಂದು ಮಂಜುನಾಥ ನೋವು ತೋಡಿಕೊಂಡಿದ್ದಾರೆ.

ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಾಡಿ ಲ್ಯಾಂಡ್‌ ಆದ ಅನಂತ್ ಕುಮಾರ್ ಹೆಗಡೆ ಇದ್ದ ವಿಮಾನ

ಡಿಸಿಗೆ ದೂರು ಹೇಳಿದರೂ ಪ್ರಯೋಜವಾಗಲಿಲ್ಲ:

ಈ ಬಗ್ಗೆ ಡೀಸಿ ಅವರಿಗೆ ಪರಿಪರಿಯಾಗಿ ಬೇಡಿಕೊಂಡೆ. ಯಾವುದೇ ಪ್ರಯೋಜನ ಆಗಲಿಲ್ಲ. ‘ನನ್ನ ಕೇಳಿ ಆರ್ಡರ್‌ ತಗೊಂಡಿಯಾ’ ಅಂತಾ ಕೇಳತಾರೆ. ನಮ್ಮ ಕಷ್ಟಅವರಿಗೇನು ಗೊತ್ತು. ಈ ಬಾರಿ ಅವಕಾಶ ಕೊಡದೇ ಇದ್ದರೆ, ಎಲ್ಲ ಗಣಪತಿ ತಗೊಂಡು ಕೆರಿಗೆ ನಾನೇ ವಿಸರ್ಜನೆ ಮಾಡತೇನಿ. ಅದರ ಜೊತಿಗೆ ನಾವು ವಿಸರ್ಜನೆ ಆಗತೇವಿ. ಇಂತಹ ಕಷ್ಟಾಎಂದೂ ನೋಡಿಲ್ಲ. ನನ್‌ ಕ್ಷಮಿಸಿ ಬಿಡಿ. ಪರಿಸರಸ್ನೇಹಿ ಹೋರಾಟ, ಎಲ್ಲವನ್ನೂ ಮಾಡಿದ್ದೇನೆ. ಏನೂ ಉಪಯೋಗ ಆಗಲಿಲ್ಲ. ಯಾರೂ ನನ್‌ ಬಗ್ಗೆ ಕನಿಕರ ಪಡುತ್ತಿಲ್ಲ ಎಂದು ವಿಡಿಯೋದಲ್ಲಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ ಮಂಜುನಾಥ.
ನಾಲ್ಕೂ ಮಂದಿ ಉಳಿಯೋದಿಲ್ಲ

ರಾಜ್ಯ ಸರ್ಕಾರ ಸಾರ್ವಜನಿಕ ಗಣಪತಿ ನಿಷೇಧ ಮಾಡಿದ್ದು ಕಲಾವಿದರಿಗೆ ತುಂಬಲಾರದ ನಷ್ಟಆಗೈತಿ. ನಾನು ಮಾಡಿದ ಮೂರ್ತಿಗಳು ಹಾಳಾಗೋದನ್ನು ನಾನು ಮಾತ್ರ ನೋಡಲು ಸಾಧ್ಯವಿಲ್ಲ. ನನ್ನ ಕಲಾಧಾಮ ಮಾರಿ ಬೀದಿಗೆ ಬರೋದಾದ್ರೆ ನಾನಿದ್ದೂ ಏನೂ ಪ್ರಯೋಜನವಿಲ್ಲ. ಒಂದು ವೇಳೆ ಗಣಪತಿ ಮಾರದೇ ಹೋದರೆ, ಹೆಂಡತಿ, ಇಬ್ಬರು ಮಕ್ಕಳು ಸೇರಿ ನಾಲ್ಕು ಮಂದಿ ಉಳಿಯೋದಿಲ್ಲ. ಧರ್ಮ ರಕ್ಷಣೆಗೆ ಪಣ ತೊಟ್ಟವರು, ಧರ್ಮದ ಧ್ವಜ ಹಿಡಿದವರು ಕಾಪಾಡತಾರು ಅಂದುಕೊಂಡಿದ್ದೇನೆ. ಇದೇ ವಾರ ಹಬ್ಬ ಐತಿ. ಗಣಪತಿ ಮಾರಾಟವಾಗದೇ ಹೋದರೆ ನಂದು ಇದೇ ಕೊನೆ ಗಣೇಶೋತ್ಸವ ಆಗತೈತಿ ಅಂತಾ ತಿಳಕೊಂಡೇನಿ. ಎಲ್ಲಾರಗೂ ಧೈರ್ಯ ಹೇಳಿದ್ದ ನಾನೇ ಕುಂದಿ ಹೋಗಿದ್ದೇನೆ ಎಂದು ಮಂಜುನಾಥ ಕಣ್ಣೀರು ಸುರಿಸುತ್ತಿದ್ದಾರೆ.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!